ಕೇಳಿದ್ದು ಮೀಸಲಾತಿ, ಕೊಟ್ಟಿದ್ದು ಲಾಠಿ ಏಟು: ಜೆಡಿಎಸ್ ಕಿಡಿ
ಬೆಳಗಾವಿಯಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಈ ಘಟನೆಯನ್ನು ಜೆಡಿಎಸ್ ಪಕ್ಷ ಖಂಡಿಸಿದ್ದು, ಕೇಳಿದ್ದು ಮೀಸಲಾತಿ ಕಾಂಗ್ರೆಸ್ ಸರ್ಕಾರ ಕೊಟ್ಟಿದ್ದು ಲಾಠಿ ಏಟು ಎಂದು ತಿವಿದಿದೆ.
ಪಂಚಮಸಾಲಿ ಹೋರಾಟಗಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿರುವುದು ಅಮಾನವೀಯ. ರಕ್ಷಣೆ ನೀಡಬೇಕಾದ ಆರಕ್ಷಕರ ಈ ರೀತಿಯ ಮೃಗೀಯ ವರ್ತನೆ ಖಂಡನೀಯ ಹಾಗೂ ಕಾಂಗ್ರೆಸ್ ಸರ್ಕಾರದ ಈ ನಡೆ ಹೇಡಿತನದ ಕೃತ್ಯ ಎಂದು ಖಂಡಿಸಿದೆ. ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ, ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಆದನ್ನು ಬಿಟ್ಟು ಸರ್ವಾಧಿಕಾರಿಯಂತೆ ಸಿದ್ದರಾಮಯ್ಯ ಸರ್ಕಾರ ಪಂಚಮಸಾಲಿಗಳ ಮೇಲೆ ಲಾಠಿ ಪ್ರಯೋಗಿಸಿ ದಮನಕಾರಿ ನೀತಿ ಅನುಸರಿಸಿದೆ ಎಂದು ಹೇಳಿದೆ.

ಸುವರ್ಣ ಸೌಧದ ಎದುರು 2ಎ ಮೀಸಲಾತಿಗೆ ಆಗ್ರಹಿಸಿ ಕೂಡಲಸಂಗಮ ಪಂಚಮಸಾಲಿ ಗುರುಪೀಠದ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಪಂಚಮಸಾಲಿಗಳ ಹೋರಾಟವನ್ನು ಹತ್ತಿಕ್ಕಲು ಸರ್ಕಾರ, ಪೊಲೀಸರನ್ನು ಬಳಸಿ ಬಲ ಪ್ರಯೋಗ ಮಾಡಿರುವುದು ನಾಚಿಕೆಗೇಡು ಎಂದು ವಾಗ್ದಾಳಿ ನಡೆಸಿದೆ.
ಪ್ರತಿಭಟನಾಕಾರರನ್ನು ಬೆನ್ನಟ್ಟಿ ರಕ್ತ ಬರುವಂತೆ ಪೊಲೀಸರು ಲಾಠಿಯಿಂದ ಹೊಡೆದಿರುವುದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ತುಘಲಕ್ ಆಡಳಿತಕ್ಕೆ ಸಾಕ್ಷಿ. ಕಾಂಗ್ರೆಸ್ ಸರ್ಕಾರದ ಕೃಪಾ ಪೋಷಿತ ಲಾಠಿ ಏಟಿನ ದೌರ್ಜನ್ಯ ಮತ್ತು ದಬ್ಬಾಳಿಕೆಗೆ ಮುಂದಿನ ದಿನಗಳಲ್ಲಿ ರಾಜ್ಯದ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಜೆಡಿಎಸ್ ಎಚ್ಚರಿಕೆ ನೀಡಿದೆ.
ಹಿಟ್ಲರ್ ಸರ್ಕಾರ ಎಂದು ಎಚ್‌ಡಿಕೆ
ಪಂಚಮಸಾಲಿ ಬಂಧುಗಳ ಹೋರಾಟವನ್ನು ಹತ್ತಿಕ್ಕಲು ರಾಜ್ಯ ಕರ್ನಾಟಕ ಸರ್ಕಾರವು ಅಡಾಲ್ಫ್ ಹಿಟ್ಲರ್ ಮಾರ್ಗವನ್ನು ಆಯ್ಕೆ ಮಾಡಿಕೊಂಡಿರುವುದು ಅತ್ಯಂತ ದುರದೃಷ್ಟಕರ. ಸಂತರು, ಪಂಚಮಸಾಲಿ ಸಮುದಾಯ ಜಗದ್ಗುರುಗಳಾದ ಶ್ರೀಬಸವ ಮೃತ್ಯುಂಜಯ ಮಹಾಸ್ವಾಮೀಜಿಗಳನ್ನು ಅತ್ಯಂತ ಹೇಯವಾಗಿ ನಡೆಸಿಕೊಂಡಿರುವುದು ನನಗೆ ಅತೀವ ನೋವುಂಟು ಮಾಡಿದೆ. ಇದು ಶಿಲಾಯುಗ ಕಾಲದ ಮನಃಸ್ಥಿತಿಯ ಸರ್ಕಾರ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ತಮ್ಮ ಬೇಡಿಕೆಗಳ ಬಗ್ಗೆ ಸ್ವಾಮೀಜಿ ಅವರು ಸಮುದಾಯದ ಪ್ರಮುಖರು ನಿರಂತರವಾಗಿ ಸರಕಾರಕ್ಕೆ ಮನವಿ ಮಾಡುತ್ತಲೇ ಇದ್ದರೂಸರಕಾರ ಕಿವುಡಾಗಿತ್ತು, ನಿರ್ಲಕ್ಷ್ಯ ವಹಿಸಿತ್ತು. ಶಾಂತಿಯುತವಾಗಿ ಪ್ರತಿಭಟಿಸಲು ಬಂದ ಸ್ವಾಮೀಜಿಗಳು, ಸಮುದಾಯದ ನಾಯಕರು, ಜನತೆಯ ಮೇಲೆ ದಬ್ಬಾಳಿಕೆ ನಡೆಸಿ ಪೊಲೀಸ್ ವಶಕ್ಕೆ ತೆಗೆದುಕೊಂಡಿರುವುದು ಖಂಡನೀಯ ಎಂದು ಹೇಳಿದ್ದಾರೆ. ಸರ್ಕಾರವೇ ಶಾಂತಿ ಕದಡುವ ದುಷ್ಪ್ರಯತ್ನ ಮಾಡಿದರೆ, ಅದಕ್ಕೆ ಸರಕಾರವೇ ಪೂರ್ಣ ಹೊಣೆ ಎಂದು ಎಚ್ಚರಿಸಿದ್ದಾರೆ.
ಕೂಡಲೇ ಸ್ವಾಮೀಜಿ ಅವರ ಹಾಗೂ ಸಮುದಾಯದ ಕ್ಷಮೆ ಕೇಳಬೇಕು ಹಾಗೂ ಅವರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ತುರ್ತು ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ. ಸದ್ಯ ಈ ಲಾಠಿ ಚಾರ್ಜ್ ವಿಚಾರವು ರಾಜಕೀಯವಾಗಿ ಕಿಡಿ ಹೊತ್ತಿಕೊಂಡಿದೆ. ಬೆಳಗಾವಿ ಅಧಿವೇಶನ ಅವಧಿಯಲ್ಲೇ ಈ ಘಟನೆಯು ಹೊತ್ತಿ ಉರಿಯುವಂತೆ ಮಾಡಿದೆ.












Click it and Unblock the Notifications