• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಯಲಲಿತಾ ಜಾಮೀನು ಅರ್ಜಿ : ಇಡೀ ದಿನದ ಬೆಳವಣಿಗೆ

|

ಬೆಂಗಳೂರು, ಅ 7 : ಅಮ್ಮನಿಗೆ ಸೆರೆಮನೆಯೇ ಗತಿ. ಮಂಗಳವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಂದ ಜಯಲಲಿತಾ ಜಾಮೀನು ಅರ್ಜಿಯ ಹಣೆಬರಹ ತಿಳಿಯಲು ಕರ್ನಾಟಕದ ಜನ ತುದಿಗಾಲಲ್ಲಿ ನಿಂತಿದ್ದರು. ತಮಿಳುನಾಡು ಜನ ಒಂಟಿಕಾಲಲ್ಲಿ ನಿಂತಿದ್ದರು. ಆದರೆ, ಜಾಮೀನು ಅರ್ಜಿ ತಿರಸ್ಕಾರಗೊಂಡಿದ್ದು, ಅಮ್ಮನ ಅಭಿಮಾನಿಗಳಿಗೆ ನಿರಾಸೆಯಾಗಿದೆ.

ಜಾಮೀನು ಅರ್ಜಿಯ ವಿಚಾರಣೆ ವೇಳೆ ಕೋರ್ಟ್ ಏನು ಅಭಿಪ್ರಾಯಪಟ್ಟಿದೆ. ತೀರ್ಪು ಹೊರಬಿದ್ದನಂತರ ಡಿಎಂಕೆ ಮತ್ತು ಅಣ್ಣಾಡಿಎಂಕೆ ಪಕ್ಷದ ಕಾರ್ಯಕರ್ತರು ಅದನ್ನು ಹೇಗೆ ಸ್ವೀಕರಿದ್ದಾರೆ. ಎಂಬುದನ್ನು ಬಿಂಬಿಸುವ ಕ್ಷ-ಕಿರಣದ ಪುಟ ಇದಾಗಿದೆ. ಮಂಗಳವಾರ ಬೆಳಗ್ಗೆಯಿಂದ ನಡೆದ ಬೆಳವಣಿಗೆಗೆಳ ಮಾಹಿತಿ ಇಲ್ಲಿದೆ. [ಜಯಲಲಿತಾಗೆ ಜಾಮೀನು ಅರ್ಜಿ ತಿರಸ್ಕಾರ]

ಸಮಯ 7.30 : ಜಯಲಲಿತಾ ಜಾಮೀನು ಅರ್ಜಿ ನಿರಾಕರಣೆ. ತಮಿಳುನಾಡು ಸಿಎಂ ಪನ್ನೀರ್ ಸೆಲ್ವಂ ನೇತೃತ್ವದಲ್ಲಿ ತುರ್ತು ಸಭೆ. ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲು ಸೂಚನೆ ನೀಡಿದ ಸೆಲ್ವಂ

ಸಮಯ 7 ಗಂಟೆ : ತಿರುಚ್ಚಿ, ದಿಂಡಿಗಲ್‌ನಲ್ಲಿ ಕರ್ನಾಟಕದ ಕೆಪಿಎನ್‌ ಟ್ರಾವೆಲ್ಸ್‌ಗೆ ಸೇರಿದ ಬಸ್‌ ಮತ್ತು ರಾಜ್ಯಕ್ಕೆ ಸೇರಿದ ವಾಹನಗಳ ಮೇಲೆ ಕಲ್ಲು ತೂರಾಟ.

ಸಮಯ 6 ಗಂಟೆ : ಗೃಹ ಸಚಿವ ಕೆ.ಜೆ.ಜಾರ್ಜ್ ಅವರನ್ನುಸಿಎಂ ಸಿದ್ದರಾಮಯ್ಯ ಗೃಹ ಕಚೇರಿಗೆ ಕರೆಸಿಕೊಂಡಿದ್ದು, ಬೆಂಗಳೂರು ನಗರದಲ್ಲಿನ ಭದ್ರತಾ ವ್ಯವಸ್ಥೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಜಯಲಲಿತಾ ಅವರ ಜಾಮೀನು ಅರ್ಜಿ ತಿರಸ್ಕೃತಗೊಂಡಿರುವುದರಿಂದ ಸಿಎಂ ಮತ್ತು ಗೃಹ ಸಚಿವರು ಸಭೆ ನಡೆಸಿದ್ದಾರೆ.

