ಡಿಕೆ ಶಿವಕುಮಾರ್ ಸಿಎಂ ಆಗುವುದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ: ಬಿಜೆಪಿ ನಾಯಕ
ಬೆಂಗಳೂರು, ಜನವರಿ 23: ರಾಜ್ಯ ಬಿಜೆಪಿಯಲ್ಲಿ ಬಿ ವೈ ವಿಜಯೇಂದ್ರ ಹಾಗೂ ಬಸವನಗೌಡ ಪಾಟೀಲ್ ಯತ್ನಾಳ್ ನಡುವೆ ಬಣ ಬಡಿದಾಟ ಜೋರಾಗಿದೆ. ಇತ್ತ ರಾಜ್ಯ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಬದಲಾವಣೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಗುಸು ಗುಸು ಕೇಳಿ ಬಂದಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪರ ಬಿಜೆಪಿ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯರಾದ ಹೆಚ್ ವಿಶ್ವನಾಥ ಅವರು ಅಚ್ಚರಿಯ ಹೇಳಿಕೆಯನ್ನ ನೀಡುವ ಮೂಲಕ ಡಿ ಕೆ ಶಿವಕುಮಾರ್ ಪರ ಬ್ಯಾಂಟಿಂಗ್ ಬೀಸಿದ್ದಾರೆ.
ಬುಧವಾರ ಬೆಂಗಳೂರಿನ ಸದಾಶಿವನಗರದಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನಿವಾಸಕ್ಕೆ ವಿಧಾನ ಪರಿಷತ್ ಸದಸ್ಯರಾದ ಹೆಚ್ ವಿಶ್ವನಾಥ್ ಅವರು ಭೇಟಿ ನೀಡಿ ನೀರಾವರಿ ಕುರಿತು ಅವರೊಂದಿಗೆ ಚರ್ಚಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡಿ ಕೆ ಶಿವಕುಮಾರ್ ರಾಜ್ಯಕ್ಕೆ ಮುಖ್ಯಮಂತ್ರಿಯಾಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಕುತೂಹಲದ ಹೇಳಿಕೆ ನೀಡಿದ್ದಾರೆ. ಇನ್ನೂ ರಾಜ್ಯದಲ್ಲಿ ಕಾಂಗ್ರೆಸ್ 136 ಸ್ಥಾನ ಗೆಲ್ಲಲು ಡಿಕೆ ಶಿವಕುಮಾರ್ ಕೊಡುಗೆ ಬಹಳಷ್ಟಿದೆ. ಅವರದು ಸಾಕಷ್ಟು ಖರ್ಚಾಗಿದೆ. ಚುನಾವಣಾ ಸಂದರ್ಭದಲ್ಲಿ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಮಾತುಕತೆಯಾಗಿತ್ತು. ಹೀಗಾಗಿ ಮುಂದೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವುದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಅನಾವಶ್ಯಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಬ್ಬಿಸುತ್ತಿರುವ ಗೋಜಲು ಇದು. ಕಾಂಗ್ರೆಸ್ ಪಕ್ಷದ ನೇಮ್ ಆ್ಯಂಡ್ ಫೇಮ್ ಹಾಳು ಮಾಡುತ್ತಿದ್ದಾರೆ. ಇವರೇನು ಕಾಂಗ್ರೆಸ್ ಕಟ್ಟಿದವರಲ್ಲವಲ್ಲ, ಅವರಿಗೆ ಏನಾಗಬೇಕು. ಅವರದ್ದು ಮುಗಿಯಿತಲ್ಲ, ಇದು ಅನಾವಶ್ಯಕ. ಇದೆಲ್ಲ ಬಾಲಿಶತನ, ನಾನ್‌ಸೆನ್ಸ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಹೆಚ್ ವಿಶ್ವನಾಥ್ ಅವರು ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಡಾ ಪ್ರಕರಣದಲ್ಲಿ ಮರ್ಯಾದೆ ಕಳೆದುಕೊಂಡಿದ್ದಾರೆ. ಮೈಸೂರು ಜನರಿಗೆ ಮನೆ ಕಟ್ಟಿಕೊಳ್ಳಲು ಒಂದು ಸೈಟ್ ಕೊಡುವುದಿಲ್ಲ. ಬದಲಾಗಿ ಮುಖ್ಯಮಂತ್ರಿ ಹಾಗೂ ಸಚಿವರು ತಮಷ್ಟಕ್ಕೆ ತಾವೇ ನಿವೇಶನಗಳನ್ನು ಬರೆಸಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯನವರ ಕಾಲದಲ್ಲಿ ಮೈಸೂರು ವಿಜಯನಗರ ಸಾಮ್ರಾಜ್ಯವಾಗಿದೆ. 1200 ರೂ.ಗೆ 50×80 ಅಡಿ ನಿವೇಶನವನ್ನು ಮಾರಾಟ ಮಾಡಿದ್ದಾರೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಚಿನ್ನ, ಬೆಳ್ಳಿಯನ್ನು ರಸ್ತೆಯಲ್ಲಿ ಮಾರಾಟ ಮಾಡುತ್ತಿದ್ದರು. ಈಗ ನಿವೇಶನಗಳ ಮಾರಾಟವಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಾಚಿಕೆಯಾಗಬೇಕು ಎಂದು ಹೆಚ್ ವಿಶ್ವನಾಥ್ ಕಿಡಿಕಾರಿದ್ದಾರೆ.
ಮುಡಾ ಆಸ್ತಿ ಇಡಿ ಮುಟ್ಟುಗೋಲಿನ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಹೌದೌದು ಅವರದ್ದು ಸಿಕ್ಕರೆ ರಾಜಕೀಯ ಪ್ರೇರಿತ, ಅವರನ್ನು ಬೇಷ್ ಎಂದ್ರೆ ಯಸ್ ಎಂದರು. ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷವನ್ನು ಕಟ್ಟಿದವರಲ್ಲ. ಕಾಂಗ್ರೆಸ್ ಪಕ್ಷದ ಘನತೆ ಹಾಗೂ ಖ್ಯಾತಿಯನ್ನು ಕಟ್ಟಿಕೊಂಡು ಅವರಿಗೇನು ಆಗಬೇಕು. ಈ ಕಾರಣಕ್ಕಾಗಿಯೇ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ. ಇದರ ಹಿಂದೆ ಸಿದ್ದರಾಮಯ್ಯನವರಿರುವುದು ಖಚಿತ. ಮಂತ್ರಿಗಳು ಯಾರು ಕೇಳುತ್ತಿದ್ದಾರೆ, ಮಂತ್ರಿಗಳು ನೆಪಮಾತ್ರ ಎಂದು ಹೊಸ ಬಾಂಬ್ ಹಾಕಿದ್ದಾರೆ.












Click it and Unblock the Notifications