ಸಚಿವಸ್ಥಾನದ ಪೈಪೋಟಿಯಲ್ಲಿ ಜನರನ್ನು ಮರೆತ ಶಾಸಕರು
ಬೆಂಗಳೂರು, ಸೆ.4 : ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಡಳಿತ ಯಂತ್ರ ನಿಷ್ಕ್ರಿಯಗೊಂಡಿದ್ದು, ಉಪಚುನಾವಣೆಯ ಫಲಿತಾಂಶದ ನಂತರ ಕಾಂಗ್ರೆಸ್ ಪಕ್ಷದ ಶಾಸಕರು ಮಂತ್ರಿ ಸ್ಥಾನ ಪಡೆಯಲು ಪೈಪೋಟಿ ಆರಂಭಿಸಿದ್ದು, ಕ್ಷೇತ್ರದ ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ ಎಂದು ಜೆಡಿಎಸ್ ವಕ್ತಾರ ರಮೇಶ್ ಬಾಬು ಆರೋಪಿಸಿದ್ದಾರೆ.
ರಮೇಶ್ ಬಾಬು ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿಯಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳು ತಮ್ಮ ಪಕ್ಷದ ಶಾಸಕರನ್ನು ಓಲೈಸಲು ಮುಂದಾಗಿದ್ದು, ತುರ್ತಾಗಿ ಮತ್ತು ಮನಮುಟ್ಟುವ ರೀತಿಯಲ್ಲಿ ನಡೆಯಬೇಕಾಗಿದ್ದ ಪರಿಹಾರ ಕಾರ್ಯವನ್ನು ಕಡೆಗಣಿಸಿದ್ದಾರೆ ಎಂದು ತಿಳಿಸಿದ್ದಾರೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಸಹ ಮಂತ್ರಿ ಸ್ಥಾನ ಪಡೆಯಲು ಪೈಪೋಟಿಗೆ ಇಳಿದಿರುವುದರಿಂದ ಕಾಂಗ್ರೆಸ್ ಪಕ್ಷವು ಜನಸಾಮಾನ್ಯರ ನೆರವಿಗೆ ಬರುವಲ್ಲಿ ವಿಫಲತೆಯನ್ನು ಕಂಡಿದೆ. ಮುಖ್ಯಮಂತ್ರಿಗಳು ಮತ್ರಿಮಂಡಲ ಮತ್ತು ನಿಗಮಮಂಡಳಿಗಳ ನೇಮಕಾತಿಗೆ ತಮ್ಮ ಬೆಂಬಲಿಗರನ್ನು ನೇಮಿಸಿಕೊಳ್ಳಲು ಹವಣಿಸುತ್ತಿದ್ದರೆ ಸರ್ಕಾರದ ಭಾಗವಾಗಿರುವ ಯಾರೂ ಜನರ ಸಂಕಷ್ಟ ಕೇಳುತ್ತಿಲ್ಲ ಎಂದು ರಮೇಶ್ ಬಾಬು ಆರೋಪ ಮಾಡಿದ್ದಾರೆ. [ಜೆಡಿಎಸ್ ಶಾಸಕಾಂಗ ಸಭೆಯ ಮುಖ್ಯಾಂಶಗಳು]
ರಾಜ್ಯದ ಆಡಳಿತ ಯಂತ್ರ ನಿಧಾನಗತಿಯಲ್ಲಿ ಸಾಗುತ್ತಿದೆ. ಸಚಿವ ಸಂಪುಟದಲ್ಲಿ ಸಮನ್ವಯದ ಕೊರತೆ ಕಾಡುತ್ತಿದ್ದು, ಆಡಳಿತ ಯಂತ್ರ ತಟಸ್ಥವಾಗಿರುವ ಭಾವನೆ ಉಂಟಾಗಿದೆ. ಅಧಿಕಾರಿಗಳ ಸಭೆ ಮಾಡಿ ಎಚ್ಚರಿಕೆ ನೀಡುವ ಕೆಲಸವನ್ನು ಬಿಟ್ಟರೆ ರಾಜ್ಯದ ಮುಖ್ಯಮಂತ್ರಿಗಳು ಆಡಳಿತ ಯಂತ್ರವನ್ನು ಸರಿದಾರಿಗೆ ತಂದು ಜನಸಾಮಾನ್ಯರಿಗೆ ಪರಿಹಾರವನ್ನು ಒದಗಿಸುವ ಕಡೆ ಗಮನಹರಿಸುತ್ತಿಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. [ದಸರಾ ನಂತರ ಸಚಿವ ಸಂಪುಟ ವಿಸ್ತರಣೆ]
ಮುಖ್ಯಮಂತ್ರಿಗಳು ಜಡತ್ವದ ಮನಸ್ಥಿತಿಯಿಂದ ಹೊರಬಂದು ಆಡಳಿತ ಯಂತ್ರಕ್ಕೆ ಚುರುಕು ನೀಡಿ, ಅತಿವೃಷ್ಟಿಗೆ ಒಳಗಾಗಿರುವ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಮತ್ತು ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಲು ತುರ್ತು ಕ್ರಮಕೈಗೊಳ್ಳಬೇಕು ಎಂದು ಪಕ್ಷದ ಪರವಾಗಿ ಒತ್ತಾಯಿಸಿದ್ದಾರೆ.












Click it and Unblock the Notifications