ಸಮಯ 5.36 : ಜಯಲಲಿತಾ ಜಾಮೀನು ಅರ್ಜಿ ನಿರಾಕರಣೆ ಹಿನ್ನೆಲೆ, ತಮಿಳುನಾಡಿಗೆ ಸಂಚರಿಸುವ ಎಲ್ಲಾ ಕೆಎಸ್ಆರ್‌ಟಿಸಿ ಬಸ್ ಸಂಚಾರ ಬುಧವಾರ ಮಧ್ಯಾಹ್ನದವರೆಗೆ ಸ್ಥಗಿತ. ತಮಿಳುನಾಡಿನಲ್ಲಿರುವ ಬಸ್‌ಗಳಿಗೆ ಅಲ್ಲೇ ಉಳಿಯುವಂತೆ ಸೂಚನೆ.

ಸಮಯ 5.24 : 'ಬೆಂಗಳೂರಿಲ್ಲಿ ಪರಿಸ್ಥಿತಿ ಶಾಂತವಾಗಿದೆ. ಜಯಾ ಬೆಂಬಲಿಗರ ಜೊತೆ ಮಾತುಕತೆ ನಡೆಸಿದ್ದೇವೆ. ಹೈಕೋರ್ಟ್‌ ಮತ್ತು ಪರಪ್ಪನ ಅಗ್ರಹಾರದ ಸುತ್ತಮುತ್ತ ರಾತ್ರಿ 12 ಗಂಟೆಯ ತನಕ ನಿಷೇಧಾಜ್ಞೆ ಮುಂದುವರೆಸಲಾಗುವುದು' ಎಂದು ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಹೇಳಿದ್ದಾರೆ.

ಸಮಯ 5.15 : ಜಯಲಲಿತಾ ಜಾಮೀನು ಅರ್ಜಿ ಹೈಕೋರ್ಟ್‌ನಲ್ಲಿ ತಿರಸ್ಕಾರಗೊಂಡಿದ್ದು, ಬುಧವಾರ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸುವ ಸಾಧ್ಯತೆ ಇದೆ.

ಸಮಯ 5 ಗಂಟೆ : ಜಯಲಲಿತಾ ಅವರಿಗೆ ಜಾಮೀನು ನಿರಾಕರಣೆ ಮಾಡಿದ ಹಿನ್ನಲೆಯಲ್ಲಿ, ಪ್ರತಿಭಟನೆ ನಡೆಸದಂತೆ ತಮಿಳುನಾಡು ಸಿಎಂ ಪನ್ನೀರ್ ಸೆಲ್ವಂ ಕರೆ ನೀಡಿದ್ದಾರೆ.

ಸಮಯ 4.48 : ಜಯಾ ಜಾಮೀನು ಅರ್ಜಿ ವಜಾ ಹಿನ್ನಲೆ, ತಮಿಳುನಾಡು ಕರ್ನಾಟಕ ಗಡಿ ಭಾಗದಲ್ಲಿ ಮತ್ತು ಪರಪ್ಪನ ಅಗ್ರಹಾರ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್

ಸಮಯ 4.44 : ಹೈಕೋರ್ಟ್‌ ತೀರ್ಪಿನಿಂದ ಆಘಾತಗೊಂಡ ಜಯಲಲಿತಾ, ಆರೋಗ್ಯ ತಪಾಸಣೆಗಾಗಿ ಜೈಲಿಗೆ ಆಗಮಿಸಿದ ಡಾ.ವಿಜಯ್ ಕುಮಾರ್

ಸಮಯ 4.40 : 'ಹೈಕೋರ್ಟ್‌ ಆದೇಶದಿಂದ ತೀವ್ರವಾದ ನಿರಾಸೆಯಾಗಿದೆ. ಜಯಲಲಿತಾ ಅವರಿಗೆ ಹಲವು ಸಲಹೆಗಾರರಿದ್ದು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಕುರಿತು ಅವರು ತೀರ್ಮಾನ ಕೈಗೊಳ್ಳಬೇಕು' ಎಂದು ಜಯಲಲಿತಾ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ರಾಮ್‌ ಜೇಠ್ಮಲಾನಿ ಹೇಳಿದ್ದಾರೆ.

ಸಮಯ 4.30 : ಜಯಾಗೆ ಜಾಮೀನು ಸಿಕ್ಕಿತು ಎಂದು ಸಂಭ್ರಮಾಚರಣೆ ಮಾಡುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಚೆನ್ನೈನ ಜಯಲಲಿತಾ ನಿವಾಸದ ಮುಂದೆ ಸಂಭ್ರಮಾಚರಣೆ ನಡೆಸುತ್ತಿದ್ದವರು ಕುಸಿದು ಬಿದ್ದಿದ್ದಾರೆ.

ಸಮಯ 4.14 : ಭ್ರಷ್ಟಾಚಾರ ಎಂಬುದು ಗಂಭೀರ ಪ್ರಕರಣ ಆದ್ದರಿಂದ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದ ನ್ಯಾಯಮೂರ್ತಿ ಎ.ಸಿ.ಚಂದ್ರಶೇಖರ. ಶಿಕ್ಷೆಯ ಪ್ರಮಾಣ ಕಡಿತಗೊಳಿಸಲು ನಿರಾಕರಿಸಿದ ಕೋರ್ಟ್.

