ಹಿರಿಯ ಪತ್ರಕರ್ತ ಎಸ್.ವಿ. ಜಯಶೀಲರಾವ್ ನಿಧನ

Subscribe to Oneindia Kannada

ಬೆಂಗಳೂರು.ಏಪ್ರಿಲ್, 29: ಕನ್ನಡದ ಹಿರಿಯ ಪತ್ರಕರ್ತ, ಸ್ವಾತಂತ್ರ್ಯ ಹೋರಾಟಗಾರ ಎಸ್.ವಿ. ಜಯಶೀಲರಾವ್ ಬೆಂಗಳೂರಿನ ಮಲ್ಯ ಆಸ್ಪತ್ರೆಯಲ್ಲಿ ಗುರುವಾರ ಕೊನೆ ಉಸಿರು ಎಳೆದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.

ಹೊರ ರಾಜ್ಯದಲ್ಲೂ ಸೇವೆ ಸಲ್ಲಿಸಿದ್ದ ರಾವ್ ಎಲ್ಲರಿಗೆ ಚಿರಪರಿಚಿತರಾಗಿದ್ದರು. ಕನ್ನಡ ಪತ್ರಿಕಾ ಕ್ಷೇತ್ರ ಹಾಗೂ ಅಖಿಲ ಭಾರತ ಕಾರ್ಯನಿರತ ಪತ್ರಕರ್ತರ ಫೆಡರೇಷನ್ನಿನಲ್ಲಿ ಕಳೆದ 62 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದರು.[ಪೊಲೀಸರ ದೌರ್ಜನ್ಯ ಖಂಡಿಸಿ ಪತ್ರಕರ್ತರ ಪ್ರತಿಭಟನೆ]

journalist

1947ರಲ್ಲಿ ನಡೆದ ಮೈಸೂರು ಚಲೋ ಸತ್ಯಾಗ್ರಹದಲ್ಲಿ ಮೈಸೂರು ಸಬ್ ಜೈಲಿನಲ್ಲಿ ಬಂಧಿತರಾಗಿದ್ದರು. 1947ರ ಆದಿಭಾಗದಲ್ಲಿ ಬಿ.ಎಸ್. ವೆಂಕಟರಾಮ್ ಅವರು ಬೆಂಗಳೂರಿನಲ್ಲಿ ನಡೆಸುತ್ತಿದ್ದ ದೇಶಬಂಧು ಕನ್ನಡ ದೈನಿಕದ ಮೂಲಕ ಪತ್ರಿಕೋದ್ಯಮಕ್ಕೆ ಪಾದಾರ್ಪಣೆ ಮಾಡಿದರು.

ಪ್ರಜಾವಾಣಿಯಲ್ಲಿ ವರದಿಗಾರ ಹಾಗೂ ಪ್ರಧಾನ ವರದಿಗಾರರಾಗಿ 26 ವರ್ಷಕಾಲ ಸೇವೆ ಸಲ್ಲಿಸಿದ್ದರು. ನಂತರ 1974ರಲ್ಲಿ ಹುಬ್ಬಳ್ಳಿ ಹಾಗೂ ಬೆಂಗಳೂರಿನಿಂದ ಪ್ರಕಟವಾಗುತ್ತಿದ್ದ ಸಂಯುಕ್ತ ಕರ್ನಾಟಕ ಪತ್ರಿಕೆಯ ಜಂಟಿ ಸಂಪಾದಕರಾದರು. ನಂತರ ಸಂಪಾದಕರಾಗಿ ಕೆಲಸ ಮಾಡಿದರು.[2015ನೇ ಸಾಲಿನ ಪ.ಗೋ.ಪ್ರಶಸ್ತಿಗೆ ಚಂದ್ರಹಾಸ ಚಾರ್ಮಾಡಿ ಆಯ್ಕೆ]

ಕಾಂಗ್ರೆಸ್ಸಿನ ಯುವನಾಯಕರಾಗಿದ್ದು ಅನಂತರ ರಾಜ್ಯದ ಮುಖ್ಯಮಂತ್ರಿಯಾದ ಆರ್. ಗುಂಡೂರಾವ್ ಅವರ ಸಲಹೆ ಮೇರೆಗೆ 1982ರಲ್ಲಿ ಮುಂಜಾನೆ ಎಂಬ ಹೊಸ ಪತ್ರಿಕೆಯೊಂದನ್ನು ಹುಟ್ಟುಹಾಕಿದ್ದರು. ಇವರು 2005ರಲ್ಲಿ ಮತ್ತೆ ಸಂಪಾದಕೀಯ ಸಲಹೆಗಾರ ರಾಗಿ ಪ್ರಜಾವಾಣಿಯಲ್ಲಿ ಒಂದು ವರ್ಷ ಕಾಲ ಸೇವೆ ಸಲ್ಲಿಸಿದರು.

