ಪರಿಷತ್ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಬೆಂಗಳೂರು, ನವೆಂಬರ್ 23: ಕರ್ನಾಟಕ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಡಿಸೆಂಬರ್ 10ರಂದು ಚುನಾವಣೆ ನಡೆಯಲಿದೆ. ಡಿಸೆಂಬರ್ 14ರಂದು ಫಲಿತಾಂಶ ಪ್ರಕಟವಾಗಲಿದ್ದು, ನಾಮಪತ್ರಗಳನ್ನು ಸಲ್ಲಿಕೆ ಮಾಡಲು ಇಂದು (ಮಂಗಳವಾರ) ಕೊನೆಯ ದಿನವಾಗಿದೆ.
ವಿಧಾನ ಪರಿಷತ್ ಚುನಾವಣೆಗೆ ಸೋಮವಾರ ರಾತ್ರಿ ಜಾತ್ಯತೀತ ಜನತಾ ದಳ (ಜೆಡಿಎಸ್) ಪಕ್ಷದ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯುತ್ತಿದ್ದು, ಆಡಳಿತ ಪಕ್ಷ ಬಿಜೆಪಿ, ಪ್ರತಿಪಕ್ಷವಾಗಿರುವ ಕಾಂಗ್ರೆಸ್‌ಗೆ ಚುನಾವಣೆ ಪ್ರತಿಷ್ಠೆಯಾಗಿದ್ದರೆ, ಜೆಡಿಎಸ್‌ಗೆ ತನ್ನ ಅಸ್ತಿತ್ವ ಉಳಿಸಿಕೊಳ್ಳುವುದೇ ಸವಾಲಾಗಿದೆ.
ವಿಧಾನ ಪರಿಷತ್ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯನ್ನು ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ಬಿಡುಗಡೆ ಮಾಡಿದ್ದು, ಈ ಕೆಳಕಂಡಂತಿದೆ.

ಅಪ್ಪಾಜಿ ಗೌಡ (ಮಂಡ್ಯ), ಅನಿಲ್ ಕುಮಾರ (ತುಮಕೂರು), ಸಿ.ಎನ್. ಮಂಜೇಗೌಡ (ಮೈಸೂರು), ವಕ್ಕಲೇರಿ ರಾಮು (ಕೋಲಾರ), ಎಚ್.ಎಂ. ರಮೇಶ್ ಗೌಡ (ಬೆಂಗಳೂರು ಗ್ರಾಮಾಂತರ), ಎಚ್.ಯು. ಇಸಾಕ್ ಖಾನ್ (ಕೊಡಗು), ಸೂರಜ್ ರೇವಣ್ಣ (ಹಾಸನ) ಇವರುಗಳು ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿಗಳಾಗಿದ್ದಾರೆ.
ನಾಮಪತ್ರ ಸಲ್ಲಿಸಿರುವ ಸೂರಜ್ ರೇವಣ್ಣ
ವಿಧಾನ ಪರಿಷತ್ ಚುನಾವಣೆ ಮೂಲಕ ಎಚ್. ಡಿ. ದೇವೇಗೌಡರ ಕುಟುಂಬದ ಮತ್ತೊಂದು ಕುಡಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದೆ. ಮಾಜಿ ಸಚಿವ ಎಚ್.ಡಿ. ರೇವಣ್ಣ ಮತ್ತು ಭವಾನಿ ರೇವಣ್ಣ ದಂಪತಿ ಪುತ್ರ ಡಾ. ಸೂರಜ್ ರೇವಣ್ಣ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಶುಕ್ರವಾರವೇ ನಾಮಪತ್ರ ಸಲ್ಲಿಸಿದ್ದಾರೆ.
ಹಾಸನದ ಜೆಡಿಎಸ್ ಅಭ್ಯರ್ಥಿಯಾಗಿ ಸೂರಜ್ ರೇವಣ್ಣ ನಾಮಪತ್ರ ಸಲ್ಲಿಸುವ ಮೂಲಕ ಜೆಡಿಎಸ್‌ನಲ್ಲಿ ಕುಟುಂಬ ರಾಜಕಾರಣ ಮುಂದುವರೆದಿದೆ. ಎಚ್. ಡಿ. ರೇವಣ್ಣ, ತಾಯಿ ಭವಾನಿ ರೇವಣ್ಣ, ಸೋದರ ಪ್ರಜ್ವಲ್ ರೇವಣ್ಣ ಸಮ್ಮುಖದಲ್ಲಿ ಸೂರಜ್ ರೇವಣ್ಣ ನಾಮಪತ್ರ ಸಲ್ಲಿಸಿದ್ದರು.
ಸಂದೇಶ್ ನಾಗರಾಜ್‌ಗೆ ಜೆಡಿಎಸ್ ಟಿಕೆಟ್ ಕೈ ತಪ್ಪಿದೆ
ಮೈಸೂರು ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತರಾಗಿದ್ದ ಸಿ.ಎನ್. ಮಂಜೇಗೌಡರಿಗೆ ಈ ಬಾರಿ ಜೆಡಿಎಸ್ ಟಿಕೆಟ್ ನೀಡಲಾಗಿದೆ. ಸೋಮವಾರವಷ್ಟೇ ಮೈಸೂರಿನಲ್ಲಿ ಜೆಡಿಎಸ್ ಸೇರಿದ್ದ ಮಂಜೇಗೌಡರಿಗೆ ಟಿಕೆಟ್ ಒಲಿದು ಬಂದಿದೆ. ಆದರೆ ಸಂದೇಶ್ ನಾಗರಾಜ್‌ಗೆ ಜೆಡಿಎಸ್ ಪಕ್ಷದ ಟಿಕೆಟ್ ಕೈ ತಪ್ಪಿದೆ.
ಕೊನೆ ಕ್ಷಣದವರಿಗೂ ಜೆಡಿಎಸ್ ಟಿಕೆಟ್‌ಗಾಗಿ ಸಂದೇಶ್ ನಾಗರಾಜ್ ಸರ್ಕಸ್ ನಡೆಸಿದ್ದರು. ನಿನ್ನೆಯೂ ಎಚ್.ಡಿ. ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ್ದರು. ಆದರೂ ಸಂದೇಶ್ ನಾಗರಾಜ್‌ಗೆ ಜೆಡಿಎಸ್ ಟಿಕೆಟ್ ಸಿಕ್ಕಿಲ್ಲ. ಜೆಡಿಎಸ್ ಪಕ್ಷ ಅಳೆದು ತೂಗಿ ಮಂಜೇಗೌಡನಿಗೆ ಟಿಕೆಟ್ ನೀಡಿದೆ. ಬಿಜೆಪಿಯ ಟಿಕೆಟ್ ಸಹ ಸಿಗದೆ ಸಂದೇಶ್ ನಾಗರಾಜ್ ಅತಂತ್ರರಾಗಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುವ ಕನಸು ಭಗ್ನವಾಗಿದೆ.
ಸಂದೇಶ್ ನಾಗರಾಜ್ ಈಗಾಗಲೇ ಜೆಡಿಎಸ್ ಪಕ್ಷದಿಂದ ಒಂದು ಹೆಜ್ಜೆ ಹೊರ ಇಟ್ಟಿದ್ದರು. ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸುವುದಾಗಿ ಘೋಷಣೆಯನ್ನೂ ಮಾಡಿದ್ದರು. ಆದರೆ ಬಿಜೆಪಿ ಟಿಕೆಟ್ ನೀಡಲಿಲ್ಲ. ಹೀಗಾಗಿ ಸಂದೇಶ್ ಮತ್ತೆ ಜೆಡಿಎಸ್ ಕದ ತಟ್ಟಿದ್ದು, ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಸಿದ್ದರು. ಈಗ ಜೆಡಿಎಸ್‌ನಲ್ಲೂ ಟಿಕೆಟ್ ಸಿಗದೆ ಅತಂತ್ರರಾಗಿದ್ದಾರೆ.
ವಿಧಾನ ಪರಿಷತ್ ಚುನಾವಣೆಗೆ ಈಗಾಗಲೇ ಅಧಿಸೂಚನೆ ಪ್ರಕಟವಾಗಿದ್ದು, ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ನವೆಂಬರ್ 23 ಕೊನೆ ದಿನ. ನವೆಂಬರ್ 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನವೆಂಬರ್ 26 ನಾಮಪತ್ರ ವಾಪಸ್ ಪಡೆಯಲು ಕೊನೆ ದಿನವಾಗಿರುತ್ತದೆ.
ಡಿಸೆಂಬರ್ 10ರಂದು ಒಟ್ಟು 25 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ 20 ಅಭ್ಯರ್ಥಿಗಳ ಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಜೆಡಿಎಸ್ ಸದಸ್ಯರು ಅನರ್ಹ
ತೀವ್ರ ಕುತೂಹಲ ಕೆರಳಿಸಿದ್ದ ಹಾಸನ ಜಿಲ್ಲೆ ಅರಸೀಕೆರೆ ನಗರಸಭೆ ಜೆಡಿರಸ್ ಬಂಡಾಯ ಸದಸ್ಯರ ತೀರ್ಪು ಹೊರಬಿದ್ದಿದೆ. ಜೆಡಿಎಸ್ ಪಕ್ಷದಿಂದ ಜಯಗಳಿಸಿ ನಂತರ ಬಿಜೆಪಿಗೆ ಬೆಂಬಲ ನೀಡಲು ನಿರ್ಧರಿಸಿದ್ದ ಅರಸೀಕೆರೆ ನಗರಸಭೆಯ ಏಳು ಜೆಡಿಎಸ್ ಸದಸ್ಯರನ್ನು ಜಿಲ್ಲಾಧಿಕಾರಿಗಳ ನ್ಯಾಯಾಲಯ ಅನರ್ಹಗೊಳಿಸಿ ಆದೇಶ ಹೊರಡಿಸಿದೆ.












Click it and Unblock the Notifications