ದಳಪತಿಗಳಿಗೆ ಮತ್ತೆ ಬಿಗ್ ಶಾಕ್ ಕೊಟ್ಟ ಡಿಕೆ ಬ್ರದರ್ಸ್; ಜೆಡಿಎಸ್ ಮುಖಂಡ ರಾಜಶೇಖರ್ ಕಾಂಗ್ರೆಸ್ ಸೇರ್ಪಡೆ
ರಾಮನಗರ, ಏಪ್ರಿಲ್ 17: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ಜೆಡಿಎಸ್ ಹಾಗೂ ಬಿಜೆಪಿ ಲೋಕಸಭಾ ಚುನಾವಣೆಗೆ ಮೈತ್ರಿಯಾಗಿದೆ. 28 ಕ್ಷೇತ್ತದಲ್ಲೂ ಗೆಲುವು ಸಾಧಿಸಲು ಮಾಸ್ಟರ್ ಪ್ಲಾನ್ ನಡೆಸಿದ್ದು, ಇತ್ತ ದಳಪತಿಗಳಿಗೆ ಡಿ ಕೆ ಬ್ರದರ್ಸ್ ಬಿಗ್ ಶಾಕ್ ನೀಡಿದ್ದಾರೆ.
ಹೌದು, ಕಳೆದ ವಾರವಷ್ಟೇ ರಾತ್ರೋರಾತ್ರಿ ಡಿ ಕೆ ಶಿವಕುಮಾರ್ ಬರೋಬ್ಬರಿ 200 ಕ್ಕೂ ಹೆಚ್ಚು ಜೆಡಿಎಸ್ ಮುಖಂಡರನ್ನ ಕಾಂಗ್ರೆಸ್ ಪಕ್ಷಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ರು, ಇದೀಗ ಡಿ ಕೆ ಸುರೇಶ್ ರಾಮನಗರದಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷರಾದ ಭೈರೇಗೌಡರು, ಜೆಡಿಎಸ್ ಮುಖಂಡರಾದ ರಾಜಶೇಖರ್ ಅವರನ್ನ ಪಕ್ಷಕ್ಕೆ ಕರೆತರುವ ಮೂಲಕ ಡಿ ಕೆ ಬ್ರದರ್ಸ್ ಶಾಕ್ ನೀಡಿದ್ದಾರೆ.

ಇನ್ನೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಡಿ ಕೆ ಸುರೇಶ್ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಸೋಲಿನ ಭೀತಿಯಿಂದಾಗಿ ಬಿಜೆಪಿಯು ಐಟಿ, ಇಡಿ ತನಿಖಾ ಸಂಸ್ಥೆಗಳನ್ನು ಅಸ್ತ್ರವಾಗಿ ಪ್ರಯೋಗಿಸುತ್ತಿದೆ. ಈ ಪ್ರಯೋಗಗಳು ಪ್ರತಿ ಚುನಾವಣೆಯಲ್ಲೂ ನಡೆಯುತ್ತಿದ್ದು, ನಮಗೆ ಇದು ಹೊಸತಲ್ಲ ಎಂದು ಸಂಸದರು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ತಿಳಿಸಿದರು.
ಬಿಜೆಪಿ ಅವರ ಬಳಿ ಇರುವ ಅಸ್ತ್ರ ಅದೊಂದೆ. ಅವರಿಗೆ ಸೋಲಿನ ಭೀತಿ ಕಾಡುತ್ತಿದ್ದು, ಐಟಿ, ಇಡಿ, ಸಿಬಿಐ ಬಿಟ್ಟು ಅವರಿಗೆ ಬೇರೆ ಗೊತ್ತಿಲ್ಲ. ಪ್ರಧಾನಮಂತ್ರಿಗಳಿಗೆ, ಬಿಜೆಪಿ ನಾಯಕರಿಗೆ ಬೆಲೆ ಏರಿಕೆ ಬಗ್ಗೆ ಮಾತನಾಡಲು ಹೇಳಿ. ಪ್ರಧಾನಮಂತ್ರಿಗಳು 10 ವರ್ಷಗಳ ಹಿಂದೆ ಹೇಳಿರುವ ಹೇಳಿಕೆ, ಕೊಟ್ಟಿರುವ ವಚನಗಳ ಬಗ್ಗೆ ಇಂದು ಅವರು ಏನು ಹೇಳುತ್ತಾರೆ ಕೇಳಿ. ಅವರಿಂದ ಶ್ರೀರಾಮನವಮಿ ದಿನ ಈ ವಿಚಾರವಾಗಿ ಸತ್ಯ ಹೇಳಿಸಿ ಎಂದರು.
