ಸಿಎಂ ಸಿದ್ದರಾಮಯ್ಯ ಮೇಲೆ ಗಂಭೀರ ಆರೋಪ, ವಜಾಗೊಳಿಸಲು ಆಗ್ರಹ
ಬೆಂಗಳೂರು, ಸೆಪ್ಟಂಬರ್ 22: ಕರ್ನಾಟಕದ ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಚನಾವಣೆ ನೀತಿ ಸಂಹಿತೆ ಉಲ್ಲಂಘಿಸಿ, ವಾಮ ಮಾರ್ಗದ ಮೂಲಕ ಅಕ್ರಮವಾಗಿ ಮುಖ್ಯಮಂತ್ರಿ ಆಗಿದ್ದಾರೆ ಎಂಬ ಗಂಭೀರ ಆರೋಪ ಸಿಎಂ ಸಿದ್ದರಾಮಯ್ಯ ಅವರ ಮೇಲೆ 'ಜನತಾ ಪಕ್ಷ' ಮಾಡಿದೆ.
ಈ ಕುರಿತು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿರುವ ಜನತಾ ಪಕ್ಷವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಜಾಪತಿನಿಧಿ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿಯವರನ್ನು ತಕ್ಷಣವೇ ಶಾಸಕ ಸ್ಥಾನದಿಂದ ವಜಾಗೊಳಿಬೇಕು ಎಂದು ಪಕ್ಷವು ದೂರಿನಲ್ಲಿ ಒತ್ತಾಯಿಸಿದೆ.

ದೂರಿನಲ್ಲಿ 'ಇತ್ತೀಚೆಗೆ ನಡೆದ 2023ರ ವಿಧಾನಸಭಾ ಚುನಾವಣಾ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಉಮೇದುವಾರರಾಗಿ ವರುಣಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯ ರವರು, ಮತದಾರರಿಗೆ ಸಮುದಾಯವಾರು ಅಮಿಷಗಳನ್ನು ಒಡ್ಡಿ, ಕುಕ್ಕರ್, ಮಿಕ್ಸಿ, ಇಸ್ತ್ರಿ ಪೆಟ್ಟಿಗೆ ಇತ್ಯಾದಿಗಳನ್ನು ವಿತರಿಸಿದ್ದಾರೆ.
ಹೀಗೆ ಆಮಿಷ ಒಡ್ಡುವುರು ಚುನಾವಣಾ ನೀತಿ ಸಂಹಿತೆ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ. ಪ್ರಜಾಪ್ರತಿನಿಧಿ ಕಾಯ್ದೆಗೆ ವಿರುದ್ಧವಾಗಿರುತ್ತದೆ. ಪ್ರಜಾಪ್ರಭುತ್ವದ ಮೂಲ ಆಶಯ ಮತ್ತು ಸಂವಿಧಾನ ವಿರೋಧಿ ಕೃತ್ಯವಾಗಿರುತ್ತದೆ ಎಂದು ಜನತಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ನಾಗೇಶ್ ಅವರು ದೂರಿನಲ್ಲಿ ವಿವರಿಸಿದರು.
ಯತೀಂದ್ರ ಹೇಳಿಕೆ, 2 ಕೋಟಿ ರೂ. ಖರ್ಚು ಲೆಕ್ಕ ಉಲ್ಲೇಖ
ಸಿದ್ಧರಾಮಯ್ಯನವರು ಚುನಾವಣಾ ಸಮಯದಲ್ಲಿ ವಸ್ತುಗಳನ್ನು ವಿತರಿಸಿರುವ ಬಗ್ಗೆ ಅವರ ಪುತ್ರ ಮಾಜಿ ಶಾಸಕ ಯತೀಂದ್ರ ರವರೇ ನೀಡಿರುವ ಹೇಳಿಕೆಯ ಆಡಿಯೋ ಮತ್ತು ಪತ್ರಿಕಾ ವರದಿಗಳು ಪ್ರಸಾರವಾಗುತ್ತಿವೆ. ಇಷ್ಟೇ ಅಲ್ಲದೆ, ಸಿದ್ದರಾಮಯ್ಯನವರ ಅಭಿಮಾನಿಯಾದ ಗೋಪಿಕೃಷ್ಣ ಎಂಬುವರು ಪಕ್ಷದ ಟಿಕೇಟು ಆಕಾಂಕ್ಷಿಯಾಗಿ ಸಿದ್ಧರಾಮಯ್ಯನವರಿಂದ ಭರವಸೆ ಪಡೆದು ಸುಮಾರು 2 ಕೋಟಿಯಷ್ಟು ಹಣವನ್ನು ಸಿದ್ಧರಾಮಯ್ಯನವರ ಹಾಗೂ ಕಾಂಗ್ರೆಸ್ ಪಕ್ಷದ ಪರವಾಗಿ ಖರ್ಚು ಮಾಡಿದ್ದಾರೆ. ಸಿದ್ದರಾಮಯ್ಯನವರು ಎಸಗಿರುವ ಹುಸಿ ಭರವಸೆ ನೀಡಿ, ನಂಬಿಕೆದ್ರೋಹ ಎಸಗಿರುವುದಾಗಿ ಗೋಳಿಡುತ್ತಿರುವ ದೃಶ್ಯಾವಳಿಯೂ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದೆ ಎಂದು ಹೇಳಿದರು.

