Kannada Rajyotsava: "ಕನ್ನಡ ರಾಜ್ಯೋತ್ಸವ ಆಚರಣೆಗೆ ಅವಕಾಶ ಕೊಡಲ್ಲ" ಎಂದ ಪ್ರತಿಷ್ಠಿತ ಸಂಸ್ಥೆ
ಕನ್ನಡಿಗರ ಹೆಮ್ಮೆಯ ಹಾಗೂ ನೆಲದ ಹಬ್ಬವಾದ ನವೆಂಬರ್ 1ರ ಕನ್ನಡ ರಾಜ್ಯೋತ್ಸವ ಆಚರಣೆಗೆ ಕರುನಾಡಿನೆಲ್ಲೆಡೆ ಅದ್ಧೂರಿ ತಯಾರಿ ನಡೆದಿದೆ. ಎಲ್ಲೆಲ್ಲೂ ಕನ್ನಡ, ಎಂದೆಂದಿಗೂ ಕನ್ನಡ ಎನ್ನುತ್ತಾ ಕನ್ನಡಿಗರು ಈ ಹಬ್ಬವನ್ನು ಸಂಭ್ರಮಿಸಲು ಸಜ್ಜಾಗಿದ್ದಾರೆ. ಸದ್ಯ ನಾವೆಲ್ಲ ಕನ್ನಡ ಉಳಿಸಬೇಕಾದ ಪರಿಸ್ಥಿತಿಯಲ್ಲಿದ್ದೇವೆ. ಸ್ವಂತ ನೆಲದಲ್ಲೇ ಕನ್ನಡ, ಕನ್ನಡಿಗರ ಅಸ್ಮಿತೆಗೆ ಧಕ್ಕೆಯಾಗುವ ಘಟನೆಗಳು ಆತಂಕ ಉಂಟು ಮಾಡುತ್ತಲೇ ಇವೆ. ಇದೀಗ ರಾಜ್ಯದಲ್ಲೇ ಇರುವ ಪ್ರತಿಷ್ಠಿತ ಸಂಸ್ಥೆಯೊಂದು ಕನ್ನಡ ರಾಜ್ಯೋತ್ಸವದ ಆಚರಣೆಗೆ ಅವಕಾಶ ಕೊಡುವುದಿಲ್ಲ ಎಂದು ನೇರವಾಗಿ ಹೇಳಿದೆ.
ಹೌದು, ಈ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ. "ನಮ್ಮ ಪ್ರೀತಿಯ ಕರ್ನಾಟಕವನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬ ಪ್ರಶ್ನೆ ನಮ್ಮನ್ನು ಸದಾ ಕಾಡುತ್ತಲೇ ಇದೆ. ನಮ್ಮ ಬೆಂಗಳೂರು-ನಾಡಪ್ರಭು ಕೆಂಪೇಗೌಡರಂತಹ ಮಹಾನ್ ನಿರ್ಮಾತೃಗಳು ಸೃಷ್ಟಿಸಿದ ಈ ಮಹಾನಗರದಲ್ಲಿ, ಕನ್ನಡಿಗರ ಶೇಕಡಾವಾರು ಜನಸಂಖ್ಯೆಯನ್ನು ಹೊರರಾಜ್ಯಗಳಿಂದ ಉದ್ಯೋಗ ಮತ್ತು ಉದ್ಯಮಕ್ಕಾಗಿ ಬಂದವರು ಅಂಕಿ-ಅಂಶಗಳ ಮೂಲಕ ಪ್ರಶ್ನಿಸುತ್ತಿರುವುದು ನಮ್ಮನ್ನು ಚಿಂತೆಗೀಡು ಮಾಡುತ್ತದೆ. ಇದರಿಂದ ಕನ್ನಡಿಗರಾದ ನಾವು ನಮ್ಮ ಅಸ್ತಿತ್ವವನ್ನು ಪ್ರಶ್ನಿಸುವಂತಾಗಿದೆಯಲ್ಲವೇ?" ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ನಾಳೆ ನವೆಂಬರ್ ಒಂದರಂದು ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಹಾದಿ ಬೀದಿಗಳಲ್ಲಿ ಕನ್ನಡ ಬಾವುಟಗಳು ಹಾರಾಡುತ್ತವೆ. ಆದರೆ ನವೆಂಬರ್ ಮೊದಲ ದಿನ ಮುಗಿದ ನಂತರ ತಿಂಗಳ ಕೊನೆಯವರೆಗೂ ಅದು ಮುಂದುವರಿಯದೆ ಮತ್ತೆ ಮಲಗಿ ಹೋದರೆ, ಕನ್ನಡಿಗರು ಮತ್ತೆ "ಮುಂದಿನ ನವೆಂಬರ್‌ಗೆ" ಎಂದು ಹೇಳುವುದು ಸರಿಯಲ್ಲ. ಇಂತಹ ನಿಷ್ಕ್ರಿಯತೆಯನ್ನು ನಾವು ತಪ್ಪಿಸಬೇಕು ಎಂದು ಕರೆ ನೀಡಿದ್ದಾರೆ.
ಇಂದು ನೋಡಿ, ಬೆಂಗಳೂರು ಹೈಟೆಕ್ ಲಿಮಿಟೆಡ್‌ನಂತಹ (ಬಿಎಚ್ಎಲ್) ಸಂಸ್ಥೆಯೊಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ಬಯಸಿದರೆ, "ನಾವು ಅನುಮತಿ ನೀಡುವುದಿಲ್ಲ, ನಿಮ್ಮ ಕನ್ನಡ ಸಂಘ ಅಧಿಕೃತವಲ್ಲ, ರಾಜ್ಯೋತ್ಸವಕ್ಕೆ ಅನುಮತಿ ಇಲ್ಲ" ಎಂದು ಹೇಳುವ ಮಟ್ಟಕ್ಕೆ ತಲುಪಿದೆಯಲ್ಲವೇ? ಅದಕ್ಕಾಗಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಅನುಮತಿ ಪಡೆಯಲು ನ್ಯಾಯಾಲಯದ ಮೆಟ್ಟಿಲು ಏರಬೇಕಾದ ಪರಿಸ್ಥಿತಿ ಕನ್ನಡಿಗರಿಗೆ ಬಂದಿದ್ದರೆ, ಇದು ನಮ್ಮ ಸಾಂಸ್ಕೃತಿಕ ಸ್ವಾತಂತ್ರ್ಯದ ಮೇಲಿನ ಆಕ್ರಮಣವಲ್ಲವೇ? ಎಂದು ಆಕ್ರೋಶ ಹೊರಹಾಕಿದ್ದಾರೆ.

ಭ್ರಷ್ಟ ಪಕ್ಷಗಳಲ್ಲಿ ಸೇರಿ ಸಮಯ ವ್ಯರ್ಥ ಬೇಡ
ಕರ್ನಾಟಕ, ಕನ್ನಡ ಭಾಷೆ, ಇಲ್ಲಿಯ ಸಾರ್ವಭೌಮತ್ವ ಇವು ಕೇವಲ ಭಾವನಾತ್ಮಕ ವಿಷಯಗಳಲ್ಲ. ಇವು ನಮ್ಮ ಅನ್ನದ ಪ್ರಶ್ನೆ, ಬದುಕಿನ ಪ್ರಶ್ನೆ, ಇತಿಹಾಸದ ಪ್ರಶ್ನೆ, ತ್ಯಾಗ ಮತ್ತು ಬಲಿದಾನದ ಪ್ರಶ್ನೆ, ನಮ್ಮ ಅಸ್ತಿತ್ವದ ಮೂಲಭೂತ ಪ್ರಶ್ನೆಯಾಗಿವೆ. ಕರ್ನಾಟಕ ರಾಜ್ಯೋತ್ಸವವು ಇದನ್ನೆಲ್ಲಾ ನೆನಪಿಸುವ ಪವಿತ್ರ ಸಂದರ್ಭ. ಹೀಗಾಗಿ ಇಂತಹ ಎಲ್ಲಾ ಅಸಮತೋಲನಗಳನ್ನು ಸರಿಪಡಿಸಲು ಪೊಳ್ಳು ರಾಷ್ಟ್ರೀಯತೆ, ಜಾತೀಯತೆ ತುಂಬುವ ಭ್ರಷ್ಟ ರಾಜಕೀಯ ಪಕ್ಷಗಳಲ್ಲಿ ಸೇರಿ ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ ಎಂದು ಈ ನೆಲದ ಯುವಕರಿಗೆ ಕರೆ ನೀಡುತ್ತೇನೆ ಎಂದಿದ್ದಾರೆ.
ಅವುಗಳಲ್ಲಿ ನೀವು ಏನು ಸಾಧಿಸುತ್ತೀರಿ? ಬದಲಿಗೆ, ಕನ್ನಡ ನಾಡನ್ನು ಉಳಿಸಿ, ಕನ್ನಡ ಭಾಷೆಯನ್ನು ಬೆಳೆಸಿ, ಕನ್ನಡಿಗರ ಬದುಕನ್ನು ಸುರಕ್ಷಿತಗೊಳಿಸಿ, ನಮ್ಮ ನೆಲ-ಜಲವನ್ನು ಸಂರಕ್ಷಿಸಿ ಎಂಬ ಮಹಾನ್ ಗುರಿಯೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆಗೆ ಸೇರಿ. ಈ ಕನ್ನಡ ಚಳವಳಿಯಲ್ಲಿ ಭಾಗಿಯಾಗಿ, ಈ ರಾಜ್ಯೋತ್ಸವದ ದಿನ ನಿಮ್ಮನ್ನು ಸ್ವಾಗತಿಸುತ್ತೇನೆ. ಕನ್ನಡದ ಭವಿಷ್ಯವನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗೂಡೋಣ. ಕರ್ನಾಟಕದ ರಕ್ಷಣೆಯು ನಮ್ಮೆಲ್ಲರ ಧರ್ಮವಾಗಲಿ, ನಮ್ಮ ಭಾಷೆಯ ಉಳಿವು ನಮ್ಮ ಧ್ಯೇಯವಾಗಲಿ. ಜೈ ಕನ್ನಡಮಾತೆ ಎಂದು ಟಿ.ಎ.ನಾರಾಯಣಗೌಡ ಪೋಸ್ಟ್ ಹಂಚಿಕೊಂಡಿದ್ದಾರೆ.












Click it and Unblock the Notifications