Karnataka 4 Airports rename: ಈ ನಾಲ್ಕು ವಿಮಾನ ನಿಲ್ದಾಣಗಳಿಗೆ ಗಣ್ಯರ ಹೆಸರಿಡಲು ಸದನ ಒಪ್ಪಿಗೆ, ಪ್ರಸ್ತಾವನೆ ಕೇಂದ್ರಕ್ಕೆ
ಬೆಂಗಳೂರು, ಡಿಸೆಂಬರ್ 15: ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಆರಂಭವಾದಾಗಿನಿಂದ ರಾಜ್ಯದ ವಿವಿಧ ವಿಮಾನ ನಿಲ್ದಾಣಗಳಿಗೆ ನಾಡಿನ ಗಣ್ಯರ ಹೆಸರುಗಳನ್ನು ಇಡಬೇಕು ಎಂಬ ಆಗ್ರಹ, ಚರ್ಚೆಗಳು ನಿರಂತರವಾಗಿ ನಡೆದಿದ್ದವು. ಕೊನೆಗೂ ಗುರುವಾರ ವಿಧಾನಸಭೆಯಲ್ಲಿ ನಾಲ್ಕು ಏರ್‌ಪೋರ್ಟ್‌ಗಳಿಗೆ ನಾಲ್ವರು ಗಣ್ಯಮಹನೀಯ ಹೆಸರುಗಳನ್ನು ಮರುನಾಮಕರಣ ಮಾಡಲು ಸರ್ವಾನುಮತದಿಂದ ನಿರ್ಧರಿಸಲಾಗಿದೆ.
ವಿಮಾನ ನಿಲ್ದಾಣಗಳಿಗೆ ಮಹಾನ್ ವ್ಯಕ್ತಿಗಳ ಹೆಸರು ನಾಮಕರಣ ಮಾಡಲು ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಸರ್ವಾನುಮತದಿಂದ ನಿರ್ಧಾರ ಕೈಗೊಳ್ಳಲಾಗಿದೆ. ಈ ಹಿಂದೆ ಸಂಸದ ಈರಣ್ಣ ಕಡಾಡಿ ಅವರು ಸದನದಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ವಿವಿಧ ಏರ್‌ಪೋರ್ಟ್‌ಗಳಿಗೆ ಗಣ್ಯರ ಹೆಸರಿಡಲು ಒತ್ತಾಯಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಸರ್ಕಾರದೊಂದಿಗೆ ಚರ್ಚಿಸಿ ತೀರ್ಮಾನಿಸುವುದಾಗಿ ಭರವಸೆ ನೀಡಿದ್ದರು.

ಗುರುವಾರ ''ಹುಬ್ಬಳ್ಳಿ, ವಿಜಯಪುರ, ಶಿವಮೊಗ್ಗ ಮತ್ತು ಬೆಳಗಾವಿ'' ಈ ನಾಲ್ಕು ವಿಮಾನ ನಿಲ್ದಾಣಗಳಿಗೆ ಹೆಸರು ಅಂತಿಮಗೊಳಿಸಿ ಸರ್ಕಾರ ನಿರ್ಧರಿಸಿದೆ. ಈ ಪ್ರಸ್ತಾವನೆಯನ್ನು ಶೀಘ್ರವೇ ಕೇಂದ್ರ ಸರ್ಕಾರಕ್ಕೂ ಕಳುಹಿಸಿ ಮನವಿ ಮಾಡುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ. ಹಾಗಾದರೆ ಯಾವ ವಿಮಾನ ನಿಲ್ದಾಣಕ್ಕೆ ಯಾವ ಮಹನೀಯರ ಹೆಸರು ಇಡಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಇಲ್ಲಿದೆ.
ನಾಲ್ಕು ಏರ್‌ಪೋರ್ಟ್‌ಗೆ ಈ ಮಹನೀಯರ ಹೆಸರು ಫೈನಲ್
ಉತ್ತರ ಕರ್ನಾಟಕದ ಪ್ರಮುಖ ವಿಮಾನ ನಿಲ್ದಾಣವಾಗಿರುವ ಗೋಕುಲ ರಸ್ತೆಯಲ್ಲಿನ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ'ನ ಹೆಸರು, ರಾಜ್ಯದ ದೊಡ್ಡ ಜಿಲ್ಲೆಯಾಗಿ ಗುರುತಿಸಿಕೊಂಡಿರುವ ಗಡಿ ಜಿಲ್ಲೆಯಾದ 'ಬೆಳಗಾವಿ ವಿಮಾನ ನಿಲ್ದಾಣ'ಕ್ಕೆ 'ಕಿತ್ತೂರು ರಾಣಿ ಚನ್ನಮ್ಮ'ರ ಹೆಸರು, ವಿಜಯಪುರ ಜಿಲ್ಲೆಯ ವಿಮಾನ ನಿಲ್ದಾಣಕ್ಕೆ 'ಜಗಜ್ಯೋತಿ ಬಸವಣ್ಣ'ನವರ ಹೆಸರು ಹಾಗೂ ಇತ್ತೀಚೆಗೆ ಉದ್ಘಾಟನೆಗೊಂಡಿರುವ ಮಲೆನಾಡಿನ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 'ರಾಷ್ಟ್ರ ಕವಿ ಕುವೆಂಪು'ರ ಹೆಸರು ನಾಮಕರಣ ಮಾಡಲು ವಿಧಾನಸಭೆಯಲ್ಲಿ ತೀರ್ಮಾನಿಸಲಾಗಿದೆ.
ಉದ್ಘಾಟನೆಗೂ ಮುನ್ನ ಈ ಏರ್‌ಪೋರ್ಟ್‌ಗೆ ಹೆಸರು ಅಂತಿಮ
ಎರಡು ಕಲಾಪದಲ್ಲೂ ಸರ್ವಾನುಮತದಿಂದ ಕೈಗೊಂಡ ಅಂತಿಮ ನಿರ್ಧಾರವನ್ನು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಸಚಿವಾಲಯದಿಂದ ಅನುಮತಿ ಪಡೆಯಬೇಕಿದೆ. ಅದಾದ ನಂತರವೇ ಏರ್‌ಪೋರ್ಟ್‌ಗಳಿಗೆ ನಾಮಕರಣವಾಗಲಿದೆ.

