ದ್ವಿತೀಯ ಪಿಯುಸಿ ಪರೀಕ್ಷೆ 2016 ಫಲಿತಾಂಶ ಪ್ರಕಟ

Posted By:
Subscribe to Oneindia Kannada

ಬೆಂಗಳೂರು, ಮೇ 25 : 2016ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಬುಧವಾರ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಿದೆ. ಮೇ 26ರಂದು ಕಾಲೇಜುಗಳಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ಈ ಬಾರಿ ಒಟ್ಟು ಶೇ 57.20ರಷ್ಟು ಫಲಿತಾಂಶ ಬಂದಿದೆ.

ಮಲ್ಲೇಶ್ವರಂನಲ್ಲಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಬುಧವಾರ ಬೆಳಗ್ಗೆ 10.30ಕ್ಕೆ ಪತ್ರಿಕಾಗೋಷ್ಠಿ ನಡೆಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಫಲಿತಾಂಶವನ್ನು ಪ್ರಕಟಿಸಿದರು. [ಪಿಯು ಫಲಿತಾಂಶ ಯಾವ ಜಿಲ್ಲೆಗೆ ಯಾವ ಸ್ಥಾನ]

anitha basappa

ಸರ್ಕಾರಿ ವೆಬ್‌ ಸೈಟ್‌ಗಳಲ್ಲಿ ಮಾತ್ರ ಫಲಿತಾಂಶ ಲಭ್ಯವಿದೆ. ಫಲಿತಾಂಶ ನೋಡಲು ಇಲ್ಲಿ ಕ್ಲಿಕ್ ಮಾಡಿ http://karresults.nic.in

ಈ ಬಾರಿಯ ಫಲಿತಾಂಶದಲ್ಲಿ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಶೇ 90.48ರಷ್ಟು ಫಲಿತಾಂಶ ಪಡೆದಿರುವ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಶೇ 90.35ರಷ್ಟು ಫಲಿತಾಂಶ ಪಡೆದಿರುವ ಉಡುಪಿ ದ್ವಿತೀಯ ಸ್ಥಾನ, ಶೇ 79.35 ರಷ್ಟು ಫಲಿತಾಂಶ ಪಡೆದಿರುವ ಕೊಡಗು ಮೂರನೇ ಸ್ಥಾನದಲ್ಲಿದೆ. ಯಾದಗಿರಿ ಜಿಲ್ಲೆಗೆ ಕೊನೆಯ ಸ್ಥಾನ. [ಪಿಯು ಪ್ರಶ್ನೆ ಪ್ರತ್ರಿಕೆ ಸೋರಿಕೆಯಾಗಿದ್ದು ಹಾವೇರಿಯಲ್ಲಿ]

ಕಲಾ ವಿಭಾಗದಲ್ಲಿ ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕಿನ ಇಂದೂ ಪಿಯು ಕಾಲೇಜಿನ ಅನಿತಾ ಬಸಪ್ಪ, ವಾಣಿಜ್ಯ ವಿಭಾಗದಲ್ಲಿ ವಿಜಯಪುರದ ವಿ.ಎಸ್.ದರ್ಬಾರ್ ಪಿಯು ಕಾಲೇಜಿನ ಸಹನಾ ಕುಲಕರ್ಣಿ, ವಿಜ್ಞಾನ ವಿಭಾಗದಲ್ಲಿ ಬೆಂಗಳೂರಿನ ಸರ್ದಾರ್ ವಲ್ಲಭಬಾಯ್ ಪಟೇಲ್ ಕಾಲೇಜಿನ ರಕ್ಷಿತಾ ತಮನ್ ಪ್ರಥಮ ಸ್ಥಾನ ಪಡೆದಿದ್ದಾರೆ. [ಏನು ಓದ್ಕೋಬೇಡಿ, ಪಾಸಾಗ್ತೀರಾ ಹೋಗಿ ಎಂದಿದ್ದ ಕಾಲೇಜು!]

ಬಾಳೆ ಹಣ್ಣು ವ್ಯಾಪಾರಿಯ ಮಗಳು : ಕಲಾವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಅನಿತಾ ಬಸಪ್ಪ ಅವರ ತಂದೆ ಬಾಳೆ ಹಣ್ಣು ವ್ಯಾಪಾರಿಗಳು. ಅನಿತಾ 600 ಕ್ಕೆ 597 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ಮುಂದೆ ಐಎಎಸ್ ಅಧಿಕಾರಿಯಾಗುವ ಕನಸು ಹೊಂದಿದ್ದಾರೆ. [ಪಿಯುಸಿ ಪತ್ರಿಕೆ ಉತ್ತರ ಬರೆದು ಮಾರುತ್ತಿದ್ದ ಇಬ್ಬರ ಬಂಧನ]

ರಕ್ಷಿತಾಗೆ 596 ಅಂಕ : ವಿಜ್ಞಾನ ವಿಭಾಗದಲ್ಲಿ ಬೆಂಗಳೂರಿನ ಬಸವೇಶ್ವರ ನಗರದ ಸರ್ದಾರ್ ವಲ್ಲಭಬಾಯ್ ಪಟೇಲ್ ಕಾಲೇಜಿನ ರಕ್ಷಿತಾ ತಮನ್ ಪ್ರಥಮ ಸ್ಥಾನ ಪಡೆದಿದ್ದಾರೆ. 600 ಕ್ಕೆ 596 ಅಂಕಗಳನ್ನು ಪಡೆದಿದ್ದಾರೆ.

ಶೂನ್ಯ ಫಲಿತಾಂಶ : ವಾಣಿಜ್ಯ ವಿಭಾಗದಲ್ಲಿ 64.16, ವಿಜ್ಞಾನ ವಿಭಾಗದಲ್ಲಿ 62.25, ಕಲಾ ವಿಭಾಗದಲ್ಲಿ 42.12ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ರಾಜ್ಯದ 91 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ.

ಫಲಿತಾಂಶ ತಡೆ ಇಲ್ಲ : 'ರಸಾಯನಶಾಸ್ತ್ರ ಪ್ರಶ್ನೆ ಪ್ರತ್ರಿಕೆ ಸೋರಿಕೆ ಹಗರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಆರೋಪಿಗಳ ಮಕ್ಕಳ ಫಲಿತಾಂಶವನ್ನು ತಡೆ ಹಿಡಿದಿಲ್ಲ' ಎಂದು ಸಚಿವ ಕಿಮ್ಮನೆ ರತ್ನಾಕರ ಅವರು ಸ್ಪಷ್ಟಪಡಿಸಿದರು.

'ಮಕ್ಕಳ ಫಲಿತಾಂಶ ತಡೆ ಹಿಡಿಯುವಂತೆ ಸಿಐಡಿಯಿಂದ ಶಿಕ್ಷಣ ಇಲಾಖೆಗೆ ಯಾವುದೇ ಸೂಚನೆ ಬಂದಿಲ್ಲ. ಈಗ ಫಲಿತಾಂಶ ಪ್ರಕಟಿಸಲಾಗಿದ್ದು ಮುಂದೆ ಸಿಐಡಿ ವರದಿ ಆಧರಿಸಿ ಕಾನೂನು ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ' ಎಂದು ಸಚಿವರು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka 2nd PUC exam result 2016 announced. Primary and Secondary Education Kimmane Ratnakar announced result On Wednesday, May 25, 2016.
Please Wait while comments are loading...