Karnataka Drought Relief: ರೈತರಿಗೆ ₹2,500 ಬದಲು ₹1,500, ₹2,000 ಪಾವತಿ; ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕೆಂಡ!
ಕರ್ನಾಟಕದಲ್ಲಿ ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕರು ಗಂಭೀರ ಆರೋಪ ಮಾಡಿದ್ದಾರೆ.
ಈ ವಿಚಾರವಾಗಿ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಬಿ.ವೈ ವಿಜಯೇಂದ್ರ ಅವರು, ಬರದಿಂದ ತತ್ತರಿಸಿರುವ ನಾಡಿನ ಅನ್ನದಾತರಿಗೆ ಸಾಂತ್ವನ ಹೇಳಬೇಕಾದ ರಾಜ್ಯ ಕಾಂಗ್ರೆಸ್ ಸರ್ಕಾರ, ಕಿಂಚಿತ್ ಮಾನವೀಯತೆಯೂ ಇಲ್ಲದೆ ಅವರ ಸಂಕಷ್ಟದ ಜೊತೆ ಚೆಲ್ಲಾಟವಾಡುತ್ತಿರುವುದು ಖಂಡನೀಯ.

ತೀವ್ರ ಬರಪೀಡಿತ ಯಾದಗಿರಿ ಸೇರಿದಂತೆ ರಾಜ್ಯದ ರೈತರಿಗೆ 5,000 ರೂ, ನೀಡುವುದಾಗಿ ಆಶ್ವಾಸನೆ ನೀಡಿ, ಮೊದಲ ಕಂತಿನಲ್ಲಿ 2,500 ರೂ. ಜಮೆ ಮಾಡುವುದಾಗಿ ಸ್ವತಃ ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ರವರೇ ಮಾತು ಕೊಟ್ಟಿದ್ದರು. ಆದರೆ, ರೈತರ ಬ್ಯಾಂಕ್ ಖಾತೆಗಳಿಗೆ 1,500 ರೂ. 2,000 ರೂ. ಹೀಗೆ ನೀಡಿರುವುದು ಈ ದಿವಾಳಿ ಸರ್ಕಾರದ ಬೇಜವಾಬ್ದಾರಿ, ಗೊಂದಲಕಾರಿ ನಿರ್ಣಯಗಳು ಹಾಗೂ ರೈತವಿರೋಧಿ ಧೋರಣೆಗೆ ನಿದರ್ಶನ ಎಂದಿದ್ದಾರೆ.
ಸಾಲದ ಸುಳಿಯಲ್ಲಿ ಸಿಲುಕಿರುವ, ಬೆಳೆ ಕಳೆದುಕೊಂಡಿರುವ ರೈತರಿಗೆ ಸರ್ಕಾರ ನೀಡುವ ಪರಿಹಾರ ಭಿಕ್ಷೆಯಲ್ಲ, ಅದು ರೈತರ ಹಕ್ಕು. ಖಜಾನೆ ಖಾಲಿ ಮಾಡಿಕೊಂಡಿರುವ ರಾಜ್ಯ ಸರ್ಕಾರ ರೈತರಿಗೆ ಘೋಷಿಸಿದ್ದೇ ಅತ್ಯಂತ ಅಲ್ಪ ಪ್ರಮಾಣದ ನೆರವು. ಘೋಷಿಸಿದ್ದಷ್ಟನ್ನೂ ಪೂರ್ಣ ಪ್ರಮಾಣದಲ್ಲಿ ತಲುಪಿಸಲಾಗದ ಈ ಕಾಂಗ್ರೆಸ್ ಸರ್ಕಾರದ ನಡೆ, ರೈತರ ಕಣ್ಣೀರನ್ನು, ಸಂಕಷ್ಟಗಳನ್ನು ಅಪಹಾಸ್ಯ ಮಾಡುವಂತಿದೆ.
