ಡಿಕೆಶಿ ಮನೆ ಮೇಲೆ ಐಟಿ ದಾಳಿ: ಸಿಎಂ ಸಿದ್ದರಾಮಯ್ಯ ಗಂಭೀರ ಹೇಳಿಕೆ
Recommended Video

ನಾನು ಕನಕಪುರದ ಬಂಡೆ, ಡಿಕ್ಕಿ ಹೊಡೆದರೆ ಹೋಳಾಗುವುದು ನಿಮ್ಮ ತಲೆ ಎಂದು ಇಂಧನ ಸಚಿವ ಡಿ ಕೆ ಶಿವಕುಮಾರ್ ಎರಡು ದಿನದ ಹಿಂದೆ ಮಾಧ್ಯಮದವರಿಗೆ ಎಚ್ಚರಿಕೆ ನೀಡಿದ್ದರು. ಮಾಧ್ಯಮಗಳಲ್ಲಿ ತನ್ನ ಮನೆಯ ಮೇಲೆ ನಡೆಯುತ್ತಿರುವ ಐಟಿ ದಾಳಿಯ ವರದಿ ಬಗ್ಗೆ ಡಿಕೆಶಿ ಕೆಂಡಾಮಂಡಲವಾಗಿ, ಈ ಹೇಳಿಕೆ ನೀಡಿದ್ದರು.
ರಾಜ್ಯದ ಪ್ರಭಾವಿ ರಾಜಕಾರಣಿಯಾಗಿರುವ ಡಿ ಕೆ ಶಿವಕುಮಾರ್ ಮೇಲೆ ನಡೆಯುತ್ತಿರುವ ದಾಳಿಯ ಬಗ್ಗೆ, ಮುಖ್ಯಮಂತ್ರಿಗಳು ಗಂಭೀರ ಹೇಳಿಕೆ ನೀಡಿರುವುದರಿಂದ, ಡಿಕೆಶಿ ಐಟಿದಾಳಿ ವಿಷಯ ಮತ್ತೆ ಚರ್ಚೆಯ ವಸ್ತುವಾಗಿದೆ.
ಆದಾಯ ತೆರಿಗೆ ದಾಳಿ ನಡೆಸಲು ಬಂದ ಅಧಿಕಾರಿಗಳೇ, ಡಿ ಕೆ ಶಿವಕುಮಾರ್ ಅವರನ್ನು ಬಿಜೆಪಿ ಸೇರುವಂತೆ ಒತ್ತಾಯಿಸುತ್ತಿದ್ದಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಗುಜರಾತ್ ರಾಜ್ಯಸಭಾ ಚುನಾವಣೆಯ ವೇಳೆ ಸತತವಾಗಿ ಡಿಕೆಶಿ ಮನೆ, ಆಪ್ತರು ಮತ್ತು ಈಗಲ್ಟನ್ ರೆಸಾರ್ಟ್ ಮೇಲೆ ದಾಳಿ ನಡೆದ ಸಂದರ್ಭದಲ್ಲೂ, ಬಿಜೆಪಿ ಸೇರಲು ಡಿ ಕೆ ಶಿವಕುಮಾರ್ ಅವರಿಗೆ ಒತ್ತಡ ಹೇರಲಾಗುತ್ತಿದೆ ಎನ್ನುವ ಮಾತು ಕೇಳಿಬರುತ್ತಿತ್ತು.
ಬುಧವಾರ (ನ 8) ಐಟಿ ದಾಳಿಗೆ ಸಂಬಂಧಿಸಿದಂತೆ ಮಾತನಾಡುತ್ತಿದ್ದ ಮುಖ್ಯಮಂತ್ರಿಗಳು, ವ್ಯವಹಾರ ಮಾಡುವವರು ಸರಿಯಾಗಿ ತೆರಿಗೆ ಪಾವತಿಸಿದ್ದಾರಾ ಎಂದು ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಲಿ. ಅದು ಬಿಟ್ಟು ಇಲಾಖೆಯನ್ನು ದುರ್ಬಳಕೆ ಮಾಡುವ ಪ್ರಯತ್ನ ಸಲ್ಲದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಬಿಜೆಪಿ ಸೇರುವಂತೆ ಡಿಕೆಶಿಯವರ ಮೇಲೆ ಒತ್ತಡ
ಡಿ ಕೆ ಶಿವಕುಮಾರ್ ಮನೆ ಮತ್ತು ಅವರ ಆಪ್ತರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡಿಸಿದಾಗ, ದಾಖಲೆ ಪರಿಶೀಲಿಸುವುದಕ್ಕಿಂತೆ ಹಚ್ಚಾಗಿ, ಅಧಿಕಾರಿಗಳೇ ಬಿಜೆಪಿ ಸೇರುವಂತೆ ಡಿಕೆಶಿಯವರ ಮೇಲೆ ಒತ್ತಡ ಹೇರುತ್ತಿದ್ದರು. ಈಗಲೂ ಅದು ಮುಂದುವರಿಯುತ್ತಿದೆ -ಸಿಎಂ ಸಿದ್ದರಾಮಯ್ಯ.

ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯ ಇಲಾಖೆ
ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯ ಸ್ವಂತ್ರವಾಗಿ ಕೆಲಸ ನಿರ್ವಹಿಸುವ ಇಲಾಖೆಗಳು. ಆದರೆ, ಬಿಜೆಪಿ ಎಷ್ಟರ ಮಟ್ಟಿಗೆ ವ್ಯವಸ್ಥೆಯನ್ನು ಕೇಸರೀಕರಣ ಮಾಡಲು ಹೊರಟಿದೆ ಎಂದರೆ, ಶೋಧ ನಡೆಸಲು ಬಂದ ಅಧಿಕಾರಿಗಳಿಂದಲೇ ಬಿಜೆಪಿ ಸೇರುವಂತೆ ಡಿ ಕೆ ಶಿವಕುಮಾರ್ ಮತ್ತು ಅವರ ಸಹೋದರನ ಮೇಲೆ ಒತ್ತಡ ಹೇರಲಾಗುತ್ತಿದೆ -ಸಿಎಂ ಸಿದ್ದರಾಮಯ್ಯ.

ಹಲವಾರು ವ್ಯವಹಾರಗಳನ್ನು ನಡೆಸಿಕೊಂಡು ಬರುತ್ತಿರುವ ಡಿಕೆಶಿ
ಡಿ ಕೆ ಶಿವಕುಮಾರ್ ಹಲವಾರು ವ್ಯವಹಾರಗಳನ್ನು ನಡೆಸಿಕೊಂಡು ಬರುತ್ತಿರುವವರು. ಆದಾಯ ತೆರಿಗೆ ಇಲಾಖೆಯವರು ದಾಳಿ ನಡೆಸಿದ್ದಕ್ಕೆ ನನ್ನ ವಿರೋಧವಿಲ್ಲ, ಆದರೆ ತನಗಾಗದವರ ಮೇಲೆ ಬಿಜೆಪಿ ವ್ಯವಸ್ಥಿತವಾಗಿ ಐಟಿ, ಇಡಿ ದಾಳಿ ನಡೆಸುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಸಚಿವರ ಮಧ್ಯಸ್ಥಿಕೆ
ಕೇಂದ್ರದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಸಚಿವರೊಬ್ಬರು ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಬಿಜೆಪಿ ಸೇರುವಂತೆ ಒತ್ತಾಯಿಸಿದ್ದರು. ಜೊತೆಗೆ, ಬಿಜೆಪಿ ಅಧಿಕಾರಕ್ಕೆ ಬಂದರೆ ಉಪಮುಖ್ಯಮಂತ್ರಿ, ಕೇಂದ್ರದಲ್ಲಿ ಡಿ ಕೆ ಸುರೇಶ್ ಗೆ ಸಚಿವ ಸ್ಥಾನದ ಭರವಸೆಯನ್ನೂ ನೀಡಲಾಗಿತ್ತು ಎಂದು ಪ್ರಜಾವಾಣಿ ಪತ್ರಿಕೆ ವರದಿ ಮಾಡಿತ್ತು.

ನನ್ನ ನಿಯತ್ತು ಏನಿದ್ದರೂ ಕಾಂಗ್ರೆಸ್ ಪಕ್ಷದ ಮೇಲೆ
ಆದರೆ, ಆದಾಯ ತೆರಿಗೆ ಅಥವಾ ಜಾರಿ ನಿರ್ದೇಶನಾಲಯ ಇಲಾಖೆಯ ದಾಳಿಯನ್ನು ಸಮರ್ಥವಾಗಿ ಎದುರಿಸುತ್ತೇನೆ. ಯಾವ ಕಾರಣಕ್ಕೂ ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ . ನನ್ನ ನಿಯತ್ತು ಏನಿದ್ದರೂ ಕಾಂಗ್ರೆಸ್ ಪಕ್ಷದ ಮೇಲೆ ಎಂದು ಡಿ ಕೆ ಶಿವಕುಮಾರ್ ಸ್ಪಷ್ಟವಾಗಿ ಸಚಿವರಿಗೆ ಹೇಳಿದ್ದಾರೆಂದು ವರದಿಯಾಗಿದೆ.












Click it and Unblock the Notifications