Breaking; ಹೊಸ ವರ್ಷ ಹೊಸ ಹೆಜ್ಜೆ ಇಡಲಿರುವ ಜನಾರ್ದನ ರೆಡ್ಡಿ
ಬೆಂಗಳೂರು, ಜನವರಿ 01; ಈಗಾಗಲೇ ಹೊಸದಾದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ' ಸ್ಥಾಪನೆ ಮಾಡಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೊಸ ವರ್ಷದ ಹೊಸ ಹೆಜ್ಜೆಯನ್ನು ಇಡಲಿದ್ದಾರೆ.
ಫೇಸ್ ಬುಕ್ ಪೋಸ್ಟ್ ಮೂಲಕ ಜನಾರ್ದನ ರೆಡ್ಡಿ ಈ ಕುರಿತು ಮಾಹಿತಿ ನೀಡಿದ್ದಾರೆ. ಭಾನುವಾರ ಬೆಳಗ್ಗೆ 10.30 ಕ್ಕೆ ನನ್ನ ಧರ್ಮಪತ್ನಿ ಶ್ರೀಮತಿ ಲಕ್ಷ್ಮೀ ಅರುಣಾ ರವರು ಬಳ್ಳಾರಿ ಜಿಲ್ಲೆಯ ಗ್ರಾಮಾಂತರ ಕ್ಷೇತ್ರದ ಬೆಣಕಲ್ಲು ಗ್ರಾಮದಿಂದ 'ಕಲ್ಯಾಣ ರಾಜ್ಯ ಪ್ರಗತಿ ಪಕ್ಷ'ದ ಚುನಾವಣಾ ಪ್ರಚಾರವನ್ನು ಆರಂಭಿಸಲಿದ್ದಾರೆ ಎಂದು ಹೇಳಿದ್ದಾರೆ.
ಊರಿನ ಗ್ರಾಮ ದೇವತೆಯಾದ ದ್ಯಾಮವ್ವ ದೇವಿಗೆ ಪೂಜೆ ಸಲ್ಲಿಸಿ, ಬೀರಪ್ಪ ತಾತನವರ ದೇವಸ್ಥಾನಕ್ಕೆ ತೆರಳಿ ಪ್ರಾರ್ಥಿಸಿ, ಆಶೀರ್ವಾದ ಪಡೆಯಲಿದ್ದಾರೆ ಎಂದು ಫೇಸ್ ಬುಕ್ ಪೋಸ್ಟ್‌ನಲ್ಲಿ ಮಾಹಿತಿ ನೀಡಿದ್ದಾರೆ.

ಸಾಂಪ್ರದಾಯದಂತೆ ಒಳ್ಳೆಯ ಕೆಲಸವನ್ನು ಆರಂಭಿಸುವ ಮುನ್ನ ಆತ್ಮೀಯ ಕುರುಬ ಸಮಾಜದ ಹಿರಿಯರ ಮನೆಗೆ ತೆರಳಿ ಅಲ್ಲಿ ಉಡಿಯಕ್ಕಿ ತುಂಬುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರ ಆಶೀರ್ವಾದವನ್ನು ಪಡೆಯುವುದರ ಮುಖಾಂತರ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.
ನಾಡಿನ ಜನತೆಗೆ ಹೊಸ ವರ್ಷದ ಶುಭಾಶಯಗಳನ್ನ ಕೋರುತ್ತಾ, ನನ್ನ ಧರ್ಮ ಪತ್ನಿ ಶ್ರೀಮತಿ ಲಕ್ಷ್ಮೀ ಅರುಣಾ ಆರಂಭಿಸಲಿರುವ ಪಕ್ಷದ ಪ್ರಚಾರ ಕಾರ್ಯದಲ್ಲಿ ತಾವೆಲ್ಲರೂ ಭಾಗಿಯಾಗಿ, ತಮ್ಮಮನೆಯ ಮಗಳಾಗಿ ಸ್ವೀಕರಿಸಿ, ಹೊಸ ಪಕ್ಷಕ್ಕೆ ಶಕ್ತಿ ತುಂಬಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ. ಎಂದಿನಂತೆ ತಮ್ಮ ಪ್ರೀತಿ ಸದಾ ಜೊತೆ ಇರಲಿ ಎಂದು ಮನವಿ ಮಾಡಿದ್ದಾರೆ.
ಡಿಸೆಂಬರ್ 25ರ ಭಾನುವಾರ ಬೆಂಗಳೂರಿನ ಪಾರಿಜಾತ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಜನಾರ್ದನ ರೆಡ್ಡಿ, 'ಕರ್ನಾಟಕ ರಾಜ್ಯ ಪ್ರಗತಿ ಪಕ್ಷ' ಎಂಬ ರಾಜಕೀಯ ಪಕ್ಷ ಘೋಷಣೆ ಮಾಡಿದರು. ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರದಿಂದ ತಾವು ಚುನಾವಣಾ ಕಣಕ್ಕೆ ಇಳಿಯುತ್ತೇನೆ ಎಂದು ಹೇಳಿದ್ದರು.
ಜನಾರ್ದನ ರೆಡ್ಡಿ, "ನಾನು ಕೆಲಸ ಮಾಡಿದ ಪಕ್ಷದಿಂದ ಸ್ಥಾನಮಾನ ಸಿಗದ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಕಲ್ಯಾಣ ಪ್ರಗತಿ ಪಕ್ಷ ಸ್ಥಾಪನೆ ಮಾಡಿ ಮುಂದೆ ಹೆಜ್ಜೆ ಹಾಕುತ್ತೇನೆ. ನನ್ನ ಪತ್ನಿ ಸಹ ಸಾರ್ವಜನಿಕ ಬದುಕಿಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅವರು ನನ್ನ ಜೊತೆ ಇರುತ್ತಾರೆ" ಎಂದು ಮಾಹಿತಿ ನೀಡಿದ್ದರು.
ಲಕ್ಷ್ಮೀ ಅರುಣಾ ಬಳ್ಳಾರಿ ಗ್ರಾಮಾಂತರ ಕ್ಷೇತ್ರದಿಂದ ಪ್ರಚಾರ ಆರಂಭಿಸುವುದು ನೋಡಿದರೆ ಅದೇ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ.












Click it and Unblock the Notifications