ಸಮಯ 3.55 : ಜಯಲಲಿತಾ ಅವರ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ತಳ್ಳಿ ಹಾಕಿದೆ. ಅಕ್ರಮ ಆಸ್ತಿಗಳಿಗೆ ಪ್ರಕರಣದ ಇತರ ಮೂವರು ಅಪರಾಧಿಗಳಾದ ಸುಧಾರಕರನ್, ಶಶಿಕಲಾ, ಇಳವರಸಿ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿದೆ.

ಸಮಯ 3.51 : ಜಯಾಗೆ ಜಾಮೀನು ಸಿಕ್ಕಿದೆ ಎಂಬ ವದಂತಿ ನಂಬಿ ಸಂಭ್ರಮಾಚರಣೆ ಮಾಡುತ್ತಿದ್ದ ಸರಳ ಎಂಬ ಮಹಿಳೆ ಅಸ್ವಸ್ಥಗೊಂಡಿದ್ದಾರೆ. ಹೊಸೂರು ರಸ್ತೆ ಜಂಕ್ಷನ್ ಬಳಿ ಅವರು ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಮಯ 3.33 : ಜಯಾಗೆ ಜಾಮೀನು ಸಿಕ್ಕಿತು ಎಂಬ ವದಂತಿ : ಪರಪ್ಪನ ಅಗ್ರಹಾರ, ಹೈಕೋರ್ಟ್ ಬಳಿ ಸಂಭ್ರಮಾಚರಣೆ ಆರಂಭಿಸಿದ ಅಭಿಮಾನಿಗಳು

ಸಮಯ 3.25 : ಜಾಮೀನು ಅರ್ಜಿ ವಿಚಾರಣೆ ಅಂತ್ಯ, ಆದೇಶಕ್ಕೆ ಕ್ಷಣಗಣನೆ

ಸಮಯ 3.23 : ಜಯಲಲಿತಾ ಅವರಿಗೆ ಷರತ್ತು ಬದ್ಧ ಜಾಮೀನು ನೀಡಲು ನಮ್ಮ ಅಭ್ಯಂತರವಿಲ್ಲ ಎಂದು ಸರ್ಕಾರಿ ಅಭಿಯೋಜಕ ಭವಾನಿ ಸಿಂಗ್ ವಾದ ಮಂಡಿಸಿದ್ದಾರೆ. ನ್ಯಾಯಮೂರ್ತಿಗಳು ತೀರ್ಪು ಬರೆಸುತ್ತಿದ್ದು, ಕೆಲವೇ ಕ್ಷಣಗಳಲ್ಲಿ ಆದೇಶ ಹೊರಬೀಳಲಿದೆ.

ಸಮಯ 3.20 : ಒಳಸಂಚು, ಪ್ರಚೋದನೆ ಆರೋಪದಡಿ ಇಳವರಸಿ ಅವರಿಗೆ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ. ಆದ್ದರಿಂದ ಅವರಿಗೆ ಜಾಮೀನು ನೀಡಬೇಕೆಂದು ಹಸ್ಮತ್ ಪಾಷಾ ವಾದ ಮಂಡಿಸಿದ್ದಾರೆ.

ಸಮಯ 3.15 : ಜಯಲಲಿತಾ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿರುವ ಕೋರ್ಟ್‌ ಹಾಲ್‌ 28ರಲ್ಲಿ ಗದ್ದಲ, ಸೈಲೆನ್ಸ್ ಎಂದು ಗದರಿದ ನ್ಯಾಯಮೂರ್ತಿಗಳು. ಪುನಃ ಇಳವರಸಿ ಜಾಮೀನು ಅರ್ಜಿ ವಿಚಾರಣೆ ಪುನಃ ಆರಂಭ ಹಸ್ಮತ್ ಪಾಷಾರಿಂದ ವಾದ ಮಂಡನೆ.

ಸಮಯ 3.06 : ಜಯಲಲಿತಾ ಅವರು ಸಲ್ಲಿಸಿದ ಆದಾಯ ತೆರಿಗೆ ಮಾಹಿತಿಯನ್ನು ಕೋರ್ಟ್‌ಗೆ ಸಲ್ಲಿಸಿದ ರಾಮ್ ಜೇಠ್ಮಲಾನಿ, ಇವುಗಳಲ್ಲಿ ಮದುವೆ ಖರ್ಚಿನ ಕುರಿತು ಪ್ರಸ್ತಾಪಿಸಲಾಗಿದೆ. ಆದ್ದರಿಂದ ಆದಾಯ ಮೀರಿ ಅಕ್ರಮ ಆಸ್ತಿಗಳಿಸಲು ಸಾಧ್ಯವಿಲ್ಲ ಎಂದು ವಾದ ಮಂಡಿಸಿದ ಜೇಠ್ಮಲಾನಿ.

