ಈ ಶಿವಕುಮಾರಣ್ಣ ಕಾಯುತ್ತಿದ್ದಾನೆ; ಜೆಡಿಎಸ್ ಕಾರ್ಯಕರ್ತರು ಬಂದು ಬೆಂಬಲ ನೀಡಿ: ಡಿಕೆಶಿ ಹೇಳಿದ್ದೇನು.?

ಈ ಸರ್ಕಾರ ಎಂದರೆ 40% ಕಮಿಷನ್ ಸರ್ಕಾರ ಎಂಬ ಬಿರುದು ತಂದಿದ್ದಾರೆ. ಇದುವರೆಗೂ 1.50 ಲಕ್ಷ ಕೋಟಿ ಲೂಟಿ ಮಾಡಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಚಿತ್ರದುರ್ಗ,ಫೆಬ್ರವರಿ 6: ಕುಮಾರಣ್ಣ ಈ ಬಾರಿ ಅಧಿಕಾರಕ್ಕೆ ಬರದಿದ್ದರೆ ಪಕ್ಷ ವಿಸರ್ಜನೆ ಮಾಡುವುದಾಗಿ ಹೇಳಿದ್ದಾರೆ. ಅವರು ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ. ದಳದ ಕಾರ್ಯಕರ್ತರು ಯಾಕೆ ಅಲ್ಲಿವರೆಗೂ ಕಾಯುತ್ತೀರಿ. ಈ ಶಿವಕುಮಾರಣ್ಣ ಕಾಯುತ್ತಿದ್ದಾನೆ. ಬಂದು ಬೆಂಬಲ ನೀಡಿ ಎಂದು ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.

ಸೋಮವಾರ ಚಿತ್ರದುರ್ಗದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ನಿಮ್ಮ ಖಾತೆಗಳಿಗೆ 15 ಲಕ್ಷ ಹಾಕುತ್ತೇವೆ ಎಂದು ಹೇಳಿದ್ದರು. ಯಾರ ಖಾತೆಗಾದರೂ ಹಣ ಹೋಗಿದೆಯೇ? ಅಡುಗೆ ಅನಿಲ 400 ರಿಂದ 1100 ಆಗಿದೆ, ಅಡುಗೆ ಎಣ್ಣೆ 90 ರಿಂದ 250 ಆಗಿದೆ. ರಸಗೊಬ್ಬರ ಬೆಲೆ ಹೆಚ್ಚಾಗಿದೆ.

ಹೀಗೆ ಬೆಲೆ ಏರಿಕೆಯಿಂದ ಕಂಗೆಟ್ಟಿರುವ, ಸಂಕಷ್ಟದಲ್ಲಿರುವ ಜನರಿಗೆ ನೆರವಾಗಬೇಕು ಎಂದು ಪಕ್ಷದ ಎಲ್ಲ ನಾಯಕರು ಸೇರಿ ಚರ್ಚೆ ಮಾಡಿ ಎರಡು ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ದೇವೆ. ನಿಮಗೆ 200 ಯುನಿಟ್ ವಿದ್ಯುತ್ ಉಚಿತ, 2000 ರು ಪ್ರತಿ ಕುಟುಂಬದ ಯಜಮಾನಿಗೆ ಖಚಿತ ಅನ್ನೋದು ನಮ್ಮ ಘೋಷಣೆ. ಎರಡೂ ಸೇರಿ ವರ್ಷಕ್ಕೆ 42 ಸಾವಿರ ಪ್ರತಿ ಕುಟುಂಬಕ್ಕೆ ಬರುತ್ತದೆ. 5 ವರ್ಷಕ್ಕೆ 2 ಲಕ್ಷ ರೂಪಾಯಿ. ಇದು ನಾನು ಮತ್ತು ಸಿದ್ದರಾಮಯ್ಯ ಇಬ್ಬರು ಸಹಿ ಹಾಕಿರುವ ಗ್ಯಾರಂಟಿ ಯೋಜನೆ. ಬಿಜೆಪಿಯವರು ಇಂತಹ ಯಾವುದಾದರೂ ಕಾರ್ಯಕ್ರಮ ಕೊಟ್ಟಿದ್ದಾರಾ? ನಮ್ಮ ಈ ಯೋಜನೆಗಳನ್ನು ನೀವು ಪ್ರತಿ ಮನೆ, ಮನೆಗೂ ತಲುಪಿಸಬೇಕು. ಈ ಯೋಜನೆಗಳನ್ನು ಜಾರಿ ಮಾಡದಿದ್ದರೆ ನಾನು ಹಾಗೂ ಸಿದ್ದರಾಮಯ್ಯ ನವರು ನಿಮ್ಮ ಮುಂದೆ ಮತ್ತೆ ಮತ ಕೇಳಲು ಬರುವುದಿಲ್ಲ.

