ಚುನಾವಣೆಗೆ ಜೆಡಿಎಸ್ ಮೊದಲ ಅಭ್ಯರ್ಥಿ ಪ್ರಕಟ
ಬೆಂಗಳೂರು, ಜ.24: 2014ರ ಲೋಕಸಭೆ ಚುನಾವಣೆಗೆ ಜೆಡಿಎಸ್ ಮೊದಲ ಅಭ್ಯರ್ಥಿಯ ಘೋಷಣೆ ಮಾಡಿದ್ದು, ಅಧಿಕೃತವಾಗಿ ಚುನಾವಣಾ ಸಿದ್ಧತೆಯನ್ನು ಆರಂಭಿಸಿದೆ. ಉತ್ತರ ಕನ್ನಡ ಕ್ಷೇತ್ರಕ್ಕೆ ನಾಲ್ಕು ದಿನಗಳ ಹಿಂದೆಯಷ್ಟೇ ಪಕ್ಷ ಸೇರಿದ್ದ ಮಾಜಿ ಸಚಿವ ಶಿವಾನಂದ ನಾಯ್ಕ ಅವರನ್ನು ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಜನವರಿ ಅಂತ್ಯದಲ್ಲಿ ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದ್ದೇವೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬುಧವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಎಚ್.ಡಿ.ಕುಮಾರಸ್ವಾಮಿ, ಶಿವಾನಂದ ನಾಯ್ಕ ಹೆಸರನ್ನು ಉತ್ತರ ಕನ್ನಡ ಜಿಲ್ಲಾ ಘಟಕದಿಂದ ಶಿಫಾರಸು ಮಾಡಲಾಗಿದೆ. ಪಕ್ಷದ ಸಂಸದೀಯ ಮಂಡಳಿಯೂ ಒಪ್ಪಿಗೆ ನೀಡಿದ್ದು, ಅವರನ್ನು ಅಭ್ಯರ್ಥಿಯಾಗಿ ಘೋಷಿಸಲಾಗಿದೆ ಎಂದು ಹೇಳಿದರು. ಪಕ್ಷದ ಚುನಾವಣಾ ಅಭ್ಯರ್ಥಿಗಳ ಪಟ್ಟಿ ಸಿದ್ಧಗೊಂಡಿದ್ದು, ಅಂತಿಮ ಹಂತದ ಸಮಾಲೋಚನೆ ನಂತರ ಜನವರಿ ಅಂತ್ಯಕ್ಕೆ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಚುನಾವಣೆಗೆ ಪಕ್ಷವನ್ನು ಸಂಘಟನೆ ಮಾಡಲು ಉತ್ತರ ಕರ್ನಾಟಕ ಭಾಗದಲ್ಲಿ ರೈತ ಸಮಾವೇಶ, ಮೈಸೂರಿನಲ್ಲಿ ಹಿಂದುಳಿದ ವರ್ಗಗಳ ಸಮಾವೇಶ ಆಯೋಜಿಸಲಾಗಿದೆ. ಚಿತ್ರದುರ್ಗದ ಹಿರಿಯೂರಿನಲ್ಲಿ ರಾಜ್ಯಾಧ್ಯಕ್ಷ ಎ.ಕೃಷ್ಣಪ್ಪ ಅವರಿಗೆ ಯಾದವ ಸಮುದಾಯದಿಂದ ಅಭಿನಂದನಾ ಸಮಾವೇಶ, ಕುಮಟಾದಲ್ಲಿ ಮಾಜಿ ಸಚಿವ ಶಿವಾನಂದ ನಾಯ್ಕ ಬೆಂಬಲಿಗರ ಸೇರ್ಪಡೆ ಸಮಾವೇಶವೂ ನಡೆಯಲಿದೆ ಎಂದು ಕುಮಾರಸ್ವಾಮಿ ಹೇಳಿದರು. [ಜೆಡಿಎಸ್ ಸೇರಿದ ಶಿವಾನಂದ ನಾಯ್ಕ್]
29ರಂದು ಯುವಚೇತನಾ ಸಮಾವೇಶ : ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಮಾತನಾಡಿ, ಜನವರಿ 29ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಯುವಚೇತನ ಸಮಾವೇಶ ಆಯೋಜಿಸಲಾಗಿದೆ. ರಾಜ್ಯದ ವಿವಿಧೆಡೆಯಿಂದ ಒಂದು ಲಕ್ಷ ಕಾರ್ಯಕರ್ತರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದರು.
'ಜೆಡಿಎಸ್ ಬೆಳೆಸೋಣ, ದೇಶ ಉಳಿಸೋಣ' ಘೋಷ ವಾಕ್ಯದ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗಿದೆ. ರಾಷ್ಟ್ರೀಯ ಪಕ್ಷಗಳಿಂದ ರಾಜ್ಯದ ಹಿತಾಸಕ್ತಿ ಕಾಪಾಡಲು ಸಾಧ್ಯವಿಲ್ಲ. ಇದಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ ಹೊರತಲ್ಲ. ಆ ಎರಡೂ ಪಕ್ಷಗಳು ಎಂದೂ ಕರ್ನಾಟಕದ ಅಭಿವೃದ್ಧಿಗೆ ಸಹಕರಿಸಿಲ್ಲ ಎಂದು ಹೇಳಿದರು.
10 ಕ್ಷೇತ್ರಗಳ ಸಂಭವನೀಯ ಅಭ್ಯರ್ಥಿಗಳ ಪಟ್ಟಿ
ಉತ್ತರ ಕನ್ನಡ- ಶಿವಾನಂದ ನಾಯ್ಕ (ಪ್ರಕಟಿತ)
ಹಾಸನ- ಎಚ್.ಡಿ.ದೇವೇಗೌಡ
ತುಮಕೂರು- ಎ.ಕೃಷ್ಣಪ್ಪ
ಮಂಡ್ಯ- ಸಿ.ಎಸ್.ಪುಟ್ಟರಾಜು
ಮೈಸೂರು- ಸಾ.ರಾ.ಮಹೇಶ್
ಚಾಮರಾಜನಗರ - ಶಿವಣ್ಣ
ಬೀದರ್- ಬಂಡೆಪ್ಪ ಕಾಶಂಪುರ್
ಶಿವಮೊಗ್ಗ - ಶಕುಂತಲಾ ಬಂಗಾರಪ್ಪ ಅಥವಾ ಗೀತಾ ಶಿವರಾಜ್‌ಕುಮಾರ್
ಬೆಂಗಳೂರು ಗ್ರಾಮಾಂತರ- ಅನಿತಾ ಕುಮಾರಸ್ವಾಮಿ
ಚಿತ್ರದುರ್ಗ- ಗೂಳಿಹಟ್ಟಿ ಶೇಖರ್ (ಜೆಡಿಎಸ್ ಸೇರ್ಪಡೆಯಾದಲ್ಲಿ)












Click it and Unblock the Notifications