ಮೈಸೂರು; ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳಿಗೆ 2 ದಿನದ ಕಾರ್ಯಾಗಾರ
ಮೈಸೂರು, ಅಕ್ಟೋಬರ್ 18; ಮುಂದಿನ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುತ್ತಿರುವ ಜೆಡಿಎಸ್ ಪಕ್ಷ ಟಿಕೆಟ್ ಆಕಾಂಕ್ಷಿಗಳಿಗೆ ಎರಡು ದಿನದ ಕಾರ್ಯಾಗಾರ ಆಯೋಜನೆ ಮಾಡಿದೆ. ಬುಧವಾರದಿಂದ ಎರಡು ದಿನಗಳ ಕಾಲ ಮೈಸೂರಿನಲ್ಲಿ ಈ ಕಾರ್ಯಾಗಾರ ನಡೆಯಲಿದೆ.
ಅಕ್ಟೋಬರ್ 19 ಮತ್ತು 20ರಂದು ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಕಾರ್ಯಾಗಾರ ನಡೆಯಲಿದೆ. ಹಿಂದೆ ಬಿಡದಿಯಲ್ಲಿ ನಡೆದ ಜನತಾ ಪರ್ವ ಕಾರ್ಯಾಗಾದಲ್ಲಿ ನೀಡಲಾಗಿದ್ದ ಟಾಸ್ಕ್ ಪೂರ್ಣಗೊಳಿಸಿದ್ದಾರೆಯೇ? ಎಂದು ಪರಿಶೀಲನೆ ನಡೆಯಲಿದೆ.
ಮುಂದಿನ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳಾಗಿರುವ 126 ಅಭ್ಯರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ. ಮುಂದಿನ ಚುನಾವಣೆ, ಪಕ್ಷದ ಯೋಜನೆಗಳನ್ನು ಜನರಿಗೆ ತಲುಪಿಸುವ ಕುರಿತು ಕಾರ್ಯಾಗಾರದಲ್ಲಿ ಸೂಚನೆಗಳನ್ನು ನೀಡಲಾಗುತ್ತದೆ.

ಜೆಡಿಎಸ್ ರಾಜ್ಯಾಧ್ಯಕ್ಷ ಸಿ. ಎಂ. ಇಬ್ರಾಹಿಂ, ಎಚ್. ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯಲಿರುವ ಕಾರ್ಯಾಗಾರದಲ್ಲಿ ಮಾಜಿ ಶಾಸಕರು, ಮುಂದಿನ ಟಿಕೆಟ್ ಆಕಾಂಕ್ಷಿಗಳು ಸಹ ಭಾಗಿಯಾಗಲಿದ್ದಾರೆ. ಸಕ್ರಿಯವಾಗಿ ಕೆಲಸ ಮಾಡದ ಟಿಕೆಟ್ ಆಕಾಂಕ್ಷಿಗಳಿಗೆ ಹಲವು ಸೂಚನೆಗಳನ್ನು ನೀಡುವ ನಿರೀಕ್ಷೆ ಇದೆ.
ಟಿಕೆಟ್ ಆಕಾಂಕ್ಷಿಗಳ ಬಗ್ಗೆ ಮಾತನಾಡಿದ ಎಚ್. ಡಿ. ಕುಮಾರಸ್ವಾಮಿ, "ಕೆಲವು ಕ್ಷೇತ್ರಗಳಲ್ಲಿ ಟಿಕೆಟ್‌ಗಾಗಿ ಪೈಪೋಟಿ ಇದೆ. ಒಬ್ಬರಿಗೆ ಮಾತ್ರ ಟಿಕೆಟ್ ನೀಡಲು ಸಾಧ್ಯ. ಹೀಗಾಗಿ ಕ್ಷೇತ್ರವಾರು ಆಕಾಂಕ್ಷಿಗಳನ್ನು ಕರೆದು ಮಾತನಾಡುತ್ತಿದ್ದೇವೆ" ಎಂದು ಹೇಳಿದರು.
"ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಬ್ಬರ ಏನೇ ಇದ್ದರೂ ಜೆಡಿಎಸ್ ಪರವಾಗಿ ಜನರ ಭಾವನೆ ಇದೆ. ಈ ಬಾರಿ ಕುಮಾರಸ್ವಾಮಿಗೆ ಅವಕಾಶ ನೀಡಬೇಕು ಎಂಬುದು ಜನತೆಯ ಆಶಯವಾಗಿದೆ. ಆದ್ದರಿಂದ ಈ ಕಾರ್ಯಾಗಾರ ಮಹತ್ವದ್ದಾಗಿದೆ" ಎಂದು ಎಚ್. ಡಿ. ಕುಮಾರಸ್ವಾಮಿ ತಿಳಿಸಿದರು.

