ಕರಾವಳಿಯ ಕಲಾಧ್ಯಯನಕ್ಕೆ ಸಂಶೋಧನಾ ಕೇಂದ್ರದ ಅಗತ್ಯ
ಕಟೀಲು (ದ.ಕ), ಸೆ, 1: ಕರಾವಳಿಯ ಸಂಗೀತ ಮತ್ತು ನೃತ್ಯದ ಅಧ್ಯಯನಕ್ಕೆ ಸಂಶೋಧನಾ ಕೇಂದ್ರದ ಅಗತ್ಯವಿದೆ. ಇದರಿಂದ ಕರಾವಳಿಯ ಸಮಗ್ರ ಕಲೆಗಳ ಅಧ್ಯಯನಕ್ಕೆ ಇದರಿಂದ ತುಂಬಾ ಸಹಕಾರಿಯಾಗಲಿದೆ ಎಂದು ಕಲಾಸಂಶೋಧಕಿ, 'ನೂಪುರ ಭ್ರಮರಿ' ಸಂಪಾದಕಿ ಮನೋರಮಾ ಬಿ ಎನ್ ಅಭಿಪ್ರಾಯ ಪಟ್ಟಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯ ಧಾರ್ಮಿಕ ಪುಣ್ಯಕ್ಷೇತ್ರ ಕಟೀಲಿನಲ್ಲಿ, ಇಪ್ಪತ್ತನೇ ಕರಾವಳಿ ಸಾಹಿತ್ಯ ಸಮ್ಮೇಳನದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದ ಮನೋರಮಾ, ಪರವೂರಿನವರನ್ನೋ ಅಥವಾ ತಮಿಳುನಾಡಿನವರನ್ನೋ ಶ್ರೇಷ್ಠರೆಂಬ ಭಾವನೆಯಿಂದ ಕರೆಸಿ ಕಚೇರಿ, ಕಾರ್ಯಕ್ರಮ, ಗೋಷ್ಠಿಗಳನ್ನು ನಡೆಸಿದಾಕ್ಷಣ ಗುಣಮಟ್ಟ ಹೆಚ್ಚಾಗುವುದಿಲ್ಲ, ಹಿರಿತನವೋ ಬಂದು ಬಿಡುವುದಿಲ್ಲ ಎಂದು ಮನೋರಮಾ ಹೇಳಿದ್ದಾರೆ.

ಸಮ್ಮೇಳನದಲ್ಲಿ 'ಕರಾವಳಿಯ ಕಲಾಕ್ಷೇತ್ರ ಸಂಗೀತ ಮತ್ತು ನೃತ್ಯದಲ್ಲಿ ಹೊಸ ಬೆಳವಣಿಗೆಗಳು' ಎನ್ನುವ ವಿಷಯದ ಬಗ್ಗೆ ಉಪನ್ಯಾಸ ನೀಡಿ ಮಾತನಾಡುತ್ತಿದ್ದ ಮನೋರಮಾ, ಹೊರ ರಾಜ್ಯಗಳಿಂದ ಸಂಗೀತ ಮತ್ತು ನೃತ್ಯ ಕಲಿತು, ಪ್ರಸಿದ್ಧಿಗೆ ಬಂದ ಗುರು - ಕಲಾವಿದರುಗಳ ಸಂಖ್ಯೆ ಹೆಚ್ಚಾಗುತ್ತಿದೆ. ನಮ್ಮ ನಾಡಿನಲ್ಲಿದ್ದ ಪಾರಂಪರಿಕವಾಗಿದ್ದ ಕಲಾಗುರುತಗಳ ಬಗ್ಗೆ ಲಕ್ಷ್ಯವೇ ಇಂದಿನ ಕಾಲಕ್ಕೆ ಒದಗುತ್ತಿಲ್ಲ ಎಂದು ಮನೋರಮಾ ಬೇಸರ ವ್ಯಕ್ತ ಪಡಿಸಿದ್ದಾರೆ.
ಕರಾವಳಿಯದ್ದೇ ಅದ ಸ್ವಂತ, ಪುರಾತನ ಕಲೆಗಳು ಪರಿಚಯವೇ ಇಲ್ಲದೆ ಕೊಂಡಿಗಳಾಗುತ್ತಿದೆ. ಇದನ್ನು ಮರುಶೋಧಿಸಿ ದಾಖಲೀಕರಣ ಮಾಡುವ ಪ್ರಕ್ರಿಯ ಸಾಗಬೇಕಿದೆ. ಯಕ್ಷಗಾನದಲ್ಲಿ ಈವರೆಗೆ ಆದ ಒಟ್ಟು ಸಂಶೋಧನೆಗಳಿಗೆ ಹೋಲಿಸಿದರೆ ಸಂಗೀತ ಮತ್ತು ನೃತ್ಯದ ಕ್ಷೇತ್ರದಲ್ಲಿ ಸಂಶೋಧನೆಗಳ ಪ್ರಮಾಣ ತೀರಾ ಕಡಿಮೆಯೆಂದು ಮನೋರಮಾ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಯಾವುದೇ ಕಲೆಗಳಾದರೂ ಸರಿಯೇ, ಅವುಗಳನ್ನು ಬಳಕೆ ಮಾಡಿದಷ್ಟು ಅದರ ಶಕ್ತಿ ಹೆಚ್ಚುತ್ತದೆಯೇ ವಿನಃ ಸಂರಕ್ಷಣೆ ಎನ್ನುವ ಹೆಸರಿನಲ್ಲಿ ಸುಮ್ಮನಿರಿಸಿದರೆ ಜಡ್ಡು ಹಿಡಿದುಹೋಗುತ್ತವೆ. ಸಂಗೀತ-ನೃತ್ಯಾದಿಗಳನ್ನು ಕಲಿಯುವವರ ಸಂಖ್ಯೆ ಹೆಚ್ಚಾಗುತ್ತಿದೆ, ಪರೀಕ್ಷೆಗಳನ್ನು ತೆಗೆದುಕೊಳ್ಳುವವರ ಸಂಖ್ಯೆ ಅಧಿಕವಾಗುತ್ತಿದೆ.
ಇದರಿಂದ ಕಾರ್ಯಕ್ರಮಗಳು ನಿರಂತರ ನಡೆಯುವಂತಾಗಿದೆ, ಇದರಿಂದ ಕಲಾಕ್ಷೇತ್ರ ಪ್ರಗತಿ ಹೊಂದಿದೆ ಎನ್ನುವ ಅರ್ಥವಲ್ಲ. ಬೆಳವಣಿಗೆಗೂ, ಪ್ರಗತಿಗೂ ಇರುವ ಅಂತರವನ್ನು ಮೊದಲು ಮನಗಾಣಬೇಕು ಎಂದು ಕರಾವಳಿ ಸಾಹಿತ್ಯ ಸಮ್ಮೇಳನದಲ್ಲಿ ಕಲಾಕ್ಷೇತ್ರಕ್ಕೆ ಸಂಬಂಧಿಸಿದಂತೆ ತಮ್ಮ ಸಂಶೋಧನಾ ಅನುಭವಗಳನ್ನು ಮನೋರಮಾ ಬಿಚ್ಚಿಟ್ಟಿದ್ದಾರೆ.
ಶಾಸ್ತ್ರೀಯ, ಜಾನಪದ ಎಂಬ ಅವೈಜ್ಞಾನಿಕ ವರ್ಗೀಕರಣದಲ್ಲಿ ಕಲೆಗಳ, ಕಲಾವಿದರ ಮಧ್ಯೆ ದೊಡ್ಡ ಕಂದಕವೊಂದು 20ನೇ ಶತಮಾನದ ಮಧ್ಯಭಾಗದಲ್ಲಿ ಸೃಷ್ಟಿಯಾಗಿ ಹೋಗಿದೆ. ಭರತನಾಟ್ಯವೇ ಶ್ರೇಷ್ಟ ಕಲೆ ಎಂಬ ತಪ್ಪು ಗ್ರಹಿಕೆಯಿಂದಾಗಿ ಉಳಿದ ನೃತ್ಯ ಕಲೆಗಳ ಪಾರಂಪರಿಕ ಮಹತ್ವದದ ಬಗ್ಗೆ ಗಮನ ಕಡಿಮೆಯಾಗಿದೆ.

