ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಉತ್ತರ-ದಕ್ಷಿಣ ಎರಡೂ ಕಡೆ ಕುಮಾರಸ್ವಾಮಿ ಸ್ಪರ್ಧೆ!

By ಬಿ.ಎಂ.ಲವಕುಮಾರ್
|
Google Oneindia Kannada News

ಮೈಸೂರು, ಮೇ 29: ಹೇಗಾದರು ಮಾಡಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದು ಮುಖ್ಯಮಂತ್ರಿಯಾಗಬೇಕೆಂಬ ಹಠಕ್ಕೆ ಬಿದ್ದಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ರಾಜ್ಯಾದ್ಯಂತ ಕಾಲಿಗೆ ಚಕ್ರಕಟ್ಟಿಕೊಂಡು ಸುತ್ತಾಡುತ್ತಿದ್ದಾರೆ. ಇದೀಗ ಪಕ್ಷದ ಗೆಲುವಿಗಾಗಿ ಕರ್ನಾಟಕ ಉತ್ತರ ಮತ್ತು ದಕ್ಷಿಣ ಎರಡೂ ಭಾಗಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಚುನಾವಣೆಗಳಲ್ಲಿ ಪ್ರಮುಖ ನಾಯಕರು ಎರಡು ಕ್ಷೇತ್ರಗಳಲ್ಲಿ ನಿಲ್ಲುವ ತಂತ್ರವನ್ನು ಹಿಂದಿನಿಂದಲೂ ಅನುಸರಿಸುತ್ತಾ ಬಂದಿದ್ದಾರೆ. ಕಳೆದ ಲೋಕಸಭೆ ಚುನಾವಣೆಗೆ ಬಂದಾಗ ಸ್ವತಃ ಪ್ರಧಾನಿ ನರೇಂದ್ರ ಮೋದಿ ಗುಜಾರಾತಿನ ವಡೋದರ ಮತ್ತು ಉತ್ತರ ಪ್ರದೇಶದ ವಾರಣಾಸಿಯಿಂದ ಸ್ಪರ್ಧಿಸಿದ್ದರು. ಉತ್ತರ ಪ್ರದೇಶದಲ್ಲಿ ಹೆಚ್ಚಿನ ಸ್ಥಾನ ಗಳಿಸುವ ಗುರಿ ನರೇಂದ್ರ ಮೋದಿಯ ಸ್ಪರ್ಧೆಯ ಹಿಂದಿತ್ತು.

ಇದೀಗ ಅಂತಹದ್ದೇ ಹೆಚ್ಚಿನ ಸ್ಥಾನ ಗಳಿಸುವ ಗುರಿ ಹಾಕಿಕೊಂಡು ಕುಮಾರಸ್ವಾಮಿ ಕೂಡ ಕರ್ನಾಟಕದ ಎರಡು ಭಾಗಗಳಲ್ಲಿ ಸ್ಪರ್ಧಿಸುತ್ತಾರೆ ಎನ್ನಲಾಗಿದೆ.

ಸದ್ಯ ಕುಮಾರಸ್ವಾಮಿ ದಕ್ಷಿಣ ಕರ್ನಾಟಕದ ಮೈಸೂರು ಪ್ರಾಂತ್ಯದಲ್ಲಷ್ಟೆ ಪ್ರಾಬಲ್ಯ ಹೊಂದಿರುವ ಪಕ್ಷವನ್ನು ರಾಜ್ಯದಾದ್ಯಂತ ಸಂಘಟನೆ ಮಾಡಿ ಗೆಲುವು ಪಡೆಯಲು ಸರ್ಕಸ್ ಮಾಡುತ್ತಿದ್ದಾರೆ. ಮತ್ತೊಂದೆಡೆ ಅಮಾವಾಸ್ಯೆ, ಹುಣ್ಣಿಮೆ ದಿನಗಳಲ್ಲಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುವುದನ್ನು ಮುಂದುವರೆಸಿದ್ದಾರೆ. ಈಗಾಗಲೇ ಗೆಲುವಿಗಾಗಿ ಸಂಕಲ್ಪ ತೊಟ್ಟಿರುವ ಅವರು ಒಂದೆಡೆ ದೇವರನ್ನೂ ಮತ್ತೊಂದೆಡೆ ಕಾರ್ಯಕರ್ತರು, ಮುಖಂಡರ ದರ್ಶನ ಮಾಡಿ ಸಲಹೆ ಪಡೆಯುತ್ತಿದ್ದಾರೆ.

