Kiccha Sudeep: ಬಸವರಾಜ ಬೊಮ್ಮಾಯಿ ಪರ ಪ್ರಚಾರ: ವಿಶೇಷ ಹೆಲಿಕಾಪ್ಟರ್‌ನಲ್ಲಿ ಕಿಚ್ಚ-ನಡ್ಡಾ
ಹುಬ್ಬಳ್ಳಿ ಏಪ್ರಿಲ್ 19: ಕನ್ನಡ ಚಿತ್ರರಂಗದ ಬಾದ್ ಷಾ ಕಿಚ್ಚ ಸುದೀಪ್ ಇಂದು( ಏಪ್ರಿಲ್ 19) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಶಿಗ್ಗಾಂವಿಯಲ್ಲಿ ಬಿಜೆಪಿ ಬೃಹತ್ ಮೆರವಣಿಗೆಯಲ್ಲಿ ಭಾಗಿಯಾಗುವ ಮೂಲಕ ಕಿಚ್ಚ ಸುದೀಪ್ ಚುನಾವಣಾ ಪ್ರಚಾರ ಆರಂಭಿಸಿದರು.
ಹುಬ್ಬಳ್ಳಿಗೆ ಆಗಮಿಸಿದ್ದ ಕಿಚ್ಚ ಸುದೀಪ್ ವಿಶೇಷ ಹೆಲಿಕಾಪ್ಟರ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜೊತೆ ಶಿಗ್ಗಾಂವಿಗೆ ತೆರಳಿದ್ದಾರೆ. ಈ ವೇಳೆ ಪರಸ್ಪರ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಶಿಗ್ಗಾಂವಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ತೆರಳಿದ ಸುದೀಪ್ ಹಾಗೂ ಜೆಪಿ ನಡ್ಡಾ ಅವರನ್ನು ಬೊಮ್ಮಾಯಿ ಆತ್ಮೀಯವಾಗಿ ಸ್ವಾಗತಿಸಿಕೊಂಡಿದ್ದಾರೆ.

ಇನ್ನು ಪ್ರಚಾರಕ್ಕೂ ಮುನ್ನ ಮಾತನಾಡಿದ ನಟ ಸುದೀಪ್ ' ಚುನಾವಣಾ ಪ್ರಚಾರ ನನಗೇನು ಹೊಸದಲ್ಲ. ಇವತ್ತು ಶಿಗ್ಗಾಂವಿಯಿಂದ ಪ್ರಚಾರ ಆರಂಭ ಮಾಡುತ್ತೇವೆ. ಮೇ ಏಳರವರೆಗೆ ಪ್ರಚಾರ ಇರುತ್ತದೆ ಎಂದಿದ್ದಾರೆ. ಯಾರಿಗೆ ಪ್ರಚಾರ ಮಾಡಬೇಕು ಎನ್ನುವುದರ ಬಗ್ಗೆ ಸಿಎಂ ಬೊಮ್ಮಾಯಿ ಅವರು ಯೋಜನೆ ರೂಪಿಸಿಕೊಂಡಿದ್ದಾರೆ. ಅದರಂತೆ ಪ್ರಚಾರ ಮಾಡುತ್ತೇವೆ ಎಂದಿದ್ದಾರೆ.
ಇನ್ನು ಕಲಾವಿದರು ಅಂದ ಮೇಲೆ ಬೇರೆ ಬೇರೆಯವರು ಕೂಡ ಕರೆಯೋದು ಸಾಮಾನ್ಯ. ನನಗೂ ಈಗಾಗಲೇ ಅನೇಕ ಕರೆಗಳು ಬಂದಿವೆ. ಆದರೆ ನಾನು ಈ ಹಿಂದೆ ಹೇಳಿದಂತೆ ಬೊಮ್ಮಾಯಿಯವರು ಹೇಳಿದವರಿಗೆ ಪ್ರಚಾರ ಮಾಡಲಿದ್ದೇನೆ ಎಂದು ಕಿಚ್ಚ ಸುದೀಪ್ ಸ್ಪಷ್ಟಪಡಿಸಿದ್ದಾರೆ.

ಇನ್ನು ಈಗಾಗಲೇ ಶಿಗ್ಗಾಂವಿ ನಗರದಲ್ಲಿ ಬಿಜೆಪಿ ಬೃಹತ್ ರೋಡ್ ಶೋ ನಡೆದಿದ್ದು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ನಟ ಕಿಚ್ಚ ಸುದೀಪ್ ಸಾಥ್ ನೀಡಿದ್ದಾರೆ. ಶಿಗ್ಗಾಂವಿಯಲ್ಲಿ ಸುದೀಪ್ ನೋಡಲು ಸಾಗರೋಪಾದಿಯಲ್ಲಿ ಜನ ಸೇರಿದ್ದು, ಸಾವಿರಾರು ಸಂಖ್ಯೆಯಲ್ಲಿ ತಂಡೋಪತಂಡವಾಗಿ ಜನ ಬಿಜೆಪಿ ಮೆರವಣಿಗೆಗೆ ಆಗಮಿಸಿದ್ದರು.
ಶಿಗ್ಗಾವಿ ನಗರದ ರಾಣಿ ಚೆನ್ನಮ್ಮ ವೃತ್ತದಿಂದ, ಹಳೇಪೇಟೆ ಮಾರ್ಗವಾಗಿ ಶಿಗ್ಗಾವಿ ತಾಲೂಕು ಕ್ರೀಡಾಂಗಣದ ವರೆಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೋಡ್ ಶೋ ನಡೆಸಿದ್ದು, ಬಿಜೆಪಿ ಕಾರ್ಯಕರ್ತರು ಹೂವಿನ ಸುರಿ ಮಳೆ ಗೈದು, ಜೈಕಾರ ಹಾಕುತ್ತಾ ಬಸವರಾಜ ಬೊಮ್ಮಾಯಿ, ಸುದೀಪ್ , ಜೆಪಿ ನಡ್ಡಾ ಹಾಗೂ ಬಿಜೆಪಿ ನಾಯಕರನ್ನು ಅದ್ಧೂರಿಯಾಗಿ ಸ್ವಾಗತಿಸಿಕೊಂಡಿದ್ದಾರೆ.












Click it and Unblock the Notifications