ಜಯಾ ವಿರುದ್ಧದ ಮೇಲ್ಮನವಿಗೆ ಕಾನೂನು ತೊಡಕಿದೆಯೇ?
ಬೆಂಗಳೂರು, ಮೇ 27 : ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿಗಳಿಕೆ ಪ್ರಕರಣದ ತೀರ್ಪಿನ ಕುರಿತು ಮೇಲ್ಮನವಿ ಸಲ್ಲಿಸುವ ಬಗ್ಗೆ ಕರ್ನಾಟಕ ಸರ್ಕಾರ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಮೇಲ್ಮನವಿ ಕುರಿತು ಎರಡು ವಿಚಾರಗಳಲ್ಲಿ ಸರ್ಕಾರಕ್ಕೆ ಕಾನೂನು ಇಲಾಖೆಯಿಂದ ಸ್ಪಷ್ಟೀಕರಣ ಬೇಕಾಗಿದೆ.
ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಕುರಿತು ತೀರ್ಮಾನ ಕೈಗೊಂಡಿಲ್ಲ. ಕಾನೂನು ಇಲಾಖೆ ವರದಿ ನೀಡಿದ ಬಳಿಕ ನಿರ್ಧಾರ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಲಾಗಿದೆ. [ಜಯಲಲಿತಾ ಪ್ರಕರಣ Timeline]

ಕಾನೂನು ತಜ್ಞರ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿರುವ ಇಲಾಖೆ ವರದಿಯನ್ನು ತಯಾರಿಸುತ್ತಿದೆ. ಸದ್ಯ, ಜಯಲಲಿತಾ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವುದರಿಂದ ಮೇಲ್ಮನವಿ ಸಲ್ಲಿಸುವ ಬಗ್ಗೆ ಕಾನೂನು ತೊಡಕುಗಳು ಎದುರಾಗಿವೆ. [ಮೇಲ್ಮನವಿ ಸಲ್ಲಿಸಲು ಡಿಎಂಕೆ ತೀರ್ಮಾನ]
ಮುಖ್ಯಮಂತ್ರಿಯಾಗಿದ್ದಾರೆ : ಜಯಲಲಿತಾ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವುದರಿಂದ ಕಾನೂನು ರೀತಿಯ ಹುದ್ದೆಯಲ್ಲಿದ್ದಾರೆ. ಆದ್ದರಿಂದ, ಅವರ ವಿರುದ್ಧ ಮೇಲ್ಮನವಿಯನ್ನು ಹೇಗೆ ಸಲ್ಲಿಸಬೇಕು? ಎಂಬ ಬಗ್ಗೆ ಕಾನೂನು ಇಲಾಖೆ ಮಾಹಿತಿ ಸಂಗ್ರಹಣೆ ಮಾಡುತ್ತಿದೆ. [ಬಿ.ವಿ.ಆಚಾರ್ಯ ಸಂದರ್ಶನ]
ಎಸ್‌ಪಿಪಿ ನೇಮಕ : ಹೈಕೋರ್ಟ್‌ನಲ್ಲಿ ಪ್ರಕರಣದ ಪರವಾಗಿ ವಾದ ಮಾಡಲು ಬಿ.ವಿ.ಆಚಾರ್ಯ ಅವರನ್ನು ಕರ್ನಾಟಕ ವಿಶೇಷ ಸರ್ಕಾರಿ ಅಭಿಯೋಜಕರಾಗಿ ನೇಮಕ ಮಾಡಿಕೊಂಡಿತ್ತು. ಈಗ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರೆ ಅಲ್ಲಿಯೂ ಅವರು ವಾದ ಮಂಡಿಸಬಹುದೇ?, ಅವರನ್ನು ನೇಮಕ ಮಾಡಿಕೊಳ್ಳಲು ಮುಖ್ಯ ನ್ಯಾಯಮೂರ್ತಿಗಳ ಅನುಮತಿ ಬೇಕೆ? ಎಂಬ ಬಗ್ಗೆ ಇಲಾಖೆ ಮಾಹಿತಿ ಸಂಗ್ರಹಿಸುತ್ತಿದೆ.
ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜೆ ಜಯಲಲಿತಾ ಸೇರಿದಂತೆ ನಾಲ್ವರು ಅಪರಾಧಿಗಳನ್ನು ನಿರ್ದೋಷಿಗಳು ಎಂದು ಕರ್ನಾಟಕ ಹೈಕೋರ್ಟ್ ವಿಶೇಷ ಪೀಠದ ನ್ಯಾಯಮೂರ್ತಿ ಸಿ.ಆರ್.ಕುಮಾರಸ್ವಾಮಿ ಮೇ 11ರಂದು ತೀರ್ಪು ನೀಡಿದ್ದರು. ಮೇ.23ರಂದು ಜಯಲಲಿತಾ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. [ಪಿಟಿಐ ಚಿತ್ರ]












Click it and Unblock the Notifications