ಸಮಯ 2.55 : ಅಕ್ರಮ ಆಸ್ತಿ ಪ್ರಕರಣ ಸಂಬಂಧ ಶಿಕ್ಷೆಗೆ ಗುರಿಯಾಗಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತ ಅವರನ್ನು ತಮಿಳುನಾಡಿಗೆ ಸ್ಥಳಾಂತರ ಮಾಡುವ ಕುರಿತು ಸರ್ಕಾರ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ನ್ಯಾಯಾಲಯ ಈ ಕುರಿತು ಆದೇಶ ನೀಡಬೇಕಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸಮಯ 2.50 : ಜಯಲಲಿತಾ ಜಾಮೀನು ಅರ್ಜಿಯ ವಿಚಾರಣೆಯನ್ನು ಪುನಃ ಆರಂಭಿಸಿದ ನ್ಯಾಯಮೂರ್ತಿ ಎ.ಸಿ.ಚಂದ್ರಶೇಖರ ಅವರ ಏಕಸದಸ್ಯ ಪೀಠ, ರಾಮ್ ಜೇಠ್ಮಲಾನಿ ಅವರಿಂದ ವಾದ ಮಂಡನೆ ಆರಂಭ.

ಸಮಯ 2.49 : ಜಯಲಲಿತಾ ಅವರಿಗೆ ಜಾಮೀನು ದೊರೆಯುತ್ತದೆ ಎಂದು ಅವರ ಅಭಿಮಾನಿಗಳು ಹೈಕೋರ್ಟ್ ಸಮೀಪ ಕಾದು ನಿಂತಿದ್ದಾರೆ. ಕಣ್ಣೀರು ಹಾಕುತ್ತಾ ಜಯಲಲಿತಾ ಅವರನ್ನು ಬಿಡುಗಡೆ ಮಾಡಿ ಎಂದು ಒತ್ತಾಯಿಸುತ್ತಿದ್ದಾರೆ.

ಸಮಯ 2.39 : ಚೆನ್ನೈನಲ್ಲಿ ಜಯಲಲಿತಾ ಬಿಡುಗಡೆಗೆ ಒತ್ತಾಯಿಸಿ ಮುಂದುವರೆದ ಪ್ರತಿಭಟನೆ, ಎಐಎಡಿಎಂಕೆ ಕಾರ್ಯಕರ್ತರಿಂದ ರಕ್ತದಿಂದ ಹೆಬ್ಬೆಟ್ಟು ಒತ್ತಿ ಸಹಿ ಸಂಗ್ರಹ ಕಾರ್ಯ.

ಸಮಯ 2.32 : ಹೈಕೋರ್ಟ್ ಕಲಾಪ ಪುನಃ ಆರಂಭವಾಗಿದ್ದು, ಅಕ್ರಮ ಆಸ್ತಿಗಳಿಕೆ ಪ್ರಕರಣ ಮತ್ತೊಬ್ಬ ಅಪರಾಧಿ ಇಳವರಸಿ ಜಾಮೀನು ಅರ್ಜಿ ವಿಚಾರಣೆ ಆರಂಭವಾಗಿದೆ. ಹಸ್ಮತ್ ಪಾಷಾ ಅವರು ಇಳವರಸಿ ಪರವಾಗಿ ವಾದ ಮಂಡನೆ ಮಾಡುತ್ತಿದ್ದಾರೆ. ಪ್ರಕರಣದಲ್ಲಿ ಇಳವರಸಿ 3ನೇ ಆರೋಪಿಯಾಗಿದ್ದಾರೆ. ಇಳವರಸಿ ಅವರಿಗೂ ನಾಲ್ಕು ವರ್ಷ ಜೈಲು ಶಿಕ್ಷೆ ಮತ್ತು 10 ಕೋಟಿ ರೂ. ದಂಡವನ್ನು ವಿಧಿಸಿ ವಿಶೇಷ ನ್ಯಾಯಾಲಯ ಆದೇಶ ನೀಡಿತ್ತು.

ಸಮಯ 1.25 : ಊಟದ ವಿರಾಮ, ಜಯಲಲಿತಾ ಜಾಮೀನು ಅರ್ಜಿಯ ವಿಚಾರಣೆಯನ್ನು 2.30ಕ್ಕೆ ಮುಂದೂಡಿದ ಕೋರ್ಟ್.