ಡಿ.ಕೆ ಸುರೇಶ್ ಅವರ ಗುರಿಯೇ ಎಂಬ ಪ್ರಶ್ನೆಗೆ, "ಅವರು ಏನಾದರೂ ಮಾಡಿ ನಮ್ಮ ನಾಯಕರನ್ನು ಕುಗ್ಗಿಸಬೇಕು ಎನ್ನುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಪ್ರಯತ್ನಗಳು ಯಾವುದೂ ಯಶಸ್ಸಾಗುವುದಿಲ್ಲ. ಐಟಿ, ಇಡಿ, ಸಿಬಿಐ ಅಧಿಕಾರಿಗಳು ಬಿಜೆಪಿಯ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಕಾಂಗ್ರೆಸ್ ಪಕ್ಷ ಕಟ್ಟಿಹಾಕಿ ಸೋಲಿಸಲು ಬಂದಿದ್ದಾರೆ. ಇದು ನಮಗೆ ಹೊಸತಲ್ಲ. ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ ಇದೇ ತಂತ್ರ ಅನುಸರಿಸುತ್ತಿದೆ" ಎಂದರು.
ಬಿಜೆಪಿ ನಾಯಕರು ರಾಮದೇವರ ಬೆಟ್ಟವನ್ನು ನಾವೇ ಅಭಿವೃದ್ಧಿ ಮಾಡುತ್ತೇವೆ ಎಂದು ಬಿಜೆಪಿಯ ಅಶ್ವತ್ಥ್ ನಾರಾಯಣ ಅವರ ಹೇಳಿಕೆ ಕುರಿತು ಮಾತನಾಡಿ, ಅವರು ಯಾವಾಗ ಅಭಿವೃದ್ಧಿ ಮಾಡುತ್ತಾರೆ? ಅವರು ನಾಲ್ಕು ವರ್ಷಗಳ ಕಾಲ ಇದೇ ಜಿಲ್ಲೆಯಲ್ಲಿ ಅಧಿಕಾರದಲ್ಲಿದ್ದರಲ್ಲವೇ? ಜಿಲ್ಲೆಯಲ್ಲಿ ಕಸ ಗುಡಿಸಿ ಕ್ಲೀನ್ ಮಾಡುತ್ತೇನೆ ಎಂದಿದ್ದರು. ಅವರು ಕ್ಲೀನ್ ಮಾಡಿದರಾ? ರಾಮ ದೇವರ ಬೆಟ್ಟ ಅಭಿವೃದ್ಧಿಗೆ ಬಜೆಟ್ ನಲ್ಲಿ ಎಷ್ಟು ಅನುದಾನ ಇಟ್ಟಿದ್ದಾರೆ? ಎಷ್ಟು ಬಿಡುಗಡೆ ಮಾಡಿದ್ದಾರೆ? ರಣಹದ್ದು ಸಂರಕ್ಷಣಾ ಇಲಾಖೆ ಅನುಮತಿ ಪಡೆದಿದ್ದಾರಾ? ಚುನಾವಣೆಗಾಗಿ ಇಂದು ಬೆಟ್ಟ ಹತ್ತಿದ್ದಾರೆ.
ಇದು ಚುನಾವಣಾ ತಂತ್ರ. ರಾಮ ನಮ್ಮ ಊರಿನಲ್ಲೂ ಇದ್ದಾನೆ. ನಾನೂ ದೇವಾಲಯ ಕಟ್ಟಿದ್ದೇವೆ, ಪೂಜೆ ಮಾಡುತ್ತಿದ್ದೇವೆ. ನಮ್ಮವರೂ ರಸ್ತೆಯಲ್ಲಿ ಪಾನಕ, ಮಜ್ಜಿಗೆ ಹಂಚುತ್ತಿದ್ದಾರೆ. ಬಿಜೆಪಿ ಬಾವುಟ, ಕೇಸರಿ ಶಾಲು ಹಾಕಿಕೊಂಡು ರಾಮನ ಬೆಟ್ಟಕ್ಕೆ ಹತ್ತಿದರೆ ರಾಮನ ಭಕ್ತರಾಗುವುದಿಲ್ಲ. ಅವರು ಚುನಾವಣೆಗೆ ಮಾತ್ರ ರಾಮನ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅವರು ರಾಮದೇವರ ಬೆಟ್ಟದಲ್ಲಿ ದೇವಾಲಯ ಕಟ್ಟಿ ಎಂದು ನಾನು ಕೇಳುತ್ತಿಲ್ಲ. ಆ ಜಾಗ ಅಭಿವೃದ್ಧಿಗೆ ರಣಹದ್ದು ಸಂರಕ್ಷಣಾ ಇಲಾಖೆಯ ಅನುಮತಿ ಪಡೆಯಲು ಅರ್ಜಿ ಹಾಕಿದ್ದಾರಾ? ಹಾಕಿದ್ದರೆ ಆ ಅರ್ಜಿಯನ್ನು ತೋರಿಸಲಿ ಸಾಕು. ಡಿಪಿಆರ್ ಮಾಡುವ ಮುನ್ನ ಅನುಮತಿ ಬೇಕಲ್ಲವೇ? ಚುನಾವಣೆ ಸಮಯದಲ್ಲಿ ಅನುಮತಿ ಸಿಗುತ್ತದಾ? ರಾಮದೇವರ ಬೆಟ್ಟಕ್ಕೆ ಅವರಬ್ಬರೇ ಅಲ್ಲ, ರಾಮನ ನೋಡಲು, ಪೂಜಿಸಲು ಸಾವಿರಾರು ಮಂದಿ ಹೋಗುತ್ತಿದ್ದಾರೆ ಎಂದರು.