ಸಾಲ ಮನ್ನಾದ ಭರವಸೆ

ಸಾಲ ಮನ್ನಾದ ಭರವಸೆ

ಎಲ್ಲ ಊರುಗಳಿಗೂ ತೆರಳುತ್ತಿರುವ ಅವರು ರೈತರನ್ನು ಸೆಳೆಯುವ ಸಲುವಾಗಿ ಸಾಲಮನ್ನಾದ ಭರವಸೆಗಳನ್ನು ಬಿತ್ತಿದ್ದಾರೆ. ಈಗಾಗಲೇ ಪಕ್ಷದಿಂದ ಒಂದಷ್ಟು ಮಂದಿ ಹೊರಗೆ ಹೋಗಿದ್ದರೆ, ಮತ್ತೊಂದಷ್ಟು ಮಂದಿ ಗೊಂದಲದಲ್ಲಿದ್ದಾರೆ. ಅಧಿಕೃತವಾಗಿ ಟಿಕೆಟ್ ಹಂಚಿಕೆ ವಿಷಯಗಳು ಪ್ರಸ್ತಾಪವಾದರೆ ಅಸಮಾಧಾನಗೊಳ್ಳುವ ಒಂದಷ್ಟು ಮಂದಿ ತಟಸ್ಥವಾಗಬಹುದು ಅಥವಾ ಪಕ್ಷದಿಂದಲೇ ಹೊರನಡೆದರೂ ಅಚ್ಚರಿ ಪಡಬೇಕಾಗಿಲ್ಲ.

ಜಿ.ಟಿ ದೇವೇಗೌಡ ಬಂಡಾಯ

ಜಿ.ಟಿ ದೇವೇಗೌಡ ಬಂಡಾಯ

ಮೈಸೂರು ಜಿಲ್ಲಾ ಜೆಡಿಎಸ್‍ನಿಂದ ಈಗಾಗಲೇ ಶಾಸಕ ಜಿ.ಟಿ.ದೇವೇಗೌಡರು ಬಂಡಾಯದ ಬಾವುಟ ಹಾರಿಸಿದ್ದಾರೆ. ಅದನ್ನು ಕುಮಾರಸ್ವಾಮಿ ಅವರು ಯಾವ ರೀತಿಯಲ್ಲಿ ಶಮನಗೊಳಿಸುತ್ತಾರೆ ಎಂಬುದು ಕೂಡ ಕುತೂಹಲಕಾರಿಯಾಗಿದೆ.

ಒಂದು ವೇಳೆ ಎಚ್. ವಿಶ್ವನಾಥ್ ಅವರನ್ನು ಪಕ್ಷಕ್ಕೆ ಅಧಿಕೃತವಾಗಿ ಕರೆ ತಂದ ಬಳಿಕ ಅವರಿಗೆ ಪಕ್ಷದಲ್ಲಿ ಉನ್ನತ ಸ್ಥಾನಮಾನ ನೀಡುವುದು ಅನಿವಾರ್ಯವಾಗುತ್ತದೆ. ಅಷ್ಟೇ ಅಲ್ಲ ಯಾವುದಾದರೊಂದು ಕ್ಷೇತ್ರದಿಂದ ಟಿಕೆಟ್ ನೀಡಲೇ ಬೇಕಾಗುತ್ತದೆ. ಜೆಡಿಎಸ್ ಭದ್ರಕೋಟೆಯಲ್ಲಿ ಸ್ಪರ್ಧಿಸಿದರೆ ಮಾತ್ರ ವಿಶ್ವನಾಥ್ ಅವರಿಗೆ ಗೆಲುವು ಸಾಧ್ಯ. ಹೀಗಾಗಿ ಈಗಾಗಲೇ ಹುಣಸೂರಿನಲ್ಲಿ ಜೆಡಿಎಸ್ ಪ್ರಾಬಲ್ಯವಿದೆ. ಆದ್ದರಿಂದ ವಿಶ್ವನಾಥ್ ಅವರು ಆ ಕ್ಷೇತ್ರದತ್ತ ಒಲವು ತೋರಿದ್ದಾರೆ. ಒಂದು ವೇಳೆ ಅದೇ ಕ್ಷೇತ್ರದಿಂದ ವಿಶ್ವನಾಥ್ ಅವರಿಗೆ ಟಿಕೆಟ್ ನೀಡಿದರೆ ಬಿಕ್ಕಟ್ಟಿನ ಪರಿಸ್ಥಿತಿ ಉಂಟಾಗಲಿದೆ.

ಇಷ್ಟಕ್ಕೂ ವಿಶ್ವನಾಥ್ ಜೆಡಿಎಸ್‍ಗೆ ಏಕೆ ಅನಿವಾರ್ಯ?

ಇಷ್ಟಕ್ಕೂ ವಿಶ್ವನಾಥ್ ಜೆಡಿಎಸ್‍ಗೆ ಏಕೆ ಅನಿವಾರ್ಯ?

