ಬೇನಾಮಿ ಆಸ್ತಿ : ಸಿದ್ದರಾಮಯ್ಯ ವಿರುದ್ಧ ಐಟಿ ತನಿಖೆ
ಬೆಂಗಳೂರು, ಸೆಪ್ಟೆಂಬರ್ 04 : ಮುಖ್ಯಮಂತ್ರಿ ಸಿದ್ದರಾಮಯ್ಯ ಬೇನಾಮಿ ಆಸ್ತಿ ಹೊಂದಿದ್ದಾರೆ ಎಂದು ಐಟಿ ಇಲಾಖೆಯಲ್ಲಿ ದೂರು ದಾಖಲಾಗಿದೆ. ತನಿಖೆಗೆ ಇನ್ನಷ್ಟು ದಾಖಲೆ ಒದಗಿಸುವಂತೆ ಐಟಿ ಇಲಾಖೆ ದೂರುದಾರರಿಗೆ ಸೂಚನೆ ನೀಡಿದೆ.
ರಾಮಮೂರ್ತಿ ಗೌಡ ಎಂಬುವವರು ಆದಾಯ ತೆರಿಗೆ ಇಲಾಖೆಗೆ ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದಾರೆ. ಸಿದ್ದರಾಮಯ್ಯ 40 ಮಂದಿ ಹೆಸರಿನಲ್ಲಿ ಬೇನಾಮಿ ಆಸ್ತಿ ಹೊಂದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ದೂರಿನ ಜೊತೆ 1,638 ಪುಟಗಳ ದಾಖಲೆಗಳನ್ನು ನೀಡಿದ್ದಾರೆ.

'ಈ ದೂರಿನ ಅನ್ವಯ ತನಿಖೆ ಕೈಗೊಳ್ಳಲಾಗಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ದಾಖಲೆಗಳು ಇದ್ದರೆ ಕೂಡಲೇ ಒದಗಿಸಬೇಕು' ಎಂದು ಐಟಿ ಇಲಾಖೆ ದೂರುದಾರ ರಾಮಮೂರ್ತಿ ಗೌಡ ಅವರಿಗೆ ನೋಟಿಸ್ ನೀಡಿದೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಬಳಿಕ ಆಸ್ತಿ ಮೌಲ್ಯ ಹೆಚ್ಚಾಗಿದೆ. ಕುಟುಂಬದವರು ಮತ್ತು ಸ್ನೇಹಿತರ ಹೆಸರಿನಲ್ಲಿ 100 ಕೋಟಿಗೂ ಅಧಿಕ ಆಸ್ತಿ ಮಾಡಿದ್ದಾರೆ. ಬೇನಾಮಿ ಆಸ್ತಿ ನಿಯಂತ್ರಣ ಕಾಯ್ದೆಯಡಿ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.
ರಾಮಮೂರ್ತಿ ಗೌಡ ಇದೇ ಮೊದಲ ಬಾರಿಗೆ ಸಿದ್ದರಾಮಯ್ಯ ವಿರುದ್ಧ ದೂರು ನೀಡುತ್ತಿಲ್ಲ. ಹಿಂದೆ ವಜ್ರ ಖಚಿತ ಹುಬ್ಲೋಟ್ ವಾಚ್ ಹೊಂದಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಎಸಿಬಿಗೆ ದೂರು ನೀಡಿದ್ದರು. ಈ ಪ್ರಕರಣಲ್ಲಿ ತನಿಖೆ ನಡೆಸಿ ಸಿದ್ದರಾಮಯ್ಯಗೆ ಎಸಿಬಿ ಕ್ಲೀನ್ ಚಿಟ್ ನೀಡಿದೆ.












Click it and Unblock the Notifications