ಕಾಂಗ್ರೆಸ್ ಅಧಿಕಾರಕ್ಕೆ ತರುವುದರೊಂದಿಗೆ ಶಪಥ ಪೂರೈಸಿದ ಡಿಕೆಶಿ!

ಬೆಂಗಳೂರು, ಮಾರ್ಚ್ 14: ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಐದು ವರ್ಷ ಪೂರೈಸಿರುವ ಡಿ.ಕೆ.ಶಿವಕುಮಾರ್ ಅಧಿಕಾರ ವಹಿಸಿಕೊಂಡಾಗ ಮಾಡಿದ ಶಪಥದಂತೆ ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಅವರ ಬೆಂಬಲಿಗರು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ. ಅಧಿಕಾರ ವಹಿಸಿಕೊಂಡಾಗ ರಾಜ್ಯದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಹೇಗಿತ್ತು? ಇವತ್ತು ಹೇಗಾಗಿದೆ? ಎಂಬುದನ್ನು ತಿರುಗಿ ನೋಡಿದರೆ ಅವರ ಸಾಧನೆ ಏನು ಎಂಬುದು ಗೊತ್ತಾಗಿ ಬಿಡುತ್ತದೆ.

ಡಿ.ಕೆ.ಶಿವಕುಮಾರ್ ಕಾಂಗ್ರೆಸ್‌ನ ಸಾರಥ್ಯ ವಹಿಸಿಕೊಳ್ಳದೇ ಹೋಗಿದ್ದರೆ ಇವತ್ತು ಕಾಂಗ್ರೆಸ್ ಅಧಿಕಾರದಲ್ಲಿರಲು ಸಾಧ್ಯವಾಗುತ್ತಿರಲಿಲ್ಲವೇನೋ? ಹಾಗೆಂದು ಇಲ್ಲಿ ಬೇರೆ ಯಾವ ನಾಯಕರ ಶ್ರಮವೇ ಇಲ್ಲ ಎಂದಲ್ಲ. ಸಿದ್ದರಾಮಯ್ಯ, ಎಂ.ಬಿ.ಪಾಟೀಲ್, ಸತೀಶ್ ಜಾರಕಿ ಹೊಳಿ ಹೀಗೆ ಹಲವು ನಾಯಕರು ತಮ್ಮದೇ ಪ್ರಾಬಲ್ಯದಲ್ಲಿ ಗೆಲ್ಲಿಸಿಕೊಂಡು ಬಂದಿದ್ದಾರೆ. ಆದರೆ ಪಕ್ಷವನ್ನು ಒಟ್ಟಾಗಿ ಕೊಂಡೊಯ್ಯುವ ಸಾರಥ್ಯವನ್ನು ಡಿ.ಕೆ.ಶಿವಕುಮಾರ್ ವಹಿಸಿಕೊಂಡು ಮುನ್ನಡೆದಿರುವುದೇ ಇವತ್ತು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ನಡೆಸುತ್ತಿದೆ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ.

Is D K Shivakumar s Leadership Brings Congress Success in Karnataka

ಹಾಗೆನೋಡಿದರೆ ಡಿ.ಕೆ.ಶಿವಕುಮಾರ್ ಅವರು ಪಕ್ಷ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾಗ ಅಧಿಕಾರ ವಹಿಸಿಕೊಂಡಿದ್ದರು. ಅದಕ್ಕಿಂತ ಹೆಚ್ಚಾಗಿ ಅವರ ಪರಿಸ್ಥಿತಿಯೂ ನೆಟ್ಟಗಿರಲಿಲ್ಲ. ಸಿಬಿಐ, ಇಡಿ ಅವರನ್ನು ಇನ್ನಿಲ್ಲದಂತೆ ಕಾಡುತ್ತಿತ್ತು. ಅದಾಗಲೇ ಜೈಲಿಗೂ ಹೋಗಿ ಬಂದಿದ್ದರು. ಆದರೆ ತನಗೆ ಒದಗಿ ಬಂದ ಸಂಕಷ್ಟವನ್ನೆಲ್ಲ ಎದುರಿಸಿ ಪಕ್ಷಕ್ಕೆ ಬಂಡೆಯಾಗಿ ನಿಲ್ಲುವ ಶಪಥ ಮಾಡಿದ್ದರು. ಅದಕ್ಕೆ ಅವರಿಗೆ ಧೈರ್ಯ ತುಂಬಿ ಜವಬ್ದಾರಿಯನ್ನು ವಹಿಸಿದ್ದು ಸೋನಿಯಾಗಾಂಧಿ. ಅವತ್ತು ಅವರು ತಿಹಾರ್ ಜೈಲಿಗೆ ಹೋಗಿ ಅಲ್ಲಿ ಭೇಟಿ ಮಾಡಿ ಡಿಕೆಶಿಗೆ ಧೈರ್ಯ ತುಂಬಿ ಬಂದಿದ್ದರು.

ತಳಮಟ್ಟದಿಂದ ಪಕ್ಷದ ಸಂಘಟನೆಗೆ ಒತ್ತು

ಜೈಲಿನಿಂದ ಹೊರಗೆ ಬಂದ ಕೂಡಲೇ ರಾಜ್ಯ ಕಾಂಗ್ರೆಸ್ ನ ಸಾರಥ್ಯವನ್ನು ಡಿ.ಕೆ.ಶಿವಕುಮಾರ್ ವಹಿಸಿಕೊಂಡಿದ್ದರು. ಅದು ಸಂಕಷ್ಟದ ದಿನಗಳು ರಾಜ್ಯ ಮಾತ್ರವಲ್ಲ ಇಡೀ ದೇಶ, ವಿದೇಶಗಳು ಕೊರೋನಾದ ಕರಿನೆರಳಿನಲ್ಲಿ ಸಿಕ್ಕಿ ತರಗೆಲೆಗಳಂತೆ ಗಿರಕಿ ಹೊಡೆಯುತ್ತಿದ್ದ ಕಾಲ. ಇದೇ ಸಮಯದಲ್ಲಿ ಅಧಿಕಾರ ವಹಿಸಿಕೊಂಡಿದ್ದರು. ತದ ನಂತರ ಎರಡು ವರ್ಷಗಳ ಕಾಲ ಪಕ್ಷ ಸಂಘಟನೆಯ ಕೆಲಸಗಳನ್ನು ಮಾಡುವುದು ಸವಾಲ್ ಆಗಿತ್ತು. ಕೊರೋನಾ ಕಾರಣದಿಂದಾಗಿ ಪಕ್ಷದ ನಾಯಕರು, ಕಾರ್ಯಕರ್ತರನ್ನು ಸೇರಿಸಿ ಸಭೆ ಮಾಡುವಂತಿರಲಿಲ್ಲ.

ಇಂತಹ ಸಂದರ್ಭದಲ್ಲಿ ಅವರು ರೈತರ ಕೃಷಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ರೈತರ ಸಂಕಷ್ಟಕ್ಕೆ ನಿಂತರು. ಜಮೀನಿಗೆ ತೆರಳಿ ಕೃಷಿ ಉತ್ಪನ್ನಗಳನ್ನು ಖರೀದಿಸಿ ಬಡ ಜನರಿಗೆ ಹಂಚುವ ಮೂಲಕ ರೈತರು ಮತ್ತು ಬಡವರ ನೆರವಿಗೆ ಧಾವಿಸಿದರು. ಅವತ್ತು ಡಿಕೆಶಿ ಅವರ ಕೆಲಸಗಳಲ್ಲಿ ಸಾಥ್ ನೀಡಿದ್ದು ಸಹೋದರ ಡಿ.ಕೆ.ಸುರೇಶ್. ತದ ನಂತರ ನಿಧಾನವಾಗಿ ಪಕ್ಷದ ಸಂಘಟನೆಗೆ ಮುಂದಾದರು. ಕೆಪಿಸಿಸಿ ಅಧ್ಯಕ್ಷರಾಗುವಾಗಲೇ ಪಕ್ಷ ಸಂಘಟನೆಯನ್ನು ಮಾಸ್ ಮಟ್ಟದಿಂದ ಕೇಡರ್ ಮಟ್ಟಕ್ಕೆ ಕೊಂಡೊಯ್ಯ ಬೇಕೆಂಬ ಉದ್ದೇಶವನ್ನು ಹೊಂದಿದ್ದರು.

Is D K Shivakumar s Leadership Brings Congress Success in Karnataka

ಪಕ್ಷ ಸಂಘಟನೆಗೆ ವೇಗ ಕೊಟ್ಟ ಪಾದಯಾತ್ರೆ

ಕೊರೋನಾ ಪ್ರಕರಣಗಳು ಕಡಿಮೆಯಾಗುತ್ತಿದ್ದಂತೆಯೇ ರಾಜ್ಯದಲ್ಲಿ ಪ್ರವಾಸ ಆರಂಭಿಸಿದ್ದರು. ನಾಯಕರು ಮತ್ತು ಕಾರ್ಯಕರ್ತರನ್ನು ಭೇಟಿಯಾಗಿ ಅವರಲ್ಲಿ ಉತ್ಸಾಹ ತುಂಬಿದರು. ಜೊತೆಗೆ ತಳಮಟ್ಟದಿಂದ ಪಕ್ಷವನ್ನು ಗಟ್ಟಿಗೊಳಿಸಲು ಹಲವು ತಂತ್ರಗಳನ್ನು ಮಾಡಿದರು. ಅಧಿಕಾರಕ್ಕೆ ಬಂದರೆ ಕಾರ್ಯಕರ್ತರಿಗೂ ಹಲವು ರೀತಿಯ ಜವಾಬ್ದಾರಿಗಳನ್ನು ನೀಡುವ ಭರವಸೆ ನೀಡಿದರು. ಅದಾಗಲೇ ಪಕ್ಷ ಅಧಿಕಾರ ಕಳೆದುಕೊಂಡಿದ್ದ ಕಾರಣದಿಂದಾಗಿ ಘಟಾನುಘಟಿ ನಾಯಕರೆಲ್ಲರೂ ಅವರವರ ಕ್ಷೇತ್ರಗಳಲ್ಲಿ ಹಂಚಿಹೋಗಿದ್ದರು. ಅವರೆಲ್ಲರನ್ನು ಒಟ್ಟಾಗಿ ಸೇರಿಸಿ ಪಕ್ಷದ ಸಾಮರ್ಥ್ಯ ಪ್ರದರ್ಶಿಸುವ ಜರೂರತ್ತು ಅವತ್ತಿತ್ತು. ಆ ಮೂಲಕ ಆಡಳಿತದಲ್ಲಿದ್ದ ಬಿಜೆಪಿಗೂ ಬಿಸಿ ಮುಟ್ಟಿಸುವ ಅನಿವಾರ್ಯತೆ ಎದುರಾಗಿತ್ತು.

ಅದೇ ಸಮಯದಲ್ಲಿ ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಕಾರ್ಯಕ್ರಮವನ್ನು ತವರು ಜಿಲ್ಲೆ ರಾಮನಗರದಿಂದ ಆರಂಭಿಸಿದ್ದರು. ಕೊರೋನಾ ಕಾರಣದಿಂದಾಗಿ ಸರ್ಕಾರ ಇದಕ್ಕೆ ಅನುಮತಿ ನೀಡಿರಲಿಲ್ಲ. ಈ ಪಾದಯಾತ್ರೆಗೆ ಹತ್ತು ಹಲವು ಅಡಚಣೆ ಆತಂಕ ಎದುರಾದರೂ ಎಲ್ಲವನ್ನು ಮೀರಿ ಪಾದಯಾತ್ರೆ ಕೈಗೊಂಡರು. ಅದೇ ನೆಪದಲ್ಲಿ ಕಾಂಗ್ರೆಸ್ ನಾಯಕರನ್ನು ಒಂದೆಡೆ ಸೇರಿಸುವಲ್ಲಿ ಯಶಸ್ವಿಯಾದರು. ಅದಾದ ನಂತರ ಆಡಳಿತರೂಢ ಬಿಜೆಪಿಯನ್ನು ಹೆಜ್ಜೆ ಹೆಜ್ಜೆಗೂ ಕಾಡಲಾರಂಭಿಸಿದರು. ಸರ್ಕಾರದ ವಿರುದ್ಧ ಹೊಸ ಅಭಿಯಾನಗಳು ಶುರುವಾದವು. ಪಾರ್ಟಿ ಪರ್ಸೆಂಟ್ ಕಮೀಷನ್ ಮತ್ತು ಪೇ ಸಿಎಂ ಅಭಿಯಾನಗಳು ಕಾಂಗ್ರೆಸ್ ನಲ್ಲಿ ಕಿಚ್ಚು ಹಬ್ಬಿಸಿತ್ತು. ಆ ಮೂಲಕ ಚುನಾವಣೆಗೆ ತಯಾರಿ ಮಾಡಿಕೊಂಡು ಬಂದ ಡಿಕೆಶಿ 2023ರ ಚುನಾವಣೆ ವೇಳೆಗೆ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಗಟ್ಟಿಗೊಳಿಸಿ ಬಿಟ್ಟಿದ್ದರು.

ಬಿಜೆಪಿ ಜೆಡಿಎಸ್‌ನ್ನು ಧೂಳಿಪಟ ಮಾಡಿದ ಡಿಕೆಶಿ

ಟಿಕೆಟ್ ಹಂಚಿಕೆ ವಿಚಾರದಲ್ಲಿಯೂ ಎಚ್ಚರಿಕೆ ವಹಿಸಿದ್ದರು. ಅದೇ ಹೊತ್ತಿಗೆ ಪಂಚ ಗ್ಯಾರಂಟಿ ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಪರಿಣಾಮ ಚುನಾವಣೆ ಮುಗಿದು ಫಲಿತಾಂಶ ಬಂದಾಗ ಕಾಂಗ್ರೆಸ್ 135 ಸ್ಥಾನಗಳಲ್ಲಿ ಗೆಲುವು ಕಾಣುವುದರೊಂದಿಗೆ ಬಿಜೆಪಿ ಮಕಾಡೆ ಮಲಗಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿದೆ. ಹಿಂದೂ ವಿರೋಧಿ ಧೋರಣೆ ತಾಳುತ್ತಿದೆ ಎಂಬ ಆರೋಪ ರಾಷ್ಟ್ರಮಟ್ಟದಲ್ಲಿ ಕೇಳಿ ಬರುತ್ತಿದೆ.

Is D K Shivakumar s Leadership Brings Congress Success in Karnataka

ಇದರಿಂದ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಾಗಿದೆ. ಹೀಗಾಗಿಯೇ ಹಿಂದೂ ವಿರೋಧಿ ಕಾಂಗ್ರೆಸ್ ಎಂಬ ಹಣೆಪಟ್ಟಿಯನ್ನು ಪಕ್ಷದಿಂದ ಕಳಚುವ ಪ್ರಯತ್ನವನ್ನು ಇತ್ತೀಚೆಗೆ ಡಿಕೆಶಿ ಮಾಡುತ್ತಿದ್ದಾರೆ. ನಾನು ಹಿಂದೂವಾಗಿ ಹುಟ್ಟಿದ್ದೇನೆ ಹಿಂದೂವಾಗಿ ಸಾಯುತ್ತೇನೆ ಎಂಬ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ನ ಹಿಂದೂ ಹುಲಿಯಾಗಿ ಗಮನಸೆಳೆದಿದ್ದಾರೆ.

ಅದು ಏನೇ ಇರಲಿ ಕೆಪಿಸಿಸಿ ಅಧ್ಯಕ್ಷರಾಗಿ ಐದು ವರ್ಷ ಪೂರೈಸಿದ್ದಾರೆ. ಈ ಅವಧಿಯಲ್ಲಿ ಹತ್ತಾರು ಸವಾಲ್ ಗಳನ್ನು ಎದುರಿಸಿದ್ದಾರೆ. ಇದೀಗ ಪಕ್ಷದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿಯೂ ಶುರುವಾಗಿದೆ. ಮತ್ತೊಂದೆಡೆ ಈ ಅವಧಿಯಲ್ಲಿಯೇ ಮುಖ್ಯಮಂತ್ರಿ ಆಗುತ್ತಾರೆ ಎಂಬ ಸುದ್ದಿಗಳಿದ್ದವಾದರೂ ಅವುಗಳ ಸುತ್ತಲೂ ಇಂದಿಗೂ ಗೊಂದಲವಿದೆ. ಈಗಾಗಲೇ ಸಿದ್ದರಾಮಯ್ಯ ಅವರು ನಾನೇ ಐದು ವರ್ಷ ಸಿಎಂ ಎಂಬ ಹೇಳಿಕೆ ನೀಡಿರುವುದು ಡಿಕೆಶಿಯನ್ನು ಪ್ರೀತಿಸುವ ಬೆಂಬಲಿಗರಲ್ಲಿ ಆತಂಕ ತಂದಿದೆ.. ಮುಂದೇನು ಕಾದು ನೋಡೋಣ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+