ಧಾರವಾಡ ಲೋಕಸಭಾ ಕ್ಷೇತ್ರದಿಂದ ಜೋಶಿ ವಿರುದ್ಧ ಸ್ಪರ್ಧೆ: ಜಗದೀಶ್ ಶೆಟ್ಟರ್ ಹೇಳಿದ್ದೇನು?
ಹುಬ್ಬಳ್ಳಿ,ಡಿಸೆಂಬರ್ 18: 2023 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡದ ಹಿನ್ನಲೆ ಕಾಂಗ್ರೆಸ್ ನಿಂದ ಸ್ಪರ್ಧೆ ಸೋಲು ಕಂಡ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮುಂದಿನ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಹೌದು, ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲೂ ಹೆಚ್ಚು ಸ್ಥಾನಗಳನ್ನ ಗೆಲ್ಲುವ ನಿಟ್ಟಿನಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಅವರನ್ನ ಪ್ರಹ್ಲಾದ್ ಜೋಶಿ ವಿರುದ್ಧ ಕಣಕ್ಕಿಳಿಸಲು ಕಾಂಗ್ರೆಸ್ ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಮುಂಬರುವ ಲೋಕಸಭಾ ಚುನಾವಣೆಗೆ ಧಾರವಾಡ ಕ್ಷೇತ್ರದಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಪರ್ಧೆ ಮಾಡಲಿದ್ದಾರೆಯೇ ಎಂಬ ವದಂತಿ ಬೆನ್ನಲ್ಲೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ 68ನೇ ಜನ್ಮ ದಿನ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿರುವ ಅವರ ನಿವಾಸಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರು ರಾಜಕೀಯ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಈಗಾಗಲೇ ಬಿಜೆಪಿ ನಾಯಕರು ಜಗದೀಶ್ ಶೆಟ್ಟರ್ ಅವರನ್ನ ಮರಳಿ ಪಕ್ಷಕ್ಕೆ ಕರೆತರುವ ನಿಟ್ಟಿನಲ್ಲಿ ಚರ್ಚೆ ನಡೆಸುತ್ತಿದ್ದು, ಉಭಯ ಪಕ್ಷಗಳ ನಾಯಕರು ಇದನ್ನು ನಿರಾಕರಿಸುತ್ತಲೇ ಬಂದಿದ್ದಾರೆ. ಅಲ್ಲದೇ ಕಾಂಗ್ರೆಸ್ ನಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ವಿಶೇಷ ಪ್ರಾಧ್ಯಾನ್ಯತೆ ನೀಡಲಾಗಿದೆ. ಹೀಗಾಗಿ ಈ ಬಾರೀ ಲೋಕಸಭಾ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಅವರನ್ನ ಕಣಕ್ಕಿಳಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಕುರಿತು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾತನಾಡಿ, ನಾನು ಲೋಕಸಭೆ ಟಿಕೆಟ್ ಆಕಾಂಕ್ಷಿಯಲ್ಲ. ಪಕ್ಷವೂ ನನ್ನನ್ನು ಸ್ಪರ್ಧಿಸುವಂತೆ ಹೇಳಿಲ್ಲ. ಮುಂದೆ ಹೇಳಿದರೆ ನೋಡೋಣ. ಲೋಕಸಭಾ ಚುನಾವಣೆಗೆ ಟಿಕೆಟ್ ಆಕಾಂಕ್ಷಿಗಳ ಬಗ್ಗೆ ಚರ್ಚೆಯು ಜನವರಿ ನಂತರ ಶುರುವಾಗುತ್ತದೆ. ಪಕ್ಷ ಬಯಸಿದರೆ ಸ್ಪರ್ಧಿಸಲು ಸಿದ್ಧ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಭಕೋರಲು ಬಂದಿದ್ದರು. ರಾಜಕೀಯ ಚರ್ಚೆ ಏನು ಆಗಿಲ್ಲ. ಸಹಜವಾಗಿಯೇ ಪ್ರದೀಪ್ ಶೆಟ್ಟರ್ ಕೂಡ ಮನೆಗೆ ಬಂದಿದ್ದರು. ಸಿದ್ದರಾಮಯ್ಯನವರು ನಮ್ಮ ರಾಜಕೀಯ ಜೀವನದ ಒಡನಾಟವನ್ನು ಈ ವೇಳೆ ನೆನಪಿಸಿಕೊಂಡರು ಎಂದು ಜಗದೀಶ್ ಶೆಟ್ಟರ್ ಹೇಳಿದರು.
