ಸರ್ಕಾರ ಕೆಡವಲು ಯತ್ನ: ಬಿಜೆಪಿ ವಿರುದ್ಧ ಸಭಾಧ್ಯಕ್ಷರಿಗೆ ಜೆಡಿಎಸ್ ದೂರು
ಬೆಂಗಳೂರು, ಸೆಪ್ಟೆಂಬರ್ 21: ಬಿಜೆಪಿ ರಾಜ್ಯ ಮುಖಂಡರು ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ಬೆನ್ನಲ್ಲೆ ಜೆಡಿಎಸ್ ಪಕ್ಷವು ಬಿಜೆಪಿ ವಿರುದ್ಧ ಸಭಾಧ್ಯಕ್ಷರಿಗೆ ದೂರು ನೀಡಿದೆ.
ಬಿಜೆಪಿಯು ಆಪರೇಶನ್ ಕಮಲದ ಮೂಲಕ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಶಾಸಕರುಗಳಿಗೆ ಹಣದ ಆಮೀಷ, ಅಧಿಕಾರದ ಆಮೀಷ ತೋರಿಸಿ ಪಕ್ಷಾಂತರಕ್ಕೆ ಪ್ರೇರೇಪಿಸುತ್ತಿದೆ ಎಂದು ಆರೋಪಿಸಿ ಜೆಡಿಎಸ್ ಪಕ್ಷದ ವಕ್ತಾರ ರಮೇಶ್ ಬಾಬು ಅವರು ಸಭಾಧ್ಯಕ್ಷ ರಮೇಶ್ ಕುಮಾರ್ ಅವರಿಗೆ ದೂರು ನೀಡಲಾಗಿದೆ.
ವಿರೋಧ ಪಕ್ಷವಾದ ಬಿಜೆಪಿಯು ಸರ್ಕಾರದ ಯೋಜನೆಗಳಿಗೆ ಸಹಕಾರ ನೀಡುವ ಜೊತೆಗೆ, ರಚನಾತ್ಮಕವಾಗಿ ಟೀಕೆ-ಟಿಪ್ಪಣಿಗಳನ್ನು ಮಾಡುತ್ತಾ ಸರ್ಕಾರವನ್ನು ಸರಿದಾರಿಯಲ್ಲಿ ಕರೆದುಕೊಂಡು ಹೋಗಬೇಕು ಅದನ್ನು ಬಿಟ್ಟು ಹೀಗೆ ಸರ್ಕಾರವನ್ನು ಬೀಳಿಸಲು ಯತ್ನಿಸುವುದು ಅಪರಾಧ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.

ಕಳೆದ ಒಂದು ತಿಂಗಳಿನಿಂದಲೂ ಬಿಜೆಪಿಯು ಸರ್ಕಾರವನ್ನು ಬೀಳಿಸಲು ಯತ್ನಿಸುತ್ತಿದೆ. ಜೆಡಿಎಸ್ ಪಕ್ಷದ ಶಾಸಕ ಕುಮಾರಸ್ವಾಮಿಗೆ 30 ಕೋಟಿ ರೂಪಾಯಿ ಆಮಿಷ ಒಡ್ಡಿದೆ. ಜೊತೆಗೆ ನಾಗಠಾಣಾ ಶಾಸಕ ದೇವಾನಂದ ಚೌಹಾಣ್, ನೆಲಮಂಗಲದ ಕೆ.ಶ್ರೀನಿವಾಸಮೂರ್ತಿ ಅವರುಗಳಿಗೂ ಆಮೀಷ ಒಡ್ಡಿದ್ದಾರೆ ಎಂದು ಅವರು ಲಿಖಿತ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕಾಂಗ್ರೆಸ್‌ನ ಚಿಕ್ಕಮಾದು, ಎಂಟಿಬಿ ನಾಗರಾಜು, ರಹೀಂಖಾನ್, ಬಿಸಿ ಪಾಟೀಲ್, ಶಾಸಕ ಶಿವಳ್ಳಿ ಅವರಿಗೂ ಬಿಜೆಪಿ ಆಮೀಷ ಒಡ್ಡಿದೆ ಎಂದು ದೂರಿನಲ್ಲಿ ಹೇಳಿದ್ದು. ಬಿಜೆಪಿಯು ಕೆಲವು ಶಾಸಕರನ್ನು ಸೆಳೆಯಲು ಹಾಗೂ ರಾಜೀನಾಮೆ ಕೊಡಿಸಲು ಬೆದರಿಕೆ ತಂತ್ರಗಳನ್ನೂ ಅನುಸರಿಸಿದೆ ಎಂದು ಅವರು ಹೇಳಿದ್ದಾರೆ.

'ಸಭಾಧ್ಯಕ್ಷರಾದ ತಾವುಗಳು ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆ ಹಾಗೂ ಸಂಸದೀಯ ವ್ಯವಸ್ಥೆಯಲ್ಲಿ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವ ಅತಿ ಉನ್ನತ ಸ್ಥಾನದಲ್ಲಿದ್ದೀರಿ. ಹಾಗಾಗಿ ಬೆದರಿಕೆ, ರಾಜಕೀಯ ಪ್ರಭಾವ, ಒತ್ತಡ ಅಥವಾ ಹಣದ ಆಮಿಷಗಳಿಗೆ ಶಾಸಕರ ರಾಜೀನಾಮೆ ನೀಡುವುದನ್ನು ತಡೆಯಬೇಕು' ಎಂದು ಜೆಡಿಎಸ್ ರಮೇಶ್ ಕುಮಾರ್ ಅವರ ಬಳಿ ಮನವಿ ಮಾಡಿದೆ.












Click it and Unblock the Notifications