ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ನಾನೂ ಆಕಾಂಕ್ಷಿ:ಟಿಬಿ ಜಯಚಂದ್ರ
ತುಮಕೂರು, ಜೂನ್ 16: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿ ಇನ್ನೊಂದು ಹೆಸರು ಸೇರ್ಪಡೆಯಾಗಿದೆ. ನಾನೂ ಕೂಡ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಹೇಳುವ ಮೂಲಕ ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರು ತಮ್ಮ ಆಸೆಯನ್ನು ಹೊರಹಾಕಿದ್ದಾರೆ.
ಶನಿವಾರ ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಟಿ.ಬಿ. ಜಯಚಂದ್ರ, ಅತಿ ಚಿಕ್ಕ ವಯಸ್ಸಿನಲ್ಲಿ ಕಾಂಗ್ರೆಸ್ ಪಕ್ಷ ಸೇರಿದೆ, ಕಿರಿಯ ವಯಸ್ಸಿನಲ್ಲಿಯೇ ವಿಧಾನಸಭೆ ಪ್ರವೇಶಿಸಿದೆ, ಅಂದಿನಿಂದ ಇಂದಿನವರೆಗೂ ನಾನು ಕಾಂಗ್ರೆಸ್ ಪಕ್ಷಕ್ಕಾಗಿಯೇ ದುಡಿದಿದ್ದೇನೆ, ಪಕ್ಷ ಸಂಘಟನೆ ಮಾಡಿದ್ದೇನೆ, ಹಲವು ಬಾರಿ ಸಚಿವನಾಗಿದ್ದೇನೆ ಎಂದರು.
ಸಿದ್ದರಾಮಯ್ಯ ಅವರ ಸರ್ಕಾರದ 5 ವರ್ಷಗಳ ಅವಧಿಯಲ್ಲಿ ಹಲವು ಸಂಕಷ್ಟಗಳನ್ನು ಎದುರಿಸುವ ಸಂದರ್ಭದಲ್ಲಿ ಸರ್ಕಾರದ ಉಳಿವಿಗೆ ಟೊಂಕಕಟ್ಟಿ ನಿಂತಿದ್ದೇನೆ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಹಾಗೂ ರಾಜ್ಯ ಉಸ್ತುವಾರ ಕೆ.ಸಿ. ವೇಣುಗೋಪಾಲ್ , ಸಿದ್ದರಾಮಯ್ಯ ಸೇರಿದಂತೆ ಹಲವರ ಬಳಿ ಈ ಕುರಿತಾಗಿ ಚರ್ಚಿಸಿದ್ದೇನೆ ಎಂದು ಹೇಳಿದರು.

ಸೂಕ್ತ ಸಂದರ್ಭದಲ್ಲಿ ಪಕ್ಷದ ವರಿಷ್ಠರು ಸೋನಿಯಾಗಾಂಧಿ, ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡುತ್ತೇನೆ, ಇಲ್ಲಿ ವರೆಗೆ ಸರ್ಕಾರ ಸರಿಯಾಗಿ ರಚನೆಯಾಗಿರಲಿಲ್ಲ, ಈಗ ಅದು ಸರಿಹೋಗುತ್ತಿದೆ, ಮನಸ್ತಾಪಗಳು ಭಿನ್ನಾಭಿಪ್ರಾಯಗಳು ಶಮನವಾಗುತ್ತಿದೆ. ಅಂದರೆ ಅದರ ಅರ್ಥ ಪೂರ್ಣಾವಧಿ ಅಂತಲ್ಲ, ಕುಮಾರಸ್ವಾಮಿಯವರು ಯಾವ ಉದ್ದೇಶ ವಿಟ್ಟುಕೊಂಡು ಒಂದು ವರ್ಷ ಅಂತಾ ಹೇಳಿದ್ದಾರೋ ಗೊತ್ತಿಲ್ಲ ಎಂದರು.
ದಾಖಲೆಯ ಅವಧಿಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಡಾ.ಜಿ.ಪರಮೇಶ್ವರ ಅವರು, ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಈಗ ಉಪ ಮುಖ್ಯಮಂತ್ರಿಯಾಗಿದ್ದಾರೆ.ಅವರಿಂದ ತೆರವಾಗಿರುವ ಅಧ್ಯಕ್ಷ ಸ್ಥಾನಕ್ಕೆ ಹಲವಾರು ಮಂದಿ ಲಾಬಿ ನಡೆಸಿದ್ದಾರೆ.
ಇದೀಗ ಹೊಸದಾಗಿ ಹಿರಿಯ ಕಾಂಗ್ರೆಸ್ಸಿಗ ಎಂಬಿ ಪಾಟೀಲ್ ಅವರ ಹೆಸರು ಕೇಳಿ ಬಂದಿರುವುದರಿಂದ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ, ದಲಿತ ಹೀಗೆ ವಿವಿಧ ಜಾತಿಯ ಮುಖಂಡರು ರೇಸಿನಲ್ಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರ ಯಾರ ಹೆಸರು: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಚಿವ. ಎಂ.ಬಿ. ಪಾಟೀಲ್ ಹಾಗೂ ಕೆ.ಎಚ್. ಮುನಿಯಪ್ಪ, ಡಿಕೆ ಶಿವಕುಮಾರ್, ಬಿಕೆ ಹರಿಪ್ರಸಾದ್, ಎಚ್ ಸಿ. ಮಹಾದೇವಪ್ಪ ಹೆಸರುಗಳು ಮತ್ತೊಮ್ಮೆ ಕೇಳಿ ಬಂದಿದೆ. ಸಿಎಂ ಸಿದ್ದರಾಮಯ್ಯ ಆಪ್ತರಾದ ಇವರಲ್ಲದೆ, ಸತೀಶ್ ಜಾರಕಿಹೊಳಿ ಹೆಸರು ಹೊಸದಾಗಿ ಸೇರ್ಪಡೆಗೊಂಡಿದೆ. ಈ ಮೂಲಕ ತಮ್ಮ ಆಪ್ತರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿ, ಸಿದ್ದರಾಮಯ್ಯ ಅವರು ಎಲ್ಲವನ್ನು ನಿಯಂತ್ರಿಸಲಿದ್ದಾರೆ ಎಂಬ ಸುದ್ದಿಯಿದೆ. ಆದರೆ, ಇವರಿಬ್ಬರು ಈಗ ಹಿಂದೇಟು ಹಾಕುತ್ತಿರುವುದು ಹೈಕಮಾಂಡಿಗೆ ತಲೆನೋವಾಗಿದೆ.












Click it and Unblock the Notifications