ಸಮಯ 1.17 : ಜಯಲಲಿತಾ ಜಾಮೀನು ಅರ್ಜಿಯ ತೀರ್ಪು ಗುರುವಾರ ಪ್ರಕಟವಾಗುವ ಸಾಧ್ಯತೆ ಇದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಟೈಗರ್ ಅಶೋಕ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಇಂದು ಜಾಮೀನು ಅರ್ಜಿಯ ವಿಚಾರಣೆಯ ವಾದವನ್ನು ಆಲಿಸಲಾಗುತ್ತದೆ. ಬುಧವಾರ ಕೋರ್ಟ್‌ಗೆ ರಜೆ ಇರುವುದರಿಂದ ಅ.9ರ ಗುರುವಾರ ತೀರ್ಪು ಪ್ರಕಟಗೊಳ್ಳಬಹುದು ಎಂದು ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸಮಯ 1 ಗಂಟೆ : ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಂದೆ ಜಯಲಲಿತಾ ಬೆಂಬಲಿಗರ ಪ್ರತಿಭಟನೆ ಮುಂದುವರೆದಿದೆ. ಜಯಲಲಿತಾ ಫೋಟೋ ಹಿಡಿದು, ಘೋಷಣೆಗಳನ್ನು ಕೂಗುತ್ತಾ ಅಮ್ಮಾ ಬಿಡುಗಡೆ ಮಾಡಿ ಎಂದು ಆಗ್ರಹಿಸುತ್ತಿದ್ದಾರೆ.

ಸಮಯ 12.55 : ಚೆನ್ನೈನಲ್ಲಿರುವ ಕನ್ನಡಿಗರಿಗೆ ರಕ್ಷಣೆ ನೀಡುವುದಾಗಿ ಚೆನ್ನೈ ಕಮಿಷನರ್ ಜಾರ್ಜ್ ಭರವಸೆ. ಬೆಂಗಳೂರು ಪೊಲೀಸ್ ಆಯಯಕ್ತ ಎಂ.ಎನ್. ರೆಡ್ಡಿ ಜೊತೆ ದೂರವಾಣಿ ಮೂಲಕ ಮಾತುಕತೆ

ಸಮಯ 12.50 : ಜಯಲಲಿತಾ ಅವರಿಗೆ ಜಾಮೀನು ಸಿಗಲಿ, ಅವರು ಜೈಲಿನಿಂದ ಬಿಡುಗಡೆ ಆಗಲಿ ಎಂದು ತಮಿಳುನಾಡಿನಲ್ಲಿ ಜಯಾ ಅಭಿಮಾನಿಗಳು ವಿಶೇಷ ಪೂಜೆ, ಹೋಮ ನಡೆಸುತ್ತಿದ್ದಾರೆ. ಮತ್ತೊಂದೆಡೆ ಚೆನ್ನೈನ ಮಾರುಕಟ್ಟೆಯನ್ನು ಇಂದು ಬಂದ್ ಮಾಡಿ ವ್ಯಾಪಾರಿಗಳು ಜಯಲಲಿತಾಗೆ ಬೆಂಬಲ ನೀಡುತ್ತಿದ್ದಾರೆ.

ಸಮಯ 12.47 : ಜಯಾಲಲಿತಾ ಅವರು ಬೇನಾಮಿ ಹೆಸರಿನಲ್ಲಿ ಆಸ್ತಿಯನ್ನು ಮಾಡಿದ್ದಾರೆ ಎಂದು ವಿಶೇಷ ಕೋರ್ಟ್ ಪರಿಗಣಿಸಿಲ್ಲ. ಜಯಲಲಿತಾರಿಂದ ಶಶಿಕಲಾ ಅವರಿಗೆ ಯಾವುದೇ ಹಣ ಸಂದಾಯವಾಗಿಲ್ಲ. ಆದ್ದರಿಂದ ಶಶಿಕಲಾ ಅವರಿಗೆ ಜಾಮೀನು ನೀಡಬೇಕು ಎಂದು ಶಶಿಕಲಾ ಪರ ವಕೀಲ ಅಮಿತ್ ದೇಸಾಯಿ ವಾದ ಮಂಡಿಸಿದ್ದಾರೆ.

ಸಮಯ 12.34 : ಜಯಲಲಿತಾ ಅವರಿಗೆ ಇಂದು ಜಾಮೀನು ಸಿಗುತ್ತದೆ, ಅವರು ಬಿಡುಗಡೆಗೊಳ್ಳುತ್ತಾರೆ ಎಂದು ನೂರಾರು ಎಐಎಡಿಎಂಕೆ ಕಾರ್ಯಕರ್ತರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಂದೆ ಕಾದು ಕುಳಿತಿದ್ದಾರೆ. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಸಮಯ 12.30 : ಜಯಾ ಜಾಮೀನು ಅರ್ಜಿಯ ವಾದ ಮಂಡನೆ ಮುಕ್ತಾಯಗೊಂಡಿದೆ. ಜಯಲಲಿತಾ ಗೆಳತಿ ಮತ್ತು ಪ್ರಕರಣದ 2ನೇ ಅಪರಾಧಿ ಶಶಿಕಲಾ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಹಿರಿಯ ವಕೀಲ ಅಮಿತ್ ದೇಸಾಯಿ ಆರಂಭಿಸಿದ್ದಾರೆ. [ಜಯಾಗೆ ಬೇಲ್ ಸಿಗದಿದ್ದರೆ ಕನ್ನಡಿಗರ ದಿಗ್ಬಂಧನ?]

