ಜನಿವಾರ ವಿವಾದ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಅಶೋಕ್ ದೂರು
ಇತ್ತೀಚೆಗೆ ಭಾರೀ ವಿವಾದಕ್ಕೆ ಕಾರಣವಾಗಿದ್ದ ಜನಿವಾರ ಪ್ರಕರಣದ ವಿರುದ್ಧ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಲಿಖಿತ ದೂರು ನೀಡಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡುವ ಮೂಲಕ ಮಾನ ಹಕ್ಕುಗಳ ಕದ ತಟ್ಟಿದ್ದಾರೆ.
ಈ ಬಗ್ಗೆ ಬರೆದಿರುವ ಪತ್ರದಲ್ಲಿ, ಏಪ್ರಿಲ್ 23ರಂದು ರಾಜ್ಯಾದ್ಯಂತ ಹಲವಾರು ಕೇಂದ್ರಗಳಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (CET) ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ಧಾರ್ಮಿಕ ಚಿಹ್ನೆಗಳಾದ ಜನಿವಾರ (ಯಜ್ಞೋಪವೀತ), ಶಿವದಾರ ಇತ್ಯಾದಿಗಳನ್ನು ತೆಗೆದುಹಾಕಲು ಒತ್ತಾಯಿಸಲಾಯಿತು. ರಾಜ್ಯ ಸರ್ಕಾರವು ವೈಯಕ್ತಿಕ ನಂಬಿಕೆಗಳ ಉಲ್ಲಂಘನೆ ನಡೆಸಿರುವುದನ್ನು ಖಂಡಿಸಿ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದ್ದೇನೆ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ನಾಗರಿಕರ, ವಿಶೇಷವಾಗಿ ಯುವಕರ ಹಕ್ಕುಗಳು ಮತ್ತು ಘನತೆಯನ್ನು ಕಾಪಾಡಲು ನಿಟ್ಟಿನಲ್ಲಿ ತ್ವರಿತ ಮತ್ತು ಸೂಕ್ತ ಕ್ರಮ ಕೈಗೊಳ್ಳುವಂತೆ ಆಯೋಗಕ್ಕೆ ಮನವಿ ಮಾಡಿದ್ದೇನ ಎಂದೂ ತಿಳಿಸಿದ್ದಾರೆ.

ಹಿಂದೂ ಸಮುದಾಯದ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಮತ್ತು ಮಾನವನ ಮೂಲಭೂತ ಹಾಗೂ ಧಾರ್ಮಿಕ ಹಕ್ಕುಗಳ ಸ್ಪಷ್ಟ ಉಲ್ಲಂಘನೆಗೆ ಪೋತ್ಸಾಹ ನೀಡಿರುವ, ರಾಜ್ಯದಲ್ಲಿ ಹಿಂದೂ ಸಮುದಾಯದಲ್ಲಿ ಗೊಂದಲ ಸೃಷ್ಟಿಸಲು ನಡೆಯುತ್ತಿರುವ ಘಟನೆಗಳ ಬಗ್ಗೆ ತೀವ್ರ ನೋವಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಸಮುದಾಯಗಳು, ಧರ್ಮಗಳು ಮತ್ತು ಜಾತಿಗಳ ನಡುವೆ ಅಸಂಗತತೆಯನ್ನು ಬೆಳೆಸುವ ಬೆಳವಣಿಗೆಗಳು ಹೆಚ್ಚು ಆಗಾಗ್ಗೆ ಆಗುತ್ತಿವೆ. ಸ್ಪರ್ಧಾತ್ಮಕ ಪರೀಕ್ಷೆಗಳ ಸಮಯದಲ್ಲಿ ಹಿಂದೂ ಧರ್ಮಕ್ಕೆ ಸೇರಿದ ವಿದ್ಯಾರ್ಥಿಗಳನ್ನು ಆಯ್ದ ಮತ್ತು ಅವರ ವಿಷಯದಲ್ಲಿ ಕೆಟ್ಟದಲ್ಲಿ ನಡೆಸಿಕೊಳ್ಳುವ ಮೂಲಕ ತಾರತಮ್ಯದಿಂದ ಎಸಗಿರುವ ಘಟನೆ ರಾಜ್ಯ ಸರ್ಕಾರದ ಮನಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅಶೋಕ್ ದೂರಿದ್ದಾರೆ.
