Karnataka Rain: ಮೇ 29ರಂದು ಸುರಿದ ಮಳೆಯಿಂದ ಯಾವ ಜಿಲ್ಲೆಯಲ್ಲಿ ಎಷ್ಟು ಹಾನಿ?, ಇಲ್ಲಿದೆ ವಿವರ
ಕರ್ನಾಟಕ, ಮೇ, 30: ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶಿಸಲಿದೆ. ಇದಕ್ಕೂ ಮುನ್ನ ಈಗಾಗಲೇ ಮುಂಗಾರು ಪೂರ್ವ ಅಬ್ಬರದ ಮಳೆಯಿಂದ ಸಾಕಷ್ಟು ಅನಾಹುತಗಳು ಸಂಭವಿಸಿವೆ. ಹಾಗೆಯೆ ಮೇ 29ರಂದು ಭಾರೀ ಮಳೆ ಸುರಿದ ಪರಿಣಾಮ ರಾಜ್ಯದ ಹಲವೆಡೆ ಅಪಾರ ಹಾನಿಗಳು ಕೂಡ ಆಗಿವೆ. ಹಾಗಾದರೆ ನಿನ್ನೆ ಯಾವ ಜಿಲ್ಲೆಯಲ್ಲಿ ಎಷ್ಟು ಹಾನಿಯಾಗಿದೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ರಾಜ್ಯದ ಹಲವೆಡೆ ವರುಣನ ಅಬ್ಬರ ಹೆಚ್ಚಾಗಿದೆ. ಅಲ್ಲದೆ ಮೇ 29ರ ರಾತ್ರಿ ಬಿರುಗಾಳಿ ಸಹಿತ ಭಾರೀ ಮಳೆ ಸುರಿದ ಹಿನ್ನೆಲೆ ದೊಡ್ಡ ಅನಾಹುತಗಳೇ ಸಂಭವಿಸಿವೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಲವೆಡೆ ಸುರಿದ ಧಾರಾಕಾರ ಮಳೆಯಿಂದ ಹಲವಾರು ಅವಘಡಗಳು ನಡೆದಿವೆ. ಬಿರುಗಾರಿ ಮಳೆಗೆ ವಿದ್ಯುತ್ ಕಂಬಗಳು, ಬೃಹತ್ ಮರಗಳು, ಬಾಳೆ ಗಿಡಗಳು ನೆಲಕ್ಕುರಳಿದರೆ, ಮತ್ತೊಂದೆಡೆ ವಾಸದ ಮನೆಯ ಮೇಲ್ಛಾವಣಿ ಗಾಳಿಗೆ ತೂರಿಕೊಂಡು ಹೋಗಿದೆ.

ಹಾಸನ ಜಿಲ್ಲೆಯಲ್ಲಿ ಮಳೆ ಆರ್ಭಟ
ಬೇಲೂರು, ಚೀಕನಹಳ್ಳಿ, ಮೂಡಿಗೆರೆ ರಸ್ತೆಯಲ್ಲಿ 20ಕ್ಕೂ ಹೆಚ್ಚು ಬೃಹತ್ ಮರಗಳು, 17 ವಿದ್ಯುತ್ ಕಂಬಗಳು ಹಾಗೂ ಮೂರು ಟ್ರಾನ್ಸ್‌ಫಾರ್ಮರ್‌ಗಳು ಧರೆಗುರುಳಿವೆ. ಅಲ್ಲದೆ ಧರ್ಮೇಗೌಡ ಎಂಬುವವರ ಜಮೀನಿನಲ್ಲಿದ್ದ ನೂರಾರು ಬಾಳೆಗಿಡಗಳು ನೆಲಕ್ಕೆ ಬಿದ್ದಿದ್ದು, ಬಾಳೆ ಬೆಳೆ ಕಳೆದುಕೊಂಡ ರೈತ ಧರ್ಮೇಗೌಡ ಆತಂಕಕ್ಕೆ ಒಳಗಾಗಿದ್ದಾರೆ.
ಇನ್ನು ನಿಟ್ರಾನ್ಸ್‌ಫಾರ್ಮರ್‌ಗಳು ಧರೆಗುರುಳಿದ ಕಾರಣ ನಿನ್ನೆಯಿಂದ ಜಿಲ್ಲೆಯ ಹಲವು ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಆಗಿದೆ. ಹಾಗೆಯೆ ನೆಲಕ್ಕುರುಳಿದ ಮರಗಳು, ವಿದ್ಯುತ್ ಕಂಬಗಳನ್ನು ಸಾರ್ವಜನಿಕರೇ ತೆರವುಗೊಳಿಸಿದ್ದಾರೆ. ಇನ್ನು ಇಷ್ಟೇಲ್ಲ ಅಪಾರ ಹಾನಿ ಆಗಿದ್ದರೂ ಕೂಡ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಬಾರದೆ ಬೇಜವಾಬ್ದಾರಿ ತೋರಿಸಿದ್ದಾರೆ ಎಂದು ಇಲ್ಲಿನ ಜನರು ಕೆಂಡಕಾರಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಳೆ ಅವಾಂತರ
ಇನ್ನು ಮೇ 29ರ ಸಂಜೆ ವೇಳೆ ಸುರಿದ ಮಳೆಯಿಂದ ಮರಗಳು ಧರೆಗುರುಳಿದ ಹಿನ್ನೆಲೆ ಕಡಬ-ಸುಬ್ರಹ್ಮಣ್ಯ ಮಾರ್ಗದ ರಸ್ತೆಯಲ್ಲಿ ಸಂಚಾರವನ್ನು ಸಂಪುರ್ಣ ಸ್ಥಗಿತಗೊಳಿಸಲಾಗಿದೆ. ನೆಟ್ಟಣ, ಬಿಳಿನೆಲೆ, ಕೈಕಂಬ ಪ್ರದೇಶಗಳಲ್ಲಿ ರಸ್ತೆಗೆ ಮರಗಳು ಉರುಳಿದ್ದು, ಈ ಹಿನ್ನೆಲೆ ರಸ್ತೆ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ವಾಹನ ಸವಾರರು ನಿಂತಲ್ಲಿಯೇ ನಿಂತು ಪರದಾಡಿದ ಘಟನೆಯೂ ನಡೆದಿದೆ.