ಸಮಯ 12.23 : ಜಾಮೀನು ನೀಡಬೇಕು ಎಂಬ ವಾದಕ್ಕೆ ಪ್ರತಿಯಾಗಿ ವಿಶೇಷ ಕೋರ್ಟ್ ಲೋಪದೋಷವನ್ನು ಜೇಠ್ಮಲಾನಿ ಹೈಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟಿದ್ದು, ಜೇಠ್ಮಲಾನಿ ವಾದ ಮುಕ್ತಾಯಗೊಂಡಿದೆ.

ಸಮಯ 12.17 : ಜಯಾಗೆ ಜಾಮೀನು ಸಿಕ್ಕಿದೆ ಎಂಬ ವದಂತಿ ಹಬ್ಬಿದ್ದು, ಹೊಸೂರು ರಸ್ತೆಯಲ್ಲಿ ಜಯಲಲಿತಾ ಅಭಿಮಾನಿಗಳು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಆದರೆ, ಹೈಕೋರ್ಟ್‌ನಲ್ಲಿ ವಿಚಾರಣೆ ಮುಂದುವರೆದಿದ್ದು ಯಾವುದೇ ಆದೇಶ ಹೊರಬಿದ್ದಿಲ್ಲ.

ಸಮಯ 12.15 : ತಮಿಳುನಾಡಿನ ಪ್ರತಿ ಜಿಲ್ಲೆಯಿಂದ 1000 ಜಯಾ ಅಭಿಮಾನಿಗಳು ಬೆಂಗಳೂರಿಗೆ ಆಗಮಿಸುತ್ತಿದ್ದು, ಹೊಸೂರು ರಸ್ತೆಯಲ್ಲಿ ತಮಿಳುನಾಡಿನ ವಾಹನಗಳನ್ನು ತಡೆದು ಪೊಲೀಸರು ವಾಪಸ್ ಕಳುಹಿಸುತ್ತಿದ್ದಾರೆ.

ಸಮಯ 12 ಗಂಟೆ : ಪರಪ್ಪನ ಅಗ್ರಹಾರ ಕಾರಾಗೃಹದ ಸುತ್ತಮುತ್ತ ಮತ್ತು ಹೈಕೋರ್ಟ್ ಸುತ್ತಮುತ್ತ ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ಭಂಗ ಉಂಟಾಗಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಟ್ವಿಟ್ ಮಾಡಿದ್ದಾರೆ.

ಸಮಯ 11.50 : ಜಯಲಲಿತಾ ಮತ್ತು ಇತರ ಅಪರಾಧಿಗಳು ಪ್ರಭಾವಿ ವ್ಯಕ್ತಿಗಳು ಆದ್ದರಿಂದ ಜಾಮೀನು ನೀಡಬಾರದು ಎಂದು ಭವಾನಿ ಸಿಂಗ್ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ್ದಾರೆ. [ಜಯಲಲಿತಾ ವಿರುದ್ಧ ನ್ಯಾಯಾಂಗ ನಿಂದನೆ ದೂರು]

ಸಮಯ 11.49 : ಜಯಾ ಶಿಕ್ಷೆ ಕಡಿತಗೊಳಿಸುವುದು ಮತ್ತು ಜಾಮೀನು ನೀಡಬೇಕು ಎಂಬ ಜೇಠ್ಮಲಾನಿ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ಅಭಿಯೋಜಕ ಭವಾನಿ ಸಿಂಗ್, ಆಕ್ಷೇಪಣೆ ಕೋರ್ಟ್‌ಗೆ ಸಲ್ಲಿಕೆ

ಸಮಯ 11.44 : ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿರುವ ಕೋರ್ಟ್ ಹೊರಗೆ ಗದ್ದಲ, ಗದ್ದಲದಿಂದಾಗಿ ವಾದ ಆಲಿಸಲು ತೊಂದರೆ. ಕೋರ್ಟ ಹೊರಗೆ ಗದ್ದಲ ಮಾಡದಂತೆ ನ್ಯಾಯಮೂರ್ತಿ ಎ.ಸಿ.ಚಂದ್ರಶೇಖರ ಅವರಿಂದ ಸೂಚನೆ

