ಕಮಲ್ ಹಾಸನ್‌ಗೆ ಇನ್ಮುಂದೆ ಕರ್ನಾಟಕಕ್ಕೆ ನೋ ಎಂಟ್ರಿ: ನಾರಾಯಣಗೌಡ ಎಚ್ಚರಿಕೆ
ತಮಿಳು ನಟ ಕಮಲ್ ಹಾಸನ್ ಕೊನೆಗೂ ಕನ್ನಡಿಗರ ಒತ್ತಾಯಕ್ಕೆ ಮಣಿಯದ ಕಾರಣ ಕರ್ನಾಟಕ ರಕ್ಷಣಾ ವೇದಿಕೆಯು (ಕರವೇ) ಮಹತ್ವದ ತೀರ್ಮಾನಕ್ಕೆ ಬಂದಿದೆ. ಕನ್ನಡದ ಬಗ್ಗೆ ಕೀಳಾಗಿ ಮಾತನಾಡಿದ್ದಲ್ಲದೆ ಕಮಲ್ ಹಾಸನ್ ಕನ್ನಡಿಗರಿಗೆ ಅವಮಾನ ಮಾಡಿಯೂ ಮೊಂಡಾಟ ಮುಂದುವರಿಸಿದ್ದಾರೆ. ಈ ಹಿನ್ನೆಲೆ ಮಾಡಿದ ತಪ್ಪಿಗೆ ಕ್ಷಮೆಯೂ ಕೇಳದ ಕಾರಣ ಕಾರಣ ಕರವೇ ರಾಜ್ಯಾಧ್ಯಕ್ಷ ಟಿಎ ನಾರಾಯಣಗೌಡ ಖಡಕ್ ಸಂದೇಶವೊಂದನ್ನು ಕಮಲ್ ಹಾಸನ್‌ಗೆ ರವಾನಿಸಿದ್ದಾರೆ.
ಅದರಂತೆ ಕಮಲ್ ಹಾಸನ್ ಇನ್ನುಂದೆ ಕರ್ನಾಟಕವನ್ನು ಪ್ರವೇಶಿಸುವಂತಿಲ್ಲ ಎಂದು ನಾರಾಯಣಗೌಡ ಅವರು ಹೇಳಿದ್ದಾರೆ. ಕನ್ನಡಿಗರನ್ನು ಅವಮಾನಿಸಿರುವ ಕಾರಣ ಅವರ ಥಗ್‌ಲೈಫ್ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆಗೆ ಅವಕಾಶ ಕೊಡುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಥಿಯೇಟರ್ ಮಾಲೀಕರಿಗೂ ಎಚ್ಚರಿಕೆ ನೀಡಿರುವ ಕನ್ನಡಪರ ಹೋರಾಟಗಾರರು ಒಂದು ವೇಳೆ ಕಮಲ್ ಸಿನಿಮಾ ರಿಲೀಸ್ ಮಾಡಿದರೆ ಥಿಯೇಟರ್ ಧ್ವಂಸ ಮಾಡ್ತೀವಿ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಭೀತಿಗೆ ಥಿಯೇಟರ್‌ನವರು ಕೂಡ ಈ ಸಿನಿಮಾ ರಿಲೀಸ್ ಮಾಡದಿರಲು ನಿರ್ಧರಿಸಿದ್ದಾರೆ. ಈಗಾಗಲೇ ಕಮಲ್ ಹಾಸನ್‌ಗೆ ಕ್ಷಮೆ ಕೇಳುವಂತೆ ಹಲವು ಬಾರಿ ಡೆಡ್‌ಲೈನ್ ನೀಡಿದ್ದರೂ ನಾನು ಯಾವುದೇ ಕಾರಣಕ್ಕೆ ಕ್ಷಮೆ ಕೇಳಲ್ಲ ಎಂದೇ ವಾದಿಸಿದ್ದಾರೆ. ಹೀಗಿರುವ ಕನ್ನಡಿಗರನ್ನು ಅಗೌರವದಿಂದ ಕಾಣುವ ಕಮಲ್‌ಗೆ ಕರ್ನಾಟಕಕ್ಕೆ ನೋ ಎಂಟ್ರಿ ಎಂದಿದ್ದಾರೆ. ಹಾಗಾಗಿ ಇನ್ನುಮುಂದೆ ಕಮಲ್ ಹಾಸನ್ ಕರ್ನಾಟಕಕ್ಕೆ ಪ್ರವೇಶಿಸಬಾರದು ಎಂದು ವಾರ್ನಿಂಗ್ ನೀಡಿದ್ದಾರೆ.