ಇತ್ತೀಚಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ (CET) ಸಮಯದಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಲವಾರು ಹಿಂದೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಪವಿತ್ರ ಧಾರ್ಮಿಕ ಚಿಹ್ನೆಗಳಾದ ಜನಿವಾರ, ಶಿವದಾರಗಳನ್ನು ತೆಗೆದುಹಾಕಲು ಒತ್ತಾಯಿಸಲಾಯಿತು ಎಂದು ವರದಿಯಾಗಿದೆ. ಈ ಪವಿತ್ರ ವಸ್ತುಗಳು ಅವರ ಧಾರ್ಮಿಕ ನಂಬಿಕೆಗಳ ಸಂಕೇತವಾಗಿದೆ. ಈ ಮೂಲಕ ರಾಜ್ಯ ಸರ್ಕಾರ ಅವರ ಧಾರ್ಮಿಕ ಭಾವನೆಗಳ ಮೇಲೆ ಬಲವಾದ ಹೊಡೆತ ನೀಡಿದೆ. ಈ ಹಿಂದೆ, ಇತರೆ ಪರೀಕ್ಷೆಗಳಲ್ಲಿ ಇದೇ ರೀತಿಯ ನಿರ್ದೇಶನಗಳನ್ನು ನಡೆದಿತ್ತು. ಇದರಲ್ಲಿ ಹಿಂದೂ ಹುಡುಗಿಯರು ತಮ್ಮ ಮಂಗಳಸೂತ್ರಗಳು, ಬಳೆಗಳು ಮತ್ತು ಕಾಲುಂಗುರಗಳನ್ನು ತೆಗೆದು ಹಾಕಿಸಲಾಯಿತು. ಇಂತಹ ಘಟನೆಗಳು ವೈಯಕ್ತಿಕ ನಂಬಿಕೆಗಳನ್ನು ಉಲ್ಲಂಘಿಸುವುದು ಜತೆಗೆ ಮನಸ್ಸನ್ನು ಘಾಸಿಗೊಳ್ಳಿಸುವ ವಿಷಯ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ವಿಪರ್ಯಾಸವೆಂದರೆ, ಇದೇ ಪರೀಕ್ಷೆಗಳ ಸಮಯದಲ್ಲಿ, ಮುಸ್ಲಿಂ ವಿದ್ಯಾರ್ಥಿನಿಯರು ಬುರ್ಖಾ ಮತ್ತು ಹಿಜಾಬ್ ಧರಿಸಿ ಕಾಣಿಸಿಕೊಳ್ಳಲು ಅನುಮತಿಸಲಾಗಿತ್ತು. ಈ ಮೂಲಕ ರಾಜ್ಯ ಸರ್ಕಾರ ತೋರುತ್ತಿರುವ ತಾರತಮ್ಯ ಕಾಣಿಸುತ್ತಿದೆ. ಇದು ಧಾರ್ಮಿಕ ತಟಸ್ಥತೆ ಮತ್ತು ಕಾನೂನಿನ ಅಡಿಯಲ್ಲಿ ಸಮಾನತೆಯ ಬಗ್ಗೆ ಗಂಭೀರ ಕಳವಳವನ್ನು ಉಂಟುಮಾಡುತ್ತದೆ ಎಂದಿದ್ದಾರೆ.
ಯಾವುದೇ ಕಾನೂನು ಆದೇಶವಿಲ್ಲದೆ ಕೈಗೊಳ್ಳಲಾದ ಕ್ರಮಗಳು, ಭಾರತದ ಸಂವಿಧಾನದಡಿಯಲ್ಲಿ ಪ್ರತಿಪಾದಿಸಲಾದ ತತ್ವಗಳನ್ನು, ವಿಶೇಷವಾಗಿ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು (ಆರ್ಟಿಕಲ್ 25) ಮತ್ತು ಘನತೆ ಮತ್ತು ಗೌಪ್ಯತೆಯ ಹಕ್ಕನ್ನು (ಆರ್ಟಿಕಲ್ 21) ಉಲ್ಲಂಘಿಸುತ್ತದೆ. ಇದಲ್ಲದೆ, ಈ ಘಟನೆಯಿಂದ ವಿದ್ಯಾರ್ಥಿಗಳ ಮೇಲೆ ಹಾನಿಕಾರಕ ಮಾನಸಿಕ ಪರಿಣಾಮವನ್ನು ಬೀರಿದೆ. ಅವರ ಶೈಕ್ಷಣಿಕ ಕಾರ್ಯಕ್ಷಮತೆ ಮತ್ತು ಮಾನಸಿಕ ಯೋಗಕ್ಷೇಮಕ್ಕೆ ಅಡ್ಡಿಪಡಿಸಿದೆ ಎಂದು ಹೇಳಿದ್ದಾರೆ.