ಸಮಯ 11.35 : ಮೇಲ್ಮನವಿ ಅರ್ಜಿಯ ವಿಚಾರಣೆ ವಿಳಂಬವಾಗುವುದಾದದರೆ ಜಾಮೀನು ನೀಡುವಂತೆ ರಾಮ್ ಜೇಠ್ಮಲಾನಿ ಮನವಿ, 18 ವರ್ಷಗಳಿಂದ ಪ್ರಕರಣದ ವಿಚಾರಣೆ ನಡೆಯಿತು, ಆದ್ದರಿಂದ ಮೇಲ್ಮನವಿ ಅರ್ಜಿಯ ವಿಚಾರಣೆಯೂ ವಿಳಂಬವಾಗಬಹುದು ಎಂದು ವಾದ ಮಂಡಿಸಿದ ಜೇಠ್ಮಲಾನಿ. ಇದಕ್ಕೆ ಪೂರಕವಾಗಿ ಸುಪ್ರೀಂಕೋರ್ಟ್‌ ಆದೇಶಗಳನ್ನು ವಾದದಲ್ಲಿ ಉಲ್ಲೇಖಿಸಿದ ಜೇಠ್ಮಲಾನಿ

ಸಮಯ 11.31 : ತಮಿಳುನಾಡಿನ ಜಾಗೃತ, ವಿಚಕ್ಷಣಾ ದಳದ ಪರವಾಗಿ ಸರ್ಕಾರಿ ಅಭಿಯೋಜಕ ಭವಾನಿ ಸಿಂಗ್ ವಾದ, ಜಯಾಗೆ ಜಾಮೀನು ನೀಡಲು ಆಕ್ಷೇಪ

ಸಮಯ 11.25 : ಕೋರ್ಟ್‌ ಹಾಲ್ 28ರಲ್ಲಿ ಜಯಾ ಜಾಮೀನು ಅರ್ಜಿ ವಿಚಾರಣೆ ಆರಂಭ, ನ್ಯಾಯಮೂರ್ತಿ ಎ.ಸಿ.ಚಂದ್ರಶೇಖರ ನೇತೃತ್ವದ ಏಕಸದಸ್ಯ ಪೀಠದಲ್ಲಿ ವಿಚಾರಣೆ

ಸಮಯ 11.10 : ಜಯಲಲಿತಾ ಪ್ರಕರಣವನ್ನು ತಮಿಳುನಾಡಿಗೆ ವರ್ಗಾವಣೆ ಮಾಡಿ ಎಂದು ಕಾನೂನು ಸಂರಕ್ಷಣಾ ಸಮಿತಿ ಹೈಕೋರ್ಟ್ ರಿಜಿಸ್ಟ್ರಾರ್‌ಗೆ ಮಂಗಳವಾರ ಮನವಿ ಸಲ್ಲಿಸಿದೆ. ಜಯಾ ಪ್ರಕರಣದ ವಿಚಾರಣೆ ಕರ್ನಾಟಕದಲ್ಲಿ ನಡೆಯುವುದರಿಂದ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಸಮಯ 11 ಗಂಟೆ : ಜಯಲಲಿತಾ ಅರ್ಜಿಯ ವಿಚಾರಣೆ ನಂತರ ಸುಧಾಕರನ್, ಶಶಿಕಲಾ, ಇಳವರಸಿ ಜಾಮೀನು ಅರ್ಜಿಗಳ ವಿಚಾರಣೆ

ಸಮಯ 10.57 : ಜಯಲಲಿತಾ ಬಿಡುಗಡೆಗೆ ಆಗ್ರಹಿಸಿ ಚೆನ್ನೈನಲ್ಲಿ ವ್ಯಾಪಾರಿಗಳ ಪ್ರತಿಭಟನೆ ಅಂಗಡಿಗಳು ಬಂದ್

ಸಮಯ 10.50 : ತ್ವರಿತವಾಗಿ ಜಯಾ ಜಾಮೀನು ಅರ್ಜಿ ವಿಚಾರಣೆ ನಡೆಸುವಂತೆ ಮಾಡಿದ ಮನವಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿಗಳು

ಸಮಯ 10.47 : ತ್ವರಿತವಾಗಿ ಜಯಾ ಜಾಮೀನು ಅರ್ಜಿ ವಿಚಾರಣೆ ನಡೆಸುವಂತೆ ಕೋರ್ಟ್‌ಗೆ ಜಯಾ ಪರ ವಕೀಲರ ಮನವಿ, ಸರಣಿ ಪ್ರಕಾರ ವಿಚಾರಣೆ ಆರಂಭಿಸಿದ ನ್ಯಾಯಮೂರ್ತಿಗಳು. ಜಯಲಲಿತಾ ಪ್ರಕರಣದ ನಂ.73

ಸಮಯ 10.36 : ಕರ್ನಾಟಕ ಹೈಕೋರ್ಟ್ ಕಲಾಪ ಆರಂಭ, ಕೋರ್ಟ್‌ಗೆ ಆಗಮಿಸಿದ ಭವಾನಿ ಸಿಂಗ್, ರಾಮ್ ಜೇಠ್ಮಲಾನಿ