ಸಮಿಕ್ಷೆಗಳಿಗೆ ಪ್ರತಿಕ್ರಿಯೆ; ಕರ್ನಾಟಕದಲ್ಲಿ 2023ರ ಏಪ್ರಿಲ್ ಅಥವ ಮೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯುವ ನಿರೀಕ್ಷೆ ಇದೆ. ಆದ್ದರಿಂದ ವಿವಿಧ ಪಕ್ಷಗಳು ಈಗಾಗಲೇ ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಯಾರು ಗೆಲ್ಲಬಹುದು ಎಂದು ಸಮೀಕ್ಷೆಗಳನ್ನು ಮಾಡುತ್ತಿವೆ. ಈ ಬಗ್ಗೆ ಎಚ್. ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
"ಯಾರೋ ಮಾಡುವ ಸಮೀಕ್ಷೆ ವರದಿ ನನಗೆ ಮುಖ್ಯವಲ್ಲ. ನಮ್ಮ ಗುರಿ 123 ಸ್ಥಾನಗಳು, ಅದಕ್ಕಾಗಿ ನಾವು ಕೆಲಸ ಮಾಡುತ್ತಿದ್ದೇವೆ. ನಾವು ಸಹ ಸಮೀಕ್ಷೆ ಮಾಡಿಸುತ್ತಿದ್ದೇವೆ. 30-40 ಕ್ಷೇತ್ರಗಳ ಸಮೀಕ್ಷೆಯಾಗಿದೆ. ಅಲ್ಲಿ ನಾವು ಗೊಂದಲ ಸರಿ ಮಾಡುವ ಕೆಲಸ ಮಾಡುತ್ತಿದ್ದೇವೆ" ಎಂದು ಎಚ್. ಡಿ. ಕುಮಾರಸ್ವಾಮಿ ಹೇಳಿದರು.
ಜೆಡಿಎಸ್ ಪಕ್ಷ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಕೇತಿಗಾನಹಳ್ಳಿಯ ಎಚ್. ಡಿ. ಕುಮಾರಸ್ವಾಮಿ ತೋಟದ ಮನೆಯಲ್ಲಿ ಪಕ್ಷದ ನಾಲ್ಕು ದಿನದ ಕಾರ್ಯಾಗಾರವನ್ನು ನಡೆಸಿತ್ತು. ರಾಜ್ಯ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು ಸೇರಿದಂತೆ ಅನೇಕರು ಇದರಲ್ಲಿ ಪಾಲ್ಗೊಂಡಿದ್ದರು.
ಮುಂದಿನ ಚುನಾವಣೆಯಲ್ಲಿ 123 ಸ್ಥಾನಗಳಲ್ಲಿ ಜಯಗಳಿಸುವ ಗುರಿಯೊಂದಿಗೆ ಕಾರ್ಯಾಗಾರ ಆಯೋಜನೆ ಮಾಡಲಾಗಿತ್ತು. ಈಗ ಮೈಸೂರಿನಲ್ಲಿ ಎರಡು ದಿನದ ಕಾರ್ಯಾಗಾರ ನಡೆಸುತ್ತಿದೆ. ಮುಖ್ಯವಾಗಿ ಟಿಕೆಟ್ ಆಕಾಂಕ್ಷಿಗಳಿಗೆ ಈ ಕಾರ್ಯಾಗಾರ ನಡೆಸಲಾಗುತ್ತಿದೆ.
ಪಂಚರತ್ನ ರಥಯಾತ್ರೆಗೆ ಚಾಲನೆ; ಜೆಡಿಎಸ್ ಪಕ್ಷದ ಮಹತ್ವಾಕಾಂಕ್ಷೆಯ ಪಂಚರತ್ನ ಯಾತ್ರೆಗೆ ನವೆಂಬರ್ 1ರಂದು ಎಚ್. ಡಿ. ಕುಮಾರಸ್ವಾಮಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಚಾಲನೆ ನೀಡಲಿದ್ದಾರೆ. ಇದಕ್ಕೂ ಮೊದಲು ಟಿಕೆಟ್ ಆಕಾಂಕ್ಷಿಗಳಿಗೆ ಕಾರ್ಯಾಗಾರ ನಡೆಸಲಾಗುತ್ತಿದೆ.
ಪಂಚರತ್ನ ಯಾತ್ರೆಗೆ ಈಗಾಗಲೇ ವಾಹನಗಳು ಸಿದ್ದವಾಗುತ್ತಿವೆ. ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷದ ಶಕ್ತಿ ಏನೆಂದು ಈ ಯಾತ್ರೆಯ ಮೂಲಕ ತೋರಿಸಲು ಪಕ್ಷ ಬಯಸಿದೆ. ಬಿಜೆಪಿಯ ಜನಸಂಕಲ್ಪ ಯಾತ್ರೆ ಮತ್ತು ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯ ನಡುವೆ ಜೆಡಿಎಸ್ ರಥಯಾತ್ರೆಯನ್ನು ಆರಂಭಿಸಲಿದೆ.
ಪಂಚರತ್ನ ಯಾತ್ರೆ ಮೂಲಕ ಪಕ್ಷ ಅಧಿಕಾರಕ್ಕೆ ಬಂದರೆ ಜನರಿಗೆ ಯಾವ ಕಾರ್ಯಕ್ರಮ ರೂಪಿಸುತ್ತೇವೆ ಎಂದು ತಿಳಿಸಲಾಗುತ್ತದೆ. ಆಗಸ್ಟ್ ತಿಂಗಳಿನಲ್ಲಿಯೇ ಈ ಯಾತ್ರೆಗೆ ಯೋಜನೆ ರೂಪಿಸಲಾಗಿತ್ತು. ಆದರೆ ಭಾರೀ ಮಳೆಯ ಕಾರಣ ಯಾತ್ರೆ ಮುಂದೂಡಲಾಗಿತ್ತು.












Click it and Unblock the Notifications