ಲೋಕಸಭಗೆ ಬಿಜೆಪಿ-ಜೆಡಿಎಸ್ ಮೈತ್ರಿ: ಡಿ ಕೆ ಶಿವಕುಮಾರ್ ಸಿಡಿಸಿದ ಹೊಸ ಬಾಂಬ್ ಏನು?
ಬೆಂಗಳೂರು,ಸೆಪ್ಟೆಂಬರ್ 27: 2024 ರ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಮೂರು ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿದೆ. ಕಾಂಗ್ರೆಸ್ ವಿಧಾನಸಭಾ ಚುನಾವನೆಯಲ್ಲಿ 135 ಸ್ಥಾನಗಳನ್ನ ಗೆಲ್ಲುವ ಮೂಲಕ ಸರ್ಕಾರ ರಚಿಸಿದ್ದು, ಅದರಂತೆ ಲೋಕಸಭಾ ಚುನಾವಣೆಯಲ್ಲೂ 20 ಕ್ಕೂ ಸ್ಥಾನಗಳನ್ನ ಗೆಲ್ಲುವ ಟಾರ್ಗೆಟ್ ಹಾಕಿಕೊಂಡಿದೆ.
ಇನ್ನೂ ಕಾಂಗ್ರೆಸ್ ಠಕ್ಕರ್ ಕೊಡಲು ಬಿಜೆಪಿ ಹಾಗೂ ಜೆಡಿಎಸ್ ಲೋಕಸಭಾ ಚುನಾವಣೆಗಾಗಿ ಅಧಿಕೃತವಾಗಿ ಮೈತ್ರಿಗೆ ಸಜ್ಜಾಗಿದ್ದು, ಇತ್ತ ಕಮಲ ದಳ ಮೈತ್ರಿಯಿಂದಾಗಿ ಹಲವು ನಾಯಕರು ಅಸಮಾಧಾನಗೊಂಡಿದ್ದು, ಹಲವು ನಾಯಕರು ಬಿಜೆಪಿ ಹಾಗೂ ಜೆಡಿಎಸ್ ಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿದ್ದಾರೆ.

ಹೌದು, ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸಮ್ಮುಖದಲ್ಲಿ ಹಲವು ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾದರು. ಈ ವೇಳೆ ಮಾಧ್ಯಮಗಳ ಜೊತೆಗೆ ಡಿ ಕೆ ಶಿವಕುಮಾರ್ ಮಾತನಾಡಿ, ಮಂಗಳವಾರ ರಾತ್ರಿ ಮೂರು ಜನ ಮಾಜಿ ಶಾಸಕರ ಜೊತೆ ಮಾತುಕತೆ ನಡೆಸಿದ್ದೇನೆ, ಮುಂದಿನ ದಿನಗಳಲ್ಲಿ ಪಕ್ಷ ಸೇರುವವರ ಸಂಖ್ಯೆ ಹೆಚ್ಚಾಗಲಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ನಾವೆಲ್ಲಾ ಜಾತ್ಯಾತೀತ ಸರ್ಕಾರ ಇರಬೇಕು ಎಂದು ಹೋರಾಟ ಮಾಡಿದೆವು. ಈಗ ಸರ್ಕಾರ ಬೀಳಿಸಿದವರ ಜೊತೆಯಲ್ಲೇ ಕೈ ಜೋಡಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ ಅವರು, ಮೈತ್ರಿಯನ್ನು ವಿರೋಧಿಸಿ ಪಕ್ಷ ತೊರೆದು ಬರುತ್ತಿದ್ದಾರೆ. ನಮಗೆ ಮುಖಂಡರಿಗಿಂತ ಕಾರ್ಯಕರ್ತರು ಬಹಳ ಮುಖ್ಯ, ಶಿವಮೊಗ್ಗ, ರಾಮನಗರ, ಬೆಂಗಳೂರು ನಗರ ಹೀಗೆ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ತಂಡೋಪತಂಡವಾಗಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಸಾಮರ್ಥ್ಯವಿರುವ ಅಭ್ಯರ್ಥಿಗಳೆಲ್ಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಹೇಳಿದರು.
ರಾಜಕಾರಣದಲ್ಲಿ ಸಿದ್ದಾಂತ ಮುಖ್ಯವಲ್ಲ ಎನ್ನುವ ಕೆಟ್ಟ ಸಂದೇಶವನ್ನು ಜೆಡಿಎಸ್- ಬಿಜೆಪಿ ಮೈತ್ರಿ ನೀಡಿದೆ "ಜೆಡಿಎಸ್- ಬಿಜೆಪಿ ಮೈತ್ರಿ ನಂತರ ಪಕ್ಷ ಸೇರುವಂತಹವರ ಸಂಖ್ಯೆ ಹೆಚ್ಚಾಗುತ್ತಿದೆ. ಆಪರೇಷನ್ ಹಸ್ತ ನಾವೆಂದೂ ಮಾಡುವುದಿಲ್ಲ, ನಮ್ಮದು ಕೋ- ಆಪರೇಷನ್ ಎಂದು ಪದೇ, ಪದೇ ಹೇಳುತ್ತಿದ್ದೇನೆ. ಕಾರ್ಯಕರ್ತರ ಮಟ್ಟದಲ್ಲಿ ಪಕ್ಷ ಸೇರ್ಪಡೆಗೆ ಸೂಚನೆ ನೀಡಿದ್ದೇನೆ ಎಂದರು.
ಮಾಜಿ ಆಶ್ರಯ ಸಮಿತಿಯ ಅಧ್ಯಕ್ಷ ಕೆ.ಎಂ.ಹೋಂಬೇಗೌಡ, ಎಪಿಎಂಸಿ ಸದಸ್ಯರಾದ ಟಿ.ಎ.ಮೂರ್ತಿ, ನಿವೃತ್ತ ಪಶುವೈದ್ಯಧಿಕಾರಿ ಡಾ.ರಾಜು, ಸಿಲ್ಕ್ ಮಂದಿರ್ ಮಾಲೀಕರಾದ ತಿಮ್ಮೇಗೌಡ ಅವರು ಸೇರಿದಂತೆ ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾವರೆಕೆರೆ, ಸೂಲಿವಾರ, ಬ್ಯಾಲಾಳು, ದೊಣ್ಣೇನಹಳ್ಳಿ, ಕುರುಬರಪಾಳ್ಯ, ಉದ್ದಂಡಹಳ್ಳಿ, ಗೊಲ್ಲಹಳ್ಳಿ ಗ್ರಾಮಗಳ 70ಕ್ಕೂ ಹೆಚ್ಚು ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷ ಸೇರ್ಪಡೆಯಾದರು.












Click it and Unblock the Notifications