ಸ್ಪೀಕರ್ ಸ್ಥಾನ ಕಾಂಗ್ರೆಸ್‌ಗೆ ಬಿಟ್ಟುಕೊಡಲು ಒಪ್ಪಿಕೊಂಡ ಜೆಡಿಎಸ್
ಬೆಂಗಳೂರು, ಮೇ 22: ಭಿನ್ನಾಭಿಪ್ರಾಯಗಳ ನಡುವೆಯೂ ಸ್ಪೀಕರ್ ಆಯ್ಕೆಯ ವಿಚಾರದಲ್ಲಿ ಅವಕಾಶವನ್ನು ಕಾಂಗ್ರೆಸ್‌ಗೇ ಬಿಟ್ಟುಕೊಡಲು ಜೆಡಿಎಸ್ ನಿರ್ಧರಿಸಿದೆ.
ಸೋಮವಾರ ನವದೆಹಲಿಯಲ್ಲಿ ಕುಮಾರಸ್ವಾಮಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ನಡುವೆ ನಡೆದ ಸಭೆ ವೇಳೆ ಈ ವಿಚಾರ ಚರ್ಚೆಗೆ ಒಳಗಾಗಿದೆ.
ಜೆಡಿಎಸ್‌ಅನ್ನು ಬೆಂಬಲಿಸಿದ ಕೃತಜ್ಞತೆಗಾಗಿ ಕುಮಾರಸ್ವಾಮಿ ಅವರು ಸೋನಿಯಾ ಗಾಂಧಿ ಅವರ ಪಾದಗಳಿಗೆ ನಮಸ್ಕರಿಸಿದರು ಎನ್ನಲಾಗಿದೆ.
ರಾಹುಲ್ ಗಾಂಧಿ ಅವರು ಸ್ಪೀಕರ್ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಬೇಕೆಂಬ ಪ್ರಸ್ತಾವವನ್ನು ಮುಂದಿಟ್ಟರು. ಇದಕ್ಕೆ ಕುಮಾರಸ್ವಾಮಿ ಸಮ್ಮತಿ ಸೂಚಿಸಿದರು.

ಕುಮಾರಸ್ವಾಮಿ ಅವರು ದೆಹಲಿಗೆ ತೆರಳುವ ಮುನ್ನ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಮೈತ್ರಿ ಸರ್ಕಾರದ ಸುಗಮ ಆಡಳಿತಕ್ಕೆ ಸ್ಪೀಕರ್ ಹುದ್ದೆ ಮಹತ್ವದ್ದಾಗಿರುವುದರಿಂದ ಅದು ಜೆಡಿಎಸ್‌ಗೆ ಸಿಗಬೇಕು ಎಂದು ಪಟ್ಟು ಹಿಡಿದಿದ್ದರು.
ಹಳೆಯ ಘಟನೆಗಳನ್ನು ಮರೆತುಬಿಡುವಂತೆ ಕುಮಾರಸ್ವಾಮಿ ಅವರನ್ನು ಕೋರಿದ ರಾಹುಲ್ ಮತ್ತು ಸೋನಿಯಾ, ಹೊಸ ಸಂಬಂಧದೊಂದಿಗೆ ಜತೆಯಾಗಿ ಕೆಲಸ ಮಾಡೋಣ ಎಂದು ಹೇಳಿದ್ದಾರೆ.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಜೆಡಿಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ರಾಹುಲ್ ಗಾಂಧಿ, ಜೆಡಿಎಸ್, ಬಿಜೆಪಿಯ 'ಬಿ' ತಂಡವಿದ್ದಂತೆ ಎಂದು ಲೇವಡಿ ಮಾಡಿದ್ದರು.
ನಮ್ಮ ಮುಂದಿನ ಕಾರ್ಯವೈಖರಿ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ. ಗಾಂಧಿ ಕುಟುಂಬಕ್ಕೆ ನನ್ನ ಗೌರವ ಮತ್ತು ಧನ್ಯವಾದ ತಿಳಿಸಲು ಬಯಸಿದ್ದೆ. ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಹಾಜರಿರುವಂತೆ ಅವರಿಗೆ ಮನವಿ ಮಾಡಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.
ಲಕ್ಷ್ಮೀ ಹೆಬ್ಬಾಳ್ಕರ್ ಸಚಿವೆಯಾಗಲು ಜಾರಕಿಹೊಳಿ ಅಡ್ಡಗಾಲು?
ರಮೇಶ್ ಕುಮಾರ್‌ಗೆ ಸ್ಥಾನ?
ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರುವ ಮುನ್ನ ಸ್ಪೀಕರ್ ಆಯ್ಕೆ ನಡೆಯಲಿದ್ದು, ಯಾರಿಗೆ ಈ ಸ್ಥಾನ ಒಲಿಯಲಿದೆ ಎಂಬ ಕುತೂಹಲ ಮೂಡಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳು ತಮಗೇ ಸ್ಪೀಕರ್ ಸ್ಥಾನ ನೀಡಬೇಕು ಎಂದು ಪಟ್ಟುಹಿಡಿದಿದ್ದವು. ಮೂಲಗಳ ಮಾಹಿತಿ ಪ್ರಕಾರ ಕಾಂಗ್ರೆಸ್‌ನ ಹಿರಿಯ ಮುಖಂಡ ರಮೇಶ್ ಕುಮಾರ್ ಅವರಿಗೆ ಸ್ಪೀಕರ್ ಸ್ಥಾನ ಲಭಿಸುವ ಸಾಧ್ಯತೆ ಇದೆ.
ಸ್ಪೀಕರ್ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡುವ ಸಂಬಂಧ ಜೆಡಿಎಸ್ ಒಪ್ಪಿಗೆ ಸೂಚಿಸಿದೆ ಎಂದು ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.
ರಮೇಶ್ ಕುಮಾರ್ ಈ ಹಿಂದೆಯೂ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿರುವ ಅನುಭವ ಹೊಂದಿದ್ದಾರೆ.












Click it and Unblock the Notifications