ರಾಮಮಂದಿರ ಉದ್ಘಾಟನೆಗೆ ಹೋಗದವರಿಂದ ಏನು ನಿರೀಕ್ಷೆ ಮಾಡಲು ಸಾಧ್ಯ ಎಂಬ ಅಶ್ವತ್ಥ್ ನಾರಾಯಣ ಅವರ ಹೇಳಿಕೆ ಕುರಿತು ಮಾತನಾಡಿ, ನಾವು ರಾಮನನ್ನು ನಮ್ಮ ಊರಿನಲ್ಲೇ ನೋಡುತ್ತಿದ್ದೇವೆ. ಅಯೋಧ್ಯೇಗೆ ಯಾಕೆ ಹೋಗಬೇಕು? ನಮ್ಮ ಊರು, ತಾಲೂಕಿನಲ್ಲಿ ದೇವಾಲಯ ಕಟ್ಟಿ ಅಲ್ಲೇ ಪೂಜೆ ಮಾಡುತ್ತೇವೆ. ನಿಮಗೆ ರಾಮ ಎಂದರೆ ನನಗೆ ಹನುಮಂತ, ವೆಂಕಟರಮಣಸ್ವಾಮಿ, ಕೆಂಕೇರಮ್ಮ, ಕಬ್ಬಾಳಮ್ಮ, ತಾಯಿ ಚಾಮುಂಡಿ. ನೀವು ರಾಜಕೀಯಕ್ಕೋಸ್ಕರ ರಾಮನ ಹೆಸರು ಹೇಳುತ್ತಿದ್ದೀರಿ. ನಿಮ್ಮ ಉದ್ದೇಶ ರಾಜಕೀಯವೇ ಹೊರತು, ಆತನ ಕೃಪೆಗಾಗಿ ಅಲ್ಲ. ಬಿಜೆಪಿಯ ಈ ಸುಳ್ಳನ್ನು ಮಾಧ್ಯಮಗಳು ಪ್ರಚಾರ ಮಾಡಬಾರದು ಎಂದು ಮನವಿ ಮಾಡುತ್ತೇನೆ.
ಅವರು ರಾಮನಗರ ಕ್ಲೀನ್ ಮಾಡುತ್ತೇವೆ ಎಂದಿದ್ದರು ಮಾಡಿದ್ದಾರಾ ಕೇಳಿ. ಅವರು ರಾಮದೇವರ ಬೆಟ್ಟದಲ್ಲಿ ದೇವಾಲಯ ಕಟ್ಟುತ್ತೇವೆ ಎಂದಿದ್ದರು. ಕಟ್ಟಿದ್ದಾರಾ ತೋರಿಸಲಿ. ನಾನು ಅರಣ್ಯಾಧಿಕಾರಿಗಳ ಹಾಗೂ ರಣಹದ್ದು ಸಂರಕ್ಷಣಾ ಇಲಾಖೆ ಅಧಿಕಾರಿಗಳ ಸಭೆ ಮಾಡಿದ್ದೇನೆ. ಚುನಾವಣೆ ಸಮಯದಲ್ಲಿ ಮಾಧ್ಯಮಗಳು ಅವರ ಹಿಂದೆ ಹೋಗುತ್ತಾರೆ ಎಂದು ಪ್ರಚಾರಕ್ಕೆ ಸುಳ್ಳು ಹೇಳಿದರೆ, ಅದಕ್ಕೆ ನಾನು ಉತ್ತರ ನೀಡಲು ಸಾಧ್ಯವೇ? ಈ ಸುಳ್ಳುಗಾರರಿಗೆ ಹೆಚ್ಚಿನ ಆದ್ಯತೆ ನೀಡಬೇಕಿ ಎಂದು ಮನವಿ ಮಾಡುತ್ತೇನೆ ಎಂದು ವಾಗ್ದಾಳಿ ನಡೆಸಿದರು.
