ಜನಾರ್ದನ ರೆಡ್ಡಿಗೆ ಹೈಮಾಂಡ್ ಕಡಿವಾಣ, ಶ್ರೀರಾಮುಲುಗೆ ಹಿನ್ನಡೆ?
ಚಿತ್ರದುರ್ಗ, ಏಪ್ರಿಲ್ 27:ಜನಾರ್ದನ ರೆಡ್ಡಿ ಅವರ ರಾಜಕೀಯದ ಎರಡನೇ ಇನ್ನಿಂಗ್ಸ್‌ಗೆ ಪ್ರಾರಂಭದಲ್ಲೇ ವಿಘ್ನ ಎದುರಾಗಿದೆ. ಆಪ್ತ ಗೆಳೆಯ ಶ್ರೀರಾಮುಲು ಅವರನ್ನು ಮೊಳಕಾಲ್ಮೂರಿನಿಂದ ಗೆಲ್ಲಿಸಿಕೊಂಡು ಬರಲೇ ಬೇಕು ಎಂಬ ಹಠ ತೊಟ್ಟು ಗೆಳೆಯನೊಂದಿಗೆ ಪ್ರಚಾರದಲ್ಲಿ ತೊಡಗಿರುವ ರೆಡ್ಡಿಗೆ ಬಿಜೆಪಿ ಹೈಕಮಾಂಡ್ ಆದೇಶ ನಿರಾಸೆ ಮೂಡಿಸಿದೆ.
ಜನಾರ್ದನ ರೆಡ್ಡಿ ಅವರು ಬಹಿರಂಗ ಪ್ರಚಾರ ಮಾಡದಂತೆ ಬಿಜೆಪಿ ಹೈಕಮಾಂಡ್ ಮೌಖಿಕ ಆದೇಶ ಹೊರಡಿಸಿದೆ. 'ಜನಾರ್ದನ ರೆಡ್ಡಿ ಅವರು ಬೇಕಿದ್ದರೆ ಆಂತರಿಕ ಪ್ರಚಾರ ಮಾಡಲಿ ಆದರೆ ಬಹಿರಂಗ ಪ್ರಚಾರ ಬೇಡ, ಅದರಲ್ಲಿಯೂ ಮಾಧ್ಯಮಗಳಿಂದ ಅವರು ಅಂತರ ಕಾಯ್ದುಕೊಳ್ಳಲಿ' ಎಂದು ಬಿಜೆಪಿ ಹೈಕಮಾಂಡ್ ರೆಡ್ಡಿ ಅವರಿಗೆ ಮೌಖಿಕ ಆದೇಶ ಹೊರಡಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಜನಾರ್ದನ ರೆಡ್ಡಿ ಅವರು ಈಗಾಗಲೇ ಮೊಳಕಾಲ್ಮೂರಿನಲ್ಲಿ ಸತತವಾಗಿ ಶ್ರೀರಾಮುಲು ಅವರೊಂದಿಗೆ ಬಹಿರಂಗ ಪ್ರಚಾರಕ್ಕೆ ಇಳಿದಿದ್ದಾರೆ. ಅಲ್ಲದೆ ಚಿತ್ರದುರ್ಗ ಮತ್ತಿತರೆ ಕ್ಷೇತ್ರಗಳಲ್ಲಿಯೂ ಬಹಿರಂಗ ಪ್ರಚಾರಕ್ಕೆ ಹೋಗುವ ಸೂಚನೆಯನ್ನೂ ಅವರು ನೀಡಿದ್ದರು ಆದರೆ ಹೈಕಮಾಂಡ್ ಆದೇಶದಿಂದ ಜನಾರ್ದನ ರೆಡ್ಡಿ ಮತ್ತೆ ತೆರೆಮರೆಗೆ ಸರಿಯಬೇಕಾದ ಸರಿಯುವ ಸಾಧ್ಯತೆ ಇದೆ.

'ರೆಡ್ಡಿಗೂ ಬಿಜೆಪಿಗೂ ಸಂಬಂಧ ಇಲ್ಲ'
ಜನಾರ್ದನ ರೆಡ್ಡಿ ಅವರಿಗೂ ಬಿಜೆಪಿಗೆ ಯಾವುದೇ ಸಂಬಂಧ ಇಲ್ಲ ಎಂದು ಈ ಮುಂಚೆಯೇ ಅಮಿತ್ ಶಾ ಅವರು ಹೇಳಿಕೆ ನೀಡಿದ್ದರು. ಆದರೂ ಆ ನಂತರ ಜನಾರ್ದನ ರೆಡ್ಡಿ, ಯಡಿಯೂರಪ್ಪ ಸೇರಿದಂತೆ ಮತ್ತಿತರ ಬಿಜೆಪಿ ರಾಜ್ಯ ಮತ್ತು ರಾಷ್ಟ್ರ ಮುಖಂಡರೊಡನೆ ಬಹಿರಂಗವಾಗಿ ಕಾಣಿಸಿಕೊಂಡಿದ್ದರು.

