ಕಾಂಗ್ರೆಸ್ ಜೊತೆಗಿನ ಮೈತ್ರಿಗೆ ಜೆಡಿಎಸ್‌ನಿಂದ ಆಹ್ವಾನ!
Recommended Video

ಬೆಂಗಳೂರು, ಫೆಬ್ರವರಿ 27 : ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆ ನಡೆಯುವ ಸಾಧ್ಯತೆ ಇದೆ. ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ಬಯಸಿದೆ.
ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ 4 ಸದಸ್ಯರನ್ನು ಆಯ್ಕೆ ಮಾಡಲು ಮಾರ್ಚ್ 23ರಂದು ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಒಬ್ಬ ಸದಸ್ಯರನ್ನು ರಾಜ್ಯಸಭೆಗೆ ಕಳುಹಿಸಲು ಜೆಡಿಎಸ್ ಸಿದ್ಧತೆ ನಡೆಸುತ್ತಿದೆ.
ಜೆಡಿಎಸ್ ಪಕ್ಷಕ್ಕೆ ಶಾಸಕರ ಕೊರತೆ ಇದೆ. 7 ಶಾಸಕರನ್ನು ಪಕ್ಷ ಅಮಾನತು ಮಾಡಿದೆ. ಒಬ್ಬರು ಶಾಸಕರು ನಿಧನ ಹೊಂದಿದ್ದಾರೆ. ಇಬ್ಬರು ಶಾಸಕರು ರಾಜೀನಾಮೆ ನೀಡಿ, ಪಕ್ಷ ತೊರೆದಿದ್ದಾರೆ. ಮತ್ತೊಬ್ಬರು ಪಕ್ಷ ತೊರೆಯಲು ಸಿದ್ಧರಾಗಿದ್ದಾರೆ.
ಆದ್ದರಿಂದ, ಕಾಂಗ್ರೆಸ್ ಪಕ್ಷದ ಬೆಂಬಲ ಪಡೆದು ಒಬ್ಬರು ಸದಸ್ಯರನ್ನು ರಾಜ್ಯಸಭೆಗೆ ಕಳುಹಿಸಲು ಜೆಡಿಎಸ್ ಮುಂದಾಗಿದೆ. ಈ ಮೈತ್ರಿ ಮುಂದಿನ ವಿಧಾನಸಭೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ?. ವಿಧಾನಸಭೆ ಚುನಾವಣೆಯಲ್ಲಿಯೂ ಮೈತ್ರಿ ಮುಂದುವರೆಯಲಿದೆಯೇ? ಎಂಬುದನ್ನು ಕಾದು ನೋಡಬೇಕು...

ಅಭ್ಯರ್ಥಿ ಯಾರು?
ಪಕ್ಷದ ಮಹಾ ಪ್ರಧಾನ ಕಾರ್ಯದರ್ಶಿ, ಮುಸ್ಲಿಂ ಸಮುದಾಯದ ಮುಖಂಡ ಬಿ.ಎಂ.ಫಾರೂಕ್ ಅವರು ರಾಜ್ಯಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ. ಉದ್ಯಮಿಯಾಗಿರುವ ಫಾರೂಕ್ ಕಳೆದ ರಾಜ್ಯಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದರು. 8 ಶಾಸಕರು ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿದ ಕಾರಣದಿಂದಾಗಿ ಫಾರೂಕ್ ಅವರಿಗೆ ಸೋಲಾಗಿತ್ತು.

ಜೆಡಿಎಸ್ ಪಕ್ಷದಿಂದ ಆಹ್ವಾನ
ರಾಜ್ಯಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್‌ಗೆ ಆಹ್ವಾನ ನೀಡಲಾಗಿದೆ. ಈಗ ಚೆಂಡು ಕಾಂಗ್ರೆಸ್ ಅಂಗಳದಲ್ಲಿದ್ದು ಪಕ್ಷದ ಹೈಕಮಾಂಡ್ ಒಪ್ಪಿಗೆ ನೀಡಿದರೆ ಮೈತ್ರಿ ಆಗಲಿದೆ.

ಎಚ್.ಡಿ.ಕುಮಾರಸ್ವಾಮಿ ಹೇಳುವುದೇನು?
'ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗೆ ಬೆಂಬಲ ನೀಡಿ, ಭವಿಷ್ಯದಲ್ಲಿ ನಮ್ಮ ಬೆಂಬಲ ನಿಮಗೆ ಸಿಗಲಿದೆ' ಎಂದು ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ನಾಯಕರಿಗೆ ಹೇಳಿದ್ದಾರೆ.