ತಮ್ಮ ಪಕ್ಷದ ಮುಖಂಡರನ್ನೇ ಎದುರು ಹಾಕಿಕೊಂಡು ವಿಶ್ವನಾಥ್ ರನ್ನು ಏಕೆ ಕರೆತರುತ್ತಿದ್ದಾರೆ ಎಂಬ ಪ್ರಶ್ನೆ ಸಾಮಾನ್ಯವಾಗಿ ಎಲ್ಲರನ್ನು ಕಾಡುತ್ತಿದೆ. ಮೈಸೂರು ಪ್ರಾಂತ್ಯದಲ್ಲಿ ಕುರುಬ ಸಮುದಾಯ ಹೆಚ್ಚಿನ ಪ್ರಾಬಲ್ಯ ಹೊಂದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೆಡ್ಡು ಹೊಡೆಯಬೇಕಾದರೆ ಅವರ ಸಮುದಾಯದ ಮತ್ತೊಬ್ಬ ನಾಯಕನ ಅನಿವಾರ್ಯತೆ ಜೆಡಿಎಸ್‍ಗಿದೆ. ಅದಕ್ಕೆ ಈಗಾಗಲೇ ಸಿಎಂ ವಿರುದ್ಧ ಮುನಿಸಿಕೊಂಡಿರುವ ಎಚ್.ವಿಶ್ವನಾಥ್ ಅರ್ಹ ವ್ಯಕ್ತಿ ಎಂದು ಕುಮಾರಸ್ವಾಮಿ ನಂಬಿದ್ದಾರೆ. ಹೀಗಾಗಿ ಅವರನ್ನು ಪಕ್ಷಕ್ಕೆ ಕರೆತರುವ ಕೆಲಸ ನಡೆಯುತ್ತಿದೆ ಎನ್ನಲಾಗಿದೆ.

ಎರಡು ಕ್ಷೇತ್ರದಲ್ಲಿ ಸ್ಪರ್ಧೆ

ಎರಡು ಕ್ಷೇತ್ರದಲ್ಲಿ ಸ್ಪರ್ಧೆ

ಇನ್ನು ರಾಮನಗರದಲ್ಲಿ ರಾಜಕೀಯ ಭವಿಷ್ಯ ಕಂಡುಕೊಂಡಿರುವ ಕುಮಾರಸ್ವಾಮಿ ಅಲ್ಲಿ ಸ್ಪರ್ಧಿಸಿದರೆ ಗೆಲುವು ಖಚಿತ ಎಂಬ ವಾತಾವರಣ ಇದೆ. ಅದರ ನಡುವೆಯೂ ಉತ್ತರ ಕರ್ನಾಟಕದ ಯಾವುದಾದರೊಂದು ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿರುವುದರ ಹಿಂದೆ ಬಲವಾದ ಕಾರಣವೂ ಇದೆ.

ಉತ್ತರ ಕರ್ನಾಟಕದಲ್ಲಿ ಜೆಡಿಎಸ್‍ನ್ನು ಸಂಘಟಿಸಬೇಕಾದರೆ ಅಲ್ಲಿ ಕುಮಾರಸ್ವಾಮಿ ಹೆಚ್ಚಿನ ಶ್ರಮ ವಹಿಸಲೇಬೇಕು. ಜತೆಗೆ ಅಲ್ಲಿಯೇ ವಾಸ್ತವ್ಯ ಹೂಡಿ, ತಾನು ಉತ್ತರ ಕರ್ನಾಟಕದಿಂದ ಸ್ಪರ್ಧಿಸುವುದರಿಂದ ಜನರ ಗಮನ ಸೆಳೆಯಬಹುದು ಎಂದುಕೊಂಡಿದ್ದಾರೆ.

ಗೆಲುವಿಗಾಗಿ ಎಲ್ಲಾ ಕಸರತ್ತು

ಗೆಲುವಿಗಾಗಿ ಎಲ್ಲಾ ಕಸರತ್ತು

ಸದ್ಯ ಚುನಾವಣೆಗೆ ಇನ್ನೊಂದು ವರ್ಷವಷ್ಟೇ ಬಾಕಿಯಿದೆ. ಹೀಗಿರುವಾಗ ಹೆಚ್.ಡಿ.ಕುಮಾರಸ್ವಾಮಿಗೆ ಉತ್ತರ ಕರ್ನಾಟಕದಲ್ಲಿ ಪಕ್ಷದ ಸಂಘಟನೆಯ ದೃಷ್ಟಿಯಿಂದ ಸಮಯ ಸಾಲದು. ಆದರೆ ಉತ್ತರ ಕರ್ನಾಟಕದಲ್ಲಿ ಜೆಡಿಎಸ್‍ಗೆ ಒಂದಷ್ಟು ಸ್ಥಾನಗಳು ದಕ್ಕಿದರೆ ಮಾತ್ರ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವ ಕನಸು ನನಸಾಗಲು ಸಾಧ್ಯ ಎಂಬ ಪರಿಸ್ಥಿತಿ ಇದೆ. ಹೀಗಾಗಿಯೇ ದೇವೇಗೌಡರ ಸಲಹೆಯಂತೆ ಕುಮಾರಸ್ವಾಮಿ ಈ ಸ್ಪರ್ಧೆಯ ನಿರ್ಧಾರಕ್ಕೆ ಬಂದಿರಬಹುದು ಎನ್ನಲಾಗಿದೆ.

ಒಟ್ಟಾರೆ ಕುಮಾರಸ್ವಾಮಿ ಚುನಾವಣೆಗಾಗಿ ಇನ್ನಿಲ್ಲದ ಕಸರತ್ತುಗಳನ್ನು ಮಾಡುತ್ತಿರುವುದಂತೂ ಸತ್ಯ.

English summary
It is said to be that former chief minister of Karnataka and JDS state president HD Kumaraswamy may contest in both South and North Karnataka to gain more votes to JDS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X