ಗೌಡರಿಗೆ ಕೈಕೊಟ್ಟ ಶಿವಾನಂದ ನಾಯ್ಕ್, ನಾಮಪತ್ರ ವಾಪಸ್

Posted By:
Subscribe to Oneindia Kannada

ಉತ್ತರ ಕನ್ನಡ, ಮಾ. 29 : ಲೋಕಸಭೆ ಚುನಾವಣೆಗೆ ಪಕ್ಷದ ನಾಯಕರು ಆರ್ಥಿಕ ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿರುವ ಉತ್ತರ ಕನ್ನಡ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶನಿವಾರ ತಮ್ಮ ನಾಮಪತ್ರ ಹಿಂಪಡೆದಿದ್ದಾರೆ. ಇದರಿಂದ ಬಿಜೆಪಿಯ ಅನಂತ ಕುಮಾರ್ ಹೆಗ್ಡೆ ಮತ್ತು ಕಾಂಗ್ರೆಸ್ ನ ಪ್ರಶಾಂತ್ ದೇಶಪಾಂಡೆ ನಡುವೆ ನೇರ ಪೈಪೋಟಿ ನಡೆಯಲಿದೆ.

ಲೋಕಸಭೆ ಚುಣಾವಣೆಯ ನಾಮಪತ್ರ ವಾಪಸ್ ಪಡೆಯಲು ಶನಿವಾರ ಕೊನೆಯ ದಿನವಾಗಿತ್ತು. ಅಂತಿಮ ಗಡುವು ಮುಗಿಯಲು ಕೆಲವು ಗಂಟೆಗಳು ಬಾಕಿ ಇರುವಾಗ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ಜೆಡಿಎಸ್ ಅಭ್ಯರ್ಥಿ ಶಿವಾನಂದ ನಾಯ್ಕ್ ತಮ್ಮ ನಾಮಪತ್ರವನ್ನು ವಾಪಸ್ ಪಡೆದು, ಅಂತಿಮ ಕ್ಷಣದಲ್ಲಿ ಚುನಾವಣಾ ಕಣದಿಂದ ಹಿಂದೆ ಸರಿದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿ]

Shivananda Nayak

ಶನಿವಾರ ಬೆಳಗ್ಗೆಯಿಂದಲೇ ಬೆಂಬಲಿಗರ ಸಭೆ ನಡೆಸುತ್ತಿದ್ದ ಶಿವಾನಂದ ನಾಯ್ಕ್, 2.30ರ ಸುಮಾರಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ತಮ್ಮ ನಾಮಪತ್ರವನ್ನು ವಾಪಸ್ ಪಡೆದರು. ಪಕ್ಷದ ಹಿರಿಯ ನಾಯಕರು ತಮಗೆ ಚುನಾವಣೆಯಲ್ಲಿ ಸಹಕಾರ ನೀಡುತ್ತಿಲ್ಲ. ಚುನಾವಣಾ ಖರ್ಚಿಗಾಗಿ ತಮಗೆ ಹಣ ನೀಡುತ್ತಿಲ್ಲ. ಆದ್ದರಿಂದ ನಾಮಪತ್ರ ವಾಪಸ್ ಪಡೆಯುತ್ತಿದ್ದೇನೆ ಎಂದು ನಾಯ್ಕ್ ಹೇಳಿದರು.

ಕಳೆದ ಜನವರಿ ತಿಂಗಳಿನಲ್ಲಿ ಬಿಜೆಪಿ ತೊರೆದು ಮಾಜಿ ಸಚಿವ ಶಿವಾನಂದ ನಾಯ್ಕ್ ಜೆಡಿಎಸ್ ಸೇರಿದ್ದರು. ಸ್ವತಃ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಶಿವಾನಂದ ನಾಯ್ಕ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದರು. ಅಲ್ಲದೇ ಲೋಕಸಭೆ ಚುನಾವಣೆಯಲ್ಲಿ ಉತ್ತರ ಕನ್ನಡ ಕ್ಷೇತ್ರದ ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಮೊದಲ ಪಟ್ಟಿಯಲ್ಲಿಯೇ ನಾಯ್ಕ್ ಹೆಸರನ್ನು ಘೋಷಣೆ ಮಾಡಿದ್ದರು.

ಕುಮಾರಸ್ವಾಮಿ ಗರಂ : ಶಿವಾನಂದ ನಾಯ್ಕ್ ನಾಮಪತ್ರ ವಾಪಸ್ ಪಡೆದಿರುವುದಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೊದಲು ಕ್ಷೇತ್ರದಲ್ಲಿ ತಮಗೆ ಟಿಕೆಟ್ ನೀಡಿ ಎಂದು ಹಲವಾರು ಅಭ್ಯರ್ಥಿಗಳು ಮುಂದೆ ಬಂದಿದ್ದರು. ಆದರೆ, ನಾವು ಇವರಿಗೆ ಟಿಕೆಟ್ ನೀಡಿದೆವು, ಅವರು ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಕುಮಾರಸ್ವಾಮಿ ದೂರಿದರು.

ಚುನಾವಣೆ ಖರ್ಚಿಗಾಗಿ ನಾವು ಅವರಿಗೆ ಹಣ ನೀಡಿದ್ದೇವೆ. ಅದನ್ನು ವಾಪಸ್ ನೀಡಿ ನಂತರ ನಮ್ಮ ವಿರುದ್ಧ ಆರೋಪ ಮಾಡಲಿ. ಪಕ್ಷದ ನಾಯಕರು ಚುನಾವಣೆಗೆ ಆರ್ಥಿಕ ಸಹಕಾರ ನೀಡುತ್ತಿಲ್ಲ ಎಂಬ ಶಿವಾನಂದ ನಾಯ್ಕ್ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಸ್ಪರ್ಧಿಸಲು ಇಷ್ಟವಿಲ್ಲದಿದ್ದರೆ ಮೊದಲೇ ತಿಳಿಸಬೇಕಿತ್ತು ಎಂದು ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚುನಾವಣಾ ಕಣ : ಶಿವಾನಂದ ನಾಯ್ಕ್ ತಮ್ಮ ನಾಮಪತ್ರವನ್ನು ವಾಪಸ್ ಪಡೆದಿರುವುದರಿಂದ ಬಿಜೆಪಿ ಅಭ್ಯರ್ಥಿ ಅನಂತ್ ಕುಮಾರ್ ಹೆಗ್ಡೆ ಮತ್ತು ಕಾಂಗ್ರೆಸ್ ಅಭ್ಯರ್ಥಿ ಪ್ರಶಾಂತ್ ದೇಶಪಾಂಡೆ ನಡುವೆ ನೇರ ಪೈಪೋಟಿ ನಡೆಯುವ ಸಾಧ್ಯತೆ ಇದೆ. [ಹೆಗ್ಡೆ, ದೇಶಪಾಂಡೆ ಮುಖಾಮುಖಿ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Elections 2014 : Uttara Kannada Lok Sabha constituency JDS candidate Shivananda Nayak has withdrawn his nomination on Saturday, March 29 at the last date of nomination.
Please Wait while comments are loading...