ಪ್ರಜಾಪ್ರಭುತ್ವದ ಮೌಲ್ಯ ಗಾಳಿಗೆ ತೂರಿದ ಸಿದ್ದರಾಮಯ್ಯ
ಸಂವಿಧಾನದ ಮೂಲ ಆಶಯಕ್ಕೆ ಕೊಡಲಿ ಪೆಟ್ಟು ಹಾಕಿದಂತೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ ಚುನಾವಣೆಯಲ್ಲಿ ಅಕ್ರಮವಾಗಿ ಗೆಲುವು ಸಾಧಿಸಿರುವ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿ ಆಗಿರುವುದು ಪ್ರಜಾಪ್ರಭುತ್ವದ ವಿಡಂಬನೆ ಆಗಿದೆ. ಇದು ಚುನಾವಣಾ ಪ್ರಕ್ರಿಯೆಯನ್ನೇ ಅಪಹಾಸ್ಯ ಮಾಡಿದಂತಿದೆ.
ಸಂವಿಧಾನ ವಿರೋಧಿ ಕೃತ್ಯ ಹಾಗೂ ಚುನಾವಣಾ ನೀತಿ, ಸಂಹಿತೆಯನ್ನು ಉಲ್ಲಂಘಿಸಿ ವಾಮಮಾರ್ಗದಿಂದ ಅಧಿಕಾರ ಹಿಡಿದಿರುವ ಸಿದ್ಧರಾಮಯ್ಯ ರವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು. ಅವರ ವಿರುದ್ಧ ಸೂಕ್ತ ಹಾಗೂ ಪಾರದರ್ಶಕ ತನಿಖೆ ನಡೆಸಬೇಕು.
ಸಿಎಂ ಆಗಿ ಮುಂದುವರಿದರೆ ಸಾಕ್ಷ್ಯ ನಾಶ?
ಒಂದು ವೇಳೆ ಅವರು ಅಧಿಕಾರದಲ್ಲಿ ಮುಂದುವರಿದರೆ ಅಧಿಕಾರ ದುರ್ಬಳಕೆ ಮಾಡಿಕೊಂಡು ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಸಾಧ್ಯತೆ ಇರುತ್ತದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಇದೇ ರೀತಿ ಅಕ್ರಮ ಚಟುವಟಿಕೆ, ಆಮಿಷ, ನಂಬಿಕೆದ್ರೋಹ ಎಸಗುವ ಅಪಾಯವಿದೆ. ಆದ್ದರಿಂದ ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ತಕ್ಷಣ ವಜಾಗೊಳಿಸಿ, ಹೊಸದಾಗಿ ಪಾರದರ್ಶಕ ಚುನಾವಣೆ ನಡೆಸುವುದು ಅತ್ಯಗತ್ಯವಾಗಿದೆ ಎಂದು ಮನವರಿಕೆ ಮಾಡಿದ್ದಾರೆ.
ಯತೀಂದ್ರ ಸಿದ್ಧರಾಮಯ್ಯ ಅವರ ಹೇಳಿಕೆ, ಮೂಡಲಗಿಯಿಂದ ಭೀಮಪ್ಪ ಗಡಾದ್ ಎಂಬ ಆರ್‌ಟಿಐ ಕಾರ್ಯಕರ್ತರು ಮಾನ್ಯ ರಾಜ್ಯ ಚುನಾವಣಾ ಆಯೋಗ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿರುವುದು. ಅಲ್ಲದೇ ತರೀಕೆರೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಗೋಪಿಕೃಷ್ಣ ಎಂಬುವರು ಸಿದ್ಧರಾಮಯ್ಯನವರ ಪರವಾಗಿ ಕುಕ್ಕರ್, ಮಿಕ್ಸಿ, ಟಿ.ವಿ., ಇತ್ಯಾದಿಗಳನ್ನು ವಿತರಿಸಿ ಸುಮಾರು 2 ಕೋಟಿ ರೂ.ಗಳನ್ನು ಖರ್ಚು ಮಾಡಿರುವ ವಿಡಿಯೋ ಮತ್ತು ಹೇಳಿಕೆಗಳ ಲಿಂಕ್‌ಗಳನ್ನು ಚುನಾವಣಾಧಿಕಾರಿಗಳಿಗೆ ಜನತಾ ಪಕ್ಷ ಲಿಂಕ್ ಒದಗಿಸಿದೆ.












Click it and Unblock the Notifications