IPS Transfer; ಹಾವೇರಿಗೆ ನೂತನ ಎಸ್ಪಿ ನೇಮಕ
ಬೆಂಗಳೂರು, ನವೆಂಬರ್ 16: ಕರ್ನಾಟಕ ಸರ್ಕಾರ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದೆ. ಒಟ್ಟು ಮೂವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಹಾವೇರಿಗೆ ನೂತನ ಎಸ್ಪಿ ನೇಮಕ ಮಾಡಲಾಗಿದೆ.
ಸರ್ಕಾರ ಹಾವೇರಿ ಎಸ್‌ಪಿಯಾಗಿದ್ದ ಡಾ. ಶಿವಕುಮಾರ್ ವರ್ಗಾವಣೆ ಮಾಡಿದೆ. ಅನೂಷ್ ಕುಮಾರ್ ಅವರನ್ನು ನೂತನ ಎಸ್ಪಿಯಾಗಿ ನೇಮಕ ಮಾಡಿದೆ. ರಶ್ಮಿ ಬಿ. ಪರಡ್ಡಿ ಅವರಿಗೆ ಸಹ ಸ್ಥಳ ನಿಯೋಜನೆ ಮಾಡಲಾಗಿದೆ.

ಅಧಿಕಾರಿಗಳ ವರ್ಗಾವಣೆ
* ಸ್ಥಳ ನಿಯೋಜನೆಗಾಗಿ ಕಾಯುತ್ತಿದ್ದ ರಶ್ಮಿ ಬಿ. ಪರಡ್ಡಿ, ಐಪಿಎಸ್ (ಕೆಎನ್-2014) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದ ತನಕ ಸಿಐಡಿಯ ಎಸ್ಪಿಯಾಗಿ ನೇಮಕ ಮಾಡಲಾಗಿದೆ. ಈ ಹುದ್ದೆ ಖಾಲಿ ಇತ್ತು.
* ಡಾ. ಶಿವಕುಮಾರ್, ಐಪಿಎಸ್ (ಕೆಎನ್-2016). ಹಾವೇರಿ ಎಸ್‌ಪಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದ ತನಕ ಡಿಸಿಪಿ, ವೈಟ್‌ಫೀಲ್ಡ್ ವಿಭಾಗ, ಬೆಂಗಳೂರು ನಗರ ಇಲ್ಲಿಗೆ ನಿಯೋಜನೆ ಮಾಡಲಾಗಿದೆ. ಈ ಹುದ್ದೆಯಲ್ಲಿದ್ದ ಸಂಜೀವ್ ಎಂ. ಪಾಟೀಲ್ ವರ್ಗಾವಣೆ ಮಾಡಲಾಗಿದೆ.
* ಅನೂಷ್ ಕುಮಾರ್, ಐಪಿಎಸ್ (ಕೆಎನ್-2018). ಎಸ್‌ಪಿ ಕರಾವಳಿ ಭದ್ರತಾ ಪಡೆ, ಉಡುಪಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದ ತನಕ ಹಾವೇರಿ ಎಸ್‌ಪಿಯಾಗಿ ನೇಮಕ ಮಾಡಲಾಗಿದೆ.
ಈ ಮೊದಲು ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಹನುಮಂತರಾಯ ಕೆಲಸ ಮಾಡುತ್ತಿದ್ದರು. ಜನವರಿಯಲ್ಲಿ ಅವರನ್ನು ವರ್ಗಾವಣೆ ಮಾಡಿ ತಕ್ಷಣದಿಂದ ಜಾರಿಗೆ ಬರುವಂತೆ ಡಾ. ಶಿವಕುಮಾರ್ ನೇಮಕ ಮಾಡಲಾಗಿತ್ತು.
ಆಗ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದರು. ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಮುಖ್ಯಮಂತ್ರಿಗಳ ತವರು ಜಿಲ್ಲೆಯ ಎಸ್‌ಪಿಯನ್ನೇ ವರ್ಗಾವಣೆ ಮಾಡಲಾಗಿತ್ತು.
ಮತ್ತೊಂದು ಕಡೆ ಕರ್ನಾಟಕ ಸರ್ಕಾರ ಮೂವರು ಐಪಿಎಸ್ ಅಧಿಕಾರಿಗಳನ್ನು ಈಗಿರುವ ಹುದ್ದೆಯ ಜೊತೆಗೆ ಮುಂದಿನ ಆದೇಶದ ತನಕ ರಾಜ್ಯದಲ್ಲಿ ಮುಂಬರುವ ಲೋಕಸಭೆ, ವಿಧಾನಸಭೆ ಚುನಾವಣೆಗೆ ನೋಡಲ್ ಅಧಿಕಾರಿಗಳಾಗಿ ಕಾರ್ಯ ನಿರ್ವಹಣೆ ಮಾಡಲು ನೇಮಕ ಮಾಡಿ ಆದೇಶ ಹೊರಡಿಸಿದೆ.
ಆರ್. ಹಿತೇಂದ್ರ, ಐಪಿಎಸ್ (ಕೆಎನ್: 1996) ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಕರ್ನಾಟಕದ ಮುಂಬರುವ ಲೋಕಸಭೆ, ವಿಧಾನಸಭೆ ಚುನಾವಣೆಯ ರಾಜ್ಯ ನೋಡಲ್ ಅಧಿಕಾರಿ (SPNO) ಆಗಿ ಅವರ ಈಗಿರುವ ಹುದ್ದೆಗೆ ಹೆಚ್ಚುವರಿಯಾಗಿ ನೇಮಕಗೊಂಡಿದ್ದಾರೆ. ಈ ನೇಮಕಾತಿ ಅವಧಿ ತಕ್ಷಣದಿಂದ ಜಾರಿಗೆ ಬರುವಂತೆ 3 ವರ್ಷಗಳು.
ಸಂದೀಪ್ ಪಾಟೀಲ್, ಐಪಿಎಸ್. ಐಜಿಪಿ, ಕೆಎಸ್ಆರ್‌ಪಿ ಬೆಂಗಳೂರು. ಕರ್ನಾಟಕದ ಮುಂಬರುವ ಲೋಕಸಭೆ, ವಿಧಾನಸಭೆ ಚುನಾವಣೆಯ ರಾಜ್ಯ CARF ನೋಡಲ್ ಅಧಿಕಾರಿಯಾಗಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಗೊಂಡಿದ್ದಾರೆ.
ದೇವಜ್ಯೋತಿ ರೇ, ಐಪಿಎಸ್. ಐಜಿಪಿ ಜಿ & ಹೆಚ್ ಆರ್ ಬೆಂಗಳೂರು. ಕರ್ನಾಟಕದ ಮುಂಬರುವ ಲೋಕಸಭೆ, ವಿಧಾನಸಭೆ ಚುನಾವಣೆಯ ನೋಡಲ್ ಅಧಿಕಾರಿ (ವೆಚ್ಚ) ಆಗಿ ನೇಮಕಗೊಂಡಿದ್ದಾರೆ.












Click it and Unblock the Notifications