ಇವರ ಜತೆಗೆ ರಾಮನಗರದ ಜೆಡಿಎಸ್ ಮುಖಂಡರಾದ ರಾಜಶೇಖರ್ ಅವರು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ, ನಾಯಕತ್ವ ಒಪ್ಪಿ ನಮ್ಮ ಪಕ್ಷ ಸೇರಿದ್ದು, ಅವರನ್ನು ಸ್ವಾಗತಿಸುತ್ತೇನೆ. ಈ ಜಿಲ್ಲೆಯ ಅಭಿವೃದ್ಧಿ ಹಾಗೂ ತಾಲೂಕಿನ ಅಭಿವೃದ್ಧಿಗೆ, ನಿಮ್ಮ ನಾಯಕತ್ವದ ಗುಣಗಳು ಒಂದು ಕುಟುಂಬಕ್ಕೆ ಸೀಮಿತವಾಗಿದೆ. ಹೀಗಾಗಿ ನಿಮ್ಮ ನಾಯಕತ್ವ ಗುಣ ಉಳಿಸಿಕೊಳ್ಳಲು ನಮ್ಮ ಜತೆ ಕೈ ಜೋಡಿಸಿ ಎಂದು ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಮನವಿ ಮಾಡುತ್ತೇನೆ. ನಾನು ನಿಮ್ಮ ಸಹೋದರನಾಗಿ ನಿಮ್ಮ ಶಕ್ತಿ ಗುರುತಿಸಿ ಈ ಜಿಲ್ಲೆಯ ಅಭಿವೃದ್ಧಿ ಮಾಡುತ್ತೇನೆ. ನೀವೆಲ್ಲರೂ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಬೇಕು. ಸಮಾನ ಮನಸ್ಕರಿಗೆ ಈ ಮೂಲಕ ಮುಕ್ತ ಆಹ್ವಾನ ನೀಡುತ್ತೇನೆ.
ಆಮ್ ಆದ್ಮಿ ಪಕ್ಷ ದೇಶದಲ್ಲಿ ಇಂಡಿಯಾ ಮೈತ್ರಿಕೂಟದಲ್ಲಿ ಕೆಲಸ ಮಾಡುತ್ತಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಾಕ್ಷರಾದ ಭೈರೇಗೌಡರ ನೇತೃತ್ವದಲ್ಲಿ ಎಲ್ಲಾ ಮುಖಂಡರು ನಮಗೆ ಬೆಂಬಲ ಘೋಷಿಸಿದ್ದಾರೆ. ಹೀಗಾಗಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ, ರಾಜ್ಯ ಹಾಗೂ ಜಿಲ್ಲಾ ನಾಯಕರುಗಳಿಗೆ ಅಭಿನಂದನೆ ತಿಳಿಸುತ್ತೇನೆ.
ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ ರಕ್ಷಣೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಕೇಂಜ್ರಿವಾಲ್ ಅವರು ಪ್ರತಿ ಹಂತದಲ್ಲಿ ಬಿಜೆಪಿ ವಿರುದ್ಧ ಹೋರಾಟ ಮಾಡುತ್ತಾ ದೆಹಲಿ ಹಾಗೂ ಪಂಜಾಬ್ ನಲ್ಲಿ ಜನಪರ ಕಾರ್ಯಕ್ರಮಗಳನ್ನು ನೀಡಿ ಉತ್ತಮ ಆಡಳಿತ ಸರ್ಕಾರ ನಡೆಸುತ್ತಿದ್ದಾರೆ. ಆಮೂಲಕ ಜನಮನ್ನಣೆ ಗಳಿಸಿದ್ದಾರೆ. ಅವರು ಎಲ್ಲಿ ತಮ್ಮ ಪ್ರಾಬಲ್ಯ ವಿಸ್ತರಿಸುತ್ತಾರೋ ಎಂಬ ಕಾರಣಕ್ಕೆ ಅವರ ವಿರುದ್ಧ ಇಡಿ, ಸಿಬಿಐ ತನಿಖಾ ಸಂಸ್ಥೆಗಳ ಮೂಲಕ ಅವರನ್ನು ವಶಕ್ಕೆ ಪಡೆದು ಜೈಲಿಗೆ ಕಳಿಸಿದ್ದಾರೆ.












Click it and Unblock the Notifications