ಕಮಲ್ ಥಗ್‌ಲೈಫ್ ಸಿನಿಮಾ ಮಾತ್ರವಲ್ಲ, ಅವರಿಗೂ ಕರ್ನಾಟಕದಲ್ಲಿ ಎಂಟ್ರಿ ಇಲ್ಲ. ಕಮಲ್ ಅವರನ್ನೂ ಕರ್ನಾಟಕದಲ್ಲಿ ಬ್ಯಾನ್ ಮಾಡುತ್ತೇವೆ ಎಂದು ಕರವೇ ನಾರಾಯಣಗೌಡ ಹೇಳಿದ್ದಾರೆ. ಈ ಸಿನಿಮಾ ಮಾತ್ರವಲ್ಲ, ಇನ್ನು ಮುಂದೆ ಕಮಲ್ ಅವರ ಯಾವುದೇ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗುವುದಿಲ್ಲ, ಆಗಲು ನಾವು ಬಿಡೋದಿಲ್ಲ. ಕನ್ನಡದ ಬಗ್ಗೆ ಕೇವಲವಾಗಿ ಮಾತನಾಡಿದ್ದಲ್ಲದೆ, ಕ್ಷಮೆಯೂ ಕೇಳದೆ ದುರಹಂಕಾರ ಮೆರೆದಿದ್ದಾರೆ. ಹಾಗಾಗಿ ಕಮಲ್ ಹಾಸನ್ ಎಂದಿಗೂ ಕರ್ನಾಟಕಕ್ಕೆ ಬರಬಾರದು. ಒಂದು ವೇಳೆ ಬಂದರೆ ನಾವು ತಡೆಯುತ್ತೇವೆ ಎಂದು ಎಚ್ಚರಿಸಿದ್ದಾರೆ.
ಕೋರ್ಟ್‌ನಲ್ಲೂ ಕಮಲ್‌ಗೆ ಮುಖಭಂಗ
ಕರ್ನಾಟಕದಲ್ಲಿ ಥಗ್‌ಲೈಫ್ ಸಿನಿಮಾ ಬಿಡುಗಡೆಗೆ ವಿರೋಧ ಎದುರಾದ ಹಿನ್ನೆಲೆ ಕಮಲ್ ಹಾಸನ್ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸಿನಿಮಾ ಬಿಡುಗಡೆಗೆ ಯಾವುದೇ ಅಡ್ಡಿ ಮಾಡದಂತೆ ನಿರ್ದೇಶನ ನೀಡುವಂತೆ ಕೋರಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್ ಕಮಲ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ ಎಂದು ವರದಿಯಾಗಿದೆ.
ಒಂದು ಭಾಷೆ ಹುಟ್ಟಿನ ಬಗ್ಗೆ ಮಾತನಾಡುವುದಕ್ಕೆ ನೀವು ಭಾಷಾ ತಜ್ಞರೇ? ಇಲ್ಲ ಇತಿಹಾಸಕಾರರೇ? ಎಂದು ಹೈಕೋರ್ಟ್ ಕಮಲ್ ಹಾಸನ್ ಅವರಿಗೆ ಖಾರವಾಗಿ ಪ್ರಶ್ನಿಸಿದೆ. ತಮ್ಮ ನೆಲ ಹಾಗೂ ಭಾಷೆಯ ಜೊತೆ ಜನರ ಭಾವನೆ ಕೂಡ ಇರುತ್ತದೆ. ಅದಕ್ಕೆ ಯಾರೂ ಧಕ್ಕೆ ತರಬಾರದು. ಜನರು ಕ್ಷಮೆ ಕೇಳುವಂತೆ ಒತ್ತಾಯಿಸುತ್ತಿದ್ದಾರೆ. ಕಮಲ್ ಹಾಸನ್ ಕ್ಷಮೆ ಕೇಳಿದ್ದಾರಾ ಎಂದೂ ಪ್ರಶ್ನೆ ಕೇಳಿದೆ. ಒಂದೇ ಒಂದು ಕ್ಷಮೆ ಕೇಳುವುದಕ್ಕೆ ಯಾಕೆ ಇಷ್ಟೊಂದು ಸಮಸ್ಯೆ? ಎಂದು ಕೇಳಿದೆ.












Click it and Unblock the Notifications