ಸ್ಪಷ್ಟನೆ ಕೊಟ್ಟಿದ್ದೀನಿ, ಎಂದಿಗೂ ಕ್ಷಮೆ ಕೇಳಲ್ಲ: ಕನ್ನಡ ವಿವಾದದ ಬಗ್ಗೆ ಕಮಲ್ ಹಾಸನ್ ಸಮರ್ಥನೆ
ಕನ್ನಡ ತಮಿಳಿನಿಂದ ಹುಟ್ಟಿದ್ದು ಎನ್ನುವ ಮೂಲಕ ತಮಿಳು ನಟ ಕಮಲ್ ಹಾಸನ್ ವಿವಾದಕ್ಕೆ ಗುರಿಯಾಗಿದ್ದಾರೆ. ತಮ್ಮ ʼಥಗ್ ಲೈಫ್ʼ ಸಿನಿಮಾ ಕಾರ್ಯಕ್ರಮದಲ್ಲಿ ಈ ಹೇಳಿಕೆ ನೀಡಿದ್ದು, ಕಮಲ್ ಹೇಳಿಕೆ ವಿರುದ್ಧ ಕನ್ನಡಿಗರು ಕೆರಳಿದ್ದಾರೆ. ನಟ ಕೂಡಲೇ ಕ್ಷಮೆ ಕೇಳಬೇಕು ಪಟ್ಟು ಹಿಡಿದಿರುವ ಜೊತೆಗೆ ಅವರ ಥಗ್ ಲೈಫ್ ಸಿನಿಮಾ ಕರ್ನಾಟಕದಲ್ಲಿ ಬ್ಯಾನ್ ಮಾಡುವುದಾಗಿ ಎಚ್ಚರಿಕೆಯೂ ನೀಡಿದ್ದಾರೆ. ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ನಟ ಕಮಲ್ ಹಾಸನ್ ಸ್ಟಷ್ಟನೆ ನೀಡಿದ್ದಾರೆ. ನಾನು ಹೇಳಿದ್ದು ಸರಿ, ಎಂದಿಗೂ ಕ್ಷಮೆ ಕೇಳಲ್ಲ ಎಂದಿದ್ದಾರೆ. ಕನ್ನಡ ಕುರಿತಾದ ವಿವಾದಕ್ಕೆ ಕಮಲ್ ಈ ರೀತಿ ಉತ್ತರಿಸಿದ್ದಾರೆ..
ʼನಾನು ಅದನ್ನು ಪ್ರೀತಿಯಿಂದ ಹೇಳಿದ್ದು, ನನಗೆ ಅನೇಕ ಇತಿಹಾಸಕಾರರು ಭಾಷಾ ಇತಿಹಾಸವನ್ನು ಕಲಿಸಿದ್ದಾರೆ. ನಾನು ಏನನ್ನೂ ಅರ್ಥೈಸಲಿಲ್ಲ. ತಮಿಳುನಾಡು ಒಂದು ರಾಜ್ಯ, ಅಲ್ಲಿ ಒಬ್ಬ ಮೆನನ್ ನಮ್ಮ ಮುಖ್ಯಮಂತ್ರಿಯಾಗಿದ್ದಾರೆ, ಅಲ್ಲಿ ಒಬ್ಬ ರೆಡ್ಡಿ ನಮ್ಮ ಮುಖ್ಯಮಂತ್ರಿಯಾಗಿದ್ದಾರೆ. ಒಬ್ಬ ತಮಿಳರು ನಮ್ಮ ಮುಖ್ಯಮಂತ್ರಿಯಾಗಿದ್ದಾರೆ ಮತ್ತು ಒಬ್ಬ ಕನ್ನಡಿಗ ಅಯ್ಯಂಗಾರ್ ನಮ್ಮ ಮುಖ್ಯಮಂತ್ರಿಯಾಗಿದ್ದಾರೆ. ಹಾಗಾಗಿ ರಾಜಕಾರಣಿಗಳು ಭಾಷೆಯ ಬಗ್ಗೆ ಮಾತನಾಡಲು ಅರ್ಹರಲ್ಲ. ನಾನು ಸೇರಿದಂತೆ ಅವರಿಗೆ ಅದರ ಬಗ್ಗೆ ಮಾತನಾಡಲು ಅರ್ಹತೆ ಇಲ್ಲ ಎಂದು ಕಮಲ್ ಹಾಸನ್ ಹೇಳಿದ್ದಾರೆ. ಈಗ ನಡೆಯುತ್ತಿರುವ ಎಲ್ಲ ಆಳವಾದ ಚರ್ಚೆಗಳನ್ನು ಇತಿಹಾಸಕಾರರು, ಪುರಾತತ್ವಶಾಸ್ತ್ರಜ್ಞರು ಮತ್ತು ಭಾಷಾ ತಜ್ಞರಿಗೆ ಬಿಡೋಣʼ ಎಂದಿದ್ದಾರೆ.

