ರಾಷ್ಟ್ರಧ್ವಜ, ಗಣೇಶನ ರಂಗೋಲಿ ಮೇಲೆ ಶೂ ಧರಿಸಿ ಓಡಾಟ ಆರೋಪ: ಡಿ.ಕೆ.ಶಿವಕುಮಾರ್ ವಿರುದ್ಧ ಜೆಡಿಎಸ್ ಟೀಕೆ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಜೆಡಿಎಸ್ ಪಕ್ಷ ಗಂಭೀರ ಆರೋಪಗಳನ್ನು ಹೊರಿಸಿದ್ದು, ಈ ವಿಚಾರ ಇದೀಗ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕಾರ್ಯಕ್ರಮವೊಂದರ ವೇಳೆ ಡಿ.ಕೆ.ಶಿವಕುಮಾರ್ ಅವರು ರಾಷ್ಟ್ರಧ್ವಜ ಮತ್ತು ಗಣೇಶನ ರಂಗೋಲಿಯ ಮೇಲೆಯೇ ಶೂ ಧರಿಸಿ ನಡೆದುಹೋಗಿರುವುದಾಗಿ ಹೇಳಲಾದ ವಿಡಿಯೋವನ್ನು ಜೆಡಿಎಸ್ ತನ್ನ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದೆ.
ಈ ವಿಡಿಯೋ ಆಧರಿಸಿ ಜೆಡಿಎಸ್ ನಾಯಕರು ಡಿ.ಕೆ.ಶಿವಕುಮಾರ್ ಅವರ ನಡೆಗೆ ಕಿಡಿಕಾರಿದ್ದು, ಇದು ರಾಷ್ಟ್ರಧ್ವಜಕ್ಕೂ ಧಾರ್ಮಿಕ ಭಾವನೆಗಳಿಗೂ ಮಾಡಿರುವ ಅವಮಾನ ಎಂದು ಗಂಭೀರ ಆರೋಪ ಮಾಡಿದ್ದಾರೆ. ಕನಕೋತ್ಸವ 2026 ಅಂಗವಾಗಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆ ವೀಕ್ಷಣೆ ವೇಳೆ ಡಿ.ಕೆ.ಶಿವಕುಮಾರ್ ಅವರು ರಂಗೋಲಿಗಳ ಮೇಲೆ ನಡೆದಾಡಿದ್ದಾರೆ ಎನ್ನಲಾದ ವಿಡಿಯೋ ಅನ್ನು ಜೆಡಿಎಸ್ ಹಂಚಿಕೊಂಡು ತರಾಟೆಗೆ ತೆಗೆದುಕೊಂಡಿದೆ.

ದೇವರ ಮೇಲೆ ಭಕ್ತಿ ಇಲ್ಲ, ರಾಷ್ಟ್ರಧ್ವಜದ ಮೇಲೆ ಗೌರವ ಇಲ್ಲ
ಜೆಡಿಎಸ್ ಎಕ್ಸ್ ಪೋಸ್ಟ್‌ನಲ್ಲಿ, "ದೇವರ ಮೇಲೆ ಭಕ್ತಿ ಇಲ್ಲ, ರಾಷ್ಟ್ರಧ್ವಜದ ಮೇಲೆ ಗೌರವವೂ ಇಲ್ಲ, ದೇಶದ ಬಗ್ಗೆ ಅಭಿಮಾನವೂ ಕಾಣುವುದಿಲ್ಲ. ಕೊನೆಗೆ, ಹೆಣ್ಣುಮಕ್ಕಳು ಪ್ರೀತಿಯಿಂದ ಬಿಡಿಸಿರುವ ರಂಗೋಲಿ ಚಿತ್ತಾರಗಳ ಮೇಲೆಯೂ ಎಳ್ಳಷ್ಟೂ ಹೆಮ್ಮೆ ಇಲ್ಲ" ಎಂದು ಕಟುವಾಗಿ ಟೀಕಿಸಿದೆ. ಅಲ್ಲದೆ, "ಅಧಿಕಾರ ಅಹಂಕಾರಕ್ಕಲ್ಲ, ಅಧಿಕಾರ ಅಲಂಕಾರಕ್ಕಲ್ಲ. ಅಧಿಕಾರವೆನ್ನುವುದು ಜನಸೇವೆಗೊಂದು ಮಾರ್ಗ. ಆದರೆ ಇಲ್ಲಿ ಅಧಿಕಾರವೇ ದುರಹಂಕಾರವಾಗಿ ಮೈವೇತ್ತಿ ನಿಂತಿದೆ" ಎಂದು ಜೆಡಿಎಸ್ ಕಿಡಿಕಾರಿದೆ.
"ಬೂಟಾಟಿಕೆ ಶೂರನಿಗೆ ಮೈಯ್ಯೆಲ್ಲಾ ಪಂಗನಾಮ" ಎಂದು ವ್ಯಂಗ್ಯವಾಡುವ ಮೂಲಕ ಡಿ.ಕೆ.ಶಿವಕುಮಾರ್ ವಿರುದ್ಧ ಜೆಡಿಎಸ್ ತೀವ್ರ ವಾಗ್ದಾಳಿ ನಡೆಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪರ-ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಆಡಳಿತ ಪಕ್ಷದ ನಾಯಕನ ನಡೆ ಸಾರ್ವಜನಿಕ ಭಾವನೆಗಳಿಗೆ ಧಕ್ಕೆ ತಂದಿದೆಯೇ ಎಂಬ ಪ್ರಶ್ನೆಗಳು ಉದ್ಭವಿಸಿವೆ.
ದೇವರ ಮೇಲೆ ಭಕ್ತಿ ಇಲ್ಲ, ರಾಷ್ಟ್ರಧ್ವಜದ ಮೇಲೆ ಗೌರವವೂ ಇಲ್ಲ, ಅಭಿಮಾನವಿಲ್ಲ. ಕೊನೆಗೆ, ಹೆಣ್ಣುಮಕ್ಕಳು ಬಿಡಿಸಿರುವ ರಂಗೋಲಿ ಚಿತ್ತಾರಗಳ ಮೇಲೆಯೂ ಎಳ್ಳಷ್ಟೂ ಹೆಮ್ಮೆ ಇಲ್ಲ..
— Janata Dal Secular (@JanataDal_S) January 27, 2026
ಅಧಿಕಾರ ಅಹಂಕಾರಕ್ಕಲ್ಲ, ಅಧಿಕಾರ ಅಲಂಕಾರಕ್ಕಲ್ಲ. ಅಧಿಕಾರವೆನ್ನುವುದು ಜನಸೇವೆಗೊಂದು ಮಾರ್ಗ.. ಇಲ್ಲಿ ಅಧಿಕಾರವೇ ದುರಂಹಕಾರವಾಗಿ ಮೈವೇತ್ತಿ ನಿಂತಿದೆ.
ಬೂಟಾಟಿಕೆ… pic.twitter.com/G80QT9G70T
ವಿರೋಧ ಪಕ್ಷಗಳು ಇದನ್ನು ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡಿದ್ದು, ಆಡಳಿತದ ಶಿಸ್ತು ಹಾಗೂ ನಾಯಕತ್ವದ ಜವಾಬ್ದಾರಿಯ ಬಗ್ಗೆ ಪ್ರಶ್ನೆ ಎತ್ತಿವೆ. ಇತ್ತ ಕಾಂಗ್ರೆಸ್ ವಲಯದಿಂದ ಈ ಆರೋಪಗಳ ಬಗ್ಗೆ ಇನ್ನೂ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಆದರೆ ಈ ವಿಷಯ ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಚರ್ಚೆಗೆ ಗ್ರಾಸವಾಗುವ ಸಾಧ್ಯತೆ ಇದೆ.
ಕನಕಪುರ ತಾಲ್ಲೂಕಿನ ಶಿವನಹಳ್ಳಿ ಗ್ರಾ.ಪಂ.ಸೇರಿದಂತೆ ವಿವಿಧೆಡೆ ಕನಕೋತ್ಸವ 2026ರ ಅಂಗವಾಗಿ ಹಮ್ಮಿಕೊಂಡಿದ್ದ 'ಮನೆಗೆ ಐದು ಗ್ಯಾರಂಟಿ ಮನೆಗೊಂದು ರಂಗೋಲಿ' ಸ್ಪರ್ಧೆಯಲ್ಲಿ ಅನೇಕ ಮಹಿಳೆಯರು ಪಾಲ್ಗೊಂಡಿದ್ದರು. ರಂಗೋಲಿ ಸ್ಪರ್ಧೆಯಲ್ಲಿ ಮಹಿಳೆಯರು ಬಿಡಿಸಿದ ರಂಗೋಲಿಗಳನ್ನು ವೀಕ್ಷಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಇದೇ ಕಾರ್ಯ್ರಕಮದಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಡಿಕೆ ಸುರೇಶ್ ಭಾಗವಹಿಸಿದ್ದರು. ಈ ವೇಳೆ ಈ ವಿಡಿಯೋ ಸೆರೆಯಾಗಿದೆ.
ಈ ಬಗ್ಗೆ ಬಿಜೆಪಿ ಕೂಡ ವಾಗ್ದಾಳಿ ನಡೆಸಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ, ರಾಷ್ಟ್ರಧ್ವಜ ನಮ್ಮ ಅಸ್ಮಿತೆಯ ಸಂಕೇತ, ಧರ್ಮ ನಮ್ಮ ಸಂಸ್ಕೃತಿಯ ಆಧಾರ. ಹಿಂದೂ ದೇವರು ಹಾಗೂ ರಾಷ್ಟ್ರಧ್ವಜದ ಮೇಲೆಯೇ ಕಾಲಿಟ್ಟಂತೆ ಕಾಣಿಸುವ ನಿಮ್ಮ ನಡೆ ಅತ್ಯಂತ ಖಂಡನೀಯ. ಇಂತಹ ಅವಮಾನಕ್ಕೆ ಕಾಲವೇ ತಕ್ಕ ಉತ್ತರ ನೀಡಲಿದೆ ಎಂದು ಎಚ್ಚರಿಸಿದೆ.
ಕಾಂಗ್ರೆಸ್‌ಗೆ ದೇಶಪ್ರೇಮ ಎಂದರೆ ಕೇವಲ ಚುನಾವಣೆಯ ವೇಳೆಯ ಮುಖವಾಡ ಮಾತ್ರ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ನಿಜಕ್ಕೂ ರಾಷ್ಟ್ರದ ಮೇಲೆ ಗೌರವವಿದ್ದಿದ್ದರೆ ಅದರ ಪವಿತ್ರ ಸಂಕೇತಗಳನ್ನು ಕಾಲಿನಿಂದ ತುಳಿಯುವಂತಹ ಅಹಂಕಾರ ತೋರಿಸುತ್ತಿರಲಿಲ್ಲ. ಅಧಿಕಾರದ ಅಮಲಿನಲ್ಲಿ ಅಂಧರಾಗಿರುವ ಕಾಂಗ್ರೆಸ್ ನಾಯಕರ ದುರಹಂಕಾರಕ್ಕೆ ಮುಂದಿನ ಚುನಾವಣೆಯಲ್ಲಿ ರಾಜ್ಯದ ಜನತೆಯೇ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದು ಬಿಜೆಪಿ ಎಚ್ಚರಿಕೆ ನೀಡಿದೆ.












Click it and Unblock the Notifications