ನಂತರ ಸ್ಥಳಕ್ಕೆ ಧಾವಿಸಿದ ಕಡಬ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಮತ್ತೊಂದಡೆ ಮರ್ಧಾಳದಲ್ಲಿ ಪ್ರವಾಸಿಗರ ಟಿಟಿ ವಾಹನವೊಂದರ ಮೇಲೆ ಮರ ಬಿದ್ದ ಪರಿಣಾಮ, ಟಿಟಿಯಲ್ಲಿ ಸಿಲುಕಿದ ಪ್ರಯಾಣಿಕರು ಕಪಾಡಿ ಕಾಪಾಡಿ ಎಂದು ಕೂಗಾಡಿದ್ದಾರೆ. ಸದ್ಯ ಈ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನುವ ಮಾಹಿತಿ ತಿಳಿದುಬಂದಿದೆ.
ಕೋಟೆನಾಡು ಚಿತ್ರದುರ್ಗದಲ್ಲಿ ಮಳೆ ಅವಾಂತರ
ಚಿತ್ರದುರ್ಗದ ಜಿಲ್ಲೆಯ ಹಲವೆಡೆ ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಅನಾಹುತಳೇ ಸಂಭವಿಸಿವೆ. ಎಂ.ಡಿ.ಕೋಟೆಯಲ್ಲಿ ಮೇಲ್ಚಾವಣಿ ಕುಸಿತವಾಗಿದ್ದು, ಬಸಪ್ಪನ ಮಾಳಿಗೆಯಲ್ಲಿ ಮನೆಯ ಶೀಟುಗಳು ಗಾಳಿಗೆ ತೂರಿಕೊಂಡು ಹೋಗಿವೆ. ಸದ್ಯ ಮನೆಗಳಲ್ಲಿದ್ದ ನಿವಾಸಿಗಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ಹಾನಿಗೊಳಗಾದ ಕುಟುಂಬಸ್ಥರು ಸೂಕ್ತ ಪರಿಹಾರ ನೀಡುವಂತೆ ಒತ್ತಾಯ ಮಾಡಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿನ ಮಳೆ ಹಾನಿ ವಿವರ
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹನಮಸಾಗರ ಗ್ರಾಮವೊಂದರಲ್ಲಿ ಭಾರೀ ಮಳೆ ಸುರಿದ ಹಿನ್ನೆಲೆ ಬೃಹತ್ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಅಲ್ಲದೆ ಕೆಲವು ಮನೆಗಳಿಗೆ ಅಪಾರ ಹಾನಿ ಆಗಿದ್ದು, ಹಲವು ಮಳೆ ಹಾನಿ ಪ್ರದೇಶಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ ಎಂದು ತಿಳಿದುಬಂದಿದೆ.
ಮಂಡ್ಯ ಜಿಲ್ಲೆಯಲ್ಲಿ ಮಳೆ ಅವಾಂತರ
ಸಕ್ಕರೆ ನಾಡು ಅಂತಲೇ ಪ್ರಸಿದ್ಧಿಯಾಗಿರುವ ಮಂಡ್ಯ ಜಿಲ್ಲೆಯಲ್ಲಿ ಭಾರೀ ಮಳೆ ಸುರಿದ ಪರಿಣಾಮ ಕೆಆರ್‌ಎಸ್ ಬೃಂದಾವನಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಮರ ಮತ್ತು ವಿದ್ಯುತ್ ಕಂಬಗಳು ಧರೆಗುರುಳಿದ ಹಿನ್ನೆಲೆ ಕೆಆರ್‌ಎಸ್ ಬೃಂದಾವನ, ಕಾವೇರಿ ನೀರಾವರಿ ನಿಗಮದಿಂದ ಪ್ರವಾಸಿಗರಿಗೆ ನಿರ್ಬಂಧ ಹೇರಿ ಆದೇಶ ಹೊರಡಿಸಲಾಗಿದೆ. ಮತ್ತೊಂದೆಡೆ ಇಂದೇ ಬೃಂದಾವನದಲ್ಲಿ ಅಧಿಕಾರಿಗಳ ತಂಡ ಮುರಿದುಬಿದ್ದ ವಿದ್ಯುತ್ ಕಂಬಗಳ ದುರಸ್ತಿ ಕಾರ್ಯ ಹಾಗೂ ಧರೆಗುರುಳಿದ್ದ ಮರಗಳನ್ನು ತೆರವು ಮಾಡಲಿದ್ದಾರೆ.












Click it and Unblock the Notifications