ʼನಟ ಶಿವಣ್ಣ ಅವರ ತಂದೆ ಡಾ.ರಾಜ್ಕುಮಾರ್ ಅವರು ನನಗೆ ತಂದೆ, ಸಹೋದರ ಸಮಾನರು. ನಾನು ಪ್ರೀತಿಯಿಂದ ನೀಡಿದ ಹೇಳಿಕೆಯನ್ನು ಟೀಕೆ ಮಾಡಲಾಗಿದೆ. ಅವರ ದೃಷ್ಟಿಯಿಂದ ನೋಡಿದರೆ ಅವರು ಹೇಳಿದ್ದು ಸರಿ ಎನಿಸಬಹುದು. ಹಾಗೆಯೇ ನನ್ನ ದೃಷ್ಟಿಕೋನದಿಂದ ನೋಡಿದರೆ ನಾನು ಹೇಳಿದ್ದು ಕೂಡ ಸರಿ. ಆದರೆ ಇದಕ್ಕೆ ಮೂರನೇ ದೃಷ್ಟಿಯೂ ಇದೆ. ಇತಿಹಾಸಕಾರರು, ಭಾಷಾ ಪಂಡಿತರು ಈ ಎರಡರಲ್ಲಿ ಯಾವುದು ಸರಿ ಎಂಬುದನ್ನ ಹೇಳಬೇಕು. ಈಗ ನಾವು ಯಾರ ಜೊತೆಗಿರಬೇಕು? ಕುಟುಂಬದ ಜೊತೆಗೋ ಅಥವಾ ಉತ್ತರದಿಂದ ಬಂದ ಹಿಂದಿ ಭಾಷೆಯ ಜೊತೆಗಿರಬೇಕೊ? ಎಂದು ನಾವೆಲ್ಲ ನಿರ್ಧಾರ ತೆಗೆದುಕೊಳ್ಳುವ ಸಮಯ. ಇದು ಪ್ರಜಾಪ್ರಭುತ್ವ ರಾಷ್ಟ್ರ, ಹಾಗೆಯೇ ನಾನು ಈಗ ನೀಡಿದ್ದು ಸ್ಪಷ್ಟನೆ ಅಷ್ಟೇ, ಕ್ಷಮೆಯಲ್ಲ. ಯಾಕೆ ಅಂದ್ರೆ ಪ್ರೀತಿ ಎಂದಿಗೂ ಕ್ಷಮೆ ಕೇಳುವುದಿಲ್ಲʼ ಎಂದು ಕಮಲ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಕಮಲ್ ಹಾಸನ್ ಹೇಳಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ, ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಸಚಿವರು, ಶಾಸಕರು ಸೇರಿ ಬಹುತೇಕ ರಾಜಕಾರಣಿಗಳು ಖಂಡನೆ ವ್ಯಕ್ತಪಡಿಸಿದ್ದಾರೆ. ಕನ್ನಡಪರ ಸಂಘಟನೆಗಳು, ಹೋರಾಟಗಾರರು ಕೂಡ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ನಟ ಕಮಲ್ ಕೂಡಲೇ ಕ್ಷಮೆ ಕೇಳಬೇಕು ಎಂದು ಎಲ್ಲೆಡೆ ಆಗ್ರಹ ಕೇಳಿಬಂದಿತ್ತು. ಆದರೆ, ಕಮಲ್ ಹಾಸನ್ ಅವರು ಕ್ಷಮೆ ಕೇಳುವುದಿಲ್ಲ ಎನ್ನುವ ಮೂಲಕ ಸ್ಷಷ್ಟನೆ ನೀಡಿದ್ದಾಗಿ ಹೇಳಿಕೊಂಡಿದ್ದಾರೆ. ಇದನ್ನು ಕನ್ನಡಿಗರು ಒಪ್ಪಿಕೊಂಡು ಈ ವಿವಾದ ಇಲ್ಲಿಗೆ ಮುಗಿಸುತ್ತಾರಾ? ಅಥವಾ ಮೊಂಡಾಟ ಎಂದು ವಿರೋಧ ಮುಂದುವರಿಸುತ್ತಾರಾ ಅನ್ನೋದೆ ಈಗ ಎದುರಾಗಿರುವ ದೊಡ್ಡ ಪ್ರಶ್ನೆ.












Click it and Unblock the Notifications