ಕಲ್ಯಾಣ ಕರ್ನಾಟಕ ಪೊಲೀಸ್ ಕಾನ್ಸ್‌ಟೇಬಲ್ ಲಿಖಿತ ಪರೀಕ್ಷೆ ದಿನಾಂಕ ಬದಲು
ಬೆಂಗಳೂರು, ಅಕ್ಟೋಬರ್ 26: ಅಭ್ಯರ್ಥಿಗಳ ಬೇಡಿಕೆಯಂತೆ ಕಲ್ಯಾಣ ಕರ್ನಾಟಕ ಪೊಲೀಸ್ ಕಾನ್ಸ್‌ಟೇಬಲ್ ಲಿಖಿತ ಪರೀಕ್ಷೆ ದಿನಾಂಕ ಬದಲಾವಣೆ ಮಾಡಲಾಗಿದೆ. ಪರಿಷ್ಕೃತ ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಿದ್ದು, 19/11/2023ರಂದು ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ & ಜೈವಿಕ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ ಪರೀಕ್ಷೆ ನವೆಂಬರ್ 5ರಂದು ನಡೆಯಬೇಕಿದ್ದ ಲಿಖಿತ ಪರೀಕ್ಷೆಯ ದಿನಾಂಕವನ್ನು ಬದಲಾವಣೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರವನ್ನು ಬರೆದಿದ್ದರು.

ಗುರುವಾರ ಪರೀಕ್ಷೆ ದಿನಾಂಕ ಬದಲು ಮಾಡುವ ಬಗ್ಗೆ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಡಿ.ಐ.ಜಿ.ಪಿ., ನೇಮಕಾತಿ ಹಾಗೂ ಸಮನ್ವಯಾಧಿಕಾರಿ, ಸಿ.ಪಿ.ಸಿ, ನೇಮಕಾತಿ ಸಮಿತಿ, ಡೈರೆಕ್ಟರ್ ಜನರಲ್ ಆಫ್ ಪೊಲೀಸ್, ನೇಮಕಾತಿ ಬೆಂಗಳೂರು ರವರ ಪರವಾಗಿ ಆದೇಶ ಹೊರಡಿಸಿದ್ದಾರೆ.
ಆದೇಶದ ವಿವರ; ನೇಮಕಾತಿ ಅತಿ ಜರೂರು ಎಂಬ ಬರಹದಲ್ಲಿ ಆದೇಶ ಪ್ರಕಟಿಸಲಾಗಿದೆ. ಇದನ್ನು ಪೊಲೀಸ್ ಆಯುಕ್ತರು : ಬೆಂಗಳೂರು ನಗರ ಮತ್ತು ಕಲಬುರಗಿ ನಗರ. ಉಪ ಪೊಲೀಸ್ ಆಯುಕ್ತರು ಆಡಳಿತ, ಬೆಂಗಳೂರು ನಗರ, ಪೊಲೀಸ್ ಆಯುಕ್ತರವರ ಕಛೇರಿ, ಬೆಂಗಳೂರು ನಗರ ಮತ್ತು ಪೊಲೀಸ್ ಅಧೀಕ್ಷಕರು : ಬೀದರ್ ಜಿಲ್ಲೆ, ಯಾದಗಿರಿ, ಜಿಲ್ಲೆ, ಕಲಬುರಗಿ ಜಿಲ್ಲೆ, ರಾಯಚೂರು ಜಿಲ್ಲೆ ಕೊಪ್ಪಳ ಜಿಲ್ಲೆ, ಬಳ್ಳಾರಿ ಜಿಲ್ಲೆ, ವಿಜಯನಗರ ಜಿಲ್ಲೆ, ಚಿತ್ರದುರ್ಗ ಜಿಲ್ಲೆ ದಾವಣಗೆರೆ ಜಿಲ್ಲೆ & ಹಾವೇರಿ ಜಿಲ್ಲೆ ಇವರಿಗೆ ಕಳಿಸಲಾಗಿದೆ.
ಆದೇಶದಲ್ಲಿ 2022-23ನೇ ಸಾಲಿನ ಕಲ್ಯಾಣ ಕರ್ನಾಟಕ ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) (ಪುರುಷ & ಮಹಿಳಾ) (ತೃತೀಯ ಲಿಂಗ ಪುರುಷ & ಮಹಿಳಾ) ಹಾಗೂ ಸೇವಾನಿರತ & ಬ್ಯಾಕ್ ಲಾಗ್-454 ಹುದ್ದೆಗಳ ಲಿಖಿತ ಪರೀಕ್ಷೆಯನ್ನು ದಿನಾಂಕ 05/11/2023 ರಂದು ಬೆಳಗ್ಗೆ 11 ರಿಂದ 12:30 ರವರೆಗೆ ನಡೆಸಲು ನಿಗದಿಪಡಿಸಲಾಗಿತ್ತು.