ಬಿಜೆಪಿಗೆ ಕಳಂಕ ಅಂಟುವ ಭೀತಿ
ಜನಾರ್ದನ ರೆಡ್ಡಿ ಅವರ ಮೇಲಿನ ಪ್ರಕರಣಗಳು ಇನ್ನೂ ಇತ್ಯರ್ಥವಾಗದ ಕಾರಣ ಅವರನ್ನು ಬಿಜೆಪಿಯೊಂದಿಗೆ ಗುರುತಿಸಿಕೊಳ್ಳುವುದು ವಿರೋಧಿಗಳ ಕೈಗೆ ಕತ್ತಿ ಕೊಟ್ಟಂತೆ ಎಂಬುದು ಹೈಕಮಾಂಡ್ ಉದ್ದೇಶವಾಗಿದೆ. ರಾಜ್ಯ ಬಿಜೆಪಿಗೆ ಈಗಾಗಲೇ ಯಡಿಯೂರಪ್ಪ ಅವರ ಡಿನೋಟಿಫೈ ಕೇಸಿನಿಂದಾಗಿ ಭ್ರಷ್ಟ ಹಣೆ ಪಟ್ಟಿ ಇದ್ದು, ಜನಾರ್ದನ ರೆಡ್ಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಲ್ಲಿ ಇನ್ನಷ್ಟು ನಿಂದನೆ ಎದುರಿಸಬೇಕಾಗುತ್ತದೆ ಎಂದು ಹೈಕಮಾಂಡ್ ಆಲೋಚಿಸಿದಂತಿದೆ.

ರೆಡ್ಡಿ ನಿವಾಸದ ಬಳಿ ವಿಶೇಷ ಚೆಕ್‌ಪೋಸ್ಟ್
ಚುನಾವಣಾ ಆಯೋಗವೂ ಜನಾರ್ದನ ರೆಡ್ಡಿ ಅವರ ಮೇಲೆ ಕಣ್ಣಿಟ್ಟಿದ್ದು, ಅವರ ಚಿತ್ರದುರ್ಗದ ನಿವಾಸದ ಬಳಿ ವಿಶೇಷ ಚೆಕ್‌ಪೋಸ್ಟ್ ನಿರ್ಮಿಸಿ ಜನಾರ್ದನ ರೆಡ್ಡಿ ಹಾಗೂ ಅವರ ಸಹಚರರ ಮೇಲೆ ವಿಶೇಷ ಕಣ್ಣಿಟ್ಟಿದೆ. ರೆಡ್ಡಿ ಅವರು ಬಳ್ಳಾರಿಗೆ ಪ್ರವೇಶ ಮಾಡುವ ಹಾಗಿಲ್ಲದ ಕಾರಣ ಅವರು ಬಳ್ಳಾರಿ ಗಡಿಯಾದ ಮೊಳಕಾಲ್ಮೂರಿನ ಸಮೀಪ ಮನೆಯೊಂದನ್ನು ಮಾಡಿ ರಾಜಕೀಯದಲ್ಲಿ ತೊಡಗಿದ್ದಾರೆ.

ಶ್ರೀರಾಮುಲುಗೆ ಹಿನ್ನಡೆ
ಜನಾರ್ದನ ರೆಡ್ಡಿ ಅವರು ಬಹಿರಂಗ ಪ್ರಚಾರದಿಂದ ಹಿಂದೆ ಸರಿದರೆ ಶ್ರೀರಾಮುಲು ಅವರಿಗೆ ಅಲ್ಪ ಹಿನ್ನಡೆ ಆಗುವ ಸಾಧ್ಯತೆ ಇದೆ. ಅಲ್ಲದೆ ಜನಾರ್ದನ ರೆಡ್ಡಿ ಅವರ ಪ್ರಭಾವ ಬಳಸಿ ಗೆಲ್ಲಬೇಕೆಂದುಕೊಂಡಿದ್ದ ಚಿತ್ರದುರ್ಗದ ಇನ್ನೂ ಕೆಲವು ಬಿಜೆಪಿ ಅಭ್ಯರ್ಥಿಗಳಿಗೆ ಹಿನ್ನಡೆ ಆಗುವ ಸಾಧ್ಯತೆ ಇದೆ. ಚಿತ್ರದುರ್ಗದ ಇನ್ನೂ ಕೆಲವು ಕ್ಷೇತ್ರಗಳಲ್ಲಿ ಜನಾರ್ದನ ರೆಡ್ಡಿ ಅವರು ಪ್ರಚಾರ ಮಾಡುವುದಾಗಿ ಈ ಹಿಂದೆ ಹೇಳಿದ್ದರು.

ಶ್ರೀರಾಮುಲು ನಡೆ ಏನು?
ಶ್ರೀರಾಮುಲು ಅವರ ನಿಷ್ಠೆ ಪಕ್ಷಕ್ಕಿಂತಲೂ ಜನಾರ್ದನ ರೆಡ್ಡಿ ಅವರ ಕಡೆಗೆ ಹೆಚ್ಚಿರುವುದು ಗುಟ್ಟೇನು ಅಲ್ಲ. ಬಿಜೆಪಿ ಏನಾದರೂ ಜನಾರ್ದನ ರೆಡ್ಡಿ ಅವರನ್ನು ಮೂಲೆಗುಂಪು ಮಾಡಿದಲ್ಲಿ ಶ್ರೀರಾಮುಲು ಅವರು ಮುನಿಸಿಕೊಳ್ಳುವ ಸಾಧ್ಯತೆ ಹೆಚ್ಚಿಗಿದೆ. ಕಳೆದ ಬಾರಿ ಇದೇ ಕಾರಣಕ್ಕೆ ಶ್ರೀರಾಮುಲು ಅವರು ಬಿಜೆಪಿಯಿಂದ ಹೊರ ಹೋಗಿ ಬಿಎಸ್‌ಆರ್ ಕಾಂಗ್ರೆಸ್ ಸ್ಥಾಪಿಸಿದ್ದರು.












Click it and Unblock the Notifications