ಸಾರ್ವಜನಿಕರ ಆಕ್ರೋಶ ಮತ್ತು ನಾಗರಿಕ ಸಮಾಜ, ಸಾಮಾಜಿಕ ಸಂಘಟನೆಗಳು ಮತ್ತು ರಾಜಕೀಯ ಪ್ರತಿನಿಧಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರೂ, ಸರ್ಕಾರದಿಂದ ಯಾವುದೇ ಪ್ರತಿಕ್ರಯೆ ಬಂದಿಲ್ಲ. ವ್ಯಾಪಕ ಖಂಡನೆಗಳ ಹೊರತಾಗಿಯೂ ಆಡಳಿತದ ಮೌನ ಮತ್ತು ನಿಷ್ಕ್ರಿಯತೆಯು ಈ ಕಾನೂನುಬಾಹಿರ ಉಲ್ಲಂಘನೆಯನ್ನು ಸೂಚಿಸುತ್ತದೆ. ಎಲ್ಲ ನಾಗರಿಕರ ಹಕ್ಕುಗಳು ಮತ್ತು ಘನತೆಯನ್ನು ಕಾಪಾಡಲು ಆಯೋಗವು ತ್ವರಿತ ಮತ್ತು ಸೂಕ್ತ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದು ನಾನು ನಂಬುತ್ತೇನೆ. ವಿಶೇಷವಾಗಿ ಯುವಕರ ಭವಿಷ್ಯವು ತಾರತಮ್ಯ ಮತ್ತು ಕಾನೂನುಬಾಹಿರ ಅಭ್ಯಾಸಗಳಿಂದ ಅಪಾಯಕ್ಕೆ ಒಳಗಾಗಬಾರದು ಎಂದು ಅಶೋಕ್ ಹೇಳಿದ್ದಾರೆ.
ಸಾವಿರಾರು ವರ್ಷಗಳಿಂದ ನಂಬಿಕೊಂಡು ಬಂದ ನಂಬಿಕೆಯನ್ನು ಕಿತ್ತುಹಾಕುವ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ. ಲಿಂಗಾಯತರ ಶಿವದಾರವನ್ನು ಕತ್ತರಿಸಿದ್ದರು, ಈಗ ಸಿಇಟಿ ಪರೀಕ್ಷೆಯಲ್ಲಿ ಒಬ್ಬ ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರ ಕತ್ತರಿಸಿ ಬಿಸಾಡಲಾಗಿದೆ. ಜತೆಗೆ ತಾಳಿ, ಓಲೆಗೂ ಕೈ ಹಾಕಿದ್ದಾರೆ. ಈ ಹಿಂದೆ ಹಿಜಾಬ್ ಬಗ್ಗೆ ವಿವಾದ ಆಗಿದ್ದಾಗ, ಅದರ ಪರವಾಗಿ ಕಾಂಗ್ರೆಸ್ ನಾಯಕರು ಬೀದಿಗೆ ಇಳಿದಿದ್ದರು. ಕಾಂಗ್ರೆಸ್‌ನ ಆಡಳಿತದಲ್ಲಿ ಹಿಂದೂಗಳು ಕುಂಕುಮ ಇಟ್ಟುಕೊಳ್ಳಲು, ಜನಿವಾರ ಹಾಕಿಕೊಳ್ಳಲು ಅವಕಾಶವಿಲ್ಲ. ಹಿಜಾಬ್ ಹಾಕಿಕೊಂಡವರನ್ನು ತಪಾಸಣೆ ಮಾಡುವುದಿಲ್ಲ. ಹಿಂದೂಗಳ ಮೇಲೆ ಸಿಎಂ ಸಿದ್ದರಾಮಯ್ಯನವರಿಗೆ ಕೋಪ ಇದೆ. ಈ ಸರ್ಕಾರ ಹಿಂದೂಗಳನ್ನು ದಮನ ಮಾಡುತ್ತಿದೆ. ಈ ಮೂಲಕ ವಿಕೃತ ಸಂತೋಷ ಕಂಡುಕೊಳ್ಳುತ್ತಿದೆ ಎಂದು ದೂರಿದ್ದಾರೆ.












Click it and Unblock the Notifications