ಮಾರ್ಚ್ 23ರಂದು ಚುನಾವಣೆ
ಮಾರ್ಚ್ 23ರಂದು ರಾಜ್ಯಸಭೆಗೆ ಕರ್ನಾಟಕ ವಿಧಾನಸಭೆಯಿಂದ 4 ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯಲಿದೆ. ಒಬ್ಬ ಅಭ್ಯರ್ಥಿ ಆಯ್ಕೆಯಾಗಲು 45 ಮತಗಳು ಬೇಕಾಗಿದೆ.

ಪಕ್ಷಗಳ ಬಲಾಬಲ
2013ರ ಚುನಾವಣೆಯಲ್ಲಿ ಕಾಂಗ್ರೆಸ್ 122, ಬಿಜೆಪಿ ಮತ್ತು ಜೆಡಿಎಸ್ 40 ಸ್ಥಾನಗಳಲ್ಲಿ ಜಯಗಳಿಸಿದ್ದವು.
ಈಗ ಕಾಂಗ್ರೆಸ್ 120 (ಖಮರುಲ್ ಇಸ್ಲಾಂ ನಿಧನ, ಎ.ಎಸ್.ಪಾಟೀಲ್ ನಡಹಳ್ಳಿ ಜೆಡಿಎಸ್ ಬೆಂಬಲಿಸಿದ್ದಾರೆ)., ಬಿಜೆಪಿ 40, ಜೆಡಿಎಸ್ 30 ಸದಸ್ಯ ಬಲ ಹೊಂದಿದೆ (7 ಶಾಸಕರು ಅಮಾನತು, ಇಬ್ಬರ ರಾಜೀನಾಮೆ, ಚಿಕ್ಕಮಾಧು ಅಕಾಲಿಕ ನಿಧನ). ಬಸವಕಲ್ಯಾಣ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ರಾಜ್ಯಸಭೆ ಚುನಾವಣೆಗೆ ಮೊದಲು ಜೆಡಿಎಸ್ ತೊರೆಯಲಿದ್ದು, ಸದಸ್ಯ ಬಲ 29ಕ್ಕೆ ಇಳಿಕೆಯಾಗಲಿದೆ.

ಇಬ್ಬರನ್ನು ಆರಿಸಿ ಕಳಿಸಬಹುದು
ವಿಧಾನಸಭೆಯಲ್ಲಿ ಕಾಂಗ್ರೆಸ್ ಹೊಂದಿರುವ ಬಲದ ಆಧಾರದ ಮೇಲೆ ಇಬ್ಬರು ಸದಸ್ಯರನ್ನು ಆರಿಸಿ ರಾಜ್ಯಸಭೆಗೆ ಕಳಿಸಬಹುದಾಗಿದೆ. ನಂತರವೂ ಹೆಚ್ಚಿನ ಶಾಸಕರು ಉಳಿದುಕೊಳ್ಳುತ್ತಾರೆ. ಅವರ ಬೆಂಬಲ ಪಡೆದು ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಲೆಕ್ಕಾಚಾರ ಹಾಕಿದೆ.

ಪಕ್ಷೇತರ ಅಭ್ಯರ್ಥಿಗಳ ಬಲ
ವಿಧಾನಸಭೆಯ ಸದಸ್ಯ ಬಲದ ಆಧಾರದ ಮೇಲೆ ಮತ್ತು ಪಕ್ಷೇತರ ಅಭ್ಯರ್ಥಿಗಳ ಬೆಂಬಲ ಪಡೆದು ಬಿಜೆಪಿ ಒಬ್ಬರು ಸದಸ್ಯರನ್ನು ರಾಜ್ಯಸಭೆಗೆ ಆರಿಸಿ ಕಳಿಸಬಹುದಾಗಿದೆ.

ವಿಧಾನಸಭೆ ಚುನಾವಣೆಯಲ್ಲೂ ಮೈತ್ರಿ?
ಈಗಾಗಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರವಿದೆ. ರಾಜ್ಯಸಭೆ ಚುನಾವಣೆಯಲ್ಲಿಯೂ ಮೈತ್ರಿ ಬಗ್ಗೆ ಮಾತುಕತೆ ನಡೆಯುತ್ತಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿಯೂ ಮೈತ್ರಿ ನಡೆಯಲಿದೆಯೇ? ಕಾದು ನೋಡಬೇಕು.












Click it and Unblock the Notifications