ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ಕೇಳಿದ ಜೆಡಿಎಸ್
ಬೆಂಗಳೂರು, ಜುಲೈ 13 : ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ನೀಡುವಂತೆ ಕೋರಿ ಜೆಡಿಎಸ್ ವಿಧಾನಸಭೆ ಕಾರ್ಯದರ್ಶಿಗಳಿಗೆ ಮನವಿ ಮಾಡಿದೆ. ವಿಧಾನಸಭೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುತ ಪಡೆದಿರುವುದರಿಂದ ಅವಿಶ್ವಾಸ ನಿರ್ಣಯ ಮಂಡಿಸಿದರೂ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ.
ಸೋಮವಾರ ಬೆಳಗ್ಗೆ ಜೆಡಿಎಸ್ ಶಾಸಕ ಮಧು ಬಂಗಾರಪ್ಪ ನೇತೃತ್ವದಲ್ಲಿ ವಿಧಾನಸಭೆ ಕಾರ್ಯದರ್ಶಿ ಎಂ.ಗುರುರಾಜ್ ಅವರನ್ನು ಭೇಟಿ ಮಾಡಿದ ಜೆಡಿಎಸ್ ಶಾಸಕರು ಅವಿಶ್ವಾಸ ನಿರ್ಣಯ ಮಂಡಿಸುವುದಕ್ಕೆ ಅವಕಾಶ ನೀಡುವಂತೆ ಮನವಿ ಪತ್ರ ಸಲ್ಲಿಸಿದರು. 33 ಶಾಸಕರು ಈ ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ. [ರೈತರ ನೆರವಿಗೆ ಬಂದ ಜೆಡಿಎಸ್]

ಅವಿಶ್ವಾಸ ಮಂಡನೆಗೆ ಒಪ್ಪಿಗೆ ಸಿಕ್ಕರೂ ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತ ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. ತನ್ನ ಎಲ್ಲಾ ಶಾಸಕರಿಗೂ ವಿಪ್ ನೀಡಿ, ಬಿಜೆಪಿಯ ನೆರವನ್ನೂ ಜೆಡಿಎಸ್ ಪಡೆದರೂ ಅವಿಶ್ವಾಸ ನಿರ್ಣಯದಲ್ಲಿ ಕಾಂಗ್ರೆಸ್ ಬಲವೇ ಹೆಚ್ಚುತ್ತದೆ. ಅವಿಶ್ವಾಸ ನಿರ್ಣಯಕ್ಕೆ ಬಿಜೆಪಿ ಬೆಂಬಲ ನೀಡವ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ. [ರೈತರ ಮನೆಗೆ ಭೇಟಿ ನೀಡಲಿದ್ದಾರೆ ಸಿಎಂ]
ವಿಧಾನಸಭೆ ಬಲಾಬಲ : 224 ಸಂಖ್ಯಾಬಲದ ಕರ್ನಾಟಕ ವಿಧಾಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ 123 ಸದಸ್ಯರ ಬಲ ಹೊಂದಿದೆ. ಬಿಜೆಪಿಯ 44 ಮತ್ತು ಜೆಡಿಎಸ್‌ನ 40 ಶಾಸಕರಿದ್ದಾರೆ. ಬಿಜೆಪಿ ಜೆಡಿಸ್ ಜೊತೆ ಅವಿಶ್ವಾಸ ನಿರ್ಣಯಕ್ಕೆ ಕೈಜೋಡಿಸಿದರೂ ಒಟ್ಟು 84 ಸದಸ್ಯರ ಬಲ ಸಿಗುತ್ತದೆ. ಆದ್ದರಿಂದ ಸರ್ಕಾರಕ್ಕೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ.
ಲೋಕಾಯುಕ್ತದಲ್ಲಿ ಭ್ರಷ್ಟಾಚಾರದ ಆರೋಪಗಳು ಕೇಳಿಬಂದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ, ರಾಜ್ಯದಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆಯನ್ನು ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಜೆಡಿಎಸ್ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ಕೇಳಿದೆ.












Click it and Unblock the Notifications