JDS Workers Should Come And Support Says DK Shivakumar

ನಾವು ಕಳೆದ ಸರ್ಕಾರದ ಅವಧಿಯಲ್ಲಿ ಉಚಿತವಾಗಿ 5 ಕೆ.ಜಿ ಅಕ್ಕಿ ನೀಡುತ್ತೇವೆ ಎಂದು ಹೇಳಿದ್ದು ಅದರಂತೆ ಆರಂಭದಲ್ಲಿ 5 ಕೆ.ಜಿ ನೀಡಿ, ನಂತರ ಅದನ್ನು 7 ಕೆ.ಜಿಗೆ ಹೆಚ್ಚಿಸಿದೆವು. ಭಾರತ ಜೋಡೋ ಯಾತ್ರೆ ಸಮಾವೇಶದಲ್ಲಿ ಹೆಜ್ಜೆ ಹಾಕುವಾಗ ವಯಸ್ಸಾದ ಮಹಿಳೆ ರಾಹುಲ್ ಗಾಂಧಿ ಅವರಿಗೆ ಸೌತೇಕಾಯಿ ಕೊಟ್ಟರು. ನಿಮ್ಮ ಅಜ್ಜಿ ಕೊಟ್ಟ ಭೂಮಿಯಲ್ಲಿ ಈ ಸೌತೇಕಾಯಿ ಬೆಳೆದಿದ್ದೇನೆ ತಗೊಳ್ಳಿ ಎಂದರು. ಬಡವರಿಗೆ ಜಮೀನು, ನಿವೇಶನ, ಪಿಂಚಣಿ, ಅಂಗನವಾಡಿ ಕಾರ್ಯಕರ್ತರು, ಅಕ್ಕಿ, ಬಗರ್ ಹುಕುಂ ಸಾಗುವಳಿ, ಉದ್ಯೋಗ, ಮೀಸಲಾತಿ, ಸಂವಿಧಾನ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ನಾವು ಈ ಯೋಜನೆ ಕೊಟ್ಟಾಗ ಯಾವುದೇ ನಿರ್ದಿಷ್ಟ ಜಾತಿ, ಧರ್ಮದವರಿಗೆ ನೀಡಿಲ್ಲ. ಎಲ್ಲ ಧರ್ಮದವರಿಗೆ ನೀಡಿದ್ದೇವೆ.

ಗ್ರಾಮೀಣ ಭಾಗದಲ್ಲಿ ಉದ್ಯೋಗ ಖಾತ್ರಿ ಯೋಜನೆ, ಆಹಾರ ಸಬ್ಸಿಡಿ, ಕೈಗಾರಿಕಾ ಪ್ರದೇಶ, ಅಲ್ಪಸಂಖ್ಯಾತರು, ಪರಿಶಿಷ್ಟರ ಕಲ್ಯಾಣ, ಗ್ರಾಮೀಣಾಭಿವೃದ್ಧಿಗೆ ನೀಡುತ್ತಿದ್ದ ಅನುದಾನ ಕಡಿತ ಮಾಡಿದ್ದಾರೆ. ನಾವು ಪರಿಶಿಷ್ಟರಿಗೆ ಎಸ್ ಸಿಪಿ-ಟಿಎಸ್ ಪಿ ಯೋಜನೆ ಮೂಲಕ ಜನಸಂಖ್ಯಾ ಆಧಾರದ ಮೇಲೆ ಬಜೆಟ್ ನಲ್ಲಿ ಅನುದಾನ ನೀಡಿದರೆ, ಈ ಸರ್ಕಾರ ಅದನ್ನು ನೀಡುತ್ತಿಲ್ಲ. ವಿದ್ಯಾರ್ಥಿ ವೇತನ, ಮಕ್ಕಳಿಗೆ ಸಮವಸ್ತ್ರ, ಶೂ ಕೂಡ ನೀಡುತ್ತಿಲ್ಲ.

ಈ ಸರ್ಕಾರ ಎಂದರೆ 40% ಕಮಿಷನ್ ಸರ್ಕಾರ ಎಂಬ ಬಿರುದು ತಂದಿದ್ದಾರೆ. ಇದುವರೆಗೂ 1.50 ಲಕ್ಷ ಕೋಟಿ ಲೂಟಿ ಮಾಡಿದ್ದಾರೆ. ಈ ಲೂಟಿ ನಿಲ್ಲಿಸಿದರೆ ನಮ್ಮ ಗ್ಯಾರಂಟಿ ಯೋಜನೆ ಜಾರಿ ಮಾಡಬಹುದು. ಉಚಿತ ವಿದ್ಯುತ್ ನೀಡಲು ಹೇಗೆ ಸಾಧ್ಯ ಎಂದು ಬಿಜೆಪಿ ಮಂತ್ರಿಗಳು ಕೇಳುತ್ತಿದ್ದಾರೆ.

JDS Workers Should Come And Support Says DK Shivakumar

ನಾವು ಜನರು, ಕಾರ್ಯಕರ್ತರು ಹಾಗೂ ಪಕ್ಷದ ಅಭಿಪ್ರಾಯ ಕೇಳಿ ಅಭ್ಯರ್ಥಿ ಆಯ್ಕೆ ಮಾಡಿ ಟಿಕೆಟ್ ನೀಡುತ್ತೇವೆ. ನಾವು ಯಾರಿಗೆ ಟಿಕೆಟ್ ನೀಡುತ್ತೇವೋ ಅವರಿಗೆ ನೀವು ಶಕ್ತಿ ತುಂಬಬೇಕು. ನಮ್ಮ ಕಾರ್ಯಕ್ರಮಗಳಿಗೆ ಸಾಗರದಂತೆ ಜನ ಬೆಂಬಲ ಸಿಗುತ್ತಿದೆ. ಬಿಜೆಪಿಯವರಿಗೆ ಇಂತಹ ಒಂದು ಯೋಜನೆ ಮಾಡಲು ಸಾಧ್ಯವಾಯಿತೇ?

ನೀರಾವರಿ ಯೋಜನೆಗಳಿಗೆ ಐದು ವರ್ಷಗಳಲ್ಲಿ 2 ಲಕ್ಷ ಕೋಟಿ ನೀಡುವುದಾಗಿ ಹೇಳಿದ್ದೇವೆ. ಈ ಸರ್ಕಾರ ನೀರಾವರಿ ಯೋಜನೆಯಲ್ಲಿ 22 ಸಾವಿರ ಕೋಟಿ ರು. ಅಕ್ರಮ ಟೆಂಡರ್ ಕರೆಯುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಗೂಳಿ ಹಟ್ಟಿಶೇಖರ್ ಹೇಳಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಈ ಸರ್ಕಾರ 40% ಕಮಿಷನ್ ಸರ್ಕಾರ ಎಂದು ಹೇಳಿದ್ದಾರೆ. ಬಿಜೆಪಿ ಎಂಎಲ್ ಸಿ ವಿಶ್ವನಾಥ್ ನೀರಾವರಿ ಟೆಂಡರ್ ನಲ್ಲಿ 20% ಕಮಿಷನ್ ಪಡೆಯಲಾಗಿದೆ ಎಂದು ಹೇಳಿದ್ದಾರೆ. ಇನ್ನು ಬಿಜೆಪಿ ಶಾಸಕ ಯತ್ನಾಳ್ ಅವರು ಮುಖ್ಯಮಂತ್ರಿ ಹುದ್ದೆಗೆ 2500 ಕೋಟಿ, ಮಂತ್ರಿ ಹುದ್ದೆಗೆ 100 ಕೋಟಿ ನೀಡಬೇಕು ಎಂದು ಹೇಳಿದ್ದಾರೆ. ಇವೆಲ್ಲವೂ ಸರ್ಕಾರದ ಭ್ರಷ್ಟಾಚಾರಕ್ಕೆ ಸಾಕ್ಷಿಯಲ್ಲವೇ? ಹೀಗಾಗಿ ಇಲ್ಲಿ ಸೇರಿರುವ ನೀವೆಲ್ಲರೂ ಪ್ರತಿ ಮನೆ ಮನೆಗೂ ಹೋಗಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಂತೆ ಹೇಳಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಪ್ರಾರ್ಥನೆ ಮಾಡುತ್ತೇನೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+