ಜಗದೀಶ್ ಶೆಟ್ಟರ್‌ಗೆ ಮತ್ತೆ ವಿಧಾನಸೌಧ ಭಾಗ್ಯ: ಸೋತಿದ್ದ ಲಿಂಗಾಯತ ನಾಯಕನ ಸೆಕೆಂಡ್ ಇನ್ನಿಂಗ್ಸ್ ಶುಭಾರಂಭ!
ಬೆಂಗಳೂರು: 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಂದುಕೊಂಡಂತೆ ಎಲ್ಲಾ ನಡೆದು ಹೋಗಿದೆ. ಅದರಲ್ಲೂ ಬಿಜೆಪಿಯ ಒಳಗೆ ಕುದಿಯುತ್ತಿದ್ದ ಆಂತರಿಕ ಕಿಡಿಯ ಲಾಭ ಪಡೆದ ಕಾಂಗ್ರೆಸ್‌ಗೆ ಭರ್ಜರಿ ಫಲಿತಾಂಶ ಸಿಕ್ಕಾಗಿದೆ. ಹೀಗೆ ಕಷ್ಟಕ್ಕೆ ಹೆಗಲು ಕೊಟ್ಟಿದ್ದವರನ್ನ ಮರೆಯಲು ಆಗುತ್ತಾ? ಇಲ್ಲ ಆಗಲ್ಲ. ಇದೇ ಕಾರಣಕ್ಕೆ ಸೋತಿದ್ದ ಲಿಂಗಾಯತ ನಾಯಕನ ಕೈಹಿಡಿದಿದೆ ಕಾಂಗ್ರೆಸ್!
ಇಂದಿನಿಂದ ರಾಜ್ಯ ಬಜೆಟ್ ಅಧಿವೇಶನ ಶುರುವಾಗಲಿದ್ದು, ಅದಕ್ಕೂ ಮುನ್ನ ಶಕ್ತಿಸೌಧದಲ್ಲಿ ಹಲವು ಪ್ರಮುಖ ಘಟನೆಗಳು ನಡೆದಿವೆ. ಇದರಲ್ಲಿ ಪರಿಷತ್‌ನ ನೂತನ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಕೂಡ ಒಂದಾಗಿದೆ. ಪ್ರಮುಖವಾಗಿ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಮತ್ತೆ ವಿಧಾನಸೌಧಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡರೂ ವಿಧಾನ ಪರಿಷತ್ ಸ್ಥಾನಕ್ಕೆ ಆಯ್ಕೆಯಾಗಿರುವ ಜಗದೀಶ್ ಶೆಟ್ಟರ್ 2ನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.

