ಬಿಸಿಯೂಟದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಬಳಕೆ ಮಾಡಲಿದೆ ಇಸ್ಕಾನ್?
ಬೆಂಗಳೂರು, ಡಿಸೆಂಬರ್ 04 : ಮಧ್ಯಾಹ್ನದ ಬಿಸಿಯೂಟದಲ್ಲಿ ಇಸ್ಕಾನ್ ಇನ್ನು ಮುಂದೆ ಈರುಳ್ಳಿ, ಬೆಳ್ಳುಳ್ಳಿ ಬಳಕೆ ಮಾಡಲಿದೆಯೇ?. ಹೌದು, ಸಾರ್ವಜನಿಕ ಶಿಕ್ಷಣ ಇಲಾಖೆ ಊಟದಲ್ಲಿ ಈರುಳ್ಳಿ ಬಳಕೆ ಮಾಡಬೇಕು ಎಂದು ಸೂಚನೆ ನೀಡಿದೆ.
ಕರ್ನಾಟಕದ 6 ಜಿಲ್ಲೆಗಳ 2814 ಶಾಲೆಗಳ 4,42,108 ಮಕ್ಕಳಿಗೆ ಅಕ್ಷಯ ಪಾತ್ರೆ ಯೋಜನೆಯಡಿ ಇಸ್ಕಾನ್ ಮಧ್ಯಾಹ್ನದ ಬಿಸಿಯೂಟ ಪೂರೈಕೆ ಮಾಡುತ್ತಿದೆ. ಆದರೆ, ಇಸ್ಕಾನ್ ಊಟದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಬಳಕೆ ಮಾಡುವುದಿಲ್ಲ.
ಈಗ ಶಿಕ್ಷಣ ಇಲಾಖೆ ಇಸ್ಕಾನ್ ಬಿಸಿಯೂಟದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಬಳಕೆ ಮಾಡಬೇಕು ಎಂದು ಸೂಚನೆ ಕೊಟ್ಟಿದೆ. ರಾಜ್ಯ ಆಹಾರ ಆಯೋಗ ಈರುಳ್ಳಿ ಬಳಕೆ ಮಾಡದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತ್ತು.

ಗುರುವಾರ ಹೊರತುಪಡಿಸಿ ಉಳಿದ ದಿನ ಊಟದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಬಳಕೆ ಮಾಡಬೇಕು ಎಂದು ಶಿಕ್ಷಣ ಇಲಾಖೆ ಕಳಿಸಿದ್ದ ಪತ್ರಕ್ಕೆ ಇಸ್ಕಾನ್ ಇನ್ನೂ ಉತ್ತರವನ್ನು ನೀಡಿಲ್ಲ. ಇಸ್ಕಾನ್ ಇದಕ್ಕೆ ನಿರಾಕರಿಸಿದರೆ ಪರ್ಯಾಯ ಮಾರ್ಗಕ್ಕಾಗಿ ಇಲಾಖೆ ಚಿಂತನೆ ನಡೆಸಿದೆ.
ಮತ್ತೊಂದು ಕಡೆ ಕ್ಷೀರಭಾಗ್ಯ ಯೋಜನೆಯಡಿ ಇಸ್ಕಾನ್ ಶಾಲಾ ಮಕ್ಕಳಿಗೆ ತಣ್ಣನೆಯ ಹಾಲನ್ನು ಪೂರೈಕೆ ಮಾಡುತ್ತಿದೆ. ಇದಕ್ಕೆ ಆಹಾರ ಆಯೋಗ ಆಕ್ಷೇಪ ವ್ಯಕ್ತಪಡಿಸಿದ್ದು, ಬಿಸಿ ಹಾಲನ್ನು ನೀಡುವಂತೆಯೂ ಸೂಚನೆ ನೀಡಿದೆ.
ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ ಯೋಜನೆ ಟೆಂಡರ್ ಪಡೆಯಲು ಸಹ ಇಸ್ಕಾನ್ ಪ್ರಯತ್ನ ನಡೆಸಿತ್ತು. ಆದರೆ, ಈರುಳ್ಳಿ, ಬೆಳ್ಳುಳ್ಳಿ ಬಳಕೆ ಮಾಡುವುದಿಲ್ಲ ಎಂಬ ಕಾರಣಕ್ಕೆ ಟೆಂಡರ್ ಕೈ ತಪ್ಪಿತ್ತು.












Click it and Unblock the Notifications