ಸದ್ಯ ವಿಜಯಪುರ ವಿಮಾನ ನಿಲ್ದಾಣದ ಸಿವಿಲ್ ಕಾಮಗಾರಿಗಳು ಅಂತಿಮಗೊಂಡಿವೆ. ಈ ವಿಮಾನ ನಿಲ್ದಾಣವು ಆರಂಭವಾಗಬೇಕಿದೆ. ಇದು ಮುಂದಿನ ವರ್ಷ 2024ರ ಏಪ್ರಿಲ್ ತಿಂಗಳಲ್ಲಿ ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ. ಇತ್ತೀಚೆಗೆ ಲೋಕಾರ್ಪಣೆಗೊಂಡ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಹೊರ ರಾಜ್ಯಗಳಿಗೆ ವಿಮಾನ ಕಾರ್ಯಚರಣೆ ಆರಂಭವಾಗಿವೆ.
ಮಂಗಳೂರು ವಿಮಾನ ನಿಲ್ದಾಣಕ್ಕೆ ಏನು ಹೆಸರು?
ಕಲಾಪದಲ್ಲಿ ಈ ನಾಲ್ಕು ವಿಮಾನ ನಿಲ್ದಾಣಗಳ ನಾಮಕರಣ ಕುರಿತು ಚರ್ಚೆ ಆಗುತ್ತಿದ್ದಂತೆ ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಅವರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 'ಕೋಟಿ ಚೆನ್ನಯ್ಯ' ಅವರ ಹೆಸರು ಇಡುವ ಕುರಿತು ನಿರ್ಧಾರ ಪ್ರಕಟಿಸಬೇಕು ಎಂದು ಮನವಿ ಮಾಡಿದರು.
ಇತ್ತ ಮಂಗಳೂರು ವಿಮಾನ ನಿಲ್ದಾಣಕ್ಕೆ 'ಅಬ್ಬಕ್ಕನ' ಹೆಸರು ಇಡಬೇಕೆಂಬ ಒತ್ತಾಯವು ಇರುವ ಕಾರಣ ಈ ಕುರಿತು ಸೂಕ್ತ ಚರ್ಚೆ ನಡೆಸಿ ಅಗತ್ಯ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಭಾಧ್ಯಕ್ಷರು ತಿಳಿಸಿದರು.
ಕಾಂಗ್ರೆಸ್ ನಿರ್ಧಾರಕ್ಕೆ ಬಿಜೆಪಿಯ ಸ್ವಾಗತ
ನಾಲ್ಕು ವಿಮಾನ ನಿಲ್ದಾಣಗಳಿಗೆ ಮಹಾನ್ ವ್ಯಕ್ತಿಗಳ ಹೆಸರು ಇಡಲು ಸರ್ವಾನುಮತದ ಒಪ್ಪಿಗೆ ಸಿಕ್ಕಿದ್ದನ್ನು ಸದನದಲ್ಲಿದ್ದ ಬಿಜೆಪಿ ನಾಯಕರು ಸ್ವಾಗತಿಸಿದರು. ಬಿಜೆಪಿ ನಾಯಕರ ಅರವಿಂದ್ ಬೆಲ್ಲದ ಅವರು ಕೇಂದ್ರದಿಂದ ನಿಮ್ಮ ಪ್ರಸ್ತಾವನೆಗೆ ಒಪ್ಪಿಗೆ ತರುವ ಕೆಲಸ ಮಾಡುವುದಾಗಿ ತಿಳಿಸಿದರು.
ಅವರೊಂದಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಬಿಜೆಪಿ ಮಾಜಿ ಸಚಿವರು, ಇನ್ನಿತರ ಸದಸ್ಯರು ಸರ್ಕಾರ ನಿರ್ಣಯವನ್ನು ಮನದುಂಬಿ ಸ್ವಾಗತಿಸಿದರು.












Click it and Unblock the Notifications