ಶೆಟ್ಟರ್ ಜೊತೆಗೆ ಯಾರೆಲ್ಲಾ ಪ್ರಮಾಣ?
ಹೌದು, 2023ರ ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ವಿಧಾನ ಪರಿಷತ್ ಸದಸ್ಯರಾಗಿದ್ದ ಮೂವರು ತಮ್ಮ ಸ್ಥಾನ ತೊರೆದಿದ್ರು. ಬಾಬುರಾವ್ ಚಿಂಚನ್‌ಸೂರ್, ಆರ್.ಶಂಕರ್ ಮತ್ತು ಲಕ್ಷ್ಮಣ ಸವದಿ ತಮ್ಮ ಪರಿಷತ್ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದರಿಂದ ಜೂನ್ ಅಂತ್ಯದಲ್ಲಿ ಉಪ ಚುನಾವಣೆ ನಡೆದಿತ್ತು. 3 ಸ್ಥಾನಗಳ ಪೈಕಿ ಒಂದು ಸ್ಥಾನಕ್ಕೆ ಸಚಿವ ಎಸ್. ಬೋಸರಾಜು, ಮತ್ತೊಂದು ಸ್ಥಾನಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ & ಕೊನೆಯ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಕಲಬುರಗಿಯ ತಿಪ್ಪಣ್ಣಪ್ಪ ಕಮಕನೂರ ಅವರನ್ನ ಆಯ್ಕೆ ಮಾಡಲಾಗಿದೆ. ಹೀಗೆ ಪರಿಷತ್‌ಗೆ ಕಾಂಗ್ರೆಸ್‌ನಿಂದ 3 ಹೊಸ ಪರಿಷತ್ ಸದಸ್ಯರು ಆಯ್ಕೆಯಾಗಿದ್ದು, ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಶೆಟ್ಟರ್ ಬೆನ್ನಿಗೆ ನಿಂತ ಕಾಂಗ್ರೆಸ್!
2023ರ ಚುನಾವಣೆಯಲ್ಲಿ ಕಿತ್ತೂರು ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ಗೆ ಬಲ ತುಂಬಿದ್ದೇ ಶೆಟ್ಟರ್ ಎಂಟ್ರಿ. ಶೆಟ್ಟರ್ ಇತ್ತೀಚೆಗೆ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತರು ಸ್ಥಾನ ಕಲ್ಪಿಸಲಾಗಿದೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಬಿಜೆಪಿಯ ಮಹೇಶ್ ಟೆಂಗಿನಕಾಯಿ ವಿರುದ್ಧ ಸೋಲು ಕಂಡಿದ್ದರು. ಇನ್ನು ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನದ ಆಕಾಂಕ್ಷಿ ಅಂತಾ ಹೇಳಲಾಗಿತ್ತು. ಇದೇ ಸಂದರ್ಭದಲ್ಲಿ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದ ನಂತರ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹುಬ್ಬಳ್ಳಿಗೆ ತೆರಳಿ ಶೆಟ್ಟರ್ ಜೊತೆಗೆ ಚರ್ಚೆ ನಡೆಸಿದ್ದರು. ಕಳೆದ ತಿಂಗಳ ಅಂತ್ಯದಲ್ಲಿ ಅಂದರೆ ಜೂನ್ ಅಂತ್ಯಕ್ಕೆ ಪರಿಷತ್‌ಗೆ ನಡೆದ ಉಪಚುನಾವಣೆಯಲ್ಲಿ ಆಯ್ಕೆಯಾಗಿ ಶೆಟ್ಟರ್ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ರಾಜೀನಾಮೆ ಕೊಟ್ಟಿದ್ದವರಿಗೆ ಭರ್ಜರಿ ಲಾಸ್!
ಅಷ್ಟಕ್ಕೂ ಹಿಂದೆ ಪರಿಷತ್ ಸದಸ್ಯರಾಗಿದ್ದ ಆರ್.ಶಂಕರ್, ಲಕ್ಷ್ಮಣ ಸವದಿ & ಬಾಬುರಾವ್ ಚಿಂಚನಸೂರ್ ವಿಧಾನಸಭೆ ಚುನಾವಣೆಗೂ ಮುನ್ನ ತಮ್ಮ ಪರಿಷತ್ ಸ್ಥಾನಕ್ಕೆ ಹಾಗೂ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ರು. ಹೀಗಾಗಿಯೇ ಪರಿಷತ್‌ನಲ್ಲಿ 3 ಸ್ಥಾನಗಳು ತೆರವಾಗಿದ್ದವು. ಆ ಸ್ಥಾನಗಳ ಭರ್ತಿಗೆ ಉಪಚುನಾವಣೆ ನಡೆದಿತ್ತು. ಆದ್ರೆ ಹೀಗೆ ತಮ್ಮ ತಮ್ಮ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮೂವರ ಪೈಕಿ ಲಕ್ಷ್ಮಣ ಸವದಿ ಮಾತ್ರ ಗೆದ್ದರು. ಇನ್ನುಳಿದಂತೆ ಆರ್.ಶಂಕರ್ & ಬಾಬುರಾವ್ ಚಿಂಚನಸೂರ್ ಚುನಾವಣೆಯಲ್ಲಿ ಸೋಲನ್ನು ಕಂಡಿದ್ದಾರೆ. ಬಾಬುರಾವ್ ಚಿ೦ಚನಸೂರು ವಿಧಾನ ಪರಿಷತ್ ಸದಸ್ಯತ್ವ 2024ರ ಜೂನ್ 17ಕ್ಕೆ ಮುಕ್ತಾಯ ಆಗುತ್ತಿತ್ತು. ಶ೦ಕರ್ ಅವಧಿಯು 2026ರ ಜೂನ್ 30ಕ್ಕೆ ಕೊನೆಯಾಗುತ್ತಿತ್ತು.

ಹಿರಿಯ ಶಾಸಕರಿಗೂ ಭರ್ಜರಿ ಅವಕಾಶ!
ವಿಧಾನಸಭೆ ಆಡಳಿತ ಪಕ್ಷದ ಮುಖ್ಯ ಸಚೇತಕರಾಗಿ ಶಾಸಕ ಅಶೋಕ ಪಟ್ಟಣ ನೇಮಕವಾಗಿದ್ದು ಇದೇ ರೀತಿ ಹಲವು ಪ್ರಮುಖ ಸ್ಥಾನಗಳನ್ನ ಸರ್ಕಾರ ಭರ್ತಿ ಮಾಡಿದೆ. ವಿಧಾನ ಪರಿಷತ್ತಿನ ಆಡಳಿತ ಪಕ್ಷದ ಮುಖ್ಯ ಸಚೇತಕರಾಗಿ ಸಲೀಂ ಅಹಮದ್ ಅವರನ್ನು ನೇಮಕ ಮಾಡಲಾಗಿದ್ದು, ಇನ್ನೊಂದ್ಕಡೆ ಸಿಎಂ ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಸಚಿವ ಹಾಗೂ ಹಿರಿಯ ಶಾಸಕ ಟಿ.ಬಿ. ಜಯಚಂದ್ರ ಅವರಿಗೆ ದೊಡ್ಡ ಸ್ಥಾನಮಾನ ಸಿಕ್ಕಿದೆ. ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಯಾಗಿ ಟಿ.ಬಿ. ಜಯಚಂದ್ರ ಆಯ್ಕೆಯಾಗಿದ್ದಾರೆ. ಬಜೆಟ್ ಅಧಿವೇಶನದ ದಿನವೇ ಈ ನಾಯಕರಿಗೆ ಸರ್ಕಾರ ಸಿಹಿಸುದ್ದಿ ಕೊಟ್ಟಿದೆ.












Click it and Unblock the Notifications