ಆದಾಗ್ಯೂ, ಕಳೆದ 10-15 ವರುಷಗಳ ಅವಧಿಯಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳ ಪ್ರಮುಖರಿಂದ, ಉತ್ಸವಗಳಿಂದ ಕರಾವಳಿಯಲ್ಲೂ ಒಂದಷ್ಟು ಜಾಗೃತಿ ಹುಟ್ಟಿಕೊಂಡಿದೆ. ಇಲ್ಲಿನ ವಿಮರ್ಶಾ ಕ್ಷೇತ್ರವಂತೂ ಬೆಂಗಳೂರಿನ ಬರೆವಣಿಗೆ ಮಟ್ಟಕ್ಕಿಂತಲೂ ಎಷ್ಟೋ ಹೆಚ್ಚಿದೆ ಎಂದು ಮನೋರಮಾ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಇದೇ ಸಂದರ್ಭದಲ್ಲಿ ಕರಾವಳಿಯ ಯಕ್ಷಗಾನ ಮತ್ತು ತಾಳಮದ್ದಳೆಯ ಹೊಸ ಬೆಳವಣಿಗೆಗಳ ಕುರಿತು ಯಕ್ಷಗಾನ ಪ್ರಸಂಗಕರ್ತ ವಿದ್ವಾಂಸ ಡಿ.ಎಸ್. ಶ್ರೀಧರ್ ಮತ್ತು ಚಿತ್ರಕಲೆಯ ಕುರಿತು ಮಂಗಳೂರು ಚಿತ್ರಕಲಾ ಚಾವಡಿಯ ಅಧ್ಯಕ್ಷ ಗಣೇಶ ಸೋಮಯಾಜಿ ಉಪನ್ಯಾಸ ನೀಡಿದರು.
ಸಭಾಧ್ಯಕ್ಷತೆಯನ್ನು ಹಿರಿಯ ರಂಗಕರ್ಮಿ ಸದಾನಂದ ಸುವರ್ಣ ವಹಿಸಿ, ಕರಾವಳಿಯ ಸಿನೆಮಾ ಮತ್ತು ರಂಗಭೂಮಿ ಕುರಿತ ಚರ್ಚೆಯ ಅಗತ್ಯವನ್ನು ಪ್ರಸ್ತುತಪಡಿಸಿ ಮಾತನಾಡಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು. ಭಾರತಿಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರೆ, ವೆಂಕಟೇಶ್ ನಾವಡ ಸ್ವಾಗತಿಸಿ, ಶೇಖರ್ ಅಜಾರ್ ವಂದಿಸಿದರು.












Click it and Unblock the Notifications