Jagadish Shettar: ಸೋತರೂ ಜಗದೀಶ್ ಶೆಟ್ಟರ್‌ಗೆ ಸಚಿವ ಸ್ಥಾನ?; ಕಾಂಗ್ರೆಸ್ ಲೆಕ್ಕಾಚಾರ ಏನಿದೆ?
2023ರ ಕರ್ನಾಟಕ ವಿಧಾನಸಭೆ ಚುನಾವಣೆ ಮುಕ್ತಾಯಗೊಂಡಿದ್ದು, ಮೇ 13ರಂದು ಪ್ರಕಟವಾದ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಪಕ್ಷ 135 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ.
ಇದೇ ವೇಳೆ 2019ರ ಜುಲೈನಿಂದ ಈವರೆಗೆ ಅಧಿಕಾರದಲ್ಲಿದ್ದ ಬಿಜೆಪಿ ಈ ಬಾರಿ 66 ಸ್ಥಾನಗಳಲ್ಲಿ ಮಾತ್ರ ಗೆಲುವು ಕಂಡಿದ್ದು, 12 ಸಚಿವರು ಸೇರಿದಂತೆ ಘಟಾನುಘಟಿ ನಾಯಕರೇ ಸೋಲುಂಡಿದ್ದಾರೆ. ಈ ಮೂಲಕ ಬಿಜೆಪಿಯನ್ನು ರಾಜ್ಯದ ಮತದಾರರು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ.

ಇನ್ನು 2023ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಪೂರ್ಣ ಬಹುಮತದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆಗೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಸಿಎಂ ರೇಸ್‌ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಮುಂಚೂಣಿಯಲ್ಲಿದ್ದಾರೆ.
ಜಗದೀಶ್ ಶೆಟ್ಟರ್‌ಗೆ ಬುಲಾವ್ ನೀಡಿದ ಕಾಂಗ್ರೆಸ್
ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ಟಿಕೆಟ್ ನೀಡದ ಕಾರಣ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಈ ಬಾರಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಸೋಲು ಕಂಡರು. ಆದರೆ, ಶೆಟ್ಟರ್ ಸೇರ್ಪಡೆಯಿಂದ ಕಾಂಗ್ರೆಸ್‌ಗೆ ದೊಡ್ಡ ಲಾಭವಾಗಿದ್ದಂತೂ ಸತ್ಯ.

ಚುನಾವಣೆಯಲ್ಲಿ ಸೋತಿದ್ದರೂ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಕಾಂಗ್ರೆಸ್ ಹೊಸ ಜವಾಬ್ದಾರಿ ನೀಡಿರುವ ಕುರಿತು ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ. ಕರ್ನಾಟಕ ಸಿಎಂ ಆಗಿದ್ದ ಜಗದೀಶ್ ಶೆಟ್ಟರ್ ಲಿಂಗಾಯತ ಸಮುದಾಯದ ಪ್ರಮುಖ ನಾಯಕರಾಗಿದ್ದು, ಚುನಾವಣೆಗೂ ಮುನ್ನ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರಿಂದ ಇತರ ಕ್ಷೇತ್ರಗಳಲ್ಲಿ ಪರೋಕ್ಷವಾಗಿ ಲಾಭವಾಗಿತ್ತು.
ಕರ್ನಾಟಕದಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಅಧಿಕಾರಕ್ಕೆ ಬರುತ್ತಿದ್ದು, ಇದಾದ ನಂತರ ಮುಂದಿನ ವರ್ಷ ಎದುರಾಗಲಿರುವ ಲೋಕಸಭಾ ಚುನಾವಣೆಗೂ ತಯಾರಿ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಜಗದೀಶ್ ಶೆಟ್ಟರ್ ಅವರಿಗೆ ಈ ಬಾರಿ ಸಚಿವ ಸ್ಥಾನ ನೀಡಲು ಕಾಂಗ್ರೆಸ್ ಯೋಜಿಸಿದೆ ಎಂಬ ಮಾತು ಕೇಳಿಬರುತ್ತಿದೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಲಿಂಗಾಯತ ಮತ ಸೆಳೆಯುವ ದೃಷ್ಟಿಯಿಂದ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಬಲ ಕುಗ್ಗಿಸಲು ಜಗದೀಶ್ ಶೆಟ್ಟರ್‌ಗೆ ಸಚಿವ ಸ್ಥಾನ ನೀಡುವ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಚರ್ಚೆ ಆರಂಭವಾಗಿದೆ.
ಸದ್ಯಕ್ಕೆ ಜಗದೀಶ್ ಶೆಟ್ಟರ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ, ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆ ವೇಳೆಗೆ ಧಾರವಾಡ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ. ಜಗದೀಶ್ ಶೆಟ್ಟರ್ ಅವರನ್ನು ಪ್ರಹ್ಲಾದ್ ಜೋಶಿ ಅವರಿಗೆ ಪ್ರಬಲ ಎದುರಾಳಿಯಾಗಿಸುವ ಲೆಕ್ಕಾಚಾರವೂ ಕೈ ನಾಯಕರ ಮುಂದಿದೆ.
ಇನ್ನು ಚುನಾವಣೆಯಲ್ಲಿ ಸೋಲಿನ ಕುರಿತು ಮಾತನಾಡಿರುವ ಜಗದೀಶ್ ಶೆಟ್ಟರ್, ""ನಾನು ಆರು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಆದರೆ ಯಾವತ್ತೂ ಹಣ ಹಂಚಿಕೆ ಮಾಡಲಿಲ್ಲ. ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿ ಭಾರೀ ಪ್ರಮಾಣದಲ್ಲಿ ಹಣ ಹಂಚಿಕೆ ಮಾಡುವುದನ್ನು ನೋಡಿದೆ. ಕಾಂಗ್ರೆಸ್‌ಗೆ 130ರಿಂದ 140 ಸೀಟು ಬರುತ್ತೆ ಅಂತಾ ಒಂದು ವಾರದ ಹಿಂದೆಯೇ ಹೇಳಿದ್ದೆ,'' ಎಂದು ತಿಳಿಸಿದ್ದಾರೆ.












Click it and Unblock the Notifications