ಮುಖ್ಯಮಂತ್ರಿಗಳೇ, ಮಾತು ತಪ್ಪಿ ರೈತರ ನಿರೀಕ್ಷೆಗೆ ತಣ್ಣೀರೆರಚುತ್ತಿರುವ ನಿಮ್ಮ ಸರ್ಕಾರ, ಮೊದಲು ಇತರ ಎಲ್ಲಾ ಕೆಲಸ ಬದಿಗೊತ್ತಿ ನೀವು ನುಡಿದಂತೇ ನಡೆಯಿರಿ! ತಕ್ಷಣವೇ, ಎಲ್ಲ ಬರಪೀಡಿತ ರೈತರಿಗೆ ಬಾಕಿ ಹಣ ಸೇರಿ ಪೂರ್ಣ 5000 ರೂ. ಪರಿಹಾರವನ್ನು ಬಿಡುಗಡೆ ಮಾಡಿ, ಅನ್ನದಾತರ ಕಣ್ಣೀರಿನ ಶಾಪಕ್ಕೆ ಅವಕಾಶ ಕೊಡಬೇಡಿ ಎಂದೂ ಹೇಳಿದ್ದಾರೆ.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದೇನು
ಈ ವಿಚಾರವಾಗಿ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ರೈತರಿಗೆ ₹5,000 ಬರ ಪರಿಹಾರ ನೀಡುವುದಾಗಿ ಘೋಷಿಸಿ, ಮೊದಲ ಕಂತಿನಲ್ಲಿ ₹2,500 ಜಮೆ ಮಾಡುವುದಾಗಿ ಹೇಳಿದ್ದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ, ಈಗ ರೈತರ ಖಾತೆಗೆ ₹1,500, ₹2,000 ಮಾತ್ರ ಜಮೆಯಾಗಿರುವುದೇಕೆ ಎಂದು ಪ್ರಶ್ನೆ ಮಾಡಿದ್ದಾರೆ.
ರೈತರ ಸಂಕಷ್ಟದ ಸಮಯದಲ್ಲೂ ಪರಿಹಾರದ ಹಣದಲ್ಲಿ ಇಂತಹ ತಾರತಮ್ಯವೇಕೆ? ಅನ್ನದಾತನ ಬ್ಯಾಂಕ್ ಖಾತೆಗೆ ಘೋಷಿಸಿದ ಹಣವನ್ನೇ ತಲುಪಿಸಲು ಸಾಧ್ಯವಾಗದಿರುವುದು ನಿಮ್ಮ ಸರ್ಕಾರದ ಆಡಳಿತ ವೈಫಲ್ಯವಲ್ಲವೇ ಎಂದು ಪ್ರಶ್ನಿಸಿರುವ ಅವರು, ರೈತರಿಗೆ ಪರಿಹಾರ ಬೇಕು, ನಿಮ್ಮ ಪ್ರಚಾರದ ಭಾಷಣಗಳಲ್ಲ! ಕಡಿಮೆ ಹಣ ಜಮೆಯಾಗಿರುವುದಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ರೈತರಿಗೆ ಉತ್ತರ ನೀಡಬೇಕು. ಬಾಕಿ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಬೇಕು. ಅನ್ನದಾತರನ್ನು ಘೋಷಣೆಗಳ ಮೂಲಕ ವಂಚಿಸುವುದನ್ನು ನಿಲ್ಲಿಸಿ. ರೈತರ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ಈ ಬೇಜವಾಬ್ದಾರಿತನಕ್ಕೆ ರಾಜ್ಯದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದೂ ಹೇಳಿದ್ದಾರೆ.
ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಹೇಳಿದ್ದೇನು
ನಮ್ಮ ಸರ್ಕಾರ ರೈತರ ಪರವಾಗಿ ದೃಢವಾಗಿ ನಿಂತಿದೆ. ಬರಗಾಲದಿಂದಾಗಿ ರೈತ ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಈ ಸಂದರ್ಭದಲ್ಲಿ ಪರಿಹಾರ ಘೋಷಣೆ ಮಾಡುವುದಷ್ಟೇ ನಮ್ಮ ಜವಾಬ್ದಾರಿಯಲ್ಲ. ಅರ್ಹ ರೈತರೆಲ್ಲರಿಗೂ ನ್ಯಾಯಯುತವಾಗಿ, ಗೌರವಯುತವಾಗಿ ಮತ್ತು ಪಾರದರ್ಶಕವಾಗಿ ಪರಿಹಾರ ತಲುಪುವಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಈ ಭರವಸೆಯನ್ನು ಕರ್ನಾಟಕದ ಎಲ್ಲ ರೈತರಿಗೂ ನಾವು ನೀಡುತ್ತಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರು ಹೇಳಿದ್ದಾರೆ.





Click it and Unblock the Notifications