ನನ್ನ ತಂಟೆಗೆ ಬಂದವರಿಗೆ ತಕ್ಕ ಉತ್ತರ ಕೊಟ್ಟಿದ್ದೇನೆ. ಮುಂದೆಯೂ ಬಂದವರಿಗೆ ಸುಮ್ಮನೆ ಬಿಡಲ್ಲ. ಕಳೆದ ವರ್ಷವೂ ಇದೇ ವೇದಿಕೆಯಲ್ಲಿ ಇದೇ ಮಾತು ಹೇಳಿದ್ದರು. ಈಗ ಅದೇ ಮಾತು ಪುನರುಚ್ಚರಣೆ ಮಾಡಿದ್ದಾರೆ. ನನ್ನ ತಂಟೆಗೆ ಬಂದವರಿಗೆ ತಕ್ಕ ಉತ್ತರ ನೀಡಿದ್ದೇನೆ. ನಾನು ವಿಧಾನಸಭೆ ಚುನಾವಣೆಯಲ್ಲಿ ಸೋತಿರಬಹುದು. ಆದರೆ 6 ಬಾರಿ ನನ್ನನ್ನು ಜನ ಗೆಲ್ಲಿಸಿದ್ದನ್ನು ಮರೆಯಲ್ಲ. ನಾನು ಸೋತರೂ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸೀಟು ಗೆಲ್ಲಿಸಿದ್ದೇನೆ. ನನ್ನ ಉಸಾಬರಿಗೆ ಬಂದವರಿಗೆ ತಕ್ಕ ಉತ್ತರ ಕೊಟ್ಟಿದ್ದೇನೆ. ಮುಂದೆಯೂ ನನ್ನ ಉಸಾಬರಿಗೆ ಬಂದವರಿಗೆ ಸುಮ್ಮನೆ ಬಿಡಲ್ಲ ಎಂದು ಜಗದೀಶ್ ಶೆಟ್ಟರ್ ಎಚ್ಚರಿಕೆ ನೀಡಿದರು.
ನಮ್ಮ ಜಾತಿಯವರಿಗೇ ಟಿಕೆಟ್ ಕೊಡಬೇಕು: ಪ್ರದೀಪ್ ಶೆಟ್ಟರ್
ಈ ವೇಳೆ ಮಾಧ್ಯಮದವರಿಗೆ ಜೊತೆಗೆ ಮಾತನಾಡಿದ ಅವರು, ಬಿಜೆಪಿ ಎಂಎಲ್‌ಸಿ ಪ್ರದೀಪ್ ಶೆಟ್ಟರ್, ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯ ಪ್ರಬಲವಾಗಿದೆ. ಹೀಗಾಗಿ ನಮ್ಮ ಜಾತಿಯವರಿಗೆ ಟಿಕೆಟ್ ಕೊಡಬೇಕು. ಬಿಜೆಪಿಯಲ್ಲಿ ಟಿಕೆಟ್ ಕೊಟ್ಟರೆ ಸ್ಪರ್ಧೆಗೆ ಸಿದ್ಧ ಎಂದು ಹೇಳಿದ್ದಾರೆ. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಜಗದೀಶ್ ಶೆಟ್ಟರ್ ಇನ್ನೂ ಹತ್ತು ವರ್ಷ ಸೆಂಟ್ರಲ್ ಕ್ಷೇತ್ರದ ಶಾಸಕರಾಗಿರುತ್ತಾರೆ ಎಂದು ಮಹೇಶ್ ಟೆಂಗಿನಕಾಯಿ ಹೇಳಿದ್ದರು. ಈಗ ಏನಾಯ್ತು? ರಾಜಕೀಯದಲ್ಲಿ ಹಾಗೆ ಆಗೋದು ಎಂದು ಪ್ರದೀಪ್ ಶೆಟ್ಟರ್ ಹೇಳಿದರು.












Click it and Unblock the Notifications