ಜಬ್ಬಾರ್ ಬಸ್ ಅಪಘಾತಕ್ಕೆ ಕಾರಣ ತಿಳಿಯಿತು

ಆಂಧ್ರದ ಮೆಹಬೂಬ್ ನಗರದ ಕೊತ್ತಕೋಟ ಮಂಡಲ್ ವ್ಯಾಪ್ತಿಯ ಪಾಲೆಂ ಗ್ರಾಮದ ಸಮೀಪ ಅ. 30ರಂದು ನಡೆದ ವೋಲ್ವೊ ಬಸ್ ದುರಂತ ತನಿಖಾ ವರದಿ ಬಯಲಾಗಿದ್ದು, ವ್ಯವಸ್ಥೆಯಲ್ಲಿನ ಹುಳುಕನ್ನು ಬಯಲಿಗೆ ಹಾಕಿದೆ.
ವೋಲ್ವೊ ಬಸ್ ಅಗ್ನಿ ದುರಂತಕ್ಕೆ ಅವೈಜ್ಞಾನಿಕ ರಸ್ತೆ ನಿರ್ಮಾಣವೇ (Poor road engineering) ಕಾರಣ ಎಂದು ಆಂಧ್ರ ಪ್ರದೇಶ ಹಾಗೂ ಕರ್ನಾಟಕ ಸಾರಿಗೆ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸಿದ್ಧಪಡಿಸಿರುವ ಪ್ರಾಥಮಿಕ ತನಿಖಾ ವರದಿಯಲ್ಲಿ ತಿಳಿಸಿದ್ದಾರೆ.
ಹೆದ್ದಾರಿಯಲ್ಲಿ ಸುಮಾರು 20 ಅಡಿಗಳಷ್ಟು ದೂರ ಸ್ಟೀಲ್ ಪೈಪ್ ತಡೆಗೋಡೆ ನಿರ್ಮಿಸಲಾಗಿದ್ದು, ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ತಡೆಗೋಡೆಗೆ ಉಜ್ಜಿಕೊಂಡು ಚಲಿಸಿದ್ದರಿಂದ ಪೈಪುಗಳಿಂದ ಸಿಡಿದ ಬೆಂಕಿ ಕಿಡಿ ಡೀಸೆಲ್ ಟ್ಯಾಂಕಿಗೆ ತಗುಲಿ ಬೆಂಕಿ ಹೊತ್ತಿಕೊಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಇಂಜಿನಿಯರುಗಳು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ. ಅವೈಜ್ಞಾನಿಕ ತಡೆಗೋಡೆ ನಿರ್ಮಿಸಲಾಗಿದೆ. ತಡೆಗೋಡೆಗೆ ಬಸ್ ಡಿಕ್ಕಿ ಹೊಡೆದ ತಕ್ಷಣ ಗೋಡೆ ಉರುಳಿ ಬಿದ್ದಿದ್ದರೆ ಇಂತಹ ಅನಾಹುತ ಸಂಭವಿಸುತ್ತಿರಲಿಲ್ಲ. ವಾಹನ ಚಾಲಕರ ಗಮನಕ್ಕೆ ಬರುವಂತೆ ತಡೆಗೋಡೆಗೆ ಕಪ್ಪು ಮತ್ತು ಹಳದಿ ಬಣ್ಣದ ಹಾಕಿದ್ದರೂ ಈ ದುರಂತ ನಡೆಯುತ್ತಿರಲಿಲ್ಲ ಎಂದು ವರದಿಯಲ್ಲಿ ಅಧಿಕಾರಿಗಳು ಅಭಿಪ್ರಾಯಪಟ್ಟಿರುವುದು ಗಮನಾರ್ಹವಾಗಿದೆ.
ಚಾಲಕನೂ ತಪ್ಪು ಮಾಡಿದ್ದಾನೆ : ಬಸ್ಸಿಗೆ ಬೆಂಕಿ ತಗುಲಿದ ತಕ್ಷಣ ಚಾಲಕ ಪ್ರಯಾಣಿಕರನ್ನು ಎಚ್ಚರಿಸಿದ್ದರೆ 45 ಮಂದಿ ಪ್ರಾಣ ಕಳೆದುಕೊಳ್ಳುತ್ತಿರಲಿಲ್ಲ. ಸಮಯ ಪ್ರಜ್ಞೆ ತೋರಿ, ಬಾಗಿಲನ್ನೂ ತೆರೆಯದೆ ಚಾಲಕ ಬಸ್ಸಿನಿಂದ ಜಿಗಿದು ಪರಾರಿಯಾಗಿದ್ದಾನೆ. ಹಾಗಾಗಿ ಅಷ್ಟೊಂದು ಪ್ರಾಣ ಹಾನಿ ಸಂಭವಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.












Click it and Unblock the Notifications