ಗೌಡ್ರು ನೀಡಿದ ಶಾಕ್ : ಪಟ್ಟಿಯಲ್ಲಿ ಎಚ್ಡಿಕೆ, ಜಮೀರ್ ಇಬ್ರೂ ಇಲ್ಲ
ಎಲ್ಲರ ನಿರೀಕ್ಷೆ ಹುಸಿಯಾಗುವಂತೆ ಜೆಡಿಎಸ್ ವರಿಷ್ಠ ದೇವೇಗೌಡ ಕೋರ್ ಕಮಿಟಿ ಪಟ್ಟಿಯನ್ನು ಘೋಷಿಸಿದ್ದಾರೆ. ಗುರುವಾರ (ಅ 16) ನಡೆದ ಪಕ್ಷದ ಸಭೆಯಲ್ಲಿ ಹನ್ನೊಂದು ಸದಸ್ಯರ ಸಮಿತಿಯನ್ನು ಗೌಡ್ರು ರಚಿಸಿದ್ದಾರೆ.
ಮೇಲ್ಮನೆ ಸದಸ್ಯ ಬಸವರಾಜ್ ಹೊರಟ್ಟಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಇದರಲ್ಲಿ ಗೌಡ್ರ ಕುಟುಂಬದ ಯಾವೊಬ್ಬ ಸದಸ್ಯರೂ ಸ್ಥಾನ ಪಡೆಯಲಿಲ್ಲ. ಜೊತೆಗೆ ಗೌಡ್ರ ಮಾನಸಪುತ್ರ ಎಂದೇ ಬಿಂಬಿತರಾಗಿರುವ ವೈಎಸ್ವಿ ದತ್ತಾ ಅವರಿಗೂ ಸ್ಥಾನ ಸಿಗದಿರುವುದು ಪಕ್ಷದೊಳಗೆ ಮತ್ತು ಹೊರಗೆ ಎಲ್ಲರಿಗೂ ಆಶ್ಚರ್ಯ ಉಂಟು ಮಾಡಿದೆ.
ಹಿರಿಯರಾದ ಎಂ ಸಿ ನಾಣಯ್ಯ ಅವರನ್ನೂ ಕಡೆಗಣಿಸಲಾಗಿದೆ. ಚೆಲುವರಾಯಸ್ವಾಮಿ, ಜಮೀರ್ ಅಹಮದ್, ಎಚ್ ಸಿ ಬಾಲಕೃಷ್ಣ, ಇಕ್ಬಾಲ್ ಅನ್ಸಾರಿ ಮತ್ತು ಅಬ್ದುಲ್ ಅಜೀಂ ಅವರಿಗೂ ಕಮಿಟಿಯಲ್ಲಿ ಸ್ಥಾನ ಸಿಗಲಿಲ್ಲ. ಕಾರ್ಯಕರ್ತರ ವಿಶ್ವಾಸ ಪಡೆದುಕೊಂಡು, ಪಕ್ಷವನ್ನು ಸಂಘಟಿಸಿ ಎಂದು ಕಿವಿಮಾತು ಹೇಳಿದ್ದ ನಾಯಕರಿಗೂ ಪಟ್ಟಿಯಲ್ಲಿ ಸ್ಥಾನ ಸಿಗಲಿಲ್ಲ.

ದೇವೇಗೌಡ್ರ ಪರವಾಗಿ ಜೆಡಿಎಸ್ ಹಂಗಾಮಿ ಅಧ್ಯಕ್ಷ ನಾರಾಯಣ ರಾವ್ ಪ್ರಕಟಿಸಿದ ಹನ್ನೊಂದು ಸದಸ್ಯರ ಕೋರ್ ಕಮಿಟಿ ಪಟ್ಟಿ ಇಂತಿದೆ:
1. ಬಸವರಾಜ್ ಹೊರಟ್ಟಿ (ಮೇಲ್ಮನೆ ಸದಸ್ಯ)
2. ಸಿ ಎಸ್ ಪುಟ್ಟರಾಜು (ಮಂಡ್ಯ ಸಂಸದ)
3. ಬಂಡೆಪ್ಪ ಕಾಶೆಂಪುರ್ (ಮಾಜಿ ಶಾಸಕ)
4. ಎಚ್ ಕೆ ಕುಮಾರಸ್ವಾಮಿ (ಸಕಲೇಶಪುರ ಶಾಸಕ)
5. ವೆಂಕಟರಾವ್ ನಾಡಗೌಡ (ಮಾಜಿ ಶಾಸಕ)
6. ಜಿ ಕೆ ವೆಂಕಟಶಿವ ರೆಡ್ಡಿ (ಮಾಜಿ ಶಾಸಕ)
7. ಮಧು ಬಂಗಾರಪ್ಪ (ಸೊರಬ ಶಾಸಕ)
8. ಚಿಕ್ಕಮಾದು ( ಹೆಗ್ಗಡೆದೇವನಕೋಟೆ ಶಾಸಕ)
9. ಡಾ. ಸುಬ್ರಮಣ್ಯ (ಬಿಬಿಎಂಪಿ ಮಾಜಿ ಆಯುಕ್ತ)
10. ಅಪ್ಸರ್ ಆಘಾ (ಮೇಲ್ಮನೆ ಸದಸ್ಯ)
11. ಸಿರಿವಂತ್ ಪಾಟೀಲ್ (ಉತ್ತರಕರ್ನಾಟಕ ಜೆಡಿಎಸ್ ಮುಖಂಡ)












Click it and Unblock the Notifications