"ಕನ್ನಡ ದಾಳ" ಉರುಳಿಸಿದ ಜೆಡಿಎಸ್, ಕನ್ನಡಿಗರು ಹೇಳಿದ್ದೇನು ?
ಕರ್ನಾಟಕದ ಪ್ರದೇಶಿ ಪಕ್ಷ ಜೆಡಿಎಸ್ ಬಲವರ್ಧನೆ ಶುರು ಮಾಡಿದೆ. ಇದರ ಭಾಗವಾಗಿ ಕನ್ನಡಿಗರನ್ನು ಸೆಳೆಯುವುದಕ್ಕೆ ಜೆಡಿಎಸ್ ಕನ್ನಡ ದಾಳವನ್ನು ಉರುಳಿಸಿದ್ದು ಅಥವಾ ಕನ್ನಡವನ್ನು ಬಳಕೆ ಮಾಡುತ್ತಿದೆ. ಈ ಹಿಂದೆ ಕರ್ನಾಟಕದಲ್ಲಿ ಕನ್ನಡದ ವಿಚಾರದಲ್ಲಿ ಜೆಡಿಎಸ್ ಹೋರಾಟದ ಮುಂಚೂಣಿಯಲ್ಲಿ ಇರುತ್ತಿತ್ತು. ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಈ ವಿಚಾರದಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದರು. ಆದರೆ, ಇದೀಗ ಜೆಡಿಎಸ್ ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಮೇಲೆ ಅಲ್ಪ ಪ್ರಮಾಣದಲ್ಲಿ ಹಿನ್ನಡೆ ಆಗಿದೆ ಅಂತಲೇ ಹೇಳಬಹುದು. ಇದಕ್ಕೆ ಇತ್ತೀಚಿಗೆ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಕನ್ನಡದ ವಿಚಾರದಲ್ಲಿ ಟ್ವೀಟ್ ಮಾಡಿ ಅದನ್ನು ಡಿಲೀಟ್ ಮಾಡಿದ್ದೇ ಒಂದು ಉದಾಹರಣೆ.
ಇದೀಗ ಜೆಡಿಎಸ್ ಪಕ್ಷವು ಸೋಷಿಯಲ್ ಮೀಡಿಯಾದಲ್ಲಿ "ಕನ್ನಡಿಗರಿಂದ ಕನ್ನಡಿಗಾರಿಗಾಗಿ ಕನ್ನಡಿಗೋಸ್ಕರ ಇರುವ ಕನ್ನಡಿಗರ ಪಕ್ಷ. ಜೆಡಿಎಸ್ ಬೆಂಬಲಿಸಿ ಈಗಲೇ ಜೆಡಿಎಸ್ ಸದಸ್ಯರಾಗಿ" ಎಂದು ಅಭಿಯಾನವನ್ನು ಪ್ರಾರಂಭಿಸಿದ್ದು ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರ ನಡುವೆ ಹಲವು ಕನ್ನಡಿಗರು ಈ ಅಭಿಯಾನವನ್ನು ವಿರೋಧಿಸಿದ್ದಾರೆ.

ಕನ್ನಡ ಹೋರಾಟ ಮಾಡುವವರಿಗೆ ನೀವು ಅವಮಾನ ಮಾಡಿದಿರಿ. ಈಗ ಕನ್ನಡಿಗರ ಪಕ್ಷವಾಗಿ ಜೆಡಿಎಸ್ ಉಳಿದಿಲ್ಲ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಬಾರದಿತ್ತು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಇದರ ನಡುವೆ ಹೌದು ಕನ್ನಡಿಗರ ಪರವಾಗಿ ಜೆಡಿಎಸ್ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಆ ರೀತಿ ಉಳಿದಿಲ್ಲ ಮೊದಲಿನಂತೆಯೇ ಕನ್ನಡದ ವಿಚಾರದಲ್ಲಿ ಗಟ್ಟಿ ಹಾಗೂ ದೃಢ ನಿರ್ಧಾರಗಳನ್ನು ತೆಗೆದುಕೊಳ್ಳಿ ಎನ್ನುವ ಅಭಿಪ್ರಾಯಗಳು ಸಹ ವ್ಯಕ್ತವಾಗುತ್ತಿದೆ.
ದ್ವಿಭಾಷಾ ನೀತಿಗೆ ಬೆಂಬಲಿಸಿ: ಜೆಡಿಎಸ್ ಪಕ್ಷವನ್ನು ಕನ್ನಡಿಗರು ಬೆಂಬಲಿಸಬೇಕಾದರೆ ಮೊದಲಿಗೆ ಕರ್ನಾಟಕದಲ್ಲಿ ದ್ವಿಭಾಷಾ ನೀತಿ ಜಾರಿ ಮಾಡುವುದಕ್ಕೆ ಆಗ್ರಹಿಸಿ. ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ಕರ್ನಾಟಕದಲ್ಲಿ ಕನ್ನಡ ಮತ್ತು ಇಂಗ್ಲೀಷ್ ಭಾಷೆ ಮಾತ್ರ ಇರುವಂತೆ ನೋಡಿಕೊಳ್ಳಿ. ಪಠ್ಯದಲ್ಲಿ ಹಿಂದಿ ಬೇಡ. ಮೂರನೇ ಭಾಷೆಯನ್ನಾಗಿ ಹಿಂದಿ ಕಲಿಸುವುದನ್ನು ಬಿಟ್ಟು ಕರ್ನಾಟಕದಲ್ಲೂ ದ್ವಿಭಾಷಾ ನೀತಿ ಅಳವಡಿಸಿಕೊಳ್ಳುವುದಕ್ಕೆ ಆಗ್ರಹಿಸಿ ಎಂದು ಹಲವು ಕನ್ನಡಿಗರು ಒತ್ತಾಯಿಸಿದ್ದಾರೆ.
ಜೆಡಿಎಸ್ ಪಕ್ಷ ಕನ್ನಡಿಗರಿಗಾಗಿ ಎಂದು ಹೇಳುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಪರ ಹೋರಾಟ ಹಾಗೂ ವಿಷಯಗಳಲ್ಲಿ ಜೆಡಿಎಸ್ ಕಾಣಿಸಿಕೊಂಡಿದ್ದು ಅತ್ಯಂತ ವಿರಳ ಎಂದೂ ಹಲವರು ದೂರಿದ್ದಾರೆ. ಕನ್ನಡ ಭಾಷೆ, ನೆಲ - ಜಲ ಉಳಿಸುವ ವಿಚಾರದಲ್ಲಿ ಎಂದಾದರೂ ಹೋರಾಟ ಮಾಡಿದ್ದು ಇತಿಹಾಸದಲ್ಲಿ ಇದೆಯೇ ಎಂದೂ ಪ್ರಶ್ನಿಸಿದ್ದಾರೆ. ಸೆಕ್ಯೂಲರ್ ಪದ ತೆಗೀಬೇಕು ಯಾಕಂದ್ರೆ ಬಿಜೆಪಿ ಜೊತೆ ಈ ಪದ ಹೊಂದಾಣಿಕೆ ಆಗಲ್ಲ ಎಂದು ಇನ್ನು ಕೆಲವರು ಹೇಳಿದ್ದಾರೆ.












Click it and Unblock the Notifications