ಭಾರತೀಯ ಕಾರ್ಯನಿರತ ಪತ್ರಕರ್ತರ ಫೆಡರೇಷನ್ನಿನ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು. ಭಾರತ ಸ್ವಾತಂತ್ರ್ಯ ಗಳಿಸಿದ ನಂತರ ಜನತೆಯ ಆಶೋತ್ತರಗಳು ಶೀಘ್ರ ಕಾರ್ಯರೂಪಕ್ಕೆ ಬರುವಂತಾಗಲು, ನಡೆಯುವ ಎಲ್ಲ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳನ್ನು ಗಮನಿಸುತ್ತ, ಸಹಾಯ-ಸಲಹೆಗಳನ್ನು ನೀಡುವ ರೀತಿಯಲ್ಲಿ ರಾಷ್ಟ್ರದ ಪತ್ರಿಕೆಗಳು ಸದೃಢವಾಗಿ ಬೆಳೆಯುವಂತಾಗಲು ಐ.ಎಫ್.ಡಬ್ಲ್ಯುಜೆ. ಆಶ್ರಯದಲ್ಲಿ ನಡೆದು ಬಂದಿರುವ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು.

ವೃತ್ತಿಪರ ಸಂಸ್ಥೆಯಾದ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟ ಕಾಮರ್ಿಕ ಸಂಘಟನೆಯಾಗಿಯೂ ಪರಿವರ್ತನೆಗೊಂಡು, ನ್ಯಾಯವಾದ ಸಂಬಳ ಹಾಗೂ ಸೇವಾಭದ್ರತೆಯೂ ಇಲ್ಲದೆ ಕಾರ್ಯನಿರತ ಪತ್ರಕರ್ತರು ತುತ್ತಾಗಿದ್ದ ಶೋಷಣೆ ವಿರುದ್ಧ ಹೋರಾಟ ಆರಂಭಿಸಿದ್ದರು.

ಕರ್ನಾಟಕದ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಮೈಸೂರು ರಾಜ್ಯದ ಪತ್ರಕರ್ತರ ಸಹಕಾರಿ ಸಂಘದ ಅಧ್ಯಕ್ಷರಾಗಿ ಎರಡು ಅವಧಿ ಕೆಲಸ ಮಾಡಿದ್ದ ಅವರು, 1971ರಲ್ಲಿ ಬೆಂಗಳೂರು ವರದಿಗಾರರ ಕೂಟದ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. ಜತೆಗೆ ಬೆಂಗಳೂರು ಪ್ರೆಸ್ ಕ್ಲಬ್ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು.

ಎಸ್.ವಿ. ಜಯಶೀಲರಾವ್ ಅವರು ಕನ್ನಡ ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಧಾನಮಂಡಲ ಕಲಾಪ ವರದಿಗಾರಿಕೆಯಲ್ಲಿ ಹೊಸ ಶೈಲಿ, ಮಂಡನೆ ಹಾಗೂ ಮಾರ್ಗಗಳ ಪ್ರವರ್ತಕರಾಗಿದ್ದರು. ವಸ್ತುನಿಷ್ಠೆಗೆ ಸ್ವಲ್ಪವೂ ಭಂಗ ಬಾರದಂತೆ, ಸರಳವಾಗಿ, ಮನರಂಜಕವಾಗಿರುವ ಈ ವರದಿಗಾರಿಕೆ ಓದುಗರ ಮೆಚ್ಚುಗೆಗೆ ಪಾತ್ರವಾಗಿತ್ತು.

1994ರಲ್ಲಿ ಆಗಿನ ಮುಖ್ಯಮಂತ್ರಿ ಎಚ್.ಡಿ. ದೇವೇಗೌಡ ಅವರ ಮಾಧ್ಯಮ ಸಲಹೆಗಾರರಾಗಿದ್ದರು. ಭಾರತದ ಮಾಜಿ ಪ್ರಧಾನಿಯವರ ಖಾಸಗಿ ಕಾರ್ಯದರ್ಶಿಯಾಗಿ 1997ರ ಸೆಪ್ಟೆಂಬರ್ ತಿಂಗಳಿನಿಂದ 2003ರ ಏಪ್ರಿಲ್ ತಿಂಗಳವರೆಗೆ ನವದೆಹಲಿಯಲ್ಲಿ ಸೇವೆ ಸಲ್ಲಿಸಿದ್ದರು.

ಸಂತಾಪ: ಎಸ್.ವಿ. ಜಯಶೀಲರಾವ್ ನಿಧನಕ್ಕೆ ಬೆಂಗಳೂರು ಪ್ರೆಸ್ ಕ್ಲಬ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬೆಂಗಳೂರು ವರದಿಗಾರರ ಕೂಟ, ಪೋಟೋ ಜರ್ನಲಿಸ್ಟ್ ಅಸೋಸಿಯೇಷನ್, ಬೆಂಗಳೂರು ಟಿ.ವಿ ಜರ್ನಲಿಸ್ಟ್ ಅಸೋಸಿಯೇಷನ್, ಪತ್ರಕರ್ತರ ಸಹಕಾರ ಸಂಘ ಮತ್ತು ಸಂವಹನ ಶಿಕ್ಷಕರ ಸಂಘ ಸಂತಾಪ ವ್ಯಕ್ತಪಡಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Veteran journalist S.V. Jayasheela Rao, known for his innovative style of legislature reporting, died in a private hospital Bengaluru on Thursday, 28 April, 2016. Rao, who worked for major newspapers such as Prajavani , Samyuktha Karnataka , Munjaane. Chief Minister Siddaramaiah, Mr. Gowda and Information and Publicity Minister R. Roshan Baig have mourned his death.
Please Wait while comments are loading...