ಆದರೆ, ಸದರಿ ದಿನಾಂಕದಂದು ಇತರೆ ಇಲಾಖೆಯ ಲಿಖಿತ ಪರೀಕ್ಷೆಯು ನಿಗದಿಯಾಗಿರುವುದರಿಂದ ಈ ಸಂಬಂಧ ಸಿ.ಪಿ.ಸಿ (ಕೆಕೆ)-454 ಹುದ್ದೆಗಳ ಲಿಖಿತ ಪರೀಕ್ಷೆಯ ದಿನಾಂಕವನ್ನು ಮುಂದೂಡಿ, ದಿನಾಂಕ 19/11/2023 ರಂದು ನಡೆಸಲುನಿಗದಿಪಡಿಸಲಾಗಿರುತ್ತದೆ.
ಆದುದರಿಂದ ಈಗಾಗಲೇ ತಮ್ಮ ಘಟಕಗಳಿಂದ ಸದರಿ ಪರೀಕ್ಷೆ ನಡೆಸಲು ಪರೀಕ್ಷಾ ಕೇಂದ್ರಗಳ ವಿವರಗಳನ್ನು ಸಲ್ಲಿಸಿದ್ದು, ಸದರಿ ಕೇಂದ್ರಗಳಲ್ಲಿಯೇ ಅಥವಾ ಇನ್ನಿತರೆ ಹೊಸ ಪರೀಕ್ಷಾ ಕೇಂದ್ರಗಳಲ್ಲಿ (ಜಿಲ್ಲಾ ಕೇಂದ್ರ ಸ್ಥಾನಗಳಲ್ಲಿ) ದಿನಾಂಕ 19/11/2023ರಂದು ಪರೀಕ್ಷೆಯನ್ನು ನಡೆಸಲು ಅನುಕೂಲವಾಗುವಂತೆ ಪುನಃ ಸದರಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಂದ ಲಿಖಿತ ಒಪ್ಪಿಗೆ ಪತ್ರವನ್ನು ಪಡೆದು ಸದರಿ ಮಾಹಿತಿಯನ್ನು ದಿನಾಂಕ 30/10/2023ರ ಬೆಳಗ್ಗೆ 10:30ರ ಒಳಗಾಗಿ ಕಳುಹಿಸಿಕೊಡಲು ಈ ಮೂಲಕ ತಿಳಿಸಲಾಗಿದೆ ಎಂದು ಹೇಳಿದೆ.
ಪರೀಕ್ಷೆ ದಿನಾಂಕ ಬದಲು ಏಕೆ?; ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನವೆಂಬರ್ 5ರಂದು ಒಂದೇ ದಿನ ವಿವಿಧ ಇಲಾಖೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗೆ ದಿನಾಂಕ ನಿಗದಿಗೊಳಿಸಿದೆ. ಅಂದೇ ಕಲ್ಯಾಣ ಕರ್ನಾಟಕ ಪೊಲೀಸ್ ಕಾನ್ಸ್‌ಟೇಬಲ್ ಲಿಖಿತ ಪರೀಕ್ಷೆ ನಡೆಯಬೇಕಿತ್ತು.
ಲೋಕಸೇವಾ ಆಯೋಗ ರಾಜ್ಯ ಲೆಕ್ಕ ಪರಿಶೋಧನಾ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಲೆಕ್ಕ ಸಹಾಯಕರ ಹುದ್ದೆಗೆ 242, ಸಹಕಾರ ಸಂಘಗಳ ನಿರೀಕ್ಷಕರ ಹುದ್ದೆಗಳು 47 ಹುದ್ದೆಗಳ ನೇಮಕಾತಿಗೆಗ ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕ ನಿಗದಿಗೊಳಿಸಿತ್ತು. ಆದ್ದರಿಂದ ಅಭ್ಯರ್ಥಿಗಳು ಪರೀಕ್ಷೆ ದಿನಾಂಕ ಬದಲಾವಣೆ ಮಾಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆಗೆ ಒತ್ತಾಯಿಸಿದ್ದರು.
ಆದ್ದರಿಂದ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರವನ್ನು ಬರೆದು, 454 ಸಿವಿಲ್ ಕಾನ್‌ಸ್ಟೇಬಲ್ ಹುದ್ದೆಗಳಿಗೆ ದಿನಾಂಕ 05/11/2023 ರ ಭಾನುವಾರದಂದು ಸ್ಪರ್ಧಾತ್ಮಕ ಪರೀಕ್ಷೆ ನಿಗದಿಗೊಳಿಸಲಾಗಿದೆ. ಒಂದೇ ದಿನ ಮೂರು ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಿಗದಿಗೊಳಿಸಿರುವುದರಿಂದ ಗೊಂದಲ ಉಂಟಾಗಿದೆ. ಅಭ್ಯರ್ಥಿಗಳು ಪರೀಕ್ಷೆಗಳನ್ನು ಬೇರೆ ಬೇರೆ ದಿನಾಂಕಗಳಲ್ಲಿ ನಿಗದಿ ಮಾಡಲು ಕ್ರಮ ವಹಿಸುವಂತೆ ಮನವಿ ಸಲ್ಲಿಸಿರುತ್ತಾರೆ ಎಂದು ವಿವರಣೆ ನೀಡಿದ್ದರು.












Click it and Unblock the Notifications