ಮೋದಿ,ಅಮಿತ್ ಶಾ ರಾಜ್ಯಕ್ಕೆ ನೂರು ಬಾರಿ ಬಂದ್ರೂ ಬಿಜೆಪಿ ಅಧಿಕಾರಕ್ಕೆ ಬರೋದು ಕಷ್ಟ:ಹೆಚ್.ಡಿ.ಕುಮಾರಸ್ವಾಮಿ
ಬೆಂಗಳೂರು,ಜನವರಿ 14: ಮೋದಿ,ಅಮಿತ್ ಶಾ ರಾಜ್ಯಕ್ಕೆ ನೂರು ಬಾರಿ ಬಂದ್ರೂ ಬಿಜೆಪಿ ಅಧಿಕಾರಕ್ಕೆ ಬರೋದು ಕಷ್ಟ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಈ ಕುರಿತು ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಗೆ ಸ್ಪಷ್ಟ ಬಹುಮತ ಬರುತ್ತೆ. ಹೆಚ್.ಡಿ.ಕುಮಾರಸ್ವಾಮಿ ಹೋದಲ್ಲಿ ಜನ ಸೇರುತ್ತಾರೆ ಆದರೆ ಮತಗಳಾಗಿ ಬದಲಾಗಲ್ಲ ಅಂತಿದ್ರು . ಆದರೆ ಈಗ ಬದಲಾಗಿದೆ. ರಾಜ್ಯದ ಜನರು ಎರಡು ರಾಷ್ಟ್ರೀಯ ಪಕ್ಷಗಳು ಬೇಡ ಜೆಡಿಎಸ್ ಬೇಕು ಅಂತಿದ್ದಾರೆ . ಹೀಗಾಗಿ 123 ಸ್ಥಾನ ಗೆಲ್ಲಿವುದು ನಿಶ್ಚಿತ ಎಂದು ಹೆಚ್.ಡಿ. ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಅಧಿಕಾರಕ್ಕೆ ಬರೋದು ಕಷ್ಟ ಇದೆ. ಇವರ ನಡುವಳಿಕೆಯಿಂದ ಜನ ಬೇಸತ್ತು ಹೋಗಿದ್ದಾರೆ. ಮಂಡ್ಯಕ್ಕೆ ಅಮಿತ್ ಷಾ ಬಂದು ಹೋಗಿರೋದು ಪರಿಣಾಮ ಬೀರಲ್ಲ. ಬೇಕಿದ್ರೆ ಬರದಿಟ್ಟುಕೊಳ್ಳಿ, ಮಂಡ್ಯದಲ್ಲಿ ಏಳಕ್ಕೆ ಏಳು ಕ್ಷೇತ್ರ ಮತ್ತೆ ಈ ಬಾರಿ ಜೆಡಿಎಸ್ ಗೆಲ್ಲತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

2023 ಕರ್ನಾಟಕ ರಾಜ್ಯಕ್ಕೆ ವಿಶೇಷವಾದ ವರ್ಷ. ಹಲವಾರು ರಂಗಗಳಲ್ಲಿ ಅನೇಕ ಸವಾಲುಗಳು ಎದುರಿಗಿವೆ. ರಾಜಕಾರಣಿ ಗಳಾಗಿ ನಮಗೂ ಸವಾಲು ಇದೆ. ಕಳೆದ ನಾಲ್ಕು ವರೆ ವರ್ಷ ರಾಜಕೀಯ, ಸಾಮಾಜಿಕ ರಂಗಗಳಲ್ಲಿ ಒಬ್ಬೊಬ್ಬರಿಗೆ ಒಂದೊಂದು ಅನುಭವಗಳಾಗಿವೆ. ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಅಕಾಲಿಕ ಮಳೆ ಆಗಿತ್ತು. ನಂತರ ಕೋವಿಡ್ ಅನಾಹುತ ಗಳಾದವು. ಈ ನಾಲ್ಕೂವರೆ ವರ್ಷ ಗಳಲ್ಲಿ ಜೆಡಿಎಸ್ ಬಗ್ಗೆ ಹಲವಾರು ವಿಶ್ಲೇಷಣೆ ಗಳನ್ನು ಗಮನಿಸಿದ್ದೇನೆ. ಜೆಡಿಎಸ್ ಮುಂದೆ ರಾಜ್ಯದಲ್ಲಿ ಸಂಪೂರ್ಣ ಅವನತಿ ಆಗುತ್ತೆ ಎಂಬ ಮಾತುಗಳನ್ನು ಕೂಡಾ ಕೇಳಿದ್ದೇನೆ. ಇದಕ್ಕೆ ನಾವೂ ಕೂಡಾ ಕಾರಣ, ಕೋವಿಡ್ ಸಂಧರ್ಭದಲ್ಲಿ ನಾವೂ ಸಾರ್ವಜನಿಕವಾಗಿ ದೂರ ಉಳಿದಿದ್ದೆವು. ಸಾರ್ವಜನಿಕರಿಗೆ ಏನೂ ತೊಂದರೆ ಆಗ ಬಾರದು ಎಂದು ನಾವೇ ದೂರ ಉಳಿದಿದ್ದೆವು.
ನಮ್ಮ ಪಕ್ಷದಲ್ಲಿ ಕೂಡಾ ಹಲವು ಮುಖಂಡರು ನಮ್ಮ ಬಗ್ಗೆ ಮಾತಾಡಿಕೊಂಡ್ರು, ದೇವೇಗೌಡರಿಗೆ ವಯಸ್ಸಾಯಿತು, ಕುಮಾರಸ್ವಾಮಿ ರಾಜಕಾರಣದಲ್ಲಿ ಉತ್ಸಾಹ ತೋರ್ತಾ ಇಲ್ಲ, ಹೀಗೆ ಮಾತಾಡಿಕೊಂಡು ದೂರ ಉಳಿದ್ರು. ಈಗ ನಾನು ಪಂಚರತ್ನ ಕಾರ್ಯಕ್ರಮ ಆರಂಭ ಮಾಡಿದ ಮೇಲೆ ರಾಜ್ಯಾದ್ಯಂತ ಒಳ್ಳೆಯ ಪ್ರತಿಕ್ರಿಯೆ ಸಿಗ್ತಾ ಇದೆ. ನಾನು ಅಧಿಕಾರದಲ್ಲಿ ಇರಲಿ ಅಥವಾ ಬಿಡಲಿ ಬಡವರು ನನ್ನ ಬಳಿ ಬರ್ತಾನೇ ಇರ್ತಾರೆ. ಶಿಕ್ಷಣ, ಆರೋಗ್ಯ, ಶಾಲೆ ಇತ್ಯಾದಿ ವಿಚಾರಗಳಿಗೆ ಸಹಾಯ ಕೇಳಿಕೊಂಡು ಜನ ಬರ್ತಾನೆ ಇರ್ತಾರೆ. ಈಗಿನ ಸರ್ಕಾರಗಳು ಶಿಕ್ಷಣ, ರೈತರ ಕಲ್ಯಾಣ ,ಆರೋಗ್ಯ ವಿಚಾರಗಳಲ್ಲಿ ಸೂಕ್ತ ಅಭಿವೃದ್ಧಿ ಮಾಡುವಲ್ಲಿ ಸೋತಿವೆ ಎಂದು ಹೇಳಿದರು.
ಈಗ ಕಾಂಗ್ರೆಸ್ ನವರು ಫ್ರೀ ಕರೆಂಟ್ ಕೊಡ್ತೀನಿ ಅಂತಿದಾರೆ, ಒಂದು ಕಡೆ ನರೇಂದ್ರ ಮೋದಿ ಉಚಿತ ಯೋಜನೆಗಳನ್ನು ನಿಲ್ಲಿಸಬೇಕು ಅಂತಾರೆ. ಕೆಲವು ಪಕ್ಷಗಳು ಉಚಿತವಾಗಿ ಕೊಡ್ತೀವಿ ಅಂತಾ ಘೋಷಣೆ ಮಾಡುತ್ತಾರೆ. ಸರ್ಕಾರಕ್ಕೆ ಆದಾಯ ಎಲ್ಲಿಂದ ತರ್ತಾರೆ. ಬಿಜೆಪಿಯವರೂ ಕೂಡಾ ಕುಶಲಕರ್ಮಿಗಳಿಗೆ ಬ್ಯಾಂಕ್ ಸಾಲವನ್ನು ಹತ್ತು ಪರ್ಸೆಂಟ್ ಸಬ್ಸಿಡಿ ಕೊಡ್ತೀವಿ ಅಂತಿದಾರೆ. ಎಲ್ಲರಿಗೂ ಉದ್ಯೋಗ ಕೊಡುವುದಕ್ಕಿಂತ, ಕೌಶಲ್ಯವನ್ನು ಗುರುತಿಸಿ ಅವರ ಉದ್ಯೋಗ ಅವರೇ ಸೃಷ್ಟಿ ಮಾಡಿಕೊಳ್ಳುವಂತೆ ಮಾಡಬೇಕು. ಇದಕ್ಕಾಗಿಯೇ ಜನರಲ್ಲಿ ಕೇಳ್ತಾ ಇದೀನಿ, ಒಂದು ಬಾರಿ ನಮಗೆ ಸಂಪೂರ್ಣ ಪ್ರಮಾಣದಲ್ಲಿ ಅಧಿಕಾರ ಕೊಡಿ. ಪ್ರಾದೇಶಿಕ ಪಕ್ಷವನ್ನು ಅಧಿಕಾರಕ್ಕೆ ತನ್ನಿ. ದೊಡ್ಡ ಜಲಾಶಯ ಕಟ್ಟುವುದೋ,ರಸ್ತೆ ಮಾಡುವುದೋ ಅಷ್ಟೇ ನನ್ನ ದೃಷ್ಟಿ ಅಲ್ಲ. ಬಡತನದ ಕುಟುಂಬಗಳು ಸ್ವಾವಲಂಬಿಗಳಾಗಬೇಕು, ಬಡತನ ಹೋಗಲಾಡಿಸಬೇಕು ಎಂದು ಹೇಳಿದರು.












Click it and Unblock the Notifications