ಸಿಬಿಎಸ್ಇ ಶಾಲೆಯಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 25 : ಕರ್ನಾಟಕದಲ್ಲಿನ ಎಲ್ಲ ಶಾಲೆಗಳಲ್ಲೂ ಕನ್ನಡವನ್ನು ಕಡ್ಡಾಯವಾಗಿ ಮೊದಲ ಇಲ್ಲವೇ ಎರಡನೆಯ ಭಾಷೆಯಾಗಿ ಕಲಿಸಬೇಕು ಅನ್ನುವ ಗಟ್ಟಿಯಾದ ನಿರ್ಧಾರ ತಳೆದು ವಿಶೇಷ ರಾಜ್ಯಪತ್ರದಲ್ಲಿ ಅಧಿಸೂಚನೆ ಪ್ರಕಟಿಸುವ ಮೂಲಕ ಕನ್ನಡಿಗರ ಅನೇಕ ವರ್ಷಗಳ ಬೇಡಿಕೆಗೆ ಸ್ಪಂದಿಸಿದ ನಿಮಗೆ ಧನ್ಯವಾದಗಳು.

ಇದೇ ಹೊತ್ತಲ್ಲಿ, ಸಿ.ಬಿ.ಎಸ್.ಇ ಬೋರ್ಡಿನ ವ್ಯಾಪ್ತಿಯಲ್ಲಿರುವ ಶಾಲೆಗಳ ಆಡಳಿತ ಮಂಡಳಿಗಳು ಈ ನಿಲುವಿಗೆ ತಕರಾರು ತೆಗೆದು ಇದನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದಿವೆ. ಕೇಂದ್ರ ಸರ್ಕಾರದ ಆದೇಶದಂತೆ ಎರಡನೆಯ ಭಾಷೆಯಾಗಿ ಹಿಂದಿಯನ್ನು ಕಡ್ಡಾಯವಾಗಿ ಕಲಿಸುತ್ತೇವೆ, ಮೊದಲ ಭಾಷೆಯಾಗಿ ಇಂಗ್ಲಿಷ್ ಇದ್ದು, ಕನ್ನಡವನ್ನು ಕಡ್ಡಾಯವಾಗಿ ಕಲಿಸುವುದಿಲ್ಲ, ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಕೋರ್ಟ್ ಮೆಟ್ಟಿಲು ಹತ್ತುತ್ತೇವೆ ಅನ್ನುವ ಉತ್ತರ ನೀಡುವ ಮೂಲಕ ರಾಜ್ಯ ಸರ್ಕಾರದ ಕನ್ನಡ ಪರ ನಿಲುವಿಗೆ ಸೆಡ್ಡು ಹೊಡೆದಿದ್ದಾರೆ.

Kannada as first or second language in CBSE schcools

ರಾಜ್ಯದಿಂದ ರಾಜ್ಯಕ್ಕೆ ವರ್ಗಾವಣೆಯಾಗುವ ಕೇಂದ್ರ ಸರ್ಕಾರಿ ನೌಕರರ ಮಕ್ಕಳಿಗಾಗಿ ಶುರುವಾದ ಸಿ.ಬಿ.ಎಸ್.ಇ ಬೋರ್ಡ್ ಶಾಲೆಗಳಲ್ಲಿ ಇಂತಹ ಕೆಲಸದಲ್ಲಿರುವ ನೌಕರರ ಮಕ್ಕಳು ಮಾತ್ರ ಇರಬೇಕು ಅನ್ನುವ ನಿಯಮವಿದ್ದಾಗಿಯೂ, ಅದನ್ನು ಗಾಳಿಗೆ ತೂರಿ ಇಂದು ರಾಜ್ಯದ ಉದ್ದಗಲಕ್ಕೂ ಬೇಕಾಬಿಟ್ಟಿಯಾಗಿ ಶಾಲೆಗಳನ್ನು ಸಿ.ಬಿ.ಎಸ್.ಇ ಬೋರ್ಡ್ ವ್ಯಾಪ್ತಿಗೆ ತರಲಾಗುತ್ತಿದೆ.

ಸಿ.ಬಿ.ಎಸ್.ಇ ಶಾಲೆಗಳನ್ನು ಆರಂಭಿಸಲು ರಾಜ್ಯ ಸರ್ಕಾರದ ಅನುಮತಿ ಪತ್ರ ಪಡೆಯಬೇಕು ಅನ್ನುವ ನಿಯಮವನ್ನು ಕೈಬಿಡಲಾಗಿದ್ದು, ಈ ಶಾಲೆಗಳು ರಾಜ್ಯ ಸರ್ಕಾರದ ಹಿಡಿತಕ್ಕೆ ಸಿಗದಂತೆ ನೋಡಿಕೊಳ್ಳಲಾಗುತ್ತಿದೆ. ಇದು ಒಕ್ಕೂಟ ವ್ಯವಸ್ಥೆಯಲ್ಲಿ ಶಿಕ್ಷಣದ ವಿಷಯದಲ್ಲಿ ರಾಜ್ಯ ಸರ್ಕಾರದ ಸ್ವಾಯತ್ತತೆಯನ್ನು ಉಲ್ಲಂಘಿಸುವ ಸ್ಪಷ್ಟ ನಡೆಯಾಗಿದೆ. ಜೊತೆಯಲ್ಲಿ ಇಂತಹ ಶಾಲೆಗಳಲ್ಲಿ ಕೇಂದ್ರ ಸರ್ಕಾರದ ಮಾತಿನಂತೆ ಹಿಂದಿ ಕಲಿಸುತ್ತೇವೆ, ಆದರೆ ರಾಜ್ಯದ ಭಾಷೆಯಾದ ಕನ್ನಡ ಕಲಿಸುವುದಿಲ್ಲ ಅನ್ನುವ ದರ್ಪದ ಧೋರಣೆ ರಾಜ್ಯ ಸರ್ಕಾರದ ಸಾರ್ವಭೌಮತ್ವಕ್ಕೆ ಹಾಕುತ್ತಿರುವ ಸವಾಲಾಗಿದೆ. ಕರ್ನಾಟಕದಲ್ಲಿಯೇ ಕನ್ನಡದ ಬದಲು ಹಿಂದಿ ಕಲಿಸಲಾಗುತ್ತದೆ ಎಂಬುದು ಹಿಂದಿ ಹೇರಿಕೆಯ ಒಂದು ಪ್ರಬಲ ಅಸ್ತ್ರವಾಗಿದೆ ಎಂಬುದು ಇಲ್ಲಿ ಗಮನಿಸಬೇಕಾಗಿದೆ.

ಸಿ.ಬಿ.ಎಸ್.ಇ ಶಾಲೆಗಳ ಈ ಬೇಕಾಬಿಟ್ಟಿ ಧೋರಣೆಯನ್ನು ನಿಯಂತ್ರಿಸಿ, ಅಲ್ಲಿನ ಹಿಂದಿ ಹೇರಿಕೆಗೆ ತಡೆಯೊಡ್ಡಿ, ಕಡ್ಡಾಯವಾಗಿ ಕನ್ನಡವನ್ನು ಮೊದಲ ಇಲ್ಲವೇ ಎರಡನೆಯ ಭಾಷೆಯಾಗಿ ಕಲಿಸಲೇಬೇಕು ಅನ್ನುವ ಆದೇಶವನ್ನು ಜಾರಿಗೆ ತರುವತ್ತ ಸೂಕ್ತ ಕಾನೂನು ಕ್ರಮ ಕೈಗೊಂಡು ಈ ವಿಷಯವನ್ನು ತಾರ್ಕಿಕ ಅಂತ್ಯದತ್ತ ಕೊಂಡೊಯ್ಯಬೇಕೆಂದು ನಿಮ್ಮಲ್ಲಿ ಮನವಿ ಮಾಡುತ್ತೇವೆ.

ಈ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ಬೇರೆ ಬೇರೆ ರಾಜ್ಯಗಳೊಂದಿಗೆ ಕೈಜೋಡಿಸಿ ಅವಶ್ಯಕತೆ ಬಿದ್ದಲ್ಲಿ ಸಂವಿಧಾನದ ತಿದ್ದುಪಡಿಗೂ ಒತ್ತಾಯ ಮಾಡಲು ಮುಂದಾಗಬೇಕೆಂದು ನಿಮ್ಮಲ್ಲಿ ಮನವಿ ಮಾಡುತ್ತೇವೆ.

ರಾಜ್ಯ ಸರ್ಕಾರದಿಂದ ಕಡಿಮೆ ದರದಲ್ಲಿ ಭೂಮಿ, ವಿದ್ಯುತ್, ನೀರು ಮುಂತಾದ ಸೌಲಭ್ಯ ಪಡೆದು ಶುರುವಾಗುವ ಇಂತಹ ಬಹುತೇಕ ಶಾಲೆಗಳು ರಾಜ್ಯ ಸರ್ಕಾರದ ಅಣತಿಯಂತೆ ಕನ್ನಡವನ್ನು ಕಡ್ಡಾಯವಾಗಿ ಕಲಿಸುವುದನ್ನು ಖಾತರಿಪಡಿಸಬೇಕೆಂದು ಈ ಅಭಿಯಾನಕ್ಕೆ ಸಹಿ ಹಾಕಿರುವ ನಾವೆಲ್ಲರೂ ನಿಮ್ಮನ್ನು ಕೋರುತ್ತೇವೆ.

(ಗಣೇಶ್ ಚೇತನ್, ಪ್ರಿಯಾಂಕ್ ಕತ್ತಲಗಿರಿ, ಬನವಾಸಿ ಬಳಗ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kannada should be taught as first or second language in CBSE schcools in Karnataka. Now, the CBSE schools are teaching Kannada as third language, sidelining the order passed by Karnataka government. An online petition has been filed by Banavasi Balaga in this regard.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