13 ಅತೃಪ್ತ ಶಾಸಕರ ಬಗ್ಗೆ ಗುಪ್ತಚರ ಇಲಾಖೆಯಿಂದ ಕುಮಾರಸ್ವಾಮಿಗೆ ಮಾಹಿತಿ
ಬೆಂಗಳೂರು, ಜುಲೈ 4: ರಾಜ್ಯದ ರಾಜಕೀಯ ಅಲ್ಲೋಲಕಲ್ಲೋಲವಾಗುವ ಸ್ಥಿತಿಯಲ್ಲಿದೆ.
ಕಾಂಗ್ರೆಸ್‌ನ ಅತೃಪ್ತ 13 ಶಾಸಕರ ಕುರಿತು ಸಿಎಂ ಕುಮಾರಸ್ವಾಮಿ ವಿದೇಶದಲ್ಲಿದ್ದುಕೊಂಡೇ ಮಾಹಿತಿ ಕಲೆ ಹಾಕಿದ್ದಾರೆ. ಅವರು ರಾಜೀನಾಮೆ ನೀಡಲು ಸ್ಪಷ್ಟಕಾರಣವೇನು, ಅವರ ಕೋಪ ಶಮನಕ್ಕೆ ಏನು ಕ್ರಮ ಕೈಗೊಳ್ಳಬಹುದು ಎನ್ನುವ ಆಲೋಚನೆಯಲ್ಲಿದ್ದಾರೆ.
ಒಂದೆಡೆ ಆನಂದ್ ಸಿಂಗ್ ರಾಜೀನಾಮೆ ನೀಡಿದ್ದರೆ ಇನ್ನೊಂದು ಕಡೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಇಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರ ನೇಮಕವಾಗಲಿದ್ದು, ಎಚ್ ವಿಶ್ವನಾಥ್ ಬಾವುಟವನ್ನು ಹಸ್ತಾಂತರ ಮಾಡಲಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಎಚ್‌ಕೆ ಕುಮಾರಸ್ವಾಮಿ ಹಾಗೂ ಕಾರ್ಯಾಧ್ಯಕ್ಷರಾಗಿ ಮಧು ಬಂಗಾರಪ್ಪ ನೇಮಕವಾಗಲಿದ್ದಾರೆ.ಪಕ್ಷದಲ್ಲಿ ಎಚ್‌ಕೆ ಕುಮಾರಸ್ವಾಮಿ ಮುನಿಸಿಗೂ ಉಪಾಯ ಕಂಡುಹಿಡಿದಿದ್ದಾರೆ.
ಕಾಂಗ್ರೆಸ್ ನ ಅತೃಪ್ತ ಶಾಸಕರು ಯಾವ ಕಡೆ ಹೋಗುತ್ತಾರೆ, ಯಾರನ್ನು ಭೇಟಿ ಮಾಡುತ್ತಾರೆ ಎಲ್ಲಾ ವಿಚಾರದ ಕುರಿತು ಸಿಎಂ ಕಣ್ಣಿಟ್ಟಿದ್ದಾರೆ.
ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ರಾಜೀನಾಮೆ ಅಸ್ತ್ರ ಪ್ರಯೋಗಿಸುವ ಮೂಲಕ ಮೈತ್ರಿ ಸರ್ಕಾರದ ಉಸಿರುಗಟ್ಟಿಸಿದ್ದ ಕಾಂಗ್ರೆಸ್ ಶಾಸಕರಿಬ್ಬರ ಮನವೊಲಿಕೆ ಪ್ರಯತ್ನ ಒಂದು ಕಡೆ ನಡೆಯುತ್ತಿದೆ.
ಆ ಮೂಲಕ ಇನ್ನೇನು ಸರ್ಕಾರದ ಕತೆ ಮುಗಿದೇ ಹೋಯಿತೆಂಬ ಸನ್ನಿವೇಶವೂ ಸ್ವಲ್ಪ ಬದಲಾದಂತಿದೆ.
ಸೋಮವಾರ ರಾತ್ರಿ ಹಾಗೂ ಮಂಗಳವಾರ ಇಡೀ ದಿನ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕರು ನಿರಂತರ ಚರ್ಚೆ ನಡೆಸಿ ಬೀಸೋ ದೊಣ್ಣೆ ತಪ್ಪಿಸಿಕೊಳ್ಳುವ ತಂತ್ರ ಹೆಣೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಹೀಗಾಗಿ 'ಕೈ'ಸುಡುವ ಆತಂಕದಲ್ಲಿದ್ದ ಕಾಂಗ್ರೆಸ್ ನಾಯಕರು ಕೊಂಚ ನಿಟ್ಟುಸಿರು ಬಿಟ್ಟಂತಿದೆ.
ಮುಖ್ಯ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಮೆರಿಕದಲ್ಲಿ ಇದ್ದರೂ ಅವರ ಮನಸ್ಸು ಪೂರ್ತಿ ಬೆಂಗಳೂರಿನಲ್ಲೇ ಸುತ್ತು ವರೆಯುತ್ತಿದೆ.
ಪದೇಪದೆ ಕಾಂಗ್ರೆಸ್ ನಾಯಕರನ್ನು ಸಂರ್ಪಸಿದ ಅವರು ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದು ಕೊಳ್ಳುತ್ತಿದ್ದರು.
'ಏನೂ ಆಗಿಲ್ಲ, ಆತಂಕದ ಅಗತ್ಯವಿಲ್ಲ' ಎಂದು ಕೈ ನಾಯಕರು ಹೇಳಿದರೂ ಅವರಲ್ಲಿದ್ದ ದುಗುಡ ಕಡಿಮೆಯಾದಂತೆ ಕಾಣಿಸಿಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ.












Click it and Unblock the Notifications