ಕರ್ನಾಟಕ ವಿಧಾನಸಭಾ ಚುನಾವಣೆ 2023: ಕಾಂಗ್ರೆಸ್‌ಗೆ ಮತ ತಂದು ಕೊಡುತ್ತಾ ಉಚಿತ ಭಾಗ್ಯಗಳು?
ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರು ರಾಜ್ಯಕ್ಕೆ ಎಂಟ್ರಿಕೊಟ್ಟಿದ್ದು, ಯುವ ಜನರ ಸೆಳೆಯುವ ಸಲುವಾಗಿ ನಾಲ್ಕು ಯೋಜನೆಗಳಿಗೆ ಗ್ಯಾರಂಟಿ ಕಾರ್ಡ್ ವಿತರಣೆ ಮಾಡಿ ಹೋಗಿದ್ದಾರೆ.
ಬೆಂಗಳೂರು, ಮಾರ್ಚ್ 22: 2023ರಲ್ಲಿ ಅಧಿಕಾರ ಹಿಡಿಯಲೇ ಬೇಕೆಂಬ ಕಸರತ್ತಿಗಿಳಿದಿರುವ ಕಾಂಗ್ರೆಸ್ ಇದೀಗ ಒಗ್ಗಟ್ಟಿನ ಜಪದೊಂದಿಗೆ ಬಡವರು, ಮಹಿಳೆಯರು ಮತ್ತು ಯುವ ಮತದಾರರನ್ನು ಟಾರ್ಗೆಟ್ ಮಾಡಿದ್ದು ಅದಕ್ಕೋಸ್ಕರ ಏನೆಲ್ಲ ತಂತ್ರಗಳನ್ನು ಮಾಡಬೇಕೋ ಅದೆಲ್ಲವನ್ನು ಮಾಡುತ್ತಿರುವುದು ಈಗಿನ ಬೆಳವಣಿಗೆಯಾಗಿದೆ.
ಕಳೆದೊಂದು ವರ್ಷದಿಂದ ಆಡಳಿತರೂಢ ಬಿಜೆಪಿ ವಿರುದ್ಧ ಹೋರಾಟ ನಡೆಸಿಕೊಂಡು ಬಂದಿರುವ ಕಾಂಗ್ರೆಸ್ ಕಳೆದ ಆರು ತಿಂಗಳಿನಿಂದ ಎಡೆಬಿಡದೆ ಹೋರಾಟ ಮಾಡಿ ಸರ್ಕಾರವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಜೊತೆಗೆ ಆಡಳಿತ ಪಕ್ಷದಲ್ಲಿಯೂ ಎಲ್ಲವೂ ಸರಿಯಿಲ್ಲ ಎಂಬುದು ಸಾಬೀತಾಗಿದ್ದು, ಹೀಗಾಗಿ ಕಾಂಗ್ರೆಸ್ ಹುಮ್ಮಸ್ಸಿನಲ್ಲಿದ್ದು, ಗೆಲುವು ನಮ್ಮದೇ ಎಂಬ ಭ್ರಮೆಯಲ್ಲಿದೆ. ಮತದಾರರನ್ನು ಸೆಳೆಯಲು ವಿವಿಧ ಭರವಸೆಗಳನ್ನು ನೀಡುತ್ತಿದೆ.

ಇದೀಗ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರು ರಾಜ್ಯಕ್ಕೆ ಎಂಟ್ರಿಕೊಟ್ಟಿದ್ದು, ಯುವ ಜನರ ಸೆಳೆಯುವ ಸಲುವಾಗಿ ನಾಲ್ಕು ಯೋಜನೆಗಳಿಗೆ ಗ್ಯಾರಂಟಿ ಕಾರ್ಡ್ ವಿತರಣೆ ಮಾಡಿ ಹೋಗಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ನೀಡಿರುವ ಭರವಸೆಯೇ ಚುನಾವಣಾ ಪ್ರಚಾರಕ್ಕೆ ಹೆಚ್ಚಿನ ಮೈಲೇಜ್ ನೀಡುತ್ತಿದೆ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಈ ಬಾರಿಯ ವಿಧಾನಸಭಾ ಚುನಾವಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವ ಮತದಾರರು ಬರುತ್ತಿದ್ದು, ಅವರನ್ನು ಸೆಳೆಯಲು ಮೂರು ಪಕ್ಷಗಳು ತಂತ್ರ ನಡೆಸಿವೆ.
ಕಾಂಗ್ರೆಸ್‌ನಿಂದ ಆಕರ್ಷಣೀಯ ಭರವಸೆ
ಬಿಜೆಪಿ ಯುವ ಮತದಾರರನ್ನು ಟಾರ್ಗೆಟ್ ಮಾಡಿದ್ದು, ಅವರ ಸೆಳೆಯುವ ಸಲುವಾಗಿಯೇ ಮೋದಿ ಈ ಹಿಂದೆ ಬಂದು ಹೋಗಿದ್ದರು. ಅಷ್ಟೇ ಅಲ್ಲದೆ ಆಗಾಗ್ಗೆ ರಾಜ್ಯಕ್ಕೆ ಭೇಟಿ ನೀಡುತ್ತಾ ಯುವ ಮತದಾರರ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಿರುವಾಗಲೇ ಕಾಂಗ್ರೆಸ್ ಹೊಸ ತಂತ್ರ ಪ್ರಯೋಗಿಸಿದ್ದು, ಯುವ ಮತದಾರರ ಸೆಳೆಯಲು ನಿರುದ್ಯೋಗಿ ಭತ್ಯೆ ನೀಡುವ ಬಗ್ಗೆ ಘೋಷಿಸಿದೆ. ಇದರ ಹಿಂದೆ ಮತಬೇಟೆಯ ತಂತ್ರ ಅಡಗಿರುವುದನ್ನು ಅಲ್ಲಗಳೆಯುವಂತಿಲ್ಲ. ಹಾಗೆಯೇ ಮಹಿಳೆಯರು ಮತ್ತು ಬಡವರ ಮತದ ಮೇಲೆ ಕಣ್ಣಿಟ್ಟು ಮನೆಯ ಯಜಮಾನಿಗೆ 2000ರೂ ಭತ್ಯೆ, ಪ್ರತಿ ಕುಟುಂಬಕ್ಕೆ 10 ಕೆಜಿ ಅಕ್ಕಿ, 200 ಯೂನಿಟ್ ವಿದ್ಯುತ್ ಉಚಿತ ಹೀಗೆ ಎಲ್ಲ ವರ್ಗದವರ ಗಮನಸೆಳೆಯುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ.

ಕಾಂಗ್ರೆಸ್ ಪ್ರಕಟಿಸಿರುವ ಯೋಜನೆಗಳು ಬರೀ ಭರವಸೆಗಳು ಆಗಿದ್ದರೂ ಕೂಡ ಅದನ್ನು ತಳಮಟ್ಟದವರೆಗೆ ತೆಗೆದುಕೊಂಡು ಹೋಗುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಈ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯನಾ? ಇದರಿಂದ ಬಡವರ ಉದ್ಧಾರ ಆಗುತ್ತೋ ಇಲ್ಲವೋ? ಆದರೆ ಬಿಜೆಪಿಗೆ ಸೆಡ್ಡು ಹೊಡೆದು ಎಲ್ಲ ವರ್ಗದ ಮತಗಳನ್ನು ಸೆಳೆದು ಅಧಿಕಾರಕ್ಕೆ ತರುವುದು ಕಾಂಗ್ರೆಸ್ ನಾಯಕರ ಪ್ರಮುಖ ಉದ್ದೇಶವಾಗಿದೆ. ಅದನ್ನು ಹೇಗೆ ಮಾಡಬಹುದೋ ಅದನ್ನು ಮಾಡಲು ಕಾಂಗ್ರೆಸ್ ಸಜ್ಜಾಗಿದೆ.
ಪ್ರಣಾಳಿಕೆಯೇ ಪ್ರಚಾರದ ಪ್ರಮುಖ ಆಕರ್ಷಣೆ
ಬಿಜೆಪಿಗೆ ವಿರೋಧ ಪಕ್ಷವಾದ ಕಾಂಗ್ರೆಸ್ ಪ್ರತಿ ಹೆಜ್ಜೆಗೂ ಅಡ್ಡಗಾಲಾಗಿ ಪರಿಣಮಿದೆ. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಜನರಲ್ಲಿ ಅವಿಶ್ವಾಸ ಮೂಡಿಸಿ ಜನವಿರೋಧಿ ಧೋರಣೆ ಸೃಷ್ಟಿಸುವ ಪ್ರಯತ್ನವನ್ನು ಮಾಡುತ್ತಾ ಬಂದಿದ್ದು ಅದರಲ್ಲಿ ಸಫಲವೂ ಆಗಿದೆ. ಮೊದಲ ಪ್ರಯತ್ನವಾಗಿ ಮೇಕೆದಾಟು ಪಾದಯಾತ್ರೆ ಪಕ್ಷದಲ್ಲಿ ಒಗ್ಗಟ್ಟಿದೆ ಎಂಬುದನ್ನು ಪ್ರದರ್ಶಿಸಲಾಯಿತು. ಆ ನಂತರದ 40ಪರ್ಷೆಂಟ್ ಕಮೀಷನ್ ಆರೋಪ ಬಿಜೆಪಿ ಸರ್ಕಾರಕ್ಕೆ ಇರಿಸು ಮುರಿಸು ತರಿಸಿತು. ಅದನ್ನು ಚುನಾವಣೆ ತನಕವೂ ಕೊಂಡೊಯ್ಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಜತೆಗೆ ಹಲವು ಉಚಿತ ಭಾಗ್ಯಗಳು ಕಾಂಗ್ರೆಸ್ ಗೆ ಲಾಭತಂದು ಕೊಟ್ಟರೂ ಅಚ್ಚರಿಯಿಲ್ಲ.
ಈಗಾಗಲೇ ಪ್ರಕಟಿಸಲಾಗಿರುವ ಉಚಿತ ಯೋಜನೆ ಆಕರ್ಷಕವಾಗಿದೆ. ಯುವ ಮತದಾರರು, ಬಡವರು, ಮಹಿಳೆಯರು ಎಲ್ಲರೂ ಇಷ್ಟಪಡುವ ಯೋಜನೆಯಾಗಿದೆ. ಈ ಯೋಜನೆಗಳ ಬಗ್ಗೆ ತಳಮಟ್ಟದವರೆಗೆ ತೆಗೆದುಕೊಂಡು ಹೋಗಿ ಮನೆಮನೆಗೆ ಮುಟ್ಟಿಸುವ ಕೆಲಸವನ್ನು ಕಾಂಗ್ರೆಸ್ ಮತ್ತು ಕಾರ್ಯಕರ್ತರು ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಚುನಾವಣೆ ಸಂದರ್ಭ ಎಲ್ಲ ಪಕ್ಷಗಳ ಪ್ರಣಾಳಿಕೆ ಆಕರ್ಷಕವಾಗಿಯೇ ಇರುತ್ತದೆ. ಏಕೆಂದರೆ ಈ ಪ್ರಣಾಳಿಕೆಯೂ ಕೆಲವೊಮ್ಮೆ ಪಕ್ಷಕ್ಕೆ ಗೆಲುವು ತಂದುಕೊಡುತ್ತದೆ.
ಪ್ರಬುದ್ಧ ಮತದಾರರ ನಿಲುವೇನು?
ಇದೀಗ ಹೊರಡಿಸಿರುವ ಕಾಂಗ್ರೆಸ್ ನ ಉಚಿತ ಯೋಜನೆಗಳು ಜನರನ್ನು ತಲುಪಿ ಮತವಾಗಿ ಹೇಗೆ ಪರಿವರ್ತನೆಯಾಗುತ್ತದೆ ಎಂಬುದರ ಬಗ್ಗೆ ಎಲ್ಲರಲ್ಲೂ ಕುತೂಹಲ ಇದ್ದೇ. ಈ ವಿಚಾರಗಳಿಗೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳು ಶುರುವಾಗಿದೆ. ಚುನಾವಣೆ ಹೊತ್ತಿಗೆ ಕಾಂಗ್ರೆಸ್‌ಗೆ ಇದು ಹೇಗೆ ವರದಾನವಾಗಲಿದೆ ಎಂಬ ಕಾತರವಂತು ಇದ್ದೇ ಇದೆ. ಚುನಾವಣೆಗೆ ಕೆಲವೇ ದಿನಗಳು ಇರುವುದರಿಂದ ದಿನಕಳೆದಂತೆ ಎಲ್ಲ ಪಕ್ಷಗಳು ಮತದಾರರನ್ನು ಸೆಳೆಯಲು ಹತ್ತಾರು ತಂತ್ರ ಮಾಡಲಿವೆ. ಪ್ರಬುದ್ಧ ಮತದಾರರ ಏನು ಮಾಡುತ್ತಾನೆ ಎಂಬುದೇ ಎಲ್ಲರನ್ನು ಕಾಡುತ್ತಿರುವ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.












Click it and Unblock the Notifications