ಹಲಾಲ್ ಕಟ್ ಬ್ಯಾನ್: ಸರಕಾರದ ಮುಂದಿನ ಕ್ರಮದ ಸುಳಿವು ಕೊಟ್ಟ ಸಚಿವೆ?
ಹಲಾಲ್-ಜಟ್ಕಾ ಕಟ್ ವಿಚಾರ ಮುನ್ನಲೆಗೆ ಬಂದಿರುವ ಈ ಸಮಯದಲ್ಲಿ ಬೊಮ್ಮಾಯಿ ಸಂಪುಟದ ಮುಜರಾಯಿ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ನೀಡಿದ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಯುಗಾದಿಯ ಮರುದಿನ ಕೋಟ್ಯಾಂತರ ರೂಪಾಯಿ ಮಾಂಸ ಮಾರಾಟವಾಗುವ ಹಿನ್ನಲೆಯಲ್ಲಿ ಸಚಿವೆಯ ಹೇಳಿಕೆ ಮಹತ್ವವನ್ನು ಪಡೆದುಕೊಂಡಿದೆ.
ಹಿಜಾಬ್, ಹಿಂದೂ ಧಾರ್ಮಿಕ ಕೇಂದ್ರದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ, ಶಿಕ್ಷಣದಲ್ಲಿ ಭಗವದ್ಗೀತೆ, ಪಠ್ಯಪುಸ್ತಕದಿಂದ ಟಿಪ್ಪು ಸುಲ್ತಾನ್ ಪುಟಕ್ಕೆ ಕೊಕ್.. ಈ ರೀತಿಯ ವಿಷಯಗಳು ಒಂದರ ಹಿಂದೆ ಬರುತ್ತಿರುವ ವೇಳೆ, ಹಲಾಲ್ ಮಾಂಸ ಬ್ಯಾನ್ ಮಾಡಬೇಕು ಎನ್ನುವ ಕೂಗು ಹಿಂದೂ ಸಂಘಟನೆಗಳಿಂದ ಜೋರಾಗಿ ಕೇಳಿ ಬರುತ್ತಿದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರೂ ವಿಶ್ವ ಹಿಂದೂ ಪರಿಷತ್, ಬಜರಂಗ ದಳದ ವಿರುದ್ದ ವಾಕ್ ಪ್ರಹಾರ ಮುಂದುವರಿಸಿದ್ದಾರೆ. "ಅಧಿಕಾರಕ್ಕಾಗಿ ಏನನ್ನೂ ಮಾಡಲು ಹೇಸದ ಕಿಡಿಗೇಡಿಗಳಿಗೆ, ಧರ್ಮವಿನಾಶಕ್ಕೆ ಕಂಕಣತೊಟ್ಟ ಕಿರಾತಕರಿಗೆ ಪಾಠ ಕಲಿಸುವ ಧೈರ್ಯ ಮಾಡೋಣ. ಕರ್ನಾಟಕ ನಮ್ಮದು. ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುವ ದ್ರೋಹಿಗಳದ್ದಲ್ಲ" ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಧಾರ್ಮಿಕ ಸೂಕ್ಷ್ಮ ಬೆಳವಣಿಗೆಯ ಮಧ್ಯೆ ಶಶಿಕಲಾ ಜೊಲ್ಲೆ ನೀಡಿರುವ ಹೇಳಿಕೆ, ಖುದ್ದು ಸರಕಾರವೇ ಹಲಾಲ್ ಕಟ್ ಮಾಂಸವನ್ನು ನಿಷೇಧಿಸಲು ಹೊರಟಿದೆಯೇ ಎನ್ನುವ ಗಂಭೀರ ಪ್ರಶ್ನೆ ಎದುರಾಗುವಂತೆ ಮಾಡಿದೆ.

ತಿಂಡಿ, ಊಟ ಅವರವರ ವೈಯಕ್ತಿಕ ಸ್ವಾತಂತ್ರಕ್ಕೆ ಬಿಟ್ಟಂತಹ ವಿಚಾರ
ತಿಂಡಿ, ಊಟ ಅವರವರ ವೈಯಕ್ತಿಕ ಸ್ವಾತಂತ್ರಕ್ಕೆ ಬಿಟ್ಟಂತಹ ವಿಚಾರ. ಈ ನಿಟ್ಟಿನಲ್ಲಿ ಹಲಾಲ್ ಕಟ್ ಮಾಂಸವನ್ನು ನಿಷೇಧಿಸುವ ಅಧಿಕಾರ ಸರಕಾರಕ್ಕೆ ಇದೆಯಾ ಎನ್ನುವ ಪ್ರಶ್ನೆಯ ಸಮಯದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಈ ವಿಚಾರದಲ್ಲಿ ಸರಕಾರ ಚಿಂತನೆ ನಡೆಸುತ್ತಿದೆ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬೇಡವಾದ ಕಾರಣಕ್ಕಾಗಿಯೇ ಸುದ್ದಿಯಲ್ಲಿರುವ ಕರ್ನಾಟಕ, ಈಗ ಹಲಾಲ್ ವಿಚಾರದಲ್ಲಿ ಮತ್ತೆ ರಾಷ್ಟ್ರವ್ಯಾಪಿ ಸುದ್ದಿಯಾಗುತ್ತಿದೆ.

ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಚಿವೆ ಜೊಲ್ಲೆ
ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಚಿವೆ ಜೊಲ್ಲೆ, "ವಿಶ್ವ ಹಿಂದೂ ಪರಿಷತ್ ಸೇರಿದಂತೆ ಹಲವು ಹಿಂದೂಪರ ಸಂಘಟನೆಗಳು ಹಲಾಲ್ ಕಟ್ ಮಾಂಸವನ್ನು ನಿಷೇಧಿಸಬೇಕೆನ್ನುವ ಜನಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಅದರ ಬಗ್ಗೆ ಸರಕಾರ ಚಿಂತನೆಯನ್ನು ಮಾಡುತ್ತಿದೆ. ಹಿರಿಯ ಸಚಿವರು ಮತ್ತು ಮುಖ್ಯಮಂತ್ರಿಯವರು ಈ ಬಗ್ಗೆ ಚಿಂತನೆಯನ್ನು ಮಾಡುತ್ತಾರೆ" ಎಂದು ಸಚಿವೆ ಜೊಲ್ಲೆ ಹೇಳುವ ಮೂಲಕ, ಈ ವಿಚಾರ ಮುಂದಿನ ದಿನಗಳಲ್ಲಿ ಜೋರಾಗಿ ಸದ್ದು ಮಾಡುವ ಮುನ್ಸೂಚನೆಯನ್ನು ನೀಡಿದ್ದಾರೆ.

ಹಲಾಲ್ ಕಟ್ ಮಾಂಸವನ್ನು ಅವರು ಅವರ ದೇವರಿಗೆ ಅರ್ಪಿಸುತ್ತಾರೆ
"ಹಲಾಲ್ ಕಟ್ ಮಾಂಸವನ್ನು ಅವರು ಅವರ ದೇವರಿಗೆ ಅರ್ಪಿಸುತ್ತೇವೆ ಎಂದು ಹೇಳಿದ್ದಾರೆ. ಇದೇ ರೀತಿಯಲ್ಲಿ ಇದು ಎಲ್ಲಾ ಕಡೆ ಪ್ರಚಾರವನ್ನು ಪಡೆಯುತ್ತಿದೆ. ಹಾಗಾಗಿ, ನಾವು ಕೂಡಾ ಇದನ್ನು ನಿಷೇಧಿಸಿ, ಜಟ್ಕಾ ಕಟ್ ಆಗಬೇಕು ಎನ್ನುವ ಅಭಿಪ್ರಾಯವನ್ನು ನಾವು ಹೊಂದಿದ್ದೇವೆ. ಯಾವ ಉದ್ದೇಶದಿಂದ ಅವರು ಹಲಾಕ್ ಕಟ್ ಮಾಡುತ್ತಿದ್ದರು ಎನ್ನುವ ಚಿಂತನೆಯನ್ನು ಮಾಡಬೇಕಾಗುತ್ತದೆ"ಎಂದು ಶಶಿಕಲಾ ಜೊಲ್ಲೆ ಹೇಳಿದ್ದಾರೆ.
Recommended Video

ಬಿಜೆಪಿಯ ನಾಯಕರಿಂದಲೂ ಹಲಾಲ್ ಕಟ್ ಬ್ಯಾನ್ ಆಗಬೇಕೆಂದು ಒತ್ತಾಯ
ಬಿಜೆಪಿಯ ನಾಯಕರು ಹಲಾಲ್ ಕಟ್ ಬ್ಯಾನ್ ಆಗಬೇಕೆಂದು ಒತ್ತಾಯಿಸುತ್ತಿದ್ದರೂ, ಸರಕಾರದ ಕಡೆಯಿಂದ ಯಾವುದೇ ಹೇಳಿಕೆ ಬಂದಿರಲಿಲ್ಲ. ಹಾಗಾಗಿ, ಶಶಿಕಲಾ ಜೊಲ್ಲೆಯವರ ಹೇಳಿಕೆ ಮಹತ್ವನ್ನು ಪಡೆದುಕೊಂಡಿದೆ. "ಹಲಾಲ್ ಕಟ್ ವಿಚಾರದಲ್ಲಿ ಸಾಕಷ್ಟು ಚರ್ಚೆ, ಹೇಳಿಕೆ, ಪ್ರತಿಕ್ರಿಯೆಗಳು ಬರುತ್ತಿವೆ. ಇದರ ಜೊತೆಗೆ ಬೇರೆ ವಿಚಾರವನ್ನೂ ಸ್ಟಡಿ ಮಾಡಿ ಒಂದು ನಿರ್ಧಾರಕ್ಕೆ ಬರುತ್ತೇವೆ"ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಾ ಹೇಳಿಕೆಯನ್ನು ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.












Click it and Unblock the Notifications