ಸಮಯ 10.30 : ಜಯಲಲಿತಾ ಪರ ವಕೀಲರಾದ ರಾಮ್ ಜೇಠ್ಮಲಾನಿ ಹೈಕೋರ್ಟ್‌ಗೆ ಆಗಮನ

ಸಮಯ 10.23 : ಹೊಸೂರು ರೋಡ್ ಜಂಕ್ಷನ್ ಬಳಿ ಜಯಲಲಿತಾ ಬಿಡುಗಡೆಗೆ ಆಗ್ರಹಿಸಿ ಜಯಾ ಬೆಂಬಲಿಗರಿಂದ ಪ್ರತಿಭಟನೆ

ಸಮಯ 10.15 : ಪರಪ್ಪನ ಅಗ್ರಹಾರ ಜೈಲಿನ ಸುತ್ತಮುತ್ತ ಜಯಾ ಅಭಿಮಾನಿಗಳ ದಂಡು, ಪ್ರತಿಭಟನೆ ನಡೆಸಿದರೆ ಅವರನ್ನು ಬಂಧಿಸಲು 10 ಬಿಎಂಟಿಸಿ ಬಸ್‌ಗಳನ್ನು ಕರೆಸಿಕೊಂಡ ಪೊಲೀಸರು

ಸಮಯ 10 ಗಂಟೆ : ಪರಪ್ಪನ ಅಗ್ರಹಾರ ಸುತ್ತಮುತ್ತಲಿನ ಹೋಟೆಲ್‌ಗಳಲ್ಲಿ ವಾಸ್ತವ್ಯ ಹೂಡಿರುವ ಎಐಎಡಿಎಂಕೆ ಶಾಸಕರು, ಸಂಸದರು

ಜಾಮೀನು ಅರ್ಜಿಯ ವಿಚಾರಣೆ ಮಂಗಳವಾರ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ನಡೆಯಿತು. ನ್ಯಾಯಮೂರ್ತಿ ಎ.ಸಿ.ಚಂದ್ರಶೇಖರ ಅವರ ಏಕಸದಸ್ಯ ಪೀಠ ಅರ್ಜಿಯ ವಿಚಾರಣೆ ನಡೆಸಿತು. ಖೈದಿ ನಂ 7402 ಜೆ ಜಯಲಲಿತಾ ಅವರ ಪರ ಹಿರಿಯ ವಕೀಲ ರಾಂ ಜೇಠ್ಮಲಾನಿ ವಾದ ಮಂಡಿಸಿದರೆ, ತಮಿಳುನಾಡು ಸರಕಾರದ ಪರ ಭವಾನಿ ಸಿಂಗ್ ವಾದ ಮಂಡನೆ ಮಾಡಿದರು.

ಪ್ರಕರಣದ ಸಂಕ್ಷಿಪ್ತ ವಿವರ : ಅಪಾರ ಪ್ರಮಾಣದ ಭೂಮಿ, ಬಂಗಾರ, ಸೀರೆ, ಚಪ್ಲಿ, ಕೈಗಡಿಯಾರ ಮುಂತಾದ 66 ಚಿಲ್ಲರೆ ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಯಲಲಿತಾ ಮಾಡಿಟ್ಟುಕೊಂಡಿದ್ದಾರೆ ಎನ್ನುವುದು ಈಗ ಆರೋಪವಲ್ಲ. 18 ವರ್ಷಗಳಷ್ಟು ದೀರ್ಘ ಅವಧಿಯ ವಿಚಾರಣೆ ನಂತರ ವಿಶೇಷ ನ್ಯಾಯಾಲಯ ಸೆಪ್ಟೆಂಬರ್ 27ರಂದು ಹೊರಡಿಸಿದ ತೀರ್ಪಿನ ಪ್ರಕಾರ ಆಕೆ ಅಪರಾಧಿ. [ಜಯಾ ಜಾಮೀನು ವಿಚಾರಣೆ : ಕೋರ್ಟ್ ಸುತ್ತ ನಿಷೇಧಾಜ್ಞೆ]

ಶಿಕ್ಷೆಯ ಪ್ರಮಾಣ 4 ವರ್ಷ ಬಂದೀಖಾನೆ, 100 ಕೋಟಿ ರೂಪಾಯಿ ದಂಡ, ಶ್ರೀರಂಗಂ ಕ್ಷೇತ್ರದ ಶಾಸಕ ಸ್ಥಾನದಿಂದ ಅನರ್ಹತೆ ಮತ್ತು ಹತ್ತು ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ಆದೇಶ. ಈ ತೀರ್ಪು ಮತ್ತು ಶಿಕ್ಷೆಯನ್ನು ಪ್ರಶ್ನಿಸಿ ಜಯಾ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka high court rejected a plea for bail by the imprisoned former chief minister of Tamil Nadu, Jayaram Jayalalitha on Tuesday, October 7. High